ಭಾರತ ಪಾಕ್ ಕದನ ವಿರಾಮ; ಟ್ರೋಲ್‌ಗೆ ಒಳಗಾದ್ರು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, ರಾಜತಾಂತ್ರಿಕರು, ರಾಜಕಾರಣಿಗಳ ಬೆಂಬಲ
ಟ್ರೋಲ್‌ಗೆ ಒಳಗಾದ್ರು ವಿಕ್ರಮ್ ಮಿಸ್ರಿ: ಭಾರತ -ಪಾಕ್ ಕದನ ವಿರಾಮ ವಿಷಯ ಮುಂದಿಟ್ಟುಕೊಂಡು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಮತ್ತು ಅವರ ಕುಟುಂಬವನ್ನು ಟ್ರೋಲ್ ಮಾಡಿದ್ರು ಎಕ್ಸ್ ಬಳಕೆದಾರರು. ರಾಜತಾಂತ್ರಿಕರು ಹಾಗೂ ರಾಜಕಾರಣಿಗಳು ಮಿಸ್ರಿ ಬೆಂಬಲಕ್ಕೆ ನಿಂತರು.

ಟ್ರೋಲ್‌ಗೆ ಒಳಗಾದ್ರು ವಿಕ್ರಮ್ ಮಿಸ್ರಿ: ಭಾರತ- ಪಾಕ್ ಕದನ ವಿರಾಮದ ಅಪ್ಡೇಟ್ ಕೊಡುತ್ತಿದ್ದಾಗ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಟ್ರೋಲ್‌ಗೆ ಒಳಗಾದರು. ಪಾಕಿಸ್ತಾನ ಘೋಷಿಸಿದ ಕದನ ವಿರಾಮ ಮನವಿ ಮೇರೆಗೆ ದಾಳಿ ಸ್ಥಗಿತಗೊಳಿಸಿದ ಭಾರತದ ನಡೆಯ ವಿವರಗಳನ್ನು ಮಿಸ್ರಿ ಶನಿವಾರ ರಾತ್ರಿ ಕೊಡುತ್ತಿದ್ದಾಗ ಈ ಘಟನೆ ನಡೆದಿದೆ. ಕೂಡಲೇ ಮಾಜಿ ರಾಜತಾಂತ್ರಿಕರು, ರಾಜಕಾರಣಿಗಳು ವಿಕ್ರಮ್ ಮಿಸ್ರಿ ಬೆಂಬಲಕ್ಕೆ ನಿಂತಿದ್ದು, ಅವರು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಟ್ರೋಲ್ ಮಾಡುತ್ತಿದ್ದವರನ್ನು ಎಚ್ಚರಿಸಿದ ಘಟನೆಯೂ ನಡೆದಿದೆ.
ಕದನ ವಿರಾಮ; ಟ್ರೋಲ್‌ಗೆ ಒಳಗಾದ್ರು ವಿಕ್ರಮ್ ಮಿಸ್ರಿ
ಐಎಫ್‌ಎಸ್ ಅಧಿಕಾರಿ ವಿಕ್ರಮ ಮಿಸ್ರಿ ಅವರು 2024ರಿಂದ ವಿದೇಶಾಂಗ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶನಿವಾರ ರಾತ್ರಿ ಭಾರತ - ಪಾಕ್ ಕದನ ವಿರಾಮಕ್ಕೆ ಸಂಬಂಧಿಸಿದ ಮಾಹಿತಿ ನೀಡುತ್ತಿದ್ದಾಗ, ಅವರು ಪಾಕಿಸ್ತಾನದ ಬದಿಯಿಂದ ಕದನ ವಿರಾಮ ಉಲ್ಲಂಘನೆಯಾಗುತ್ತಿರುವ ವಿಚಾರ ಪ್ರಸ್ತಾಪಿಸಿದ್ದರು. ಈ ದಾಳಿಗೆ ಸರಿಯಾದ ಉತ್ತರವನ್ನು ಭಾರತದ ಸೇನೆ ಮಾಡುತ್ತಿದೆ ಎಂದೂ ಹೇಳಿದ್ದರು. ಅಷ್ಟೇ ಅಲ್ಲ, ಮುಂದೆ ಈ ರೀತಿ ಉಲ್ಲಂಘನೆಯಾದರೆ ಅದಕ್ಕೂ ತಕ್ಕ ಉತ್ತರವನ್ನು ಭಾರತ ಸಶಸ್ತ್ರ ಪಡೆಗಳು ನೀಡಲಿವೆ ಎಂದು ಹೇಳಿದ್ದರು. ಇದಾಗುತ್ತಲೇ, ಮಿಸ್ರಿ ಅವರು ಎಕ್ಸ್ ತಾಣದಲ್ಲಿ ತೀವ್ರ ಟೀಕೆಗೆ ಗುರಿಯಾದರು.
ವಿಕ್ರಮ್ ಮಿಸ್ರಿ ಅವರ ಪುತ್ರಿ ದಿಡೋನ್ ಮಿಸ್ರಿ ಅವರನ್ನೂ ಎಕ್ಸ್ ಬಳಕೆದಾರರು ಟೀಕಿಸಿದರು. ದಿಡೋನ್ ಮಿಸ್ರಿ ಅವರು ಜಾಗತಿಕ ಕಾನೂನು ಸಂಸ್ಥೆ ಹರ್ಬರ್ಟ್ ಸ್ಮಿತ್ ಫ್ರೀಹಿಲ್ಸ್ ಪರವಾಗಿ ಕೆಲಸ ಮಾಡುತ್ತಿದ್ದು, ಲಂಡನ್‌ನಲ್ಲಿ ನೆಲೆಸಿದ್ದಾರೆ. ಅವರನ್ನು ರೋಹಿಂಗ್ಯಾ ನಿರಾಶ್ರಿತರಿಗೆ ಕಾನೂನು ಬೆಂಬಲ ಒದಗಿಸಿದ್ದಕ್ಕಾಗಿ ಟೀಕಿಸಲಾಗಿದೆ. ದಿಡೋನ್ ಮಿಸ್ರಿ ಅವರ ಪ್ರೊಫೈಲ್ ಪ್ರಕಾರ, ಅವರು ಇನ್‌ವೆಸ್ಟ್‌ಮೆಂಟ್ ಟ್ರೀಟಿ ಮತ್ತು ಇಂಟರ್‌ನ್ಯಾಷನಲ್ ಕಮರ್ಷಿಯಲ್ ಆರ್ಬಿಟ್ರೇಷನ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾರತ ಸರ್ಕಾರಕ್ಕೂ ಕೆಲವು ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ವಿಚಾರದಲ್ಲಿ ಸಲಹೆ ನೀಡಿರುವ ಉಲ್ಲೇಖವಿದೆ.
ಭಾರತದ ಕಾನೂನು ಶಿಕ್ಷಣ ಸಂಸ್ಥೆಯಲ್ಲಿ ಕಲಿಯುತ್ತಿರುವಾಗ ದಿಡೋನ್ ಮಿಸ್ರಿ ಅವರು ವಿಶ್ವ ಸಂಸ್ಥೆ ಹೈಕಮಿಷನ್‌ನಲ್ಲಿ ಇಂಟರ್ನ್‌ಶಿಪ್ ಮಾಡಿದ್ದರು. ಆಗ ಮ್ಯಾನ್ಮಾರ್‌ನ ನಿರಾಶ್ರಿತರ ಪರವಾಗಿ ಕೆಲಸ ಮಾಡಿದ್ದರು. ವಿಶೇಷವಾಗಿ ರೋಹಿಂಗ್ಯಾ ನಿರಾಶ್ರಿತರ ಸಮಸ್ಯೆಗೆ ಸಂಬಂಧಿಸಿದ ಕಾನೂನು ಅಂಶಗಳ ಬಗ್ಗೆ ಸಂಶೋಧನೆ ನಡೆಸಿ ವರದಿ ಸಲ್ಲಿಸಬೇಕಾಗಿತ್ತು. ಅದನ್ನು ಅವರು ನಿರ್ವಹಿಸಿದ್ದರು ಎಂದು ಈ ಬಗ್ಗೆ ತಿಳಿದವರು ಹೇಳಿದ್ದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರ ತೀವ್ರ ಚರ್ಚೆಗೆ ಒಳಗಾಗಿ, ವೈಯಕ್ತಿಕ ಮಟ್ಟದ ಟೀಕೆಗಳು ವ್ಯಕ್ತವಾದ ಕಾರಣ ವಿಕ್ರಮ್ ಮಿಸ್ರಿ ಅವರು ತಮ್ಮ ಎಕ್ಸ್ ಖಾತೆಯನ್ನು ಲಾಕ್ ಮಾಡಿಕೊಂಡರು. ಅವರು ವಿದೇಶಾಂಗ ಕಾರ್ಯದರ್ಶಿಯಾದ ಬಳಿಕ ಎಕ್ಸ್ ಖಾತೆ ಸಕ್ರಿಯವಾಗಿತ್ತು.
ವಿಕ್ರಮ್ ಮಿಸ್ರಿ ಅವರಿಗೆ ರಾಜತಾಂತ್ರಿಕರು, ರಾಜಕಾರಣಿಗಳ ಬೆಂಬಲ
ವಿಕ್ರಮ್ ಮಿಸ್ರಿ ಟ್ರೋಲ್‌ಗೆ ಒಳಗಾದ ಕೂಡಲೇ ಬಹಳಷ್ಟು ಮಾಜಿ ರಾಜರಾಂತ್ರಿಕರು, ರಾಜಕಾರಣಿಗಳು ಮಿಸ್ರಿ ಅವರ ಬೆಂಬಲಕ್ಕೆ ನಿಂತರು. ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಟ್ರೋಲ್ ಮಾಡುವುದನ್ನು ಖಂಡಿಸಿದರು. "ವಿಕ್ರಮ್ ಮಿಸ್ರಿ ಅವರು ಸಭ್ಯ ಹಾಗೂ ಪ್ರಾಮಾಣಿಕ, ಪರಿಶ್ರಮಿ ರಾಜತಾಂತ್ರಿಕ ಅಧಿಕಾರಿ. ಅವರು ನಮ್ಮ ದೇಶಕ್ಕಾಗಿ ಅವಿರತವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಮ್ಮ ನಾಗರಿಕ ಸೇವಾ ಸಿಬ್ಬಂದಿ ಕಾರ್ಯಾಂಗದ ಕೆಲಸದಲ್ಲಿದ್ದಾರೆ ಎಂಬುದನ್ನು ಮರೆಯಬಾರದು. ಅವರನ್ನು ಕಾರ್ಯಾಂಗದ ಅಥವಾ ರಾಜಕೀಯ ನಾಯಕತ್ವ ತೆಗೆದುಕೊಂಡ ನಿರ್ಧಾರಗಳಿಗೆ ಟ್ರೋಲ್ ಮಾಡಬಾರದು ಎಂದು ಓವೈಸಿ ಎಕ್ಸ್ ತಾಣದಲ್ಲಿ ಟ್ವೀಟ್ ಮಾಡಿದ್ದಾರೆ.
ವಿದೇಶಾಂಗ ಸಚಿವಾಲಯದ ಮಾಜಿ ಕಾರ್ಯದರ್ಶಿ ನಿರುಪಮಾ ಮೆನನ್ ರಾವ್ ಅವರು ಎಕ್ಸ್ ತಾಣದಲ್ಲೇ ಪ್ರತಿಕ್ರಿಯಿಸಿದ್ದು, ಆಪರೇಷನ್ ಸಿಂದೂರ ಸಂಬಂಧಿಸಿದ ಸುದ್ದಿ ನೀಡುವಾಗ, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಮತ್ತು ಅವರ ಕುಟುಂಬವನ್ನು ಟ್ರೋಲ್ ಮಾಡುವುದು ನಾಚಿಕೆಗೇಡಿನ ಸಂಗತಿ. ಭಾರತ- ಪಾಕ್ ಕದನ ವಿರಾಮ ವಿಚಾರದಲ್ಲಿ ಈ ರೀತಿ ಮಾಡಿರುವುದು ಸರಿಯಲ್ಲ. ಮಿಸ್ರಿ ವೃತ್ತಿಪರವಾಗಿ ಕೆಲಸ ಮಾಡುತ್ತಿದದ್ದು, ಅವರ ಪುತ್ರಿಯನ್ನೂ ಟಾರ್ಗೆಟ್ ಮಾಡಿ ಟ್ರೋಲ್ ಮಾಡುವುದನ್ನು ನಿಲ್ಲಿಸಬೇಕು. ನಾವೆಲ್ಲರೂ ರಾಜತಾಂತ್ರಿಕರ ಬೆನ್ನಿಗೆ ನಿಲ್ಲಬೇಕು ಎಂದು ಹೇಳಿದ್ದಾರೆ.
ವಿಭಾಗ