ಭಾರತ ಪಾಕ್ ಗಡಿಯಲ್ಲಿ ಉದ್ವಿಗ್ನತೆ ಶಮನಕ್ಕೆ ಕ್ರಮ, ಸೇನೆ ನಿಯೋಜನೆ ಕಡಿತಗೊಳಿಸಲು ಸಮ್ಮತಿ; ಡಿಜಿಎಂಒ ಮಾತುಕತೆ ವಿವರ ಬಹಿರಂಗ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಭಾರತ ಪಾಕ್ ಗಡಿಯಲ್ಲಿ ಉದ್ವಿಗ್ನತೆ ಶಮನಕ್ಕೆ ಕ್ರಮ, ಸೇನೆ ನಿಯೋಜನೆ ಕಡಿತಗೊಳಿಸಲು ಸಮ್ಮತಿ; ಡಿಜಿಎಂಒ ಮಾತುಕತೆ ವಿವರ ಬಹಿರಂಗ

ಭಾರತ ಪಾಕ್ ಗಡಿಯಲ್ಲಿ ಉದ್ವಿಗ್ನತೆ ಶಮನಕ್ಕೆ ಕ್ರಮ, ಸೇನೆ ನಿಯೋಜನೆ ಕಡಿತಗೊಳಿಸಲು ಸಮ್ಮತಿ; ಡಿಜಿಎಂಒ ಮಾತುಕತೆ ವಿವರ ಬಹಿರಂಗ

ಎರಡೂ ರಾಷ್ಟ್ರಗಳ ಡೈರೆಕ್ಟರ್ ಜನರಲ್ ಆಫ್ ಮಿಲಿಟರಿ ಆಪರೇಷನ್ಸ್ (ಡಿಜಿಎಂಒ) ಮಟ್ಟದ ಮಾತುಕತೆ ಮೇ 10 ರಂದು ನಡೆದ ವೇಳೆ,ಗಡಿಭಾಗದಲ್ಲಿ ಉದ್ವಿಗ್ನತೆ ಶಮನಗೊಳಿಸುವುದಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಭಾರತೀಯ ಸೇನೆ ಹೇಳಿದೆ.

ನವದೆಹಲಿಯಲ್ಲಿ ಸೋಮವಾರ ನಡೆದ 'ಆಪರೇಷನ್ ಸಿಂದೂರ್‌' ಕುರಿತಾದ ಪತ್ರಿಕಾಗೋಷ್ಠಿಯಲ್ಲಿ ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಮಾತನಾಡಿದರು. (ಕಡತ ಚಿತ್ರ)
ನವದೆಹಲಿಯಲ್ಲಿ ಸೋಮವಾರ ನಡೆದ 'ಆಪರೇಷನ್ ಸಿಂದೂರ್‌' ಕುರಿತಾದ ಪತ್ರಿಕಾಗೋಷ್ಠಿಯಲ್ಲಿ ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಮಾತನಾಡಿದರು. (ಕಡತ ಚಿತ್ರ) (ANI)

ನವದೆಹಲಿ: ಗಡಿಭಾಗದಲ್ಲಿ ಉದ್ವಿಗ್ನತೆ ಶಮನಗೊಳಿಸುವುದಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಭಾರತ ಮತ್ತು ಪಾಕಿಸ್ತಾನ ಸೇನೆಗಳು ತೀರ್ಮಾನಿಸಿವೆ. ಎರಡೂ ರಾಷ್ಟ್ರಗಳ ಡೈರೆಕ್ಟರ್ ಜನರಲ್ ಆಫ್ ಮಿಲಿಟರಿ ಆಪರೇಷನ್ಸ್ (ಡಿಜಿಎಂಒ) ಮಟ್ಟದ ಮಾತುಕತೆ ಮೇ 10 ರಂದು ನಡೆದ ವೇಳೆ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಭಾರತೀಯ ಸೇನೆ ಗುರುವಾರ (ಮೇ 15) ತಿಳಿಸಿದೆ. "ಮೇ 10 ರಂದು ಭಾರತ ಮತ್ತು ಪಾಕಿಸ್ತಾನದ ಡಿಜಿಎಂಒಗಳ ನಡುವೆ ತಲುಪಿದ ತಿಳುವಳಿಕೆಯ ಪ್ರಕಾರ, ಜಾಗರೂಕತೆಯ ಮಟ್ಟವನ್ನು ಕಡಿಮೆ ಮಾಡಲು ಹಾಗೂ ಆತ್ಮವಿಶ್ವಾಸ-ನಿರ್ಮಾಣ ಕ್ರಮಗಳನ್ನು ಮುಂದುವರಿಸಲು ನಿರ್ಧರಿಸಲಾಗಿದೆ" ಎಂದು ಭಾರತೀಯ ಸೇನೆ ಹೇಳಿಕೆಯಲ್ಲಿ ತಿಳಿಸಿದೆ.

ಮೇ 12ರಂದು ಕೊನೆಯದಾಗಿ ಡಿಜಿಎಂಒ ಸ್ತರದ ಮಾತುಕತೆ

ಭಾರತ ಮತ್ತು ಪಾಕಿಸ್ತಾನ ಪರಸ್ಪರರ ನಡುವೆ ಎಲ್ಲ ಮಿಲಿಟರಿ ಕ್ರಮಗಳನ್ನು ತಡೆಯುವುದಕ್ಕೆ ಅಗತ್ಯವಾದ ತಿಳಿವಳಿಕೆಗೆ ಬಂದ ನಂತರ ಕದನ ವಿರಾಮ ತಿಳಿವಳಿಕೆಯನ್ನು ಎತ್ತಿಹಿಡಿಯಲು ತೀರ್ಮಾನಿಸಲಾಗಿದೆ ಎಂದು ಸೇನೆ ತಿಳಿಸಿದೆ. ಇದರೊಂದಿಗೆ ಎರಡು ಪರಮಾಣು ಸಶಸ್ತ್ರ ದೇಶಗಳ ನಡುವಿನ ಬಿಕ್ಕಟ್ಟು ತಕ್ಕಮಟ್ಟಿಗೆ ತಣ್ಣಗಾಗುವ ಸಾಧ್ಯತೆಯನ್ನು ತೋರಿಸಿವೆ.

ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22 ರಂದು ಉಗ್ರ ದಾಳಿ ನಡೆದಿದ್ದು, 26 ಜನ ಪ್ರಾಣ ಕಳೆದುಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ಭಾರತ ಭಯೋತ್ಪಾದನೆ ವಿರುದ್ಧ ಸಮರ ತೀವ್ರಗೊಳಿಸಿದ್ದಲ್ಲದೆ, ಮೇ 7 ರಂದು ನಸುಕಿನ ವೇಳೆ ಉಗ್ರ ನಿಗ್ರಹ ಕಾರ್ಯಾಚರಣೆ ಚುರುಕುಗೊಳಿಸಿತು. ಪಾಕಿಸ್ತಾನದಲ್ಲಿರುವ 9 ಉಗ್ರ ನೆಲೆಗಳನ್ನು ಭಾರತೀಯ ಸೇನಾಪಡೆ ನಾಶಪಡಿಸಿತು. ಇದರ ನಂತರ ಪಾಕಿಸ್ತಾನ ನೇರವಾಗಿ ಗಡಿಭಾಗದಲ್ಲಿ ದಾಳಿ ನಡೆಸಿದ್ದು, ಭಾರತ ಪ್ರತಿ ದಾಳಿ ನಡೆಸಿ ದಾಳಿ ಮೂಲ ನಾಶಗೊಳಿಸಿದೆ. ಈ ವಿದ್ಯಮಾನದ ಹಿನ್ನೆಲೆಯಲ್ಲಿ ಮೇ 12ಕ್ಕೆ ಕೊನೆಯದಾಗಿ ಡಿಜಿಎಂಒ ಮಟ್ಟದ ಮಾತುಕತೆ ನಡೆಯಿತು.

ಮೇ10ರ ಡಿಜಿಎಂಒ ಸಭೆಯಲ್ಲಿ ಏನಾಯಿತು?

ಡೈರೆಕ್ಟರ್ ಜನರಲ್ ಆಫ್ ಮಿಲಿಟರಿ ಆಪರೇಷನ್ಸ್ (ಡಿಜಿಎಂಒ) ಮಟ್ಟದ ಮಾತುಕತೆ ಮೇ 10 ರಂದು ನಡೆದ ಸಂದರ್ಭದಲ್ಲಿ ಚರ್ಚಿಸಲಾದ ಸಮಸ್ಯೆಗಳಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳು ಒಂದೇ ಒಂದು ಗುಂಡಿನ ದಾಳಿ ನಡೆಸಬಾರದು ಅಥವಾ ಪರಸ್ಪರರ ವಿರುದ್ಧ ಯಾವುದೇ ಆಕ್ರಮಣಕಾರಿ ಅಥವಾ ವಿರೋಧಿ ಕ್ರಮವನ್ನು ಅನುಸರಿಸಬಾರದು. ಅನುಸರಿಸುವುದಿಲ್ಲ ಎಂಬ ಬದ್ಧತೆಯನ್ನು ಪ್ರದರ್ಶಿಸಬೇಕು. "ಗಡಿಗಳು ಮತ್ತು ಮುಂದಿನ ಪ್ರದೇಶಗಳಿಂದ ಸೈನ್ಯ ನಿಯೋಜನೆ ಕಡಿತವನ್ನು ಖಚಿತಪಡಿಸಿಕೊಳ್ಳಲು ಎರಡೂ ಕಡೆಯವರು ತತ್‌ಕ್ಷಣದ ಕ್ರಮಗಳನ್ನು ಪರಿಗಣಿಸುವ ಬಗ್ಗೆ ಒಪ್ಪಿಕೊಳ್ಳಲಾಯಿತು" ಎಂದು ಭಾರತೀಯ ಸೇನೆ ಈ ಹಿಂದೆ ತಿಳಿಸಿತ್ತು.

ಎರಡೂ ರಾಷ್ಟ್ರಗಳ ನಡುವೆ ಕದನ ವಿರಾಮ ಘೋಷಣೆಯಾದರೂ, ಗಡಿ ಪ್ರದೇಶಗಳಲ್ಲಿ ಡ್ರೋನ್‌ ಸಮೂಹ ದಾಳಿ ಗೋಚರಿಸಿತ್ತು. ಆದಾಗ್ಯೂ ಭಾರತೀಯ ಸೇನೆ ಅದನ್ನು ತಡೆದಿದೆ. ಭಾರತೀಯ ಸೇನಾ ಕಾರ್ಯಾಚರಣೆಗಳ ಮಹಾ ನಿರ್ದೇಶಕರು (ಡಿಜಿಎಂಒ) ಭಾನುವಾರ ಆಪರೇಷನ್ ಸಿಂದೂರ್ ಅಪ್ಡೇಟ್ಸ್ ನೀಡುವ ಸುದ್ದಿಗೋಷ್ಠಿ ನಡೆಸಿದ ವೇಳೆ, ಕದನ ವಿರಾಮದ ಬಳಿಕವೂ ದಾಳಿ ನಡೆ ನಿರಾಶಾದಾಯಕ. ಗಡಿಯಾಚೆಗಿನ ಭಯೋತ್ಪಾನೆ, ಎಲ್‌ಒಸಿ ಆಚೆಗಿನ ಗುಂಡಿನ ದಾಳಿ ನಿಲ್ಲಬೇಕು. ಶನಿವಾರ ತಡರಾತ್ರಿ ಭಾನುವಾರ ನಸುಕಿನ ತನಕವೂ ಡ್ರೋನ್‌ ಸಮೂಹದ ದಾಳಿ ಮುಂದುವರಿದಿತ್ತು. ಅವುಗಳಿಗೆ ತಕ್ಕ ಉತ್ತರ ನೀಡಲಾಗಿದೆ ಎಂದು ಹೇಳಿದ್ದರು.

ಪಾಕಿಸ್ತಾನದ ಜತೆಗೆ ಮಾತುಕತೆ ಏನಿದ್ದರೂ ಎರಡು ವಿಚಾರದ ಬಗ್ಗೆ ಮಾತ್ರ. ಒಂದು ಭಯೋತ್ಪಾದನೆ ಮತ್ತು ಇನ್ನೊಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರ. ಈ ಮಾತುಕತೆ ಕೇವಲ ಡಿಜಿಎಂಒ ಮಟ್ಟದಲ್ಲಷ್ಟೇ ನಡೆಯಲಿದೆ. ಇದರಲ್ಲಿ ಮೂರನೇಯವರು ಭಾಗಿಯಾಗುವುದಿಲ್ಲ. ಇದನ್ನು ಭಾರತೀಯ ಸೇನೆ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.