ಮತ್ತೆ ಭಾರತಕ್ಕೆ ಬರಲಿವೆ ವಿದೇಶಿ ಚೀತಾಗಳು, ಬೋಟ್ಸ್ವಾನಾದಿಂದ 4 ಚೀತಾಗಳ ಆಗಮನ, ಚೀತಾ ರಾಷ್ಟ್ರೀಯ ಉದ್ಯಾನವನ ವಿಸ್ತರಣೆ
ಭಾರತದಲ್ಲಿ ಕೆಲವು ವರ್ಷದಿಂದ ಪುನರುತ್ಥಾನ ಪಡೆದಿರುವ ಚೀತಾ ಯೋಜನೆ ಈಗ ಇನ್ನಷ್ಟು ವಿಸ್ತರಣೆಯಾಗುತ್ತಿದೆ. ಹೊರ ದೇಶದಿಂದ ಇನ್ನಷ್ಟು ಚೀತಾಗಳನ್ನು ಭಾರತಕ್ಕೆ ತರಲಾಗುತ್ತಿದೆ.

ಮೂರು ವರ್ಷದ ಹಿಂದೆ ಭಾರತಕ್ಕೆ ವಿದೇಶದಿಂದ ಬಂದ ಚೀತಾಗಳು ಈಗ ಬದುಕು ಕಂಡುಕೊಂಡಿವೆ. ಮಧ್ಯಪ್ರದೇಶದ ಕುನ್ಹೋ ರಾಷ್ಟ್ರೀಯ ಉದ್ಯಾನದಲ್ಲಿ ಏಳು ಬೀಳಿನ ನಡುವೆಯೇ ಚೀತಾ ಪುನರುತ್ಥಾನ ಯೋಜನೆ ಪ್ರಗತಿ ಹಾದಿಯಲ್ಲಿದೆ. ಈಗ ಈ ಯೋಜನೆಯನ್ನು ಮತ್ತಷ್ಟು ವಿಸ್ತರಿಸಲು ಕೇಂದ್ರ ಅರಣ್ಯ, ಪರಿಸರ ಇಲಾಖೆಯು ಮುಂದಾಗಿದೆ. ಮಧ್ಯಪ್ರದೇಶ ರಾಜ್ಯ ಸರ್ಕಾರದ ಸಹಯೋಗದಲ್ಲಿ ಈ ಯೋಜನೆ ವಿಸ್ತರಣೆಯಾಗಲಿದೆ. ದಕ್ಷಿಣ ಆಫ್ರಿಕಾದ ಬೋಟ್ಸ್ವಾನಾದಿಂದ ಎಂಟು ಚೀತಾಗಳನ್ನು ಎರಡು ಹಂತಗಳಲ್ಲಿ ಭಾರತಕ್ಕೆ ತರಲಾಗುವುದು. ಇದರಲ್ಲಿ ಮೇ ವೇಳೆಗೆ ನಾಲ್ಕು ಚೀತಾಗಳು ಆಗಮಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಉಪಸ್ಥಿತಿಯಲ್ಲಿ ಚೀತಾ ಯೋಜನೆಯ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್ಟಿಸಿಎ) ಅಧಿಕಾರಿಗಳು ಈ ಮಾಹಿತಿಯನ್ನು ನೀಡಿದ್ದಾರೆ ಎಂದು ಮಧ್ಯಪ್ರದೇಶ ಸರ್ಕಾರದ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಚೀತಾಗೆ ಬೇಡಿಕೆ
ದಕ್ಷಿಣ ಆಫ್ರಿಕಾ, ಬೋಟ್ಸ್ವಾನಾ ಮತ್ತು ಕೀನ್ಯಾದಿಂದ ಹೆಚ್ಚಿನ ಚೀತಾಗಳನ್ನು ಭಾರತಕ್ಕೆ ತರುವ ಪ್ರಯತ್ನಗಳು ನಡೆಯುತ್ತಿವೆ. ಎಂಟು ಚೀತಾಗಳನ್ನು ಎರಡು ಹಂತಗಳಲ್ಲಿ ಭಾರತಕ್ಕೆ ತರಲಾಗುವುದು. ಮೇ 2025 ರ ವೇಳೆಗೆ ಬೋಟ್ಸ್ವಾನಾದಿಂದ ನಾಲ್ಕು ಚೀತಾಗಳನ್ನು ಭಾರತಕ್ಕೆ ತರುವ ಯೋಜನೆ ಇದೆ. ಇದರ ನಂತರ, ಇನ್ನೂ ನಾಲ್ಕು ಚೀತಾಗಳನ್ನು ತರಲಾಗುವುದು. ಪ್ರಸ್ತುತ, ಭಾರತ ಮತ್ತು ಕೀನ್ಯಾ ನಡುವಿನ ಒಪ್ಪಂದದ ಬಗ್ಗೆ ಒಪ್ಪಿಗೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಎನ್ಟಿಸಿಎ ಅಧಿಕಾರಿಗಳು ತಿಳಿಸಿದ್ದಾರೆ.
ಸಭೆಯಲ್ಲಿ ಎನ್ಟಿಸಿಎ ಅಧಿಕಾರಿಗಳು ಭಾರತದಲ್ಲಿ ಚೀತಾ ಯೋಜನೆಗಾಗಿ ಇದುವರೆಗೆ 112 ಕೋಟಿ ರೂ.ಗಿಂತ ಹೆಚ್ಚು ಖರ್ಚು ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಅದರಲ್ಲಿ ಶೇ 67 ರಷ್ಟು ಮಧ್ಯಪ್ರದೇಶದಲ್ಲಿ ಚೀತಾ ಪುನರ್ವಸತಿಗೆ ಹೋಗಿದೆ ಎಂದು ಮಾಹಿತಿ ನೀಡಿದ್ದಾರೆ.
ರಾಜಸ್ಥಾನ ಗಡಿಗೂ ವಿಸ್ತರಣೆ
"ಪ್ರಾಜೆಕ್ಟ್ ಚೀತಾ ಅಡಿಯಲ್ಲಿ, ಚಿರತೆಗಳನ್ನು ಈಗ ಹಂತ ಹಂತವಾಗಿ ಗಾಂಧಿ ಸಾಗರ್ ಅಭಯಾರಣ್ಯದಲ್ಲಿ ಸ್ಥಳಾಂತರಿಸಲಾಗುವುದು. ಗಾಂಧಿ ಸಾಗರ್ ಅಭಯಾರಣ್ಯವು ರಾಜಸ್ಥಾನದ ಗಡಿಗೆ ಹೊಂದಿಕೊಂಡಿದೆ. ಆದ್ದರಿಂದ ಅಂತರರಾಜ್ಯ ಚೀತಾ ಸಂರಕ್ಷಣಾ ಪ್ರದೇಶವನ್ನು ಸ್ಥಾಪಿಸಲು ಮಧ್ಯಪ್ರದೇಶ ಮತ್ತು ರಾಜಸ್ಥಾನ ನಡುವೆ ತಾತ್ವಿಕ ಒಪ್ಪಂದಕ್ಕೆ ಬರಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಸ್ತುತ, ಕುನೊ ರಾಷ್ಟ್ರೀಯ ಉದ್ಯಾನವನ ಮತ್ತು ಗಾಂಧಿ ಸಾಗರ್ ಅಭಯಾರಣ್ಯದಲ್ಲಿ ಚೀತಾಗಳ ಸಾಮರ್ಥ್ಯವನ್ನು ಹೆಚ್ಚಿಸಲು ವಿಶೇಷ ತರಬೇತಿ ನೀಡಲಾಗುತ್ತಿದೆ.
ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಸ್ತುತ 26 ಚೀತಾಗಳಿವೆ. ಇದರಲ್ಲಿ 16 ತೆರೆದ ಅರಣ್ಯದಲ್ಲಿ ಮತ್ತು 10 ಪುನರ್ವಸತಿ ಕೇಂದ್ರದಲ್ಲಿ ಸೇರಿವೆ. ಚೀತಾಗಳಾದ ಜ್ವಾಲಾ, ಆಶಾ, ಗಾಮಿನಿ ಮತ್ತು ವೀರಾ ಮರಿಗಳಿಗೆ ಜನ್ಮ ನೀಡಿವೆ ಎಂದು ಅರಣ್ಯ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು. ಚೀತಾಗಳನ್ನು ಮೇಲ್ವಿಚಾರಣೆ ಮಾಡಲು ಸ್ಯಾಟಲೈಟ್ ಕಾಲರ್ ಐಡಿಗಳನ್ನು ಬಳಸಿಕೊಂಡು 24 ಗಂಟೆಗಳ ಟ್ರ್ಯಾಕಿಂಗ್ ಜಾರಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾಸಿಗರ ಸಂಖ್ಯೆ ದ್ವಿಗುಣ
ಕುನ್ಹೋದಲ್ಲಿ ಪ್ರವಾಸಿಗರ ಸಂಖ್ಯೆ ಎರಡು ವರ್ಷಗಳಲ್ಲಿ ದ್ವಿಗುಣಗೊಂಡಿದೆ. ಕುನೊದಲ್ಲಿ ಚೀತಾ ಸಫಾರಿ ಪ್ರಾರಂಭಿಸಲು ಅನುಮತಿ ಕೋರಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದೆ. ಅರಣ್ಯ ಪ್ರದೇಶಗಳಲ್ಲಿ ಅಥವಾ ಪರಿಸರ ಸೂಕ್ಷ್ಮ ವಲಯದಲ್ಲಿ ಸಫಾರಿ ಪ್ರಾರಂಭಿಸಲು ಈ ಅನುಮತಿ ಅಗತ್ಯವಾಗಿದೆ. ಈ ಅರ್ಜಿಯ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ" ಎಂದು ಪ್ರಕಟಣೆ ತಿಳಿಸಿದೆ.
ಐದು ಹೆಣ್ಣು ಮತ್ತು ಮೂರು ಗಂಡು ಚೀತಾಗಳನ್ನು ಒಳಗೊಂಡ ಎಂಟು ನಮೀಬಿಯನ್ ಚೀತಾಗಳನ್ನು 2022ರ ಸೆಪ್ಟೆಂಬರ್ 17 ರಂದು ಕೊನ್ಹೋದಲ್ಲಿ ಬಿಡುಗಡೆ ಮಾಡಲಾಯಿತು. ಫೆಬ್ರವರಿ 2023 ರಲ್ಲಿ, ಇನ್ನೂ 12 ಚಿರತೆಗಳನ್ನು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಸ್ಥಳಾಂತರಿಸಲಾಯಿತು. ಪ್ರಸ್ತುತ, ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ 26 ಚೀತಾಗಳಿವೆ. ಇದರಲ್ಲಿ 14 ಭಾರತದಲ್ಲೇ ಜನಿಸಿರುವ ಮರಿಗಳು ಸೇರಿವೆ.