ಪಾಕಿಸ್ತಾನ ಹೆಸರು ನೂರು ಬಾರಿ ಉಚ್ಚರಿಸಿದ ನರೇಂದ್ರ ಮೋದಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೂ ನೀಡಿದ ಪರೋಕ್ಷ ಸಂದೇಶ ಏನು
ಭಯೋತ್ಪಾದನೆಯನ್ನು ಎಂದಿಗೂ ಭಾರತ ಸಹಿಸಿಕೊಳ್ಳುವುದಿಲ್ಲ. ವಿಶ್ವದ ಇತರೆ ದೇಶಗಳೂ ಇದಕ್ಕೆ ಬೆಂಬಲಿಸಬಾರದು ಎನ್ನುವ ಮೂಲಕ ಪಾಕಿಸ್ತಾನದ ಪರವಾಗಿ ಅಮೆರಿಕಾ ಸೇರಿದಂತೆ ಯಾವುದೇ ದೇಶಗಳು ನಿಲ್ಲಬಾರದು ಎಂಬ ಸಂದೇಶವನ್ನು ತಮ್ಮ ಮಾತಿನಲ್ಲಿ ಹೇಳಿದರು ಮೋದಿ.

ದೆಹಲಿ: ಭಾರತ ಹಾಗೂ ಪಾಕಿಸ್ತಾನದ ನಡುವೆ ಆರಂಭವಾಗಿರುವ ಯುದ್ದದ ಸನ್ನಿವೇಶದ ನಡುವೆಯೇ ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ಪಾಕಿಸ್ತಾನ ಹಾಗೂ ಆ ದೇಶದ ಭಯೋತ್ಪಾದನೆ ಚಟುವಟಿಕೆ, ಅಲ್ಲಿನ ಸರ್ಕಾರ, ಸೈನ್ಯದ ವರ್ತನೆಯ ವಿರುದ್ದವೇ ಇತ್ತು. 22 ನಿಮಿಷವಷ್ಟೇ ಭಾಷಣ ಮಾಡಿದ ನರೇಂದ್ರ ಮೋದಿ ಅವರು ಪಾಕಿಸ್ತಾನ ದೇಶದ ಹೆಸರನ್ನು ನೂರಕ್ಕೂ ಹೆಚ್ಚು ಬಾರಿ ತೆಗೆದುಕೊಂಡರು. ಪಾಕಿಸ್ತಾನದ ನಡವಳಿಕೆ, ಅಲ್ಲಿನ ಕುಕೃತ್ಯಗಳು, ಆ ದೇಶದ ಮೇಲೆ ಭಾರತದ ದಾಳಿ ಮೇಲೇಯೇ ತಮ್ಮ ಮಾತನ್ನು ಕೇಂದ್ರೀಕರಿಸಿದರು. ಭಾರತವನ್ನು ಅಣ್ವಸ್ತ್ರದ ಹೆಸರಿನಲ್ಲಿ ಪಾಕಿಸ್ತಾನ ಮಾತ್ರವಲ್ಲ. ಇತರೆ ಯಾವುದೇ ದೇಶಗಳು ಕೆಣಕಿದರು ಸುಮ್ಮನಿರೋಲ್ಲ. ಪಾಕಿಸ್ತಾನವನ್ನು ಬೆಂಬಲಿಸುವವರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮೋದಿ ತಮ್ಮ ಭಾಷಣದಲ್ಲಿ ಪಾಕಿಸ್ತಾನದ ಜತೆ ಜತೆಯಲ್ಲಿ ಸಂಧಾನಕ್ಕೆ ನಿಂತ ಅಮೆರಿಕಾ ಹಾಗೂ ಅಲ್ಲಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೂ ಸಂದೇಶವನ್ನು ರವಾನಿಸಿದರು.
ಆಪರೇಷನ್ ಸಿಂದೂರ್ ಹೆಸರಿನಲ್ಲಿ ಭಾರತ ದಾಳಿ ಬಳಿಕ ಪಾಕಿಸ್ತಾನ ಯುದ್ಧಕ್ಕೆ ಸಿದ್ಧವಾಗಿತ್ತು. ಉಗ್ರರನ್ನು ನಿಯಂತ್ರಿಸುವ ಬದಲು ನಮ್ಮ ಮೇಲೆಯೇ ದಾಳಿ ಆರಂಭಿಸಿತು.ಅದು ಕೂಡ ಮಿಸೈಲ್, ಡ್ರೋಣ್‌ಗಳನ್ನು ಹಾರಿಸಿತು ಆದರೆ, ಅವೆಲ್ಲವನ್ನೂ ನಾವು ಉಡಾಯಿಸಿದೆವು ಅವರ ವಾಯು ನೆಲೆಗಳನ್ನು ಧ್ವಂಸ ಮಾಡಿದೆವು. ಅಲ್ಲಿನ ಪ್ರಮುಖ ಸೇನಾಧಿಕಾರಿಗಳೇ ಉಗ್ರರ ಅಂತ್ಯಕ್ರಿಯೆಯಲ್ಲಿ ಭಾಗಿಯಾದರು. ಇದೆಲ್ಲವನ್ನೂ ವಿಶ್ವವೇ ನೋಡಿದೆ. ಕದನಕ್ಕೆ ಅಲ್ಪವಿರಾಮ ಹಾಕಲಾಗಿದೆ ,ಇನ್ನೂ ನಿಂತಿಲ್ಲ. ಪಾಕಿಸ್ತಾನ ಮುಂದೆ ದಾಳಿ, ಉಗ್ರವಾದ ನಡೆಸಿದಲ್ಲಿ ನಾವೂ ಭೀಕರ ದಾಳಿ ಮಾಡುತ್ತೇವೆ. ನಮ್ಮ ಮೂರು ಸೇನಾ ಪಡೆಗಳು ಕಟ್ಟೆಚ್ಚರದಲ್ಲಿಟ್ಟೀದ್ದೇವೆ. ಮೇಡ್ ಇನ್ ಇಂಡಿಯಾದ ಮೂಲಕವೇ ಉತ್ತರ ನೀಡುತ್ತೇವೆ ಎನ್ನುವುದು ಪಾಕಿಸ್ತಾನಕ್ಕೆ ನೀಡಿದ ಉತ್ತರ.
ಇದು ಯುದ್ಧಕಾಲವಲ್ಲ, ಆದರೆ ಉಗ್ರವಾದವನ್ನೂ ನಾವು ಎಂದಿಗೂ ಸಹಿಸುವುದಿಲ್ಲ. ಭಯೋತ್ಪಾದನೆ ಚಟುವಟಿಕೆ ಮತ್ತೆ ನಡೆದರೆ, ನಾವು ಅದಕ್ಕೆ ಸೂಕ್ತ ರೀತಿಯಲ್ಲಿಯೇ ಉತ್ತರಿಸಲಿದ್ದೇವೆ. ಪಾಕಿಸ್ತಾನ ದೇಶಕ್ಕೆ ಮೊದಲಿನಿಂದಲೂ ಉಗ್ರವಾದಿಗಳೇ ಶತ್ರುಗಳು. ಆ ದೇಶ ಉಳಿಯಬೇಕಾದರೆ, ಮೊದಲು ಉಗ್ರವಾದವನ್ನು ನಿಲ್ಲಿಸುವ ಕೆಲಸ ಮಾಡಲಿ.ಇಲ್ಲವಾದಲ್ಲಿ ಆ ದೇಶ ಭೂಪಟದಲ್ಲಿ ಉಳಿಯುವುದಿಲ್ಲ ಎನ್ನುವುದನ್ನು ಅರಿಯಬೇಕು. ಭಾರತವನ್ನು ಪದೇ ಪದೇ ಇದೇ ವಿಚಾರವಾಗಿ ಕೆಣಕಿದರೂ ನಾವು ತಕ್ಕ ಉತ್ತರ ನೀಡಲು ಈಗ ಸಮರ್ಥರಿದ್ದೇವೆ. ನಮ್ಮ ಯೋಧರು, ಸೈನ್ಯ ಸೂಕ್ತ ಉತ್ತರವನ್ನು ನೀಡಲಿದೆ ಎನ್ನುವ ಅರಿವು ಇರಲಿ ಎಂದು ಎಚ್ಚರಿಕೆ ನೀಡಿದರು.
ಭಯೋತ್ಪಾದನೆ ಎನ್ನುವುದು ಭಾರತದಲ್ಲಿ ಆಗಾಗ ಪ್ರದರ್ಶನವಾಗುತ್ತಲೇ ಇದೆ. ಈ ಹಿಂದೆಯೂ ದಾಳಿಗಳಾಗಿವೆ. ಈ ಬಾರಿ ಕಾಶ್ಮೀರದಲ್ಲಿ ನಡೆಸಿದ ದಾಳಿ ಭಾರತವನ್ನೇ ಕೆಣಕುವಂತ್ತಿತ್ತು. ಈ ಕಾರಣದಿಂದಲೇ ನಾವು ನೀಡಿದ ಉತ್ತರ ಆಪರೇಷನ್ ಸಿಂದೂರ್. ಭಯೋತ್ಪಾದನೆ ವಿಚಾರದಲ್ಲಿ ಯಾವುದೇ ದೇಶ ಪಾಕಿಸ್ತಾನ ಬೆಂಬಲಿಸಬಾರದು.ಪಾಕಿಸ್ತಾನ ಬೆಂಬಲಿಸಿದರೆ ಭಯೋತ್ಪಾದನೆ ಬೆಂಬಲಿಸಿದ ಹಾಗೆ ಎನ್ನುವುದನ್ನು ಮರೆಯಬಾರದು. ಕದನ ವಿರಾಮದ ಹೆಸರಲ್ಲಿ ನಾವು ಈಗ ವಿರಾಮ ನೀಡಿರಬಹುದು.ಯಾವುದೇ ಕಾರಣಕ್ಕೂ ಆಪರೇಷನ್ ಸಿಂದೂರ್ ನಿಲ್ಲುವುದಿಲ್ಲ ಎನ್ನುವ ಮೂಲಕ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೂ ಮೋದಿ ಸಂದೇಶ ರವಾನಿಸಿದರು.
ಭಯೋತ್ಪಾದನೆ ಮತ್ತು ಮಾತುಕತೆ (ಟೆರರ್ ಅಂಡ್ ಟಾಕ್) ಭಯೋತ್ಪಾದನೆ ಹಾಗೂ ವಹಿವಾಟು( ಟೆರರ್ ಅಂಡ್ ಟ್ರೇಡ್) ಒಂದೇ ಕಡೆ ಇರಲು ಸಾಧ್ಯವಿಲ್ಲ ಎನ್ನುವುದನ್ನು ಜಗತ್ತಿನ ಪ್ರಮುಖ ದೇಶಗಳು ಅರಿಯಬೇಕು. ನೀರು ಮತ್ತು ರಕ್ತ ಒಂದೇ ಕಡೆ ಹರಿಯಲಾರವು ಕೂಡ ಎನ್ನುವುದನ್ನು ತಿಳಿಯಬೇಕು. ಯಾವುದೇ ಮಾತುಕತೆಗಳನ್ನು ನಾವು ನಡೆಸಿದರೆ ಅದು ಭಯೋತ್ಪಾದನೆಯ ಮೂಲೋತ್ಪಾಟನೆ ಮಾಡುವುದು ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು( ಪಿಎಕೆ) ಭಾರತಕ್ಕೆ ವಶಕ್ಕೆ ಪಡೆಯುವುದೇ ಮೊದಲ ಆದ್ಯತೆಯಾಗಲಿದೆ ಎಂದು ಅಮೆರಿಕಾಕ್ಕೆ ಸ್ಪಷ್ಟ ಸಂದೇಶ ನೀಡಿದರು ಮೋದಿ.