2024ರಲ್ಲಿ ಭಾರತದ ಟಾಪ್-10 ಘಟನೆ; ಸತತ ಮೂರನೇ ಬಾರಿಗೆ ಮೋದಿಗೆ ಅಧಿಕಾರದ ಸಿಹಿ, ವಯನಾಡು ಭಾರೀ ದುರಂತದ ಕಹಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  2024ರಲ್ಲಿ ಭಾರತದ ಟಾಪ್-10 ಘಟನೆ; ಸತತ ಮೂರನೇ ಬಾರಿಗೆ ಮೋದಿಗೆ ಅಧಿಕಾರದ ಸಿಹಿ, ವಯನಾಡು ಭಾರೀ ದುರಂತದ ಕಹಿ

2024ರಲ್ಲಿ ಭಾರತದ ಟಾಪ್-10 ಘಟನೆ; ಸತತ ಮೂರನೇ ಬಾರಿಗೆ ಮೋದಿಗೆ ಅಧಿಕಾರದ ಸಿಹಿ, ವಯನಾಡು ಭಾರೀ ದುರಂತದ ಕಹಿ

Indias 2024 develpoments: ಭಾರತ 2024ರಲ್ಲಿ ಹಲವು ಘಟನಾವಳಿಗಳಿಗೆ ಸಾಕ್ಷಿಯಾಯಿತು. ಲೋಕಸಭೆ ಚುನಾವಣೆ, ಕೇರಳ ವಯನಾಡು ದುರಂತ ಇವುಗಳಲ್ಲಿ ಪ್ರಮುಖವಾದವು.

2024ರಲ್ಲಿ ಮೋದಿ ಮತ್ತೆ ಗೆದ್ದು ಸಿಹಿ ತಿಂದರೆ, ಕೇರಳದ ವಯನಾಡು ದುರಂತ ಕಹಿ ಘಟನೆಯಾಗಿ ಉಳಿಯಿತು.
2024ರಲ್ಲಿ ಮೋದಿ ಮತ್ತೆ ಗೆದ್ದು ಸಿಹಿ ತಿಂದರೆ, ಕೇರಳದ ವಯನಾಡು ದುರಂತ ಕಹಿ ಘಟನೆಯಾಗಿ ಉಳಿಯಿತು.

ಭಾರತದ ಹಲವು ಖುಷಿಯ ಸಂಗತಿಗಳು, ಬೇಸರದ ವಿಚಾರಗಳಿಗೂ 2024ರಲ್ಲಿ ಸಾಕ್ಷಿಯಾಯಿತು. ಈ ವರ್ಷ ಒಂದು ರೀತಿಯಲ್ಲಿ ಚುನಾವಣೆ ವರ್ಷ. ಸತತ ಹತ್ತು ವರ್ಷ ಅಧಿಕಾರದಲ್ಲಿದ್ದ ಎನ್‌ಡಿಎ ಅನ್ನು ಕಿತ್ತೆಸೆದು ಅಧಿಕಾರಕ್ಕೆ ಬರಬೇಕೆಂದು ಪಣ ತೊಟ್ಟ ಇಂಡಿಯಾ ಬ್ಲಾಕ್‌ ನಿಜಕ್ಕೂ ಉತ್ತಮ ಸಾಧನೆಯನ್ನೇ ತೋರಿತು. ಬಿಜೆಪಿ ಹಿಂದಿನ ಚುನಾವಣೆಗಿಂತ ಕಡಿಮೆ ಸ್ಥಾನ ಪಡೆದರೂ ಎನ್‌ಡಿಎ ಬಲದಿಂದ ಅಧಿಕಾರಕ್ಕೆ ಬಂದಿತು. ರಾಹುಲ್‌ಗಾಂಧಿ ಸತತ ಪ್ರಯತ್ನದ ಫಲವಾಗಿ ಕಾಂಗ್ರೆಸ್‌ ಭಾರತದಲ್ಲಿ ಚೇತರಿಕೆ ಕಂಡಿತು. ಹರಿಯಾಣ, ಆಂಧ್ರಪ್ರದೇಶ, ಒಡಿಶಾ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ಜಾರ್ಖಂಡ್‌ ವಿಧಾನಸಭೆ ಚುನಾವಣೆ ನಡೆದವು ಕೆಲವು ಕಡೆ ಬಿಜೆಪಿ ಅಧಿಕಾರ ಉಳಿಸಿಕೊಂಡರೆ, ಜಾರ್ಖಂಡ್‌ನಲ್ಲಿ ಜೆಎಂಎಂ ಗೆಲುವಿನ ನಗೆ ಬೀರಿತು. ಈ ಬಾರಿ ಭಾರತವನ್ನು ಮಾಡಿ ರಣ ಮಳೆ. ತಮಿಳುನಾಡಿನಲ್ಲಿ ಮಳೆಯಿಂದ ಸಾಕಷ್ಟು ಅನಾಹುತಗಳು ಆದವು. ಕೇರಳದಲ್ಲಂತೂ ವಯನಾಡು ದುರಂತ ಇತಿಹಾಸದಲ್ಲಿ ಉಳಿದು ಹೋಯಿತು. ರೈಲು ಅಪಘಾತ, ಸತ್ಸಂಗದ ವೇಳೆ ಕಾಲ್ತುಳಿತ, ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಪೋಟದಂತಹ ಪ್ರಕರಣಗಳು 2024ರ ಪುಟಗಳಲ್ಲಿ ದಾಖಲಾದವು

  1. ಲೋಕಸಭೆ ಚುನಾವಣೆಯಲ್ಲಿ ಎನ್‌ ಡಿಎ ಭರ್ಜರಿ ಜಯಭೇರಿ

ಲೋಕಸಭೆ ಚುನಾವಣೆ 2024: ಏಪ್ರಿಲ್ 19 ಮತ್ತು ಜೂನ್ 1ರ ನಡುವೆ ಏಳು ಹಂತಗಳಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳು ಭಾರತದ ಪ್ರಮುಖ ಬೆಳವಣಿಗೆಯೇ. ಭಾರತೀಯ ಜನತಾ ಪಾರ್ಟಿ (ಬಿಜೆಪಿ) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಆಡಳಿತಾರೂಢ ಒಕ್ಕೂಟವು ನಿಗದಿಪಡಿಸಿದ ಗುರಿ - 'ಅಬ್ಕಿ ಬಾರ್, 400 ಪಾರ್'- ಘೋಷಿಸಿ ಎನ್‌ಡಿಎ 400ರ ಗಡಿ ದಾಟಲು ಸಾಧ್ಯವಾಗಲಿಲ್ಲ. ಆದರೂ ಅದು ಅಧಿಕಾರವನ್ನು ಉಳಿಸಿಕೊಳ್ಳಲು ಯಶಸ್ವಿಯಾಯಿತು. ಇದರಿಂದಾಗಿ ನರೇಂದ್ರ ಮೋದಿ ಅವರು ನೆಹರು ಅವರ ನಂತರ ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮತ್ತೊಂದೆಡೆ, ರಾಜಕೀಯ ಅದೃಷ್ಟವನ್ನು ಸೆಳೆಯಲು ಇಂಡಿಯಾ ಬ್ಲಾಕ್ ಬಿದ್ದಿತು. ಕಾಂಗ್ರೆಸ್ ತನ್ನ 52 ಸ್ಥಾನಗಳಿಂದ 99 ಕ್ಕೆ ಸುಧಾರಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು ಈ ವರ್ಷದ ಪ್ರಮುಖ ಬೆಳವಣಿಗೆ

2. ಮಹಾರಾಷ್ಟ್ರ ಚುನಾವಣೆ ಕಮಾಲ್‌

ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆ:ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಫಲಿತಾಂಶಗಳು ಎಲ್ಲಾ ಸಮೀಕ್ಷೆಗಳನ್ನು ತಲೆ ಕೆಳಗೆ ಮಾಡಿ ರಾಜಕೀಯ ತಜ್ಞರನ್ನೂ ಆಶ್ಚರ್ಯಗೊಳಿಸಿದವು, ಏಕೆಂದರೆ ರಾಜ್ಯದಲ್ಲಿ ಲೋಕಸಭೆ ಚುನಾವಣೆ ಸೋಲಿನ ಕೆಲವೇ ತಿಂಗಳುಗಳ ನಂತರ ಆಡಳಿತಾರೂಢ ಮಹಾಯುತಿಯು ಈ ಮಟ್ಟದಲ್ಲಿ ಗೆಲುವು ಪಡೆಯುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಲೋಕಸಭೆ ಚುನಾವಣೆಯ ಸೋಲಿನಿಂದ ಚೇತರಿಸಿಕೊಂಡ ಬಿಜೆಪಿ 132 ಸ್ಥಾನಗಳನ್ನು ಗೆದ್ದುಕೊಂಡಿತು ಮತ್ತು ಏಕನಾಥ್ ಶಿಂಧೆ ಅವರ ಶಿವಸೇನೆ ಮತ್ತು ಅಜಿತ್ ಪವಾರ್ ಅವರ ಎನ್‌ಸಿಪಿ ಕ್ರಮವಾಗಿ 57 ಸ್ಥಾನಗಳನ್ನು ಮತ್ತು 41 ಸ್ಥಾನಗಳನ್ನು ಗೆದ್ದವು. ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಭಾರಿ ಹಿನ್ನಡೆ ಅನುಭವಿಸಿದೆ. ಕಾಂಗ್ರೆಸ್ ಕೇವಲ 16 ಸ್ಥಾನಗಳನ್ನು ಗೆದ್ದ ನಂತರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ತನ್ನ ಕೆಟ್ಟ ಪ್ರದರ್ಶನವನ್ನು ದಾಖಲಿಸಿತು. ಶರದ್ ಪವಾರ್ ಅವರ ಎನ್‌ಸಿಪಿ (ಎಸ್‌ಪಿ) ಕೇವಲ 10 ಸ್ಥಾನಗಳನ್ನು ಗಳಿಸಿದರೆ, ಉದ್ಧವ್ ಠಾಕ್ರೆ (ಯುಬಿಟಿ) 20 ಸ್ಥಾನಗಳನ್ನು ಪಡೆದುಕೊಂಡಿತು.

3 .ಆಂಧ್ರಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ನಾಯ್ಡು

ಆಂಧ್ರಪ್ರದೇಶದಲ್ಲಿ ಹಿಂದಿನ ವರ್ಷ ಜೈಲು ವಾಸ ಅನುಭವಿಸಿ ಸಂಕಷ್ಟದಲ್ಲಿದ್ದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದು ಈ ವರ್ಷದ ಪ್ರಮುಖ ಬೆಳವಣಿಗೆ. ಜಗನ್‌ ಮೋಹನ್‌ ರೆಡ್ಡಿ ಅವರ ಆಡಳಿತ ವೈಖರಿಯನ್ನು ಟೀಕಿಸುತ್ತಲೇ ಜನರ ಮುಂದೆ ಹೋದ ನಾಯ್ಡು ಸತತ ನಾಲ್ಕನೇ ಬಾರಿ ಸಿಎಂ ಆದರು. ಅದು ಲೋಕಸಭೆ ಚುನಾವಣೆ ಜತೆಯಲ್ಲಿಯೇ ನಡೆದ ಆಂಧ್ರ ಪ್ರದೇಶ ಚುನಾವಣೆಯಲ್ಲಿ ನಾಯ್ಡು ಜನರ ಮನಸು ಗೆದ್ದು ಟಿಡಿಪಿಯನ್ನು ಅಧಿಕಾರಕ್ಕೆ ತಂದು. ಅವರೊಂದಿಗೆ ಮೈತ್ರಿ ಮಾಡಿಕೊಂಡ ನಟ ಪವನ್‌ ಕಲ್ಯಾಣ ಪಕ್ಷವೂ ಗೆದ್ದು, ಪವನ್‌ ಉಪಮುಖ್ಯಮಂತ್ರಿಯಾದರು.

4. ಇಬ್ಬರು ಸಿಎಂಗಳ ಜೈಲುವಾಸ

ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಹಠ ಹಿಡಿದಿದ್ದ ಅರವಿಂದ್ ಕೇಜ್ರಿವಾಲ್ ಅವರು ಅಚ್ಚರಿಯ ನಡೆಯಲ್ಲಿ ಸೆ.17ರಂದು ಅಧಿಕಾರದಿಂದ ಕೆಳಗಿಳಿದಿದ್ದು, ಪಕ್ಷದ ಸಹೋದ್ಯೋಗಿ ಅತಿಷಿ ಅಧಿಕಾರ ವಹಿಸಿಕೊಳ್ಳಲು ದಾರಿ ಮಾಡಿಕೊಟ್ಟರು. ಅಬಕಾರಿ ನೀತಿ ಹಗರಣದಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ನಂತರ ಕೇಜ್ರಿವಾಲ್, ದೆಹಲಿಯ ಜನರು ತನಗೆ ಕ್ಲೀನ್ ಚಿಟ್ ನೀಡಿದ ನಂತರ ನಾನು ಹುದ್ದೆಯನ್ನು ಸ್ವೀಕರಿಸುತ್ತೇನೆ ಎನ್ನುವ ಪ್ರತಿಜ್ಷೆಯನ್ನೂ ಮಾಡಿದರು. ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನಾಯಕ ಮತ್ತು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್‌ಗೆ 2024 ಕಹಿ ಹಾಗೂ ಸಿಹಿಯ ಮಿಶ್ರ ವರ್ಷ. ಜನವರಿಯಲ್ಲಿ ಭೂ ವ್ಯವಹಾರದಲ್ಲಿ ಸಿಲುಕಿ ಜೈಲು ಪಾಲಾದ ಕಾರಣ ಹೊಸ ವರ್ಷವು ಅವರಿಗೆ ಆಘಾತವನ್ನು ತಂದಿತ್ತು. ಆದಾಗ್ಯೂ, ಆರು ತಿಂಗಳು ಜೈಲಿನಲ್ಲಿದ್ದು ಹೊರ ಬಂದ ನಂತರ ಮತ್ತೆ ಸಿಎಂ ಆದರು. ಚುನಾವಣೆ ಎದುರಿಸಿ ಪ್ರತಿಪಕ್ಷ ಬಿಜೆಪಿಯನ್ನು ಸೋಲಿಸಿ ಮೈತ್ರಿಯೊಂದಿಗೆ ಅಧಿಕಾರ ಹಿಡಿದು ಟೀಕಾಕಾರರಿಗೆ ಉತ್ತರ ನೀಡಿದರು.

5. ವಯನಾಡು ಭೂಕುಸಿತ: 231 ಸಾವು

ಜುಲೈ 30 ರಂದು, ವಿನಾಶಕಾರಿ ಭೂಕುಸಿತದ ಸರಣಿಯು ಕೇರಳದ ವಯನಾಡು ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿತು. ಕನಿಷ್ಠ 231 ಜನರು ಸಾವನ್ನಪ್ಪಿ 397 ಜನರು ಗಾಯಗೊಂಡರು. ನಿರಂತರ ಮಳೆಯಿಂದಾಗಿ ಭೂಕುಸಿತಗಳು ಉಂಟಾಗಿ ಅನಾಹುತಕ್ಕೆ ದಾರಿ ಮಾಡಿಕೊಟ್ಟಿತು. ಇಡೀ ಹಳ್ಳಿಗಳಲ್ಲಿ ಟನ್‌ಗಟ್ಟಲೆ ಮಣ್ಣು ಅವಶೇಷಗಳಾಗಿ ಪರಿವರ್ತನೆಗೊಂಡಿತು. 100 ಕ್ಕೂ ಹೆಚ್ಚು ಜನರು ನಾಪತ್ತೆಯಾಗಿ ದೇಹಗಳೇ ಸಿಗದ ಮಟ್ಟಿಗೆ ಪ್ರವಾಹವಿತ್ತು. ಸಾವಿರಾರು ಜನರು ಸ್ಥಳಾಂತರಗೊಂಡು 1,500 ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾದವು. ಕೇರಳದ ಇತಿಹಾಸದಲ್ಲಿ ಈ ಭೂಕುಸಿತಗಳು ದಿನಗಳು ಜನರನ್ನು ಸಿಂಹ ಸ್ವಪ್ನದಂತೆ ಕಾಡುತ್ತಿವೆ.

6. ಸತ್ಸಂಗದ ಕಾಲ್ತುಳಿತದಲ್ಲಿ 123 ಸಾವು

ಜುಲೈ 2 ರಂದು ಹತ್ರಾಸ್‌ನ ರಾತಿ ಭಾನ್‌ಪುರ್ ಗ್ರಾಮದಲ್ಲಿ ನಡೆದ ಧಾರ್ಮಿಕ ಸಭೆ ಕಾಲ್ತುಳಿತಕ್ಕೆ ತಿರುಗಿ ಕನಿಷ್ಠ 123 ಜನರು ಜೀವ ಕಳೆದುಕೊಂಡರು. ಧಾರ್ಮಿಕ ಕಾರ್ಯಕ್ರಮಕ್ಕಾಗಿ ನೆರೆದಿದ್ದ ಸಾವಿರಾರು ಜನರು ಕಿರಿದಾದ ಮಾರ್ಗಗಳಲ್ಲಿ ಸಿಕ್ಕಿಹಾಕಿಕೊಂಡಾಗ ಕಾಲ್ತುಳಿತ ಸಂಭವಿಸಿತ್ತು. ಜನರು ತಪ್ಪಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಂತೆ ಗಾಬರಿ ಮತ್ತು ಗೊಂದಲ ಉಂಟಾಗಿ, ಉಸಿರುಗಟ್ಟುವಿಕೆ, ಕಾಲ್ತುಳಿತಕ್ಕೆ ಕಾರಣವಾಗಿ ಹಲವರು ಜೀವ ಕಳೆದುಕೊಂಡರು.

7. ಚೆನ್ನೈ, ತಮಿಳುನಾಡು ಮಹಾಮಳೆ

ಈ ಬಾರಿ ಚೆನ್ನೈ ಹಾಗೂ ತಮಿಳುನಾಡು ಭಾರೀ ಮಳೆಗೆ ತತ್ತರಿಸಿತು. ಮೂರ್ನಾಲ್ಕು ಬಾರಿ ಮಳೆಯಾಗಿದ್ದು ಚೆನ್ನೈ ಮಹಾನಗರದಲ್ಲಿ ಹಲವರು ಪ್ರಾಣ ಕಳೆದು ಜನಜೀವನವನ್ನೇ ಬೆಚ್ಚಿ ಬೀಳಿಸಿತು. ಅದೇ ರೀತಿ ತಮಿಳುನಾಡಿನ ಹಲವು ಜಿಲ್ಲೆಗಳಲ್ಲೂ ಮಳೆಯ ಅಬ್ಬರಕ್ಕೆ ಜನತೆ ತೊಂದರೆ ಅನುಭವಿಸಿದರು. ಮಳೆಯ ಜತೆಗೆ ತಮಿಳುನಾಡಿನಲ್ಲಿ ಕಳಪೆ ಮದ್ಯ ಮಾರಾಟದಿಂದ ಜನ ಜೀವ ಕಳೆದುಕೊಂಡರು.

8. ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ

ಮಾರ್ಚ್ 1 ರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಗೊಂಡು ಕನಿಷ್ಠ ಎಂಟು ಜನರು ಗಾಯಗೊಂಡಿದ್ದರು. ಕೆಫೆಯೊಳಗೆ ಸುಧಾರಿತ ಸ್ಫೋಟಕ ಸಾಧನವನ್ನು ಇರಿಸಿ ಸ್ಪೋಟಿಸಲಾಯಿತು. ಎನ್‌ಐಎ ತನಿಖೆಯನ್ನು ನಡೆಸಿ ತೀರ್ಥಹಳ್ಳಿ ಮೂಲದ ವ್ಯಕ್ತಿ ಸಹಿತ ಹಲವರನ್ನು ಬಂಧಿಸಿತು. ಇಡೀ ದೇಶದ ಮಟ್ಟದಲ್ಲೂ ಈ ಸ್ಪೋಟ ಸದ್ದುಮಾಡಿತು.

9. ಮುಂಬೈ ಹೋರ್ಡಿಂಗ್‌ ದುರಂತ

ಮೇ 13 ರಂದು, ಮುಂಬೈನ ಘಾಟ್ಕೋಪರ್ ಉಪನಗರದಲ್ಲಿ ಚಂಡಮಾರುತದ ಸಮಯದಲ್ಲಿ ಅಕ್ರಮ ಹೋರ್ಡಿಂಗ್ ಕುಸಿದು 17 ಜನರು ಸಾವನ್ನಪ್ಪಿ 74 ಮಂದಿ ಗಾಯಗೊಂಡರು. ಸೂಕ್ತ ಪರವಾನಿಗೆ ಇಲ್ಲದೆ ಹಾಕಲಾಗಿದ್ದ ಭಾರೀ ಗಾತ್ರದ ಹೋರ್ಡಿಂಗ್ ಪೆಟ್ರೋಲ್ ಬಂಕ್‌ಗೆ ಬಿದ್ದಿದ್ದು, ಸ್ಫೋಟ ಸಂಭವಿಸುವುದು ತಪ್ಪಿತು.

10.ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಗೂಡ್ಸ್ ರೈಲು ಡಿಕ್ಕಿ

ಜೂನ್ 17 ರಂದು, ಪಶ್ಚಿಮ ಬಂಗಾಳದ ಡಾರ್ಜಲಿಂಗ್ ಜಿಲ್ಲೆಯ ನ್ಯೂ ಜಲ್ಪೈಗುರಿ ನಿಲ್ದಾಣದ ಬಳಿ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌ಗೆ ಗೂಡ್ಸ್ ರೈಲು ಡಿಕ್ಕಿ ಹೊಡೆಯಿತು. ಘಟನೆಯಲ್ಲಿ 15 ಜನರು ಸಾವನ್ನಪ್ಪಿದರು ಮತ್ತು 60 ಮಂದಿ ಗಾಯಗೊಂಡರು, ಅವರಲ್ಲಿ ಹೆಚ್ಚಿನವರು ಎಕ್ಸ್‌ಪ್ರೆಸ್ ರೈಲಿನಲ್ಲಿದ್ದ ಪ್ರಯಾಣಿಕರು. ಹಳಿಯಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ವೇಗವಾಗಿ ಬಂದ ಮತ್ತೊಂದು ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದು ಹಳಿ ತಪ್ಪಲು ಕಾರಣವಾಯಿತು. ಹಲವಾರು ಬೋಗಿಗಳು ಪಲ್ಟಿಯಾದವು.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.