ರೈಲು ಪ್ರಯಾಣಿಕರಿಗೆ ಕೊಡುವ ಹೊದಿಕೆ ತೊಳೆಯುತ್ತೀರಾ; ಆರ್‌ಟಿಐ ಅರ್ಜಿಗೆ ಭಾರತೀಯ ರೈಲ್ವೆ ಕೊಟ್ಟ ಉತ್ತರ ಹೀಗಿತ್ತು
ರೈಲುಗಳಲ್ಲಿ ಹೊದಿಕೆ ಬಳಸುತ್ತೀರಾ? ಹಾಗಾದರೆ ಬಳಸುವ ಮುನ್ನ ಸರಿಯಾಗಿ ಚೆಕ್ ಮಾಡಿಕೊಳ್ಳಿ. ಕಾರಣ ಇಷ್ಟೆ- “ರೈಲುಗಳಲ್ಲಿ ಪ್ರಯಾಣಿಕರಿಗೆ ಕೊಡುವ ಹೊದಿಕೆ ತೊಳೆಯುತ್ತೀರಾ” ಎಂಬ ಪ್ರಶ್ನೆಯ ಆರ್‌ಟಿಐ ಅರ್ಜಿಗೆ ಭಾರತೀಯ ರೈಲ್ವೆ ಕೊಟ್ಟ ಉತ್ತರ ಹೀಗಿತ್ತು ಎಂದಿದೆ ಈ ವರದಿ ನೋಡಿ.

ತಿರುಚ್ಚಿ: ರೈಲುಗಳಲ್ಲಿ ಎಸಿ ಕೋಚ್‌ಗಳಲ್ಲಿ ಕೊಡುವ ಹೊದಿಕೆ ಎಷ್ಟು ಶುಭ್ರವಾಗಿದೆ? ಅವುಗಳನ್ನು ನಿತ್ಯವೂ ತೊಳೆಯುತ್ತಾರಾ? ಮಾಹಿತಿ ಹಕ್ಕು ಕಾಯಿದೆ ಪ್ರಕಾರ ಸಲ್ಲಿಕೆಯಾದ ಅರ್ಜಿಗೆ ಭಾರತೀಯ ರೈಲ್ವೆ ಉತ್ತರಿಸಿದೆ. ಅದರ ಉತ್ತರ ಮತ್ತು ರೈಲ್ವೆ ಸಿಬ್ಬಂದಿ ನೀಡಿದ ಉತ್ತರಗಳನ್ನು ಇಟ್ಟುಕೊಂಡು ದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಟಿಸಿದ ವರದಿ ರೈಲ್ವೆ ಪ್ರಯಾಣಿಕರ ಗಮನಸೆಳೆದಿದೆ. ಭಾರತೀಯ ರೈಲ್ವೆ ನೀಡಿದ ಉತ್ತರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ನಾಗರಿಕರು ಅಸಮಾಧಾನ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈಲು ಪ್ರಯಾಣಿಕರಿಗೆ ಒದಗಿಸುವ ಹೊದಿಕೆಯ ಸ್ವಚ್ಛತೆ ವಿಚಾರ ಈಗ ಮುನ್ನೆಲೆಗೆ ಬಂದಿದ್ದು, ವರ್ಷಗಳ ಹಳೆಯ ಟ್ವೀಟ್‌ಗಳೂ ಗಮನಸೆಳೆಯತೊಡಗಿವೆ.
ಆರ್‌ಟಿಐ ಅರ್ಜಿಗೆ ಭಾರತೀಯ ರೈಲ್ವೆ ಉತ್ತರ ಏನಿತ್ತು
ರೈಲುಗಳಲ್ಲಿ ಎಸಿ ಬೋಗಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಒದಗಿಸುವ ಹೊದಿಕೆಯನ್ನು ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ ಎಂಬ ಪ್ರಶ್ನೆಯನ್ನು ಆರ್‌ಟಿಐ ಮೂಲಕ ಭಾರತೀಯ ರೈಲ್ವೆಯನ್ನು ಕೇಳಲಾಗಿತ್ತು. ಅದಕ್ಕೆ ಸಿಕ್ಕ ಪ್ರತಿಕ್ರಿಯೆ ಹೀಗಿತ್ತು ಎಂದು ದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯನ್ನು ಪ್ರಕಟಿಸಿದೆ. ಪ್ರಯಾಣಿಕರಿಗೆ ಒದಗಿಸಲಾದ ಲಿನೆನ್ ಅನ್ನು ಪ್ರತಿ ಬಳಕೆಯ ನಂತರ ತೊಳೆಯಲಾಗುತ್ತದೆ. ಆದರೆ, ಉಣ್ಣೆಯ ಹೊದಿಕೆಗಳನ್ನು "ಕನಿಷ್ಠ ತಿಂಗಳಿಗೊಮ್ಮೆ, ಮೇಲಾಗಿ ಲಭ್ಯವಿರುವ ಸಾಮರ್ಥ್ಯ ಮತ್ತು ಲಾಜಿಸ್ಟಿಕ್ಸ್ ವ್ಯವಸ್ಥೆಗಳಿಗೆ ಒಳಪಟ್ಟು ತಿಂಗಳಿಗೆ ಎರಡು ಬಾರಿ ತೊಳೆಯಲಾಗುತ್ತದೆ ಎಂದು ಭಾರತೀಯ ರೈಲ್ವೆ ಪ್ರತಿಕ್ರಿಯಿಸಿದ್ದಾಗಿ ವರದಿ ಹೇಳಿದೆ.
ಭಾರತೀಯ ರೈಲ್ವೇಯು ಹೊದಿಕೆಗಳು, ಬೆಡ್‌ಶೀಟ್‌ಗಳು ಮತ್ತು ದಿಂಬಿನ ಕವರ್‌ಗಳಿಗೆ ಪ್ರಯಾಣಿಕರಿಗೆ ಶುಲ್ಕ ವಿಧಿಸುತ್ತದೆಯೇ ಎಂದು ಕೇಳಲಾದ ಪ್ರಶ್ನೆಗೆ ಇವೆಲ್ಲವೂ ರೈಲು ಪ್ರಯಾಣ ದರದ ಪ್ಯಾಕೇಜ್‌ನ ಭಾಗವಾಗಿದೆ. ಇದಲ್ಲದೆ, ಗರೀಬ್ ರಥ್ ಮತ್ತು ಡುರೊಂಟೊದಂತಹ ರೈಲುಗಳಲ್ಲಿ, ಟಿಕೆಟ್‌ಗಳನ್ನು ಬುಕ್ ಮಾಡುವಾಗ ಬೆಡ್‌ರೋಲ್ ಆಯ್ಕೆ ಮಾಡಿಕೊಂಡರೆ ನಂತರ ಪ್ರತಿ ಕಿಟ್‌ಗೆ ಹೆಚ್ಚುವರಿ ಮೊತ್ತವನ್ನು ಪಾವತಿಸುವ ಮೂಲಕ ಬೆಡ್‌ರೋಲ್ (ದಿಂಬು, ಬೆಡ್ ಶೀಟ್, ಇತ್ಯಾದಿ) ಪಡೆಯಬಹುದು ಎಂದು ಭಾರತೀಯ ರೈಲ್ವೆ ಉತ್ತರಿಸಿದೆ.
ಇದೇ ಉತ್ತರವನ್ನು ಇಟ್ಟುಕೊಂಡು ದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ರಿಯಾಲಿಟಿ ಚೆಕ್ ಮಾಡುವುದಕ್ಕಾಗಿ ರೈಲ್ವೆ ಸಿಬ್ಬಂದಿ ಬಳಿ ಅದೇ ಪ್ರಶ್ನೆಯನ್ನು ಕೇಳಿದೆ.
ಭಾರತೀಯ ರೈಲ್ವೆ ಸಿಬ್ಬಂದಿ ಕೊಟ್ಟ ಉತ್ತರ ಹೀಗಿತ್ತು..
ಭಾರತೀಯ ರೈಲ್ವೆ ಆರ್‌ಟಿಐ ಅರ್ಜಿಗೆ ಕೊಟ್ಟ ಉತ್ತರ ಕಳವಳಕಾರಿಯಾಗಿತ್ತು. ಅದಕ್ಕಿಂತಲೂ ಖೇದಕರ ಅಂಶ ರೈಲ್ವೆ ಸಿಬ್ಬಂದಿ ಜೊತೆ ಮಾತನಾಡಿದ ಸಿಕ್ಕ ಉತ್ತರಗಳ ಮೂಲಕ ಬಹಿರಂಗವಾಗಿದೆ ಎಂದು ಎಕ್ಸ್‌ಪ್ರೆಸ್ ವರದಿ ವಿವರಿಸಿದೆ. ಭಾರತೀಯ ರೈಲ್ವೆಯ ವಿವಿಧ ರೈಲುಗಳಲ್ಲಿ ಕೆಲಸಮಾಡುತ್ತಿರುವ 20 ಹೌಸ್‌ಕೀಪಿಂಗ್ ಸಿಬ್ಬಂದಿ ಬಳಿ, “ರೈಲುಗಳಲ್ಲಿ ಎಸಿ ಕೋಚ್‌ಗಳಲ್ಲಿ ಕೊಡುವ ಹೊದಿಕೆ ಎಷ್ಟು ಶುಭ್ರವಾಗಿದೆ? ಅವುಗಳನ್ನು ನಿತ್ಯವೂ ತೊಳೆಯುತ್ತಾರಾ?” ಎಂದು ಪ್ರಶ್ನಿಸಲಾಗಿತ್ತು.
“ಪ್ರತಿ ಟ್ರಿಪ್‌ನ ನಂತರ, ನಾವು ಬೆಡ್‌ಶೀಟ್‌ಗಳು ಮತ್ತು ದಿಂಬಿನ ಕವರ್‌ಗಳನ್ನು ಲಾಂಡ್ರಿಗೆ ನೀಡಲು ಬಂಡಲ್ ಕಟ್ಟಿ ಕಳುಹಿಸುತ್ತೇವೆ. ಹೊದಿಕೆಗಳಾದರೆ ಅವುಗಳನ್ನು ಅಂದವಾಗಿ ಮಡಚಿ ಕೋಚ್‌ನಲ್ಲಿ ಇರಿಸುತ್ತೇವೆ. ಕೆಟ್ಟ ವಾಸನೆ ಅಥವಾ ಆಹಾರ ಚೆಲ್ಲಿದ್ದರೆ, ಗಲೀಜಾಗಿದ್ದರೆ ಮಾತ್ರವೇ ಲಾಂಡ್ರಿಗೆ ಕಳುಹಿಸುತ್ತೇವೆ” ಎಂದು ಹೌಸ್‌ಕೀಪಿಂಗ್ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.
ಹೌಸ್ ಕೀಪಿಂಗ್ ಕೆಲಸವನ್ನು 10 ವರ್ಷಗಳಿಂದ ಮಾಡುತ್ತಿರುವ ಮತ್ತೊಬ್ಬ ಉದ್ಯೋಗಿ, ''ಕಂಬಳಿಗಳನ್ನು ತಿಂಗಳಿಗೆ ಎರಡು ಬಾರಿ ತೊಳೆಯುತ್ತಾರೆ ಎಂಬ ಗ್ಯಾರಂಟಿ ಇಲ್ಲ. ಹೆಚ್ಚಿನ ಸಂದರ್ಭಗಳಲ್ಲಿ, ದುರ್ವಾಸನೆ, ತೇವ, ವಾಂತಿ ಇತ್ಯಾದಿಗಳನ್ನು ಗಮನಿಸಿದರೆ ಮಾತ್ರ ನಾವು ಹೊದಿಕೆಗಳನ್ನು ತೊಳೆಯಲು ನೀಡುತ್ತೇವೆ. ಕೆಲವು ಸಂದರ್ಭಗಳಲ್ಲಿ, ಪ್ರಯಾಣಿಕರು ದೂರು ನೀಡಿದರೆ ತತ್‌ಕ್ಷಣವೇ ಹೊಸ ಸ್ವಚ್ಛ ಹೊದಿಕೆ ನೀಡಿರುವುದನ್ನು ಖಚಿತಪಡಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾಗಿ ವರದಿ ವಿವರಿಸಿದೆ.
ಆರ್‌ಟಿಐ ಮಾಹಿತಿ ಪ್ರಕಾರ, ಭಾರತೀಯ ರೈಲ್ವೆ ಅಧೀನ 46 ಲಾಂಡ್ರಿಗಳಿದ್ದು, 25 ಬೂಟ್ ಲಾಂಡ್ರಿಗಳಿವೆ. ಲಾಂಡ್ರಿಯಲ್ಲಿ ವಾಷಿಂಗ್ ಮಷಿನ್‌ಗಳೂ ಇವೆ. ಇಲ್ಲಿ ಕೆಲಸ ಮಾಡುವವರು ಎಲ್ಲರೂ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವವರು ಎಂಬ ಅಂಶ ಬಹಿರಂಗವಾಗಿದೆ.