ಭಾರತದ ಈ 7 ಸುಂದರ ರೈಲು ಮಾರ್ಗಗಳಲ್ಲಿ ನೀವು ಒಮ್ಮೆಯಾದರೂ ಪ್ರಯಾಣಿಸಬೇಕು; ಈ ಹಸಿರು ಸಿರಿಯಲಿ ಮನಸು ಮೆರೆಯಲಿ
ಭಾರತದಲ್ಲಿ ಹಲವಾರು ಸುಂದರ ರೈಲು ಮಾರ್ಗಗಳಿವೆ. ಪ್ರಕೃತಿ ಪ್ರಿಯರಿಗೆ ಹಸಿರ ಸೌಂದರ್ಯ ಉಣಬಡಿಸುವ ರೈಲು ಪ್ರಯಾಣ ಮಾಡಲು ಬೇರೆ ಬೇರೆ ಮಾರ್ಗಗಳಿವೆ. ದಕ್ಷಿಣ ಭಾರತದಲ್ಲಿ ಹಸಿರ ಸೌಂದರ್ಯ ಹಾಗೂ ಉತ್ತರ ಭಾರತದದಲ್ಲಿ ಹಿಮಾಲಯದ ಸೌಂದರ್ಯ ಸವಿಯಬಹುದು. ಅಂಥಾ ಸುಂದರ ರೈಲು ಮಾರ್ಗಗಳ ಪರಿಚಯ ಇಲ್ಲಿದ.
ಭಾರತದಲ್ಲಿ ರೈಲು ಪ್ರಯಾಣವು ಒಂದು ವಿಶೇಷ ಅನುಭವ. ಕರ್ನಾಟಕ ಸೇರಿದಂತೆ ದೇಶದ ಹಲವು ರೈಲು ಮಾರ್ಗಗಳಲ್ಲಿ ಪ್ರಯಾಣಿಸುವುದೇ ಒಂದು ಪ್ರವಾಸ. ಪ್ರಕೃತಿಯ ಸುಂದರ ದೃಶ್ಯಗಳನ್ನು ಸವಿಯುವ ಅವಕಾಶ ಈ ಪ್ರಯಾಣದಲ್ಲಿದೆ. ಕರ್ನಾಟಕದಲ್ಲೇ ಹಲವು ರೈಲು ಮಾರ್ಗಗಳಲ್ಲಿ ಪ್ರಯಾಣಿಸುವುದು ಪ್ರಯಾಣಿಕರಿಗೆ ವಿಶೇಷ ನೆನಪನ್ನು ಉಳಿಸುತ್ತದೆ. ಹಸಿರು ಪರ್ವತ ಶ್ರೇಣಿ, ಕಡಿದಾದ ಕಣಿವೆಗಳು, ಹಿಮಪರ್ವತಗಳನ್ನು ಸವಿಯುವ ಅವಕಾಶ ರೈಲು ಪ್ರಯಾಣದಲ್ಲಿದೆ. ಭಾರತದ ಸುಂದರ ರೈಲು ಪ್ರಯಾಣದ ಮಾರ್ಗಗಳ ಕುರಿತು ತಿಳಿಯೋಣ.
ಶಿಮ್ಲಾದಿಂದ ಕಲ್ಕಾ
ಕಲ್ಕಾದಿಂದ ಶಿಮ್ಲಾವರೆಗಿನ 96 ಕಿಲೋಮೀಟರ್ ರೈಲು ಮಾರ್ಗ ಕೂಡಾ ಯುನೆಸ್ಕೋ ವಿಶ್ವ ಪರಂಪರೆಯ ಸ್ಥಾನಮಾನ ಪಡೆದಿದೆ. ನ್ಯಾರೋ-ಗೇಜ್ ರೈಲು ಮಾರ್ಗವು ಶಿವಾಲಿಕ್ ಶ್ರೇಣಿಯ ಮೂಲಕ ಏರುತ್ತದೆ. ಈ ಮಾರ್ಗದಲ್ಲಿ ಬರೋಬ್ಬರಿ 864 ಸೇತುವೆಗಳು, 102 ಸುರಂಗಗಳು ಮತ್ತು ಹಲವಾರು ಹೇರ್‌ಪಿನ್ ತಿರುವುಗಳಿವೆ. ದಟ್ಟವಾದ ಪೈನ್ ಮತ್ತು ದೇವದಾರು ಮರದ ಕಾಡುಗಳು, ಸುಂದರ ಹಳ್ಳಿಗಳು ಮತ್ತು ಕಡಿದಾದ ಕಣಿವೆಗಳ ಮೂಲಕ ಪ್ರಯಾಣಿಕರನ್ನು ರೈಲು ಹೊತ್ತು ಸಾಗುತ್ತದೆ. ಚಳಿಗಾಲದಲ್ಲಿ ಆಗುವ ಹಿಮಪಾತವು ಹಸಿರ ಭೂರಮೆಗೆ ಮಂಜಿನ ಅಲಂಕಾರ ಮಾಡುತ್ತದೆ.
ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆ
ಇದು ಕೂಡಾ ಯುನೆಸ್ಕೋ ವಿಶ್ವ ಪರಂಪರೆಯ ತಾಣ. ನ್ಯೂ ಜಲ್ಪೈಗುರಿಯಿಂದ ಡಾರ್ಜಿಲಿಂಗ್‌ಗೆ 88 ಕಿಲೋಮೀಟರ್ ರೈಲ್ವೆ ಪ್ರಯಾಣವು ಪ್ರಯಾಣಿಕರಿಗೆ ಪ್ರಕೃತಿ ರಮಣೀಯ ದೃಶ್ಯಗಳನ್ನು ಉಣಬಡಿಸುತ್ತದೆ. ದಟ್ಟ ಕಾಡುಗಳು, ಚಹಾ ತೋಟಗಳು ಮತ್ತು ಪರ್ವತದ ಹಾದಿಗಳ ಮೂಲಕ ರೈಲು ಸಾಗುತ್ತದೆ. ಪ್ರಯಾಣಿಕರು ಹಿಮಾಲಯ ವೀಕ್ಷಣೆ ಮಾಡಬಹುದು.
ನೀಲಗಿರಿ ಮೌಂಟೇನ್ ರೈಲ್ವೇ
ಯುನೆಸ್ಕೋ ವಿಶ್ವ ಪರಂಪರಿಕ ಮಾರ್ಗವಾಗಿರುವ ನೀಲಗಿರಿ ಮೌಂಟೇನ್ ರೈಲ್ವೇ, ಪಶ್ಚಿಮ ಘಟ್ಟಗಳ ಕಡಿದಾದ ಭೂಪ್ರದೇಶವನ್ನು ಹಾದು ಹೋಗುತ್ತದೆ. ತಮಿಳುನಾಡಿನ ಮೆಟ್ಟುಪಾಳ್ಯಂನಿಂದ ಊಟಿಗೆ 46 ಕಿಲೋಮೀಟರ್ ದೂರದ ಈ ಮಾರ್ಗ ಪ್ರವಾಸಿಗರ ಸ್ವರ್ಗ. ಇದು ಏಷ್ಯಾದ ಅತ್ಯಂತ ಕಡಿದಾದ ರೈಲು ಮಾರ್ಗಗಳಲ್ಲಿ ಒಂದು. ಈ ರೈಲು ಮಾರ್ಗದಲ್ಲಿ ದಟ್ಟ ಕಾಡು, ಮಂಜಿನಿಂದ ಆವರಿಸಿದ ವಾತಾವರಣ ಸವಿಯಬಹುದು. ಟೀ ಎಸ್ಟೇಟ್, ಹುಲ್ಲುಗಾವಲುಗಳ ಮೂಲಕ ಪ್ರಯಾಣಿಕರನ್ನು ಬೇರೆಯೇ ಲೋಕಕ್ಕೆ ರೈಲು ಕರೆದೊಯ್ಯುತ್ತದೆ. ಸುರಂಗ ಹಾಗೂ ಸುಂದರ ಸೇತುವೆಗಳು ಆಗಾಗ ಕಾಣಸಿಗುತ್ತವೆ.
ಕಾಂಗ್ರಾ ವ್ಯಾಲಿ ರೈಲ್ವೆ
ಈ ಮಾರ್ಗ ಸುಮಾರು 164 ಕಿಲೋಮೀಟರ್ ಉದ್ದವಿದೆ. ಪಂಜಾಬ್‌ನ ಪಠಾಣ್‌ಕೋಟ್‌ನಿಂದ ಹಿಮಾಚಲ ಪ್ರದೇಶದ ಜೋಗಿಂದರ್ ನಗರಕ್ಕೆ ಸಂಪರ್ಕ ಕಲ್ಪಿಸುವ ಈ ಮಾರ್ಗದಲ್ಲಿ ಪ್ರಕೃತಿ ರಮಣೀಯ ದೃಶ್ಯಗಳನ್ನು ಸವಿಯಬಹುದು. ಹಸಿರು ಕಣಿವೆಗಳು, ಪೈನ್ ಕಾಡುಗಳು ಮತ್ತು ಸುಂದರವಾದ ಹಳ್ಳಿಗಳ ಮೂಲಕ ರೈಲು ಚಲಿಸುತ್ತದೆ. ಬೆಳ್ಳನೆ ಹಿಮದಿಂದ ಆವೃತವಾದ ಧೌಲಾಧರ್ ಪರ್ವತ ಶ್ರೇಣಿಯು ಈ ಮಾರ್ಗದ ಆಕರ್ಷಣೆ. 1920ರ ದಶಕದಲ್ಲಿ ನಿರ್ಮಿಸಲಾದ ಈ ಮಾರ್ಗದಲ್ಲಿ ಬರೋಬ್ಬರಿ 993 ಸೇತುವೆಗಳು ಮತ್ತು ಸುರಂಗಗಳಿವೆ.
ಮಥೆರಾನ್ ಹಿಲ್ ರೈಲ್ವೆ
ಮಹಾರಾಷ್ಟ್ರದ ನೆರಲ್ ಪಟ್ಟಣವನ್ನು ಮಾಥೆರಾನ್ ಗಿರಿಧಾಮಕ್ಕೆ ಸಂಪರ್ಕಿಸುವ ಈ ನ್ಯಾರೋ-ಗೇಜ್ ರೈಲು ಭಾರತದ ಪಾರಂಪರಿಕ ರೈಲು ಮಾರ್ಗಗಳಲ್ಲಿ ಒಂದಾಗಿದೆ. ದಟ್ಟವಾದ ಕಾಡುಗಳಿಂದ ಸುತ್ತುವರೆದಿರುವ ಮಾರ್ಗದಲ್ಲಿ ಅಚ್ಚ ಹಸಿರಿನ ಮರಗಳು, ಮತ್ತು ಹೂವಿನ ಸಸ್ಯಗಳನ್ನು ಕಾಣುತ್ತವೆ. ಮಳೆಗಾಲದಲ್ಲಿ ಈ ಮಾರ್ಗವು ಇನ್ನಷ್ಟು ಹಸಿರಾಗಿರುತ್ತದೆ.
ಮಂಗಳೂರು - ಬೆಂಗಳೂರು ರೈಲು ಮಾರ್ಗ
ಕರ್ನಾಟಕದ ಎರಡು ಪ್ರಮುಖ ನಗರಗಳನ್ನು ಸಂಪರ್ಕಿಸುವ ರೈಲು ಪ್ರಯಾಣವು, ಪ್ರಕೃತಿ ಪ್ರಿಯರಿಗೆ ಸುಂದರ ಭೂದೃಶ್ಯಗಳನ್ನು ಉಣಬಡಿಸುತ್ತದೆ. ಈ ಮಾರ್ಗದಲ್ಲಿ ಕುಕ್ಕೆ ಸುಬ್ರಮಣ್ಯದಿಂದ ಸಕಲೇಶಪುರದವರೆಗಿನ ಮಾರ್ಗ ಇನ್ನೂ ಆಕರ್ಷಕ. ಪಶ್ಚಿಮ ಘಟ್ಟಗಳ ಮೂಲಕ ಹಲವು ಸೇತುವೆ ಹಾಗೂ ಸುರಂಗ ಮಾರ್ಗದ ಮೂಲಕ ರೈಲು ಸಾಗುತ್ತದೆ.
ವಾಸ್ಕೋ ಡ ಗಾಮಾ ಟು ಲೋಂಡಾ
ಗೋವಾ ಮತ್ತು ಕರ್ನಾಟಕದ ನಡುವಣ ಸುಂದರ ಪ್ರವಾಸಿ ತಾಣಗಳನ್ನು ಸವಿಯಲು ಗೋವಾದ ವಾಸ್ಕೋ ಡ ಗಾಮಾದಿಂದ ಬೆಳಗಾವಿಯ ಲೋಂಡಾ ಮಾರ್ಗವು ಉತ್ತಮ. ಪಶ್ಚಿಮ ಘಟ್ಟಗಳ ಮೂಲಕ ಸಾಗುವ ರೈಲು ಪ್ರಯಾಣವು, ವಿಶೇಷವಾಗಿ ಮಳೆಗಾಲದಲ್ಲಿ ಅದ್ಭುತ ಅನುಭವ ನೀಡುತ್ತದೆ. ಅಚ್ಚ ಹಸಿರಿನ ಬೆಟ್ಟಗಳ ನಡುವೆ ಹಲವಾರು ಜಲಪಾತಗಳು ಹುಟ್ಟುತ್ತವೆ. ದಟ್ಟ ಕಾಡುಗಳು, ಆಳವಾದ ಕಣಿವೆಗಳು ಮತ್ತು ಬಗಬಗೆಯ ಸಸ್ಯ ಹಾಗೂ ಪ್ರಾಣಿಗಳು ಈ ಮಾರ್ಗದಲ್ಲಿವೆ. ದೂಧ್‌ಸಾಗರ್ ಜಲಪಾತ ಈ ಮಾರ್ಗದ ಪ್ರಮುಖ ಆಕರ್ಷಣೆ.