Vande Bharat: ಭಾರತದ ಅತೀ ದೂರ ಕ್ರಮಿಸುವ ವಂದೇ ಭಾರತ್ ವಿಶೇಷ ರೈಲು ಸೇವೆ ಸದ್ಯ ಆರಂಭ; ಎಲ್ಲಿಂದ ಎಲ್ಲಿಗೆ ಸಂಚಾರ
ಭಾರತೀಯ ರೈಲ್ವೆಯಲ್ಲಿ ಕ್ರಾಂತಿ ನಿರ್ಮಿಸಿರುವ ವಂದೇ ಭಾರತ್ ರೈಲು ಈಗ ದೀಪಾವಳಿ ಸಹಿತ ವಿಶೇಷ ಸನ್ನಿವೇಶದಲ್ಲೂ ಓಡಲಿದೆ.ಅದೂ ಅತಿ ದೂರವನ್ನು ಕ್ರಮಿಸುವ ವಂದೇ ಭಾರತ್ ರೈಲು ಮುಂದಿನ ವಾರ ಆರಂಭವಾಗುತ್ತಿದೆ.
ದೆಹಲಿ: ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರಿಗೆ ವಿಶೇಷ ರೈಲು ಸೇವೆ ಒದಗಿಸುತ್ತಾ ಬಂದಿರುವ ಭಾರತೀಯ ರೈಲ್ವೆ ಈಗ ಅತೀ ದೂರ ಕ್ರಮಿಸುವ ವಂದೇ ಭಾರತ್ ರೈಲು ಸೇವೆಯನ್ನು ಈ ಬಾರಿಯ ದೀಪಾವಳಿಯಲ್ಲಿ ಪ್ರಯೋಗಿಸಲಿದೆ. ಮೊದಲೆಲ್ಲಾ ವಿಶೇಷ ರೈಲುಗಳ ಸಂಚಾರ ಇದ್ದವು. ಐದು ವರ್ಷದಿಂದ ಭಾರತದಲ್ಲಿ ವಂದೇ ಭಾರತ್ ರೈಲುಗಳ ಸಂಚಾರ ಶುರುವಾಗಿದ್ದು, ವಿಶೇಷ ಸಂದರ್ಭದಲ್ಲೂ ಈ ರೈಲಿನ ಬಳಕೆಯಾಗುತ್ತಿರುವುದು ಇದೇ ಮೊದಲು. ದೀಪಾವಳಿಯಿಂದ ದೆಹಲಿ, ಉತ್ತರಪ್ರದೇಶ, ಬಿಹಾರಕ್ಕೆ ಹೆಚ್ಚು ಜನ ಹೋಗಿ ಬರುವುದರಿಂದ ವಂದೇ ಭಾರತ್ ರೈಲು ಓಡಲಿದೆ.ಈ ವರ್ಷದ ದೀಪಾವಳಿ ಮತ್ತು ಛಾತ್ ಹಬ್ಬಗಳಿಗಾಗಿ, ಭಾರತವು ತನ್ನ ಅತಿ ಉದ್ದದ ವಂದೇ ಭಾರತ್ ಎಕ್ಸ್‌ಪ್ರೆಸ್ಅನ್ನು ಓಡಿಸುವ ಮೂಲಕ ಹೊಸ ಇತಿಹಾಸ ಬರೆಯಲಿದೆ ಎಂದು ಭಾರತೀಯ ರೈಲ್ವೆ ಹೇಳಿಕೊಂಡಿದೆ.
ಇದು ದೆಹಲಿ ಮತ್ತು ಪಾಟ್ನಾ ನಡುವೆ ಕೇವಲ 11.5 ಗಂಟೆಗಳಲ್ಲಿ 994 ಕಿಲೋಮೀಟರ್‌ಗಳನ್ನು ಕ್ರಮಿಸುತ್ತದೆ. ಹಬ್ಬದ ಋತುವಿಗಾಗಿ ವಿಶೇಷವಾಗಿ ಪರಿಚಯಿಸಲಾದ ಈ ರೈಲು ಸ್ಲೀಪರ್ ಬರ್ತ್‌ಗಳ ಬದಲಿಗೆ ಚೇರ್ ಕಾರ್ ಆಸನಗಳನ್ನು ಹೊಂದಿರಲಿದೆ. ಈ ಋತುವಿನಲ್ಲಿ ಎಂಟು ಟ್ರಿಪ್‌ಗಳಲ್ಲಿ ಕಾರ್ಯನಿರ್ವಹಿಸಲಿವೆ. ಈ ಸೇವೆಯು ಅಕ್ಟೋಬರ್ 30 ರಂದು ದೆಹಲಿಯಿಂದ ಪ್ರಾರಂಭವಾಗಲಿದೆ. ಇಲ್ಲಿಯವರೆಗೆ, ಅತಿ ಉದ್ದದ ವಂದೇ ಭಾರತ್ ಮಾರ್ಗವು ನವದೆಹಲಿ-ವಾರಣಾಸಿ ಸೇವೆಯಾಗಿದ್ದು, ಇದು 771 ಕಿಲೋಮೀಟರ್‌ಗಳನ್ನು ಕ್ರಮಿಸುತ್ತಿದೆ. ದೆಹಲಿ ಪಾಟ್ನಾ ನಡುವಿನ ಈ ರೈಲು ಅತಿ ಉದ್ದದ್ದು ಎನ್ನಿಸಲಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ದೆಹಲಿ ಮತ್ತು ಪಾಟ್ನಾ ನಡುವೆ ನವೆಂಬರ್ 1, 3 ಮತ್ತು 6 ರಂದು ಚಲಿಸುತ್ತದೆ, ಪಾಟ್ನಾದಿಂದ ದೆಹಲಿಗೆ ಅಕ್ಟೋಬರ್ 31, ಮತ್ತು ನವೆಂಬರ್ 2, 4 ಮತ್ತು 7 ರಂದು ಹಿಂತಿರುಗುತ್ತದೆ. ದೆಹಲಿಯಿಂದ ಬೆಳಿಗ್ಗೆ 8:25 ಕ್ಕೆ ಹೊರಡುತ್ತದೆ. ರಾತ್ರಿ 8 ಗಂಟೆಗೆ ಪಾಟ್ನಾ ತಲುಪುತ್ತದೆ. ಪಾಟ್ನಾದಿಂದ ರೈಲು ಬೆಳಗ್ಗೆ 7:30ಕ್ಕೆ ಹೊರಟು ಸಂಜೆ 7 ಗಂಟೆಗೆ ದೆಹಲಿ ತಲುಪಲಿದೆ. ಮಾರ್ಗದುದ್ದಕ್ಕೂ ಪ್ರಮುಖ ನಿಲ್ದಾಣಗಳಲ್ಲಿ ಕಾನ್ಪುರ್ ಸೆಂಟ್ರಲ್, ಪ್ರಯಾಗರಾಜ್, ಬಕ್ಸರ್ ಮತ್ತು ಅರ್ರಾದಲ್ಲಿ ನಿಲುಗಡೆಯಾಗಲಿದೆ.
ವರದಿಗಳ ಪ್ರಕಾರ, ದೆಹಲಿ-ಪಾಟ್ನಾ ವಂದೇ ಭಾರತ್ (ರೈಲು ಸಂಖ್ಯೆ 002252) ನಲ್ಲಿ ಎಸ್‌ಸಿ ಚೇರ್ ಕಾರ್‌ನ ದರವು 2,575 ರೂ ಆಗಿರುತ್ತದೆ, ಆದರೆ ಎಸಿ ಎಕ್ಸಿಕ್ಯುಟಿವ್ ಚೇರ್ ಕಾರ್ ದರವು 4,655 ರೂ ಆಗಿರುತ್ತದೆ. ಇದರಲ್ಲಿ ಊಟ ಮತ್ತು ಚಹಾವೂ ಸೇರಿದೆ.
ವಂದೇ ಭಾರತ್ ರೈಲುಗಳು ಹಳೆಯ ಶತಾಬ್ದಿ ರೈಲು ಸೇವೆಗಳನ್ನು ಬದಲಿಸಲು ಉದ್ದೇಶಿಸಲಾಗಿದೆ, ವೇಗವಾದ ಮತ್ತು ಹೆಚ್ಚು ಪರಿಣಾಮಕಾರಿ ಪ್ರಯಾಣದ ಆಯ್ಕೆಗಳನ್ನು ಒದಗಿಸುತ್ತದೆ. ಸದ್ಯದಲ್ಲಿಯೇ ಸ್ಲೀಪರ್ ಕೋಚ್‌ಗಳ ಸೇರ್ಪಡೆಯೊಂದಿಗೆ, ಈ ಸೇವೆಯು ದೂರದ ಪ್ರಯಾಣಿಕರಿಗೆ ಸೌಕರ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎನ್ನುವುದು ಭಾರತೀಯ ರೈಲ್ವೆ ನೀಡಿರುವ ವಿವರಣೆ.
ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು 2019ರ ಫೆಬ್ರವರಿ 15ರಂದು ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿ-ವಾರಣಾಸಿ ಮಾರ್ಗದಲ್ಲಿ ವಿಧ್ಯುಕ್ತವಾಗಿ ಪ್ರಾರಂಭಿಸಿದರು. ಆನಂತದ ಹದಿನೈದಕ್ಕೂ ಹೆಚ್ಚು ರಾಜ್ಯಗಳಲ್ಲಿ ವಂದೇ ಭಾರತ್ ರೈಲುಗಳು ಸಂಪರ್ಕ ಕಲ್ಪಿಸಿವೆ. ಕರ್ನಾಟಕದಲ್ಲಿಯೇ ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ ಧಾರವಾಡ, ಕಲಬುರಗಿ ಸಹಿತ ಹತ್ತು ವಂದೇ ಭಾರತ್ ರೈಲುಗಳ ಸಂಚಾರವಿದೆ.