ಭಾರತೀಯ ರೈಲ್ವೆಯ ಬಿಗ್ ಅಪ್ಡೇಟ್; ಲೋವರ್ ಬರ್ತ್ ಎಲ್ಲರಿಗೂ ಸಿಗಲ್ಲ ಯಾಕೆ, ರಿಸರ್ವೇಶನ್ ನಿಯಮ ಸ್ಪಷ್ಟಪಡಿಸಿದ ರೈಲ್ವೆ ಸಚಿವ
Indian Railways big update: ಐಆರ್‌ಸಿಟಿಸಿಯಲ್ಲಿ ರೈಲು ಟಿಕೆಟ್ ಬುಕ್ ಮಾಡುವಾಗ ಲೋವರ್ ಬರ್ತ್ ಪಡೆಯಲು ಹರಸಾಹಸ ಮಾಡಬೇಕಾಗುತ್ತದೆ. ಲೋವರ್ ಬರ್ತ್ ಎಲ್ಲರಿಗೂ ಸಿಗಲ್ಲ ಯಾಕೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ರಿಸರ್ವೇಶನ್ ನಿಯಮಗಳನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸ್ಪಷ್ಟಪಡಿಸಿದರು. ಭಾರತೀಯ ರೈಲ್ವೆಯ ಬಿಗ್ ಅಪ್ಡೇಟ್ ವಿವರ ಇಲ್ಲಿದೆ.

Indian Railways big update: ರೈಲು ಪ್ರಯಾಣದ ವೇಳೆ ಲೋವರ್ ಬರ್ತ್ ರಿಸರ್ವೇಶನ್ ಮಾಡುವುದು ಬಹಳ ತ್ರಾಸದ ಕೆಲಸ. ಭಾರತೀಯ ರೈಲ್ವೆ ಲೋವರ್ ಬರ್ತ್ ಹಂಚಿಕೆ ಹೇಗೆ ಮಾಡುತ್ತದೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ತಲೆಕೆರೆದುಕೊಂಡು ಲೆಕ್ಕಾಚಾರ ಹಾಕಿದವರಿಗೆ ಹಾಗೂ ತಲೆಕೆರೆದುಕೊಳ್ಳುತ್ತಿರುವವರ ಸಂಖ್ಯೆ ಕಡಿಮೆಯೇನಲ್ಲ. ಈ ಲೋವರ್ ಬರ್ತ್ ಹಂಚಿಕೆ (Lower Birth Allocation) ವಿಚಾರವಾಗಿ ಭಾರತೀಯ ರೈಲ್ವೆಯ ಬಿಗ್ ಅಪ್ಡೇಟ್ ಬಹಿರಂಗವಾಗಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಲೋಕಸಭೆಯಲ್ಲಿ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಬೆನ್ನಿಗೆ ಭಾರತೀಯ ರೈಲ್ವೆ ಕೂಡ ಈ ವಿಷಯದ ಬಗ್ಗೆ ಟ್ವೀಟ್ ಮಾಡಿದೆ.
ರಿಸರ್ವೇಶನ್ ನಿಯಮ ಸ್ಪಷ್ಟಪಡಿಸಿದ ರೈಲ್ವೆ ಸಚಿವ
ಲೋಕಸಭೆ ಕಲಾಪದ ವೇಳೆ ಸದಸ್ಯರೊಬ್ಬರ ಪ್ರಶ್ನೆಗೆ ಉತ್ತರಿಸಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರೈಲುಗಳಲ್ಲಿ ಹಿರಿಯ ನಾಗರಿಕರು, ಮಹಿಳೆಯರು ಹಾಗೂ ವಿಶೇಷ ಸಾಮರ್ಥ್ಯದ ಜನರಿಗೆ ಲೋವರ್ ಬರ್ತ್ ಒದಗಿಸುವುದಕ್ಕೆ ಭಾರತೀಯ ರೈಲ್ವೆ ನಿರಂತರವಾಗಿ ಪ್ರಯತ್ನ ನಡೆಸುತ್ತಿದೆ ಎಂದು ಹೇಳಿದರು.
ಹಿರಿಯ ನಾಗರಿಕರು, 45 ವರ್ಷ ಮತ್ತು ಮೇಲ್ಪಟ್ಟ ವಯಸ್ಸಿನ ಮಹಿಳೆಯರು ಮತ್ತು ಅಂಗವಿಕಲರು, ಗರ್ಭಿಣಿಯರಿಗೆ ಲಭ್ಯತೆಗೆ ಅನುಗುಣವಾಗಿ ರೈಲುಗಳಲ್ಲಿ ಲೋವರ್ ಬರ್ತ್ ತನ್ನಿಂತಾನೇ ಹಂಚಿಕೆಯಾಗುತ್ತದೆ. ಒಂದೊಮ್ಮೆ ಲೋವರ್ ಬರ್ತ್ ಬೇಕು ಎಂದು ಟಿಕೆಟ್ ಖರೀದಿ ವೇಳೆ ನಮೂದಿಸದೇ ಇದ್ದರೂ ಭಾರತೀಯ ರೈಲ್ವೆ ವಯಸ್ಸಿಗೆ ಅನುಗುಣವಾಗಿ, ಪ್ರಯಾಣಿಕರ ಮಾಹಿತಿ ನೋಡಿಕೊಂಡು ಲೋವರ್ ಬರ್ತ್ ಹಂಚಿಕೆ ಮಾಡುತ್ತದೆ ಎಂದು ಸಚಿವ ಅಶ್ವಿನಿ ವೈಷ್ಣವ್ ವಿವರಿಸಿದರು.
ಲೋವರ್ ಬರ್ತ್ ಎಲ್ಲರಿಗೂ ಸಿಗಲ್ಲ ಯಾಕೆ, ನಿಯಮ ಏನಿದೆ
ರೈಲುಗಳಲ್ಲಿ ಸ್ಲೀಪರ್ ಕ್ಲಾಸ್‌ನ ಬೋಗಿಯಲ್ಲಿ 6 ರಿಂದ 7 ಲೋವರ್ ಬರ್ತ್, ಎಸಿ 3 ಟೈರ್ (3ಎಸಿ) ಬೋಗಿಯಲ್ಲಿ 4 ರಿಂದ 5 ಲೋವರ್ ಬರ್ತ್, ಎಸಿ 2 ಟೈರ್ (2ಎಸಿ) ಕೋಚ್‌ನಲ್ಲಿ 3 ರಿಂದ 4 ಲೋವರ್ ಬರ್ತ್‌ಗಳನ್ನು ಹಿರಿಯ ನಾಗರಿಕರು, 45 ವರ್ಷ ಮತ್ತು ಮೇಲ್ಪಟ್ಟ ವಯಸ್ಸಿನ ಮಹಿಳೆಯರು ಮತ್ತು ಅಂಗವಿಕಲರು, ಗರ್ಭಿಣಿಯರಿಗೆ ಹಂಚಿಕೆ ಮಾಡುವ ಕೋಟಾಕ್ಕೆ ಮೀಸಲು ಇಡಲಾಗುತ್ತಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ಬುಧವಾರ (ಮಾರ್ಚ್ 19) ವಿವರಿಸಿದ್ದಾರೆ.
ರಾಜಧಾನಿ ಮತ್ತು ಶತಾಬ್ದಿ ರೀತಿಯ ಟ್ರೇನ್‌ಗಳಲ್ಲಿ ಲೋವರ್ ಬರ್ತ್
ರಾಜಧಾನಿ ಮತ್ತು ಶತಾಬ್ದಿ ರೀತಿಯ ಟ್ರೇನ್‌ಗಳಲ್ಲಿ ಲೋವರ್ ಬರ್ತ್ ಹಂಚಿಕೆಯಲ್ಲಿ ಕೂಡ ಹಿರಿಯ ನಾಗರಿಕರು, 45 ವರ್ಷ ಮತ್ತು ಮೇಲ್ಪಟ್ಟ ವಯಸ್ಸಿನ ಮಹಿಳೆಯರು ಮತ್ತು ಅಂಗವಿಕಲರು, ಗರ್ಭಿಣಿಯರಿಗೆ ಮೀಸಲು ಇಡಲಾಗುತ್ತದೆ. ಈ ರೈಲುಗಳಲ್ಲಿ ಸ್ಲೀಪರ್ ಕ್ಲಾಸ್ ಕೋಚ್‌ಗಳಲ್ಲಿ 4, 3ಎಸಿ/3ಇ ಕೋಚ್‌ಗಳಲ್ಲಿ 4, ಸೆಕೆಂಡ್ ಸಿಟ್ಟಿಂಗ್ ಕೋಚ್ ಅಥವಾ ಎಸಿ (ಸಿಸಿ) ಕೋಚ್‌ಗಳಲ್ಲಿ ಕೂಡ 4 ಸೀಟುಗಳನ್ನು ಮೀಸಲಾಗಿ ಇಡಲಾಗಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ಸಂಸತ್ ಕಲಾಪದ ವೇಳೆ ವಿವರಿಸಿದ್ದಾರೆ.
ಹಿರಿಯ ನಾಗರಿಕರು, 45 ವರ್ಷ ಮತ್ತು ಮೇಲ್ಪಟ್ಟ ವಯಸ್ಸಿನ ಮಹಿಳೆಯರು ಮತ್ತು ಅಂಗವಿಕಲರು, ಗರ್ಭಿಣಿಯರಿಗೆ ಅಕಸ್ಮಾತ್ ಅಪ್ಪರ್ ಬರ್ತ್ ಅಥವಾ ಮಿಡಲ್ ಬರ್ತ್ ಹಂಚಿಕೆಯಾಗಿದ್ದರೆ ಅಂತಹವರಿಗೆ ಆದ್ಯತೆ ಮೇರೆಗೆ ನಂತರದಲ್ಲಿ ಲೋವರ್ ಬರ್ತ್ ಒದಗಿಸುವ ಕೆಲಸ ರೈಲಿನಲ್ಲಿ ನಡೆಯುತ್ತದೆ. ಟಿಟಿಇಗಳು ಈ ಬಗ್ಗೆ ಗಮನಹರಿಸುತ್ತಾರೆ ಎಂದು ಭಾರತದ ರೈಲ್ವೆ ವಿವರಿಸಿದೆ.
ಈ ಎಲ್ಲ ಅಂತರ್ಗತ ಕ್ರಮಗಳ ಮೂಲಕ ತಡೆರಹಿತ ಮತ್ತು ಆರಾಮದಾಯಕ ಪ್ರಯಾಣದ ಅನುಭವಗಳನ್ನು ನೀಡಲು ಭಾರತೀಯ ರೈಲ್ವೆ ಸಮರ್ಪಿತವಾಗಿದೆ. ಸುರಕ್ಷಿತ ಮತ್ತು ಅನುಕೂಲಕರ ಪ್ರಯಾಣಕ್ಕಾಗಿ ಈ ಸೌಲಭ್ಯಗಳ ಲಾಭ ಪಡೆಯಲು ಪ್ರಯಾಣಿಕರನ್ನು ಪ್ರೋತ್ಸಾಹಿಸಲಾಗುತ್ತದೆ ಎಂದು ಅಶ್ವಿನಿ ವೈಷ್ಣವ್ ಹೇಳಿದರು.
