Train Accident: ಜಾರ್ಖಂಡ್‌ನಲ್ಲಿ ಹಳಿ ತಪ್ಪಿದ ಮುಂಬೈ ರೈಲು , ಇಬ್ಬರ ಸಾವು, 20 ಮಂದಿಗೆ ಗಾಯ
Indian Railways ಉತ್ತರ ಭಾರತದಲ್ಲಿ ಮತ್ತೊಂದು ರೈಲ್ವೆ ದುರಂತ ನಡೆದಿದ್ದು, ಕೋಲ್ಕತ್ತಾದಿಂದ ಮುಂಬೈಗೆ ಹೊರಟಿದ್ದ ಪ್ರಯಾಣಿಕರ ರೈಲ ಹಳಿ ತಪ್ಪಿ ಇಬ್ಬರು ಮೃತಪಟ್ಟಿದ್ದಾರೆ.
ಜಮಶೆಡ್‌ಪುರ: ಕೋಲ್ಕತ್ತಾದ ಹೌರಾದಿಂದ ಮುಂಬೈಗೆ ಆಗಮಿಸುತ್ತಿದ್ದ ಹೌರಾ-ಸಿಎಸ್‌ಎಂಟಿ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿ 18 ಬೋಗಿಗಳು ಉರುಳಿ ಬಿದ್ದುದರಿಂದ ಇಬ್ಬರು ಸ್ಥಳದಲ್ಲೇ ಮೃತಪಟ್ಟು 20 ಮಂದಿ ಗಾಯಗೊಂಡಿರುವ ಘಟನೆ ಜಾರ್ಖಂಡ್ ರಾಜ್ಯದ ಜಮಶೆಡ್‌ಪುರ ಸಮೀಪದ ಬಡಾಬಾಂಬೂ ಎಂಬಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿದೆ. ಘಟನೆ ನಡೆದ ಸ್ಥಳವು ಜಮಶೆಡ್‌ಪುರದಿಂದ 80 ಕಿ.ಮಿ. ದೂರದಲ್ಲಿದ್ದು ರಕ್ಷಣಾ ಕಾರ್ಯವು ಚುರುಕುಗೊಂಡಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪ್ರಯಾಣಿಕರನ್ನು ಸುರಕ್ಷಿತವಾಗಿ ಬೇರೆ ರೈಲುಗಳಲ್ಲಿ ಪ್ರಯಾಣಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಇದೇ ವೇಳೆ ಸಮೀಪದಲ್ಲಿಯೇ ಮತ್ತೊಂದು ಗೂಡ್ಸ್ ರೈಲು ಕೂಡ ಹಳಿ ತಪ್ಪಿದ್ದು, ಈ ರೈಲು ಡಿಕ್ಕಿ ಆಗಿದೆಯೇ ಎನ್ನುವ ಚರ್ಚೆಗಳು ನಡೆದಿವೆ. ಆದರೆ ಅದಿನ್ನೂ ನಿಖರವಾಗಿಲ್ಲ. ಹೌರಾ ಎಕ್ಸ್‌ಪ್ರೆಸ್ ಹಳಿ ತಪ್ಪಿದ ಘಟನೆ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆಯ ತನಿಖೆಗೆ ಆದೇಶಿಸಿದೆ.
ಹೌರಾದಿಂದ ಜಮಶೆಡ್ ಪುರ ಮಾರ್ಗವಾಗಿ ಎಕ್ಸ್‌ಪ್ರೆಸ್ ರೈಲು ಮುಂಬೈ ಕಡೆಗೆ ಹೊರಟಿತ್ತು. ಟಾಟಾ ನಗರ ಬಳಿ ಹೋಗುವ ವೇಳೆ ಮಂಗಳವಾರ ಬೆಳಿಗ್ಗೆ ಏಕಾಏಕಿ ರೈಲು ಹಳಿ ತಪ್ಪಿತು. ಬೆಳಗಿನ ಜಾವದ ನಿದ್ರೆಯಲ್ಲಿದ್ದ ಪ್ರಯಾಣಿಕರಿಗೆ ಏಕಾಏಕಿ ಶಬ್ದ ಕೇಳಿ ಭಯವೂ ಆಯಿತು. ಈ ವೇಳೆ ರೈಲಿನ ಬೋಗಿಗಳು ಉರುಳಿ ಬಿದ್ದಿದ್ದವು. ಅದರಲ್ಲೂ ಹದಿನೆಂಟು ಬೋಗಿಗಳು ಅಸ್ತವ್ಯಸ್ತಗೊಂಡಿದ್ದವು. ಇದರಲ್ಲಿ ಹದಿನಾರು ಬೋಗಿಗಳು ಪ್ರಯಾಣಿಕರವು. ಈ ವೇಳೆ ಗಾಯಗೊಂಡ ಇಬ್ಬರು ಪ್ರಯಾಣಿಕರು ಮೃತಪಟ್ಟರೆ, ಇಪ್ಪತ್ತು ಪ್ರಯಾಣಿಕರು ಗಾಯಗೊಂಡರು. ಆತಂಕಗೊಂಡು ಹೊರ ಬಂದ ಪ್ರಯಾಣಿಕರಿಗೆ ರೈಲ್ವೆ ಸಿಬ್ಬಂದಿ ಸಂತೈಸಿದರು. ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರಿಂದ ರೈಲ್ವೆ ರಕ್ಷಣಾ ಸಿಬ್ಬಂದಿ ಧಾವಿಸಿದರು. ಗಾಯಗೊಂಡವರನ್ನು ಸ್ಥಳೀಯವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಧ್ಯಪ್ರದೇಶ, ಮಹಾರಾಷ್ಟ್ರ ಕಡೆಗೆ ಹೋಗಬೇಕಿದ್ದ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.
ಮಾಹಿತಿ ತಿಳಿದ ತಕ್ಷಣ ರೈಲ್ವೆ ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿದವು. ಸ್ಥಳೀಯವಾಗಿಯೇ ಹಲವರಿಗೆ ಪ್ರಥಮ ಚಿಕಿತ್ಸೆ ನೀಡಿ ಸಮೀಪದ ಚಕ್ರಧರಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ. ತನಿಖೆಗೆ ಆದೇಶಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಸ್‌ಗಳು ಹಾಗೂ ಹೆಚ್ಚುವರಿ ರೈಲುಗಳ ಮೂಲಕ ಪ್ರಯಾಣಿಕರ ಮುಂದಿನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಸಹಾಯವಾಣಿಯನ್ನೂ ಕೂಡ ಆರಂಭಿಸಲಾಗಿದ್ದು, ಕುಟುಂಬದವರಿಗೆ ಮಾಹಿತಿ ನೀಡಲಾಗುತ್ತಿದೆ. ಇದೇ ವೇಳೆ ಸಮೀಪದಲ್ಲಿಯೇ ಇನ್ನೊಂದು ಗೂಡ್ಸ್ ರೈಲು ಹಳಿ ತಪ್ಪಿದೆ. ಈ ಎರಡು ರೈಲುಗಳ ನಡುವೆ ಡಿಕ್ಕಿಯಾಗಿದೆ ಎನ್ನುವ ಮಾಹಿತಿಯಿದ್ದರೂ ಅದು ಖಚಿತವಾಗಿಲ್ಲ ಎಂದು ಹಿರಿಯ ರೈಲ್ವೆ ಅಧಿಕಾರಿ ಓಂ ಪ್ರಕಾಶ್ ಚರಣ್ ಹೇಳಿದ್ದಾರೆ.
ಎರಡು ವಾರದ ಹಿಂದೆಯಷ್ಟೇ ಉತ್ತರ ಪ್ರದೇಶದ ಗೊಂಡಾ ಬಳಿ ಚಂಡೀಗಢದಿಂದ ಅಸ್ಸಾಂಗೆ ಹೊರಟಿದ್ದ ರೈಲು ಹಳಿ ತಪ್ಪಿ ನಾಲ್ವರು ಮೃತಪಟ್ಟ ಘಟನೆ ನಡೆದಿತ್ತು.