ಪಹಲ್ಗಾಮ್ ದಾಳಿಗೆ ಪ್ರತೀಕಾರ?; ಒಬ್ಬ ಶಂಕಿತ ಉಗ್ರನ ಮನೆ ಸ್ಫೋಟ, ಇನ್ನೊಬ್ಬನ ಮನೆ ಮೇಲೆ ನೆಲಸಮ- ವಿಡಿಯೋ
ಪಹಲ್ಗಾಮ್ ದಾಳಿಗೆ ಪ್ರತೀಕಾರ?; ಪಹಲ್ಗಾಮ್‌ನಲ್ಲಿ ಏಪ್ರಿಲ್ 22 ರಂದು ನಡೆದ ಉಗ್ರ ದಾಳಿಯಲ್ಲಿ ಭಾಗಿಯಾಗಿದ್ದ ಶಂಕಿತ ಉಗ್ರರ ಪೈಕಿ ಒಬ್ಬ ಶಂಕಿತ ಉಗ್ರನ ಮನೆ ಸ್ಫೋಟ, ಇನ್ನೊಬ್ಬನ ಮನೆ ಮೇಲೆ ನೆಲಸಮವಾಗಿದೆ. ಇದರ ವಿಡಿಯೋ ವೈರಲ್ ಆಗಿದ್ದು, ವಿವರ ಹೀಗಿದೆ.

ಪಹಲ್ಗಾಮ್ ದಾಳಿಗೆ ಪ್ರತೀಕಾರ?; ಜಮ್ಮು - ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22 ರಂದು ನಡೆದ ಉಗ್ರ ದಾಳಿಯಲ್ಲಿ ಭಾಗಿಯಾಗಿದ್ದ ಶಂಕಿತ ಉಗ್ರರ ಶೋಧ ನಡೆಸುತ್ತಿರುವ ಭದ್ರತಾ ಪಡೆಗಳು ಅವರ ಮನೆಗಳ ಮೇಲೂ ದಾಳಿ ನಡೆಸಿವೆ. ಇದೇ ವೇಳೆ, ಭಯೋತ್ಪಾದಕ ಆಸಿಫ್ ಶೇಖ್ ಮನೆ ಸ್ಫೋಟವಾಗಿದ್ದು, ಮತ್ತೊಬ್ಬ ಭಯೋತ್ಪಾದಕನ ಮನೆ ನೆಲಸಮವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಉಗ್ರ ಆಸಿಫ್‌ನ ಮೊಗಾಮಾದಲ್ಲಿರುವ ಮನೆಯಲ್ಲಿ ಭಾರಿ ಸ್ಫೋಟ
ಜಮ್ಮು - ಕಾಶ್ಮೀರದ ತ್ರಾಲ್‌ನ ಮೊಗಾಮಾ ಪ್ರದೇಶದಲ್ಲಿ ಶಂಕಿತ ಉಗ್ರ ಆಸಿಫ್ ಶೇಖ್ ಮನೆ ಇದೆ. ಭದ್ರತಾ ಪಡೆ ಸಿಬ್ಬಂದಿ ಉಗ್ರ ಆಸಿಫ್‌ಗಾಗಿ ತ್ರಾಲ್ ಹಾಗೂ ಮೊಗಾಮಾ ಪ್ರದೇಶದಲ್ಲೂ ಶೋಧ ನಡೆಸಿದ್ದರು. ಇದೇ ವೇಳೆ, ಆಸಿಫ್ ಶೇಖ್ ಮನೆಯಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ಬೆಂಕಿಯ ಕೆನ್ನಾಲಗೆ ಹೊರಚಾಚಿತ್ತು. ಆಸಿಫ್ ಶೇಖ್ ಪಹಲ್ಗಾಮ್ ಉಗ್ರದಾಳಿಯಲ್ಲಿ ಭಾಗಿಯಾಗಿದ್ದ ಎಂಬ ಬಗ್ಗೆ ಸುಳಿವು ಸಿಕ್ಕ ಬಳಿಕ ಭದ್ರತಾ ಪಡೆಗಳು ಶೋಧ ನಡೆಸಿದ್ದವು. ಆಸಿಫ್ ಶೇಖ್ ಸ್ಥಳೀಯವಾಗಿ ಲಷ್ಕರ್ ಏ ತೊಯ್ಬಾ ಸಂಘಟನೆಯ ಕಮಾಂಡರ್ ಎಂದು ಮೂಲಗಳು ತಿಳಿಸಿವೆ.
ಪೊಲೀಸ್ ಮೂಲಗಳ ಪ್ರಕಾರ, ಆಸಿಫ್ ಮನೆ ಶೋಧ ನಡೆಸುತ್ತಿದ್ದ ವೇಳೆ ಮನೆಯಲ್ಲಿ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿದ್ದವು. ಮನೆಯಲ್ಲಿ ಯಾರೂ ಇಲ್ಲದ ಪರಿಸ್ಥಿತಿಯಲ್ಲಿ ಯೋಧರಿಗೆ ಅನುಮಾನ ಬಂದು ಹೊರಗೆ ಬಂದ ಕೂಡಲೇ ಭಾರಿ ಸ್ಫೋಟ ಸಂಭವಿಸಿದೆ. ಸ್ಫೋಟಕ್ಕೆ ನಿಖರವಾದ ಕಾರಣ ಏನು ಎಂಬುದು ಇನ್ನೂ ಖಚಿತವಾಗಿಲ್ಲ. ಪ್ರಾಥಮಿಕ ಮಾಹಿತಿ ಪ್ರಕಾರ ಅಲ್ಲಿ ಸ್ಫೋಟಕಗಳಿದ್ದವು. ಸ್ಫೋಟದ್ದು ಎನ್ನಲಾದ ವಿಡಿಯೋ ಇಲ್ಲಿದೆ.
ಇನ್ನೊಬ್ಬ ಎಲ್‌ಇಟಿ ಉಗ್ರನ ಮನೆ ನೆಲಸಮ
ಇದೇ ವೇಳೆ ಇನ್ನೊಬ್ಬ ಉಗ್ರ ಅದಿಲ್ ತೋಕರ್‌ಗೆ ಸಂಬಂಧಿಸಿದ ಬಿಜ್‌ಬೆಹರಾ ಸಮೀಪದ ಗುರೀ ಎಂಬಲ್ಲಿ ಇದ್ದ ಮನೆಯನ್ನು ನೆಲಸಮ ಮಾಡಲಾಗಿದೆ. ಅದಿಲ್ ತೋಕರ್ ಅನ್ನು ಅದಿಲ್ ಗುರೀ ಎಂದೂ ಗುರುತಿಸಲಾಗುತ್ತಿದೆ. ತೋಕರ್ ಕೂಡ ಇತ್ತೀಚಿನ ಪಹಲ್ಗಾಮ್ ದಾಳಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಎಂಬ ಕುರಿತು ಭದ್ರತಾ ಪಡೆಗಳಿಗೆ ಮಾಹಿತಿ ಲಭ್ಯವಾಗಿದ್ದವು. ಹೀಗಾಗಿ ಉಗ್ರನ ಶೋಧಕ್ಕೆ ಕಾರ್ಯಾಚರಣೆ ನಡೆಸಿವೆ.
ಅದಿಲ್ ತೋಕರ್ 2018ರಲ್ಲಿ ಅಧಿಕೃತವಾಗಿಯೇ ಪಾಕಿಸ್ತಾನಕ್ಕೆ ಹೋಗಿ ಕಳೆದ ವರ್ಷವಷ್ಟೇ ಹಿಂದಿರುಗಿ ಬಂದಿದ್ದಾನೆ. ಅಲ್ಲಿ ಆತ ಉಗ್ರ ತರಬೇತಿ ಪಡೆದಿದ್ದ ಎಂದು ನಂಬಲಾಗಿದೆ. ಅಲ್ಲಿಂದೀಚೆಗೆ ಅದಿಲ್ ತೋಕರ್ ಭದ್ರತಾ ಪಡೆಗಳ, ಗುಪ್ತಚರ ಸಂಸ್ಥೆಯ ನಿಗಾದಲ್ಲಿದ್ದ. ಆತ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವುದಕ್ಕೆ ಸಾಕ್ಷ್ಯಗಳನ್ನೂ ಕಲೆಹಾಕಿವೆ.
ಪಾಕಿಸ್ತಾನದಲ್ಲಿ ತರಬೇತಿ ಪಡೆದ ಉಗ್ರರು
ಪಹಲ್ಗಾಮ್ ದಾಳಿಯಲ್ಲಿ ಐದರಿಂದ ಏಳು ಉಗ್ರರು ಇದ್ದರು ಎಂಬ ಅಂಶ ಪ್ರಾಥಮಿಕ ತನಿಖೆಯಲ್ಲಿ ಭದ್ರತಾಪಡೆಗಳು ಕಂಡುಕೊಂಡಿವೆ. ಈ ಪೈಕಿ ಇಬ್ಬರು ಸ್ಥಳೀಯ ಉಗ್ರರು. ಅವರು ಪಾಕಿಸ್ತಾನದಲ್ಲಿ ತರಬೇತಿ ಪಡೆದು ವಾಪಸ್ ಬಂದಿರುವುದು ಕೂಡ ಗೊತ್ತಾಗಿದೆ. ಉಗ್ರ ದಾಳಿಯಲ್ಲಿ ಮೃತಪಟ್ಟವರ ಪತ್ನಿ ಹೇಳಿದ ಮಾಹಿತಿ ಆಧರಿಸಿ ಗುರುತು ಪತ್ತೆ ಹಚ್ಚಿದಾಗ ಆತ ಅದಿಲ್ ತೋಕರ್ ಅಲಿಯಾಸ್ ಅದಿಲ್ ಗುರೀ ಎಂಬುದು ಗೊತ್ತಾಗಿದೆ. ಆತ ಬಿಜ್‌ಬೆಹರಾ ನಿವಾಸಿ ಎಂದು ಅಧಿಕಾರಿಗಳು ವಿವರ ನೀಡಿದ್ದಾರೆ.
ಈ ನಡುವೆ, ದಾಳಿಯ ಮಾರನೇ ದಿನವೇ ಭದ್ರತಾ ಪಡೆಗಳು ಮೂವರು ಉಗ್ರರ ರೇಖಾ ಚಿತ್ರಗಳನ್ನು ಪ್ರಕಟಿಸಿದ್ದವು. ಈ ಮೂವರು ಉಗ್ರರು ಕೂಡ ಪಾಕಿಸ್ತಾನಿಗಳಾಗಿದ್ದು ಆಸಿಫ್ ಫೌಜಿ, ಸುಲೇಮಾನ್ ಶಾ, ಅಬು ತಲ್ಹಾ ಎಂದು ಗುರುತಿಸಲಾಗಿದೆ. ಅವರನ್ನು ಮೂಸಾ, ಯೂನಸ್ ಮತ್ತು ಆಸಿಫ್ ಎಂಬ ಅಡ್ಡ ಹೆಸರುಗಳಿಂದ ಕರೆಯಲಾಗುತ್ತಿತ್ತು. ಇವರೆಲ್ಲ ಪೂಂಛ್ ಭಾಗದಲ್ಲಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾದವರು ಎಂದು ಮೂಲಗಳು ತಿಳಿಸಿವೆ.