ಭಾರತವನ್ನು ಆರ್ಥಿಕ ಬಿಕ್ಕಟ್ಟಿನಿಂದ ಪಾರು ಮಾಡಿದ್ದ, ವಿಶ್ವ ಮೆಚ್ಚಿದ ಅರ್ಥಶಾಸ್ತ್ರಜ್ಞ ಡಾ ಮನಮೋಹನ್ ಸಿಂಗ್; ಜಗದೀಶ್ ಕೊಪ್ಪ ಬರಹ
ಜಗದೀಶ್ ಕೊಪ್ಪ ಬರಹ: ಜಗತ್ತಿನಲ್ಲಿ ಅತಿ ಕಡಿಮೆ ಮಾತನಾಡುವ ಅರ್ಥಶಾಸ್ತ್ರಜ್ಞ, ಶಿಕ್ಷಣ ತಜ್ಞ ಹಾಗೂ ನಾಯಕ ಎಂದು ಪ್ರಸಿದ್ದರಾಗಿರುವ ಭಾರತದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಸೌಜನ್ಯ ಮತ್ತು ಸೌಹಾರ್ದತೆಯನ್ನು ತಮ್ಮ ಉಸಿರಿನಂತೆ ಕಾಪಾಡಿಕೊಂಡು ಬಂದಿದ್ದರು. ಭಾರತವನ್ನು ಆರ್ಥಿಕ ಬಿಕ್ಕಟ್ಟಿನಿಂದ ಪಾರು ಮಾಡಿದ್ದ ಅರ್ಥಶಾಸ್ತ್ರಜ್ಞ ಎಂಬುದನ್ನು ನಾವು ಮರೆಯುವಂತಿಲ್ಲ.
ಕಡು ಬೂದು ಬಣ್ಣದ ಗಡ್ಡ, ನೀಲಿ ಪೇಟ ಮತ್ತು ಶ್ವೇತವರ್ಣದ ಶರ್ಟ್ ಧರಿಸುವ ಹಾಗೂ ಕನ್ನಡಕ ಧರಿಸಿ, ಸದಾ ಜೇಬಿನಲ್ಲಿ ಪೆನ್ನು ಇರುವ ಭಾರತೀಯ ವ್ಯಕ್ತಿ ಎಂದರೆ ಅವರು ಡಾ. ಮನಮೋಹನ್ ಸಿಂಗ್ ಎಂದು ಇಡೀ ಜಗತ್ತು ಸುಲಭವಾಗಿ ಗುರುತಿಸುತ್ತದೆ. ಜಗತ್ತಿನಲ್ಲಿ ಅತಿ ಕಡಿಮೆ ಮಾತನಾಡುವ ಅರ್ಥಶಾಸ್ತ್ರಜ್ಞ, ಶಿಕ್ಷಣ ತಜ್ಞ ಹಾಗೂ ನಾಯಕ ಎಂದು ಪ್ರಸಿದ್ದರಾಗಿರುವ ಭಾರತದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಇಪ್ಪತ್ತನೇಯ ಶತಮಾನದ ಉತ್ತರಾರ್ಧ ಮತ್ತು ಇಪ್ಪತ್ತೊಂದನೆಯ ಶತಮಾನದ ಆದಿ ಭಾಗದಲ್ಲಿ ಈ ಜಗತ್ತಿನಿಂದ ಶ್ರೇಷ್ಠ ಅರ್ಥಶಾಸ್ತ್ರಜ್ಞ ಎಂದು ಗೌರವಿಸಲ್ಪಟ್ಟವರು. ಸೌಮ್ಯ ಸ್ವಭಾವದ ಮನಮೋಹನ್ ಸಿಂಗ್ ಅವರು ಆರ್ಥಿಕ ವಿಷಯಕ್ಕೆ ಸಂಬಂಧಿಸಿದಂತೆ ಕರಾರುವಕ್ಕಾದ ಮತ್ತು ಕಠಿಣ ನಿಯಮಗಳಿಗೆ ಬದ್ಧರಾದವರು. ಅವರ ಜೀವನ ಅನುಭವ ಮತ್ತು ಶಿಕ್ಷಣದ ಹಿನ್ನೆಲೆಯನ್ನು ನೋಡಿದವರು ಅವರ ಬಗ್ಗೆ ಲಘುವಾಗಿ ಮಾತನಾಡಲು ಹಿಂಜರಿಯುತ್ತಾರೆ.
ಇಂಗ್ಲೆಂಡಿನ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದಲ್ಲಿ ಪಿಎಚ್.ಡಿ ಪಡೆದು 1956 ರಲ್ಲಿ ಅರ್ಥಶಾಸ್ತ್ರದ ಪಿತಾಮಹಾ ಎನಿಸಿರುವ ಆಡಂಸ್ಮಿತ್ ಹೆಸರಿನಲ್ಲಿರುವ ಚಿನ್ನದ ಪದಕ ಗೆದ್ದ ಏಕೈಕ ಏಷ್ಯಾದ ಖಂಡದ ನಾಗರೀಕ ಎಂಬ ಗೌರವಕ್ಕೆ ಇವರು ಪಾತ್ರರಾದವರು. ಅತಿ ಕಡಿಮೆ ಮಾತುಗಳಲ್ಲಿ ಹೇಳಬೇಕಾದ ವಿಚಾರಗಳನ್ನು ಸ್ಪಷ್ಟವಾಗಿ ಹೇಳಬಲ್ಲ ಅವರನ್ನು ಭಾರತದ ಮಾಧ್ಯಮಗಳು ಇವರು ಮನಮೋಹನ್ ಸಿಂಗ್ ಅವರೋ? ಅಥವಾ ಮನಮೌನಸಿಂಗರೋ? ಎಂಬ ಗೊಂದಲ ಉಂಟಾಗುತ್ತಿದೆ ಎಂದು ಅಪಹಾಸ್ಯ ಮಾಡಿದ್ದುಂಟು.
ಮನಮೋಹನ್ ಸಿಂಗ್ ಹಿನ್ನೆಲೆ
ಡಾ. ಮನಮೋಹನ್ ಸಿಂಗ್ ಅವರು 1932 ರ ಸೆಪ್ಟೆಂಬರ್ 26 ರಂದು ಸಿಖ್ ಕುಟುಂಬದಲ್ಲಿ ಗುರುಮುಖ್ ಸಿಂಗ್ ಮತ್ತು ಅಮೃತ್ ಕೌರ್ ದಂಪತಿಗಳಿಗೆ ಇಂದಿನ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಗಾಹ್ ಎಂಬ ಗ್ರಾಮದಲ್ಲಿ ಜನಿಸಿದರು. ಬಾಲ್ಯದಲ್ಲಿ ತಾಯಿ ತೀರಿಕೊಂಡ ಕಾರಣ, ಅಜ್ಜಿಯ (ತಂದೆಯ ತಾಯಿ) ಮೊಮ್ಮಗನನ್ನು ಕಾಳಜಿಯಿಂದ ಬೆಳೆಸಿದರು. ಇದರ ಪ್ರಭಾವದಿಂದಾಗಿ ಅವರು ಬಾಲ್ಯದಿಂದಲೂ ಅಜ್ಜಿಗೆ ತುಂಬಾ ಹತ್ತಿರವಾಗಿದ್ದರು. ಮನಮೋಹನ ಸಿಂಗ್ ಅವರ ಆರಂಭಿಕ ಶಾಲಾ ಶಿಕ್ಷಣವು ಉರ್ದು ಮಾಧ್ಯಮದಲ್ಲಿತ್ತು, ಈ ಕಾರಣದಿಂದಾಗಿ ಅವರು ಪ್ರಧಾನಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಗ ತಮ್ಮ ಹಿಂದಿ ಭಾಷಣಗಳನ್ನು ಉರ್ದು ಲಿಪಿಯಲ್ಲಿ ಬರೆದುಕೊಂಡು ಮಾತನಾಡುತ್ತಿದ್ದರು. ಕೆಲವೊಮ್ಮೆ ಅವರು ತಮ್ಮ ಮಾತೃಭಾಷೆಯಾದ ಪಂಜಾಬಿಯನ್ನು ಬರೆಯಲು ಬಳಸುವ ಗುರುಮುಖಿ ಲಿಪಿಯನ್ನು ಸಹ ಬಳಸುತ್ತಿದ್ದರು.
1947 ರಲ್ಲಿ ಅಖಂಡ ಭಾರತವು ವಿಭಜನೆಯಾದ ನಂತರ ಅವರ ಕುಟುಂಬವು ಭಾರತದ ಹಲ್ದ್ವಾನಿಗೆ ವಲಸೆ ಬಂದು ನೆಲೆಸಿತು. ನಂತರ 1948 ರಲ್ಲಿ ಕುಟುಂಬದ ಸದಸ್ಯರು ಅಮೃತಸರಕ್ಕೆ ಸ್ಥಳಾಂತರಗೊಂಡರು. ಅಲ್ಲಿ ಸಿಂಗ್ ಅವರು ಅಮೃತಸರದ ಹಿಂದೂ ಕಾಲೇಜಿನಲ್ಲಿ ಅಧ್ಯಯನ ಮಾಡಿದರು. ಪದವಿ ಅಧ್ಯಯನಕ್ಕೆ ಪಂಜಾಬ್ ವಿಶ್ವವಿದ್ಯಾನಿಲಯಕ್ಕೆ ಸೇರ್ಪಡೆಯಾಗಿ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದರು ಮತ್ತು ಕ್ರಮವಾಗಿ 1952 ಮತ್ತು 1954 ರಲ್ಲಿ ತಮ್ಮ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದರು. ಅವರ ಶೈಕ್ಷಣಿಕ ವೃತ್ತಿಜೀವನದುದ್ದಕ್ಕೂ ಮೊದಲ ಸ್ಥಾನ ಪಡೆಯುವುದರಲ್ಲಿ ಯಶಸ್ವಿಯಾಗಿದ್ದರು. ಸಿಂಗ್‌ರವರು 1957 ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ತಮ್ಮ ಅರ್ಥಶಾಸ್ತ್ರದದಲ್ಲಿ ಡಾಕ್ಟರೇಟ್ ಪದವಿಯನ್ನು ಪೂರ್ಣಗೊಳಿಸಿದರು. ಬ್ರಿಟಿಷ್ ಪತ್ರಕರ್ತ ಹಾಗೂ ಬಿ.ಬಿ.ಸಿ.ವರದಿಗಾರರಾಗಿದ್ದ ಮಾರ್ಕ್ ಟುಲ್ಲಿ ಅವರೊಂದಿಗಿನ 2005ರ ಸಂದರ್ಶನದಲ್ಲಿ ಮನಮೋಹನ್ ಸಿಂಗ್ ಅವರು ತಮ್ಮ ಕೇಂಬ್ರಿಡ್ಜ್ ದಿನಗಳು ಮತ್ತು ಅರ್ಥಶಾಸ್ತ್ರದಿಂದ ಗಳಿಸಿಕೊಂಡ ಜ್ಞಾನವನ್ನು ಹೀಗೆ ವಿವರಿಸಿದ್ದಾರೆ.
ಸಿಂಗ್ ಅವರಿಗೆ ಸ್ಪೂರ್ತಿಯಾದವರು
‘ಮಾನವ ವ್ಯವಹಾರಗಳನ್ನು ರೂಪಿಸುವಲ್ಲಿ ರಾಜಕೀಯದ ಸೃಜನಾತ್ಮಕ ಪಾತ್ರದ ಬಗ್ಗೆ ನಾನು ಮೊದಲು ಜಾಗೃತನಾಗಿದ್ದೆ. ಈ ವಿಷಯದಲ್ಲಿ ನನ್ನ ಮಾರ್ಗದರ್ಶಕರಾಗಿದ್ದ ಜೋನ್ ರಾಬಿನ್ಸನ್ ಮತ್ತು ನಿಕೋಲಸ್ ಕಾಲ್ಡೋರ್ ಅವರಿಗೆ ಋಣಿಯಾಗಿದ್ದೇನೆ . ಜೋನ್ ರಾಬಿನ್ಸನ್ ಒಬ್ಬ ಅದ್ಭುತ ಪ್ರಾಧ್ಯಾಪಕರಾಗಿದ್ದರು. ಅವರು ಯಾವಾಗಲೂ ತಮ್ಮ ವಿದ್ಯಾರ್ಥಿಗಳ ಆಂತರಿಕ ಆತ್ಮಸಾಕ್ಷಿಯನ್ನು ಜಾಗೃತಗೊಳಿಸಲು ಪ್ರಯತ್ನಿಸುತ್ತಿದ್ದರು. ಅದನ್ನು ಕೆಲವೇ ಕೆಲವರು ಸಾಧಿಸಲು ಸಾಧ್ಯವಾಯಿತು. ಅವರು ನನ್ನನ್ನು ಬಹಳವಾಗಿ ಪ್ರಶ್ನಿಸಿದರು ಮತ್ತು ಯೋಚಿಸಲಾಗದದನ್ನು ಯೋಚಿಸುವಂತೆ ಮಾಡಿದರು. ಅವರು ಕೇನ್ಸ್ ನ ಎಡಪಂಥೀಯ ವ್ಯಾಖ್ಯಾನವನ್ನು ಪ್ರತಿಪಾದಿಸಿದರು.
‘ನಿಜವಾಗಿಯೂ ಸಾಮಾಜಿಕ ಸಮಾನತೆಯೊಂದಿಗೆ ಅಭಿವೃದ್ಧಿಯನ್ನು ಸಂಯೋಜಿಸಲು ಬಯಸಿದರೆ ರಾಜ್ಯವು ಹೆಚ್ಚಿನ ಪಾತ್ರವನ್ನು ವಹಿಸುತ್ತದೆ ಎಂದು ಅವರು ಹೇಳುತ್ತಿದ್ದರು. ಕಾಲ್ದೋರ್ ನನ್ನ ಮೇಲೆ ಇನ್ನಷ್ಟು ಪ್ರಭಾವ ಬೀರಿದರು. ಜೋನ್ ರಾಬಿನ್ಸನ್ ಚೀನಾದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಒಬ್ಬ ಮಹಾನ್ ಅಭಿಮಾನಿಯಾಗಿದ್ದರು. ಆದರೆ ಕ್ಯಾಲ್ಡೋರ್ ಕೇನ್ಸ್ ನ ವಿಶ್ಲೇಷಣೆಯನ್ನು ಬಂಡವಾಳಶಾಹಿ ಹೇಗೆ ಕೆಲಸ ಮಾಡಲು ಸಾಧ್ಯವೆಂದು ತೋರಿಸಲು ಬಳಸಿದರು’. ಜಗತ್ತಿನ ಶ್ರೇಷ್ಠ ಚಿಂತಕರ ಬಳಿ ಅವರು ಓರ್ವ ಪ್ರತಿಭಾವಂತ ಅರ್ಥಶಾಸ್ತ್ರರಾಗಿ ಡಾ.ಮನಮೋಹನ್ ಸಿಂಗ್ ರೂಪುಗೊಂಡು ನಂತರ ಭಾರತಕ್ಕೆ ಮರಳಿದರು.
ಡಾ ಮನಮೋಹನ್ ಸಿಂಗ್ ವೃತ್ತಿ ಜೀವನ
ಭಾರತಕ್ಕೆ ಬಂದ ನಂತರ ಅವರು 1957 ರಿಂದ 1959 ರವರೆಗೆ ಪಂಜಾಬ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದ ಹಿರಿಯ ಉಪನ್ಯಾಸಕರಾಗಿದ್ದರು. 1959 ಮತ್ತು 1963 ರ ಅವಧಿಯಲ್ಲಿ ಅವರು ಪಂಜಾಬ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದ ರೀಡರ್ ಆಗಿ ಸೇವೆ ಸಲ್ಲಿಸಿದರು ಮತ್ತು 1963ರಿಂದ 1965 ರವರೆಗೆ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ನಂತರ ಅವರು 1966 ರಿಂದ 1969 ರವರೆಗೆ ಯುನೈಟೆಡ್ ನೇಷನ್ಸ್ ಕಾನ್ಫರೆನ್ಸ್ ಆನ್ ಟ್ರೇಡ್ ಅಂಡ್ ಡೆವಲಪ್‌ಮೆಂಟ್ ಸಂಸ್ಥೆಗೆ ಕೆಲಸ ಮಾಡಲು ಅಮೆರಿಕಕ್ಕೆ ಹೋಗಿದ್ದರು.
ಮೂರು ವರ್ಷ ಸೇವೆ ಸಲ್ಲಿಸಿ ಭಾರತಕ್ಕೆ ಮರಳಿ ಬಂದ ಅವರನ್ನು ಲಲಿತ್ ನಾರಾಯಣ ಮಿಶ್ರಾ ಅವರು ವಿದೇಶಿ ವ್ಯಾಪಾರ ಸಚಿವಾಲಯದ ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡಿದ್ದರು. ಇದರ ಜೊತೆಗೆ 1968 ರಿಂದ 1971 ರವರೆಗೆ, ಸಿಂಗ್ ಅವರು ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ ಹಾಗೂ ದೆಹಲಿ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ವ್ಯಾಪಾರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.
1972 ರಲ್ಲಿ, ಸಿಂಗ್ ಅವರು ಹಣಕಾಸು ಸಚಿವಾಲಯದಲ್ಲಿ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದರು ಮತ್ತು 1976 ರ ವೇಳೆಗೆ ಅವರು ಹಣಕಾಸು ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿದ್ದರು.
1980-1982 ರಲ್ಲಿ ಯೋಜನಾ ಆಯೋಗದ ಸದಸ್ಯರಾಗಿ ಆಯ್ಕೆಯಾದರು ಹಾಗೂ 1982 ರಲ್ಲಿ ಅವರು ಆಗಿನ ಹಣಕಾಸು ಸಚಿವ ಪ್ರಣಬ್ ಮುಖರ್ಜಿಯವರ ಅಡಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್ ಆಗಿ ನೇಮಕಗೊಂಡರು. 1985 ರವರೆಗೆ ಡಾ. ಮನಮೋಹನ್ ಸಿಂಗ್ ಅವರು ಆ ಹುದ್ದೆಯಲ್ಲಿದ್ದರು.
1985 ರಿಂದ 1987 ರವರೆಗೆ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದರು. ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ಸೇವೆ ಸಲ್ಲಿಸಿ, ನಂತರ 1991 ರಲ್ಲಿ ಪಿ.ವಿ. ನರಸಿಂಹ ರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಕೇಂದ್ರ ಹಣಕಾಸು ಸಚಿವರಾಗಿ ನೇಮಕಗೊಂಡರು. ಭಾರತದ ಆರ್ಥಿಕ ಪರಿಸ್ಥಿತಿ ಅತ್ಯಂತ ಹೀನ ಸ್ಥಿತಿಯಲ್ಲಿ ಇದ್ದ ಸಂದರ್ಭದಲ್ಲಿ ಭಾರತಕ್ಕೆ ಇಂತಹ ವ್ಯಕ್ತಿಯೊಬ್ಬರು ಹಣಕಾಸು ಸಚಿವರಾಗುವುದು ಮುಖ್ಯವಾಗಿತ್ತು.
ಹಣಕಾಸು ಸಚಿವರಾಗಿ ಡಾ.ಮನಮೋಹನ್ ಸಿಂಗ್
ಪಿ.ವಿ. ನರಸಿಂಹರಾವ್ ತಮ್ಮ ರಾಜಕೀಯ ಜೀವನದಲ್ಲಿ ಮಾಡಿದ ಏಕೈಕ ಒಳ್ಳೆಯ ಕೆಲಸವೆಂದರೆ, ಡಾ.ಮನಮೋಹನ್ ಸಿಂಗವರನ್ನು ತಮ್ಮ ಸಂಪುಟದಲ್ಲಿ ಹಣಕಾಸು ಸಚಿವರನ್ನಾಗಿ ನೇಮಕ ಮಾಡಿಕೊಂಡಿದ್ದು. ಏಕೆಂದರೆ, ಅದೇ ವರ್ಷದ ಅಂದರೆ, 1991 ಮೇ 21 ರಿಂದ 30 ರವರೆಗೆ ಭಾರತ ಸರ್ಕಾರವು 67 ಟನ್ ಚಿನ್ನವನ್ನು ವಿಮಾನದಲ್ಲಿ ಕೊಂಡೊಯ್ದು ಬ್ಯಾಂಕ್ ಆಫ್ ಇಂಗ್ಲೆಂಡ್‌ನಲ್ಲಿ 47 ಟನ್ ಮತ್ತು ಲಂಡನ್ ನಗರದ ಸ್ವಿಟ್ಜರ್‌ಲ್ಯಾಂಡ್ ಬ್ಯಾಂಕ್ ಶಾಖೆಯಲ್ಲಿ 20 ಟನ್ ಒತ್ತೆ ಇಟ್ಟು ಎರಡು ಶತಕೋಟಿ ಡಾಲರ್ ಹಣವನ್ನು ಸಾಲವಾಗಿ ಪಡೆದಿತ್ತು.
1990 ರಲ್ಲಿ ಕಾಂಗ್ರೆಸ್ ಪಕ್ಷದ ಬಾಹ್ಯ ಬೆಂಬಲದೊಂದಿಗೆ ಪ್ರಧಾನಿ ಪಟ್ಟಕ್ಕೆ ಏರಿದ್ದ ಚಂದ್ರಶೇಖರ್ ಅವರ ಸರ್ಕಾರ ರಾಜೀವ್ ಗಾಂಧಿಯವರ ಫೋನ್ ಕದ್ದಾಲಿಸುತ್ತಿದೆ ಎಂಬ ಆರೋಪಕ್ಕೆ ಸಿಲುಕಿ 1991 ರ ಮಾರ್ಚ್ ತಿಂಗಳಲ್ಲಿ ಬಹುಮತ ಕಳೆದುಕೊಂಡು ಪತನಗೊಂಡಿತು.
ನಂತರ ಉಸ್ತುವಾರಿ ಸರ್ಕಾರವಾಗಿ ಮುಂದುವರಿದಿತ್ತು. ಇದೇ ಸಮಯದಲ್ಲಿ ವಿದೇಶಿ ವಿನಿಮಯದ ಕೊರತೆಯಿಂದಾಗಿ ದೇಶದ ಚಾಲ್ತಿ ಖಾತೆಯಲ್ಲಿ ವಿನಿಮಯಕ್ಕೆ ಇದ್ದ ಡಾಲರ್ ಕೇವಲ ಮೂರು ವಾರಗಳಿಗೆ ಸಾಕಾಗುವಷ್ಟು ಹಂತ ತಲುಪಿ ಭಾರತ ಸರ್ಕಾರದ ಸ್ಥಿತಿ ದಿವಾಳಿ ಅಂಚಿಗೆ ದೂಡಿತ್ತು. 1991 ರ ಜೂನ್‌ನಲ್ಲಿ ಚುನಾವಣೆಯ ನಂತರ ಸ್ಪೃಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆ ಸ್ ಪಕ್ಷಕ್ಕೆ ಮನಮೋಹನ್ ಸಿಂಗ್ ಆರ್ಥಿಕ ಸುಧಾರಣೆಯ ಮಾಂತ್ರಿಕರಾದರು.
ಭಾರತವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಿದ ಧೀಮಂತ
1991 ರ ವೇಳೆಯಲ್ಲಿ ಭಾರತ ಜಗತ್ತಿನಲ್ಲಿ ದಿವಾಳಿ ಏಳುತ್ತಿರುವ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಸ್ಥಿತಿಯಲ್ಲಿದ್ದಾಗ ದೇಶವನ್ನು ಸಂಕಟದಿಂದ ಪಾರು ಮಾಡಿದವರು ಇದೇ ಮನಮೋಹನ್ ಸಿಂಗ್ ಎಂಬುದು ಈಗಿನ ತಲೆಮಾರಿನ ಬಹುತೇಕ ಮಂದಿಗೆ ಗೊತ್ತಿಲ್ಲದ ವಿಷಯವಾಗಿದೆ. ಜಾಗತೀಕರಣವನ್ನು ಒಪ್ಪಿಕೊಳ್ಳುತ್ತಲೇ ಭಾರತದ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವುದು ಸಿಂಗರಿಗೆ ಮುಖ್ಯವಾಗಿತ್ತು.
ಮೂಲತಃ ಸಿಂಗ್ ಅವರು ಇಬ್ಬರು ವಿಭಿನ್ನ ವಿಚಾರಧಾರೆಗಳ ಪ್ರಾಧ್ಯಾಪಕರಿಂದ ಅರ್ಥಶಾಸ್ತ್ರವನ್ನು ಮೈಗೂಡಿಸಿಕೊಂಡಿದ್ದರು. ಕೇಂಬ್ರಿಡ್ಜ್ ವಿ.ವಿ.ಯಲ್ಲಿ ಸಮಾಜವಾದದ ಹಿನ್ನಲೆಯುಳ್ಳ ಖ್ಯಾತ ಅರ್ಥಶಾಸ್ತ್ರಜ್ಙೆ ಜೋನ್ ರಾಬಿನ್ ಸನ್ ಮತ್ತು ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಬಂಡವಾಳಶಾಹಿ ಜಗತ್ತು ಮಾತ್ರ ಪರ್ಯಾಯ ಎಂದು ನಂಬಿಕೊಂಡಿದ್ದ ನಿಕೋಲಸ್ ಕಾಲ್ಡರ್ ಇವರಿಗೆ ಗುರುಗಳಾಗಿದ್ದ ಕಾರಣದಿಂದಾಗಿ ಇಬ್ಬರು ಗುರುಗಳ ವಿಚಾರೆಧಾರೆಯ ಜೊತೆಗೆ ತಮ್ಮದೇ ಆದ ಸುಧಾರಣೆಯ ಸೂತ್ರಗಳನ್ನು ಮನಮೋಹನ್ ಕಂಡುಕೊಂಡಿದ್ದರ ಫಲವಾಗಿ 2004 ರಿಂದ 2010 ರ ವೇಳೆಗೆ ಭಾರತ ಜಗತ್ತಿನಲ್ಲಿ ಅತ್ಯಂತ ಪ್ರಭಾವಶಾಲಿ ಆರ್ಥಿಕ ರಾಷ್ಟ್ರವಾಗಿ ಬೆಳೆಯಲು ಸಾಧ್ಯವಾಯಿತು.
ಡಾ.ಮನಮೋಹನ್ ಸಿಂಗ್ ಅವರು ಅನಿರೀಕ್ಷಿತವಾಗಿ ತಾವು ರಾಜಕೀಯ ಪ್ರವೇಶಿದ ಕ್ಷಣವನ್ನು ಬಿ.ಬಿ.ಸಿ. ರೇಡಿಯೊಗೆ ಈ ರೀತಿಯಲ್ಲಿ ವಿವರಿಸಿದ್ದಾರೆ. ‘ಜೂನ್ 1991 ರಲ್ಲಿ, ಆ ಸಮಯದಲ್ಲಿ ಭಾರತದ ಪ್ರಧಾನಮಂತ್ರಿ ಪಿವಿ ನರಸಿಂಹ ರಾವ್ ಅವರು ನನ್ನನ್ನು ಹಣಕಾಸು ಮಂತ್ರಿಯಾಗಿ ಆಯ್ಕೆ ಮಾಡಿದರು. ನರಸಿಂಹರಾವ್ ಅವರು ತಮ್ಮ ಕ್ಯಾಬಿನೆಟ್ ಅನ್ನು ರೂಪಿಸುವ ದಿನ, ತಮ್ಮ ಪ್ರಧಾನ ಕಾರ್ಯದರ್ಶಿಯನ್ನು ನನ್ನ ಬಳಿಗೆ ಕಳುಹಿಸಿದರು. ‘ನೀವು ಹಣಕಾಸು ಸಚಿವರಾಗಬೇಕೆಂದು ಪ್ರಧಾನಿ ಬಯಸುತ್ತಾರೆ‘ ಎಂದು ಕಾರ್ಯದರ್ಶಿ ನನಗೆ ಹೇಳಿದರು. ನಾನು ಆಹ್ವಾನವನ್ನು ಸ್ವೀಕರಿಸಲಿಲ್ಲ. ಅಂತಿಮವಾಗಿ ಮರುದಿನ ಬೆಳಿಗ್ಗೆ ಪಿ.ವಿ. ನರಸಿಂಹರಾವ್ ನನ್ನ ನಿವಾಸಕ್ಕೆ ಆಗಮಿಸಿದರು. ನನ್ನ ನಿರ್ಧಾರದಿಂದ ಅವರು ಕೋಪಗೊಂಡರು ಮತ್ತು ಪ್ರಮಾಣವಚನಕ್ಕೆ ರಾಷ್ಟ್ರಪತಿ ಭವನಕ್ಕೆ ಬರಬೇಕೆಂದು ಒತ್ತಾಯಿಸಿದರು. ಹಾಗಾಗಿ ನಾನು ರಾಜಕೀಯವನ್ನು ಪ್ರಾರಂಭಿಸಿದೆ‘ ಎಂದಿದ್ದರು. ಮೂಲತಃ ರಾಜಕಾರಣಿಯಲ್ಲದ ಮನಮೋಹನ್ ಸಿಂಗ್ ಅವರು ರಾಜಕೀಯಕ್ಕೆ ಬಾರದೇ ಇದ್ದರೆ, ಈಗಾಗಲೇ ಅರ್ಥಶಾಸ್ತ್ರದಲ್ಲಿ ಏಷ್ಯಾ ಖಂಡಕ್ಕೆ ನೋಬೆಲ್ ಪ್ರಶಸ್ತಿ ತಂದುಕೊಟ್ಟ ನಮ್ಮವರಾದ ಅಮರ್ತ್ಯಸೇನ್ ಮತ್ತು ನೆರೆಯ ಬಂಗ್ಲಾದ ಮಹಮದ್ ಯೂನಸ್ ಇವರಿಗಿಂತ ಮುಂಚೆ ಈ ಪ್ರಶಸ್ತಿಗೆ ಭಾಜನರಾಗುವ ಯೋಗ್ಯತೆ ಅವರಿಗಿತ್ತು.
20 ಮತ್ತು 21ನೇ ಶತಮಾನದ ಆರ್ಥಿಕ ಸ್ಥಿತಿಗತಿಗಳ ಏರುಪೇರು ಇವುಗಳ ಬಗ್ಗೆ ಅಪರೂಪದ ಒಳನೋಟಗಳುಳ್ಳ ಡಾ. ಮನಮೋಹನ್ ಸಿಂಗ್ ಅವರನ್ನು ಇವೊತ್ತಿಗೂ ಜಗತ್ತಿನಾದ್ಯಂತ ಆರ್ಥಿಕ ಸುಧಾರಣೆಗಳ ಹರಿಕಾರ ಎಂದು ಗೌರವಿಸಲ್ಪಡುತ್ತಾರೆ.
ಪ್ರಧಾನಿಯಾದ ಕ್ಷಣ
ಎಂದೂ ಪ್ರಧಾನಿಯಾಗುವ ಕನಸು ಕಾಣದಿದ್ದ ಸಿಂಗ್ ಅವರಿಗೆ ಅನಿರೀಕ್ಷಿತವಾಗಿ ಭಾರತದ ಪ್ರಧಾನಿಯಾಗುವ ಹುದ್ದೆಯೂ ಒಲಿದು ಬಂತು. 2004 ರಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದ ಯು.ಪಿ.ಎ. ಒಕ್ಕೂಟ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಾಗ, ಎಲ್ಲರ ನಿರೀಕ್ಷೆ ಸೋನಿಯಾ ಗಾಂಧಿ ಪ್ರಧಾನಿಯಾಗುತ್ತಾರೆ ಎಂಬುದಾಗಿತ್ತು. ಆದರೆ, ಸಂಘ ಪರಿವಾರದ ಪ್ರತಿಭಟನೆ ಮತ್ತು ಅವಹೇಳನ ಕಾರಿ ಮಾತುಗಳಿಂದ (ವಿದೇಶಿ ಮಹಿಳೆ ಮತ್ತು ತಡವಾಗಿ ಅಂದರೆ, 1984 ರ ನಂತರ ಭಾರತದ ಪೌರತ್ವ ಸ್ವೀಕರಿಸಿದರು ಎಂಬ ಅಪವಾದಗಳು) ನೊಂದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಅನಿರೀಕ್ಷಿತವಾಗಿ, ಡಾ. ಮನಮೋಹನ್ ಸಿಂಗ್ ಅವರ ಹೆಸರು ಸೂಚಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಲ್ಲದೆ ಸಂಘ ಪರಿವಾರದ ಬಾಯಿ ಮುಚ್ಚಿಸಿದರು.
ಆ ವೇಳೆಗೆ ಹಿಂದೂಗಳು ಬಹು ಸಂಖ್ಯೆಯಲ್ಲಿರುವ ಭಾರತದಲ್ಲಿ ರಾಷ್ಟ್ರಪತಿ ಮತ್ತು ಪ್ರಧಾನಿ ಹುದ್ದೆಗಳು ಅಲ್ಪಸಂಖ್ಯಾತ ಸಮುದಾಯದಿಂದ ಬಂದ ಅಂದರೆ, ಮುಸ್ಲಿಂ ಮತ್ತು ಸಿಖ್ ಸಮುದಾಯದ ಇಬ್ಬರು ಪ್ರತಿಭಾವಂತ ಮೇಧಾವಿಗಳಾದ ಡಾ.ಅಬ್ದುಲ್ ಕಲಾಂ ಮತ್ತು ಮನಮೋಹನ ಸಿಂಗ್ ಇವರಿಂದ ಅಲಂಕರಿಸಲ್ಪಟ್ಟಿದ್ದವು.
ವಿಶ್ವ ಕೊಂಡಾಡಿದ ಅರ್ಥಶಾಸ್ತ್ರಜ್ಞ
2004 ರಿಂದ 2009 ರವರೆಗೆ ಮೊದಲ ಅವಧಿಯಲ್ಲಿ ಸಿಂಗ್ ಅವರ ನೇತೃತ್ವದಲ್ಲಿ ಭಾರತದಲ್ಲಿ ಆದ ಆರ್ಥಿಕ ಸುಧಾರಣೆಗಳು ಮತ್ತು ಬೆಳವಣಿಗೆಗಳನ್ನು ನೋಡಿ ಇಡೀ ವಿಶ್ವವೇ ಬೆರಗುಗೊಂಡಿತು. ಸ್ವತಃ ಅಮೆರಿಕಾದ ಅಧ್ಯಕ್ಷ ರಾದ ಜಾರ್ಜ್ ಡಬ್ಲ್ಯು ಬುಶ್ ಮತ್ತು ಬರಾಕ್ ಒಬಾಮರಂತಹವರು ಆರ್ಥಿಕ ಸಲಹೆಗಳಿಗಾಗಿ ಸಿಂಗ್ ಎದುರು ಮಂಡಿಯೂರಿ ಕುಳಿತರು. ಭಾರತಕ್ಕೆ ಜಾಗತೀಕರಣದ ಹೆಬ್ಬಾಗಿಲು ತರೆದಿದ್ದು ಕೂಡ ಇದೇ ಮನಮೋಹನ ಸಿಂಗರು. 1991 ರಲ್ಲಿ ಭಾರತದ ಆರ್ಥಿಕ ದುಸ್ಥಿತಿಯ ಪರಿಸ್ಥಿತಿಯನ್ನು ಬಳಸಿಕೊಂಡ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐ.ಎಂ.ಎಫ್) ಸಾಲ ನೀಡುವಾಗ ವಿಧಿಸಿದ ಷರತ್ತುಗಳನ್ನು ಒಪ್ಪಿಕೊಂಡ ಮನಮೋಹನ ಸಿಂಗರು ರಚಾನತ್ಮಕ ಹೊಂದಾಣಿಕೆಗಳು ಕಾರ್ಯಕ್ರಮಗಳ ಮೂಲಕ ಹೊಂದಾಣಿಕೆ ಮಾಡಿಕೊಂಡರು.
ಯುಪಿಎ ಎರಡನೇ ಅವಧಿ ಹಿನ್ನಡೆ
ಡಾ. ಮನಮೋಹನ್ ಸಿಂಗ್ ಅವರ ಇಷ್ಟೆಲ್ಲಾ ಸಾಧನೆ ಮತ್ತು ಶ್ರಮ ಯು.ಪಿ.ಎ. ಸರ್ಕಾರದ ಎರಡನೇಯ ಅವಧಿಯಲ್ಲಿ ಮಣ್ಣು ಪಾಲಾಯಿತು. ದೇಶದ ಹಲವಾರು ರಾಜ್ಯಗಳಲ್ಲಿ ನೆಲೆ ಕಳೆದುಕೊಂಡ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕಾಗಿ ಪ್ರಾದೇಶಿಕ ಪಕ್ಷಗಳನ್ನು ನಂಬಿಕೊಳ್ಳಬೇಕಾಯಿತು. ಈ ನೆಲದ ಎಲ್ಲಾ ನೈಸರ್ಗಿಕ ಸಂಪನ್ಮೂಲಗಳನ್ನು ನುಂಗಿ ನೀರು ಕುಡಿದು, ಭ್ರಷ್ಟಾಚಾರದಲ್ಲಿ ಮುಳುಗೇಳುತ್ತಿರುವ ಪ್ರಾದೇಶಿಕ ಪಕ್ಷಗಳ ಅನಾಲಾಯಕ್ ನಾಯಕರು ಎರಡನೇ ಅವಧಿಯಲ್ಲಿ ಸಿಂಗ್ ಅವರ ಸಚಿವ ಸಂಪುಟದಲ್ಲಿ ಸಚಿವರಾದರು.
ಜೊತೆಗೆ ಸೋನಿಯಾ ಗಾಂಧಿಯವರ ಭಜನೆಯನ್ನು ತಮ್ಮ ಜೀವನದ ಏಕೈಕ ಗುರಿಯಾಗಿರಿಸಿಕೊಂಡ ಕೆಲವು ಕಾಂಗ್ರೆಸ್ ಭಟ್ಟಂಗಿಗಳು ಸಂಪುಟಕ್ಕೆ ಸೇರ್ಪಡೆಯಾದರು. ಇದರ ಪರಿಣಾಮವಾಗಿ 2ಜಿ ಹಗರಣ, ಕಲ್ಲಿದ್ದಲು ಹಗರಣ, ರೈಲ್ವೆ ಭ್ರಷ್ಟಾಚಾರದ ಹಗರಣಗಳಿಗೆ ಮನಮೋಹನ್ ಸಿಂಗ್ ಮೌನ ಸಾಕ್ಷಿಯಾದರು.
ಯು.ಪಿ.ಎ. ಸರ್ಕಾರದ ಹಗರಣಗಳು ಇವರನ್ನು ದುರ್ಬಲ ಪ್ರಧಾನಿಯನ್ನಾಗಿ ಪ್ರತಿಬಿಂಬಿಸಿದವು. ಜಾಗತಿಕ ಮಟ್ಟದಲ್ಲಿ ಶ್ರೇಷ್ಠ ನಾಯಕ ಮತ್ತು ಪ್ರಧಾನಿ ಎಂದು ಹೊಗಳಿಸಿಕೊಂಡಿದ್ದ ಮನಮೋಹನ ಸಿಂಗರನ್ನು 2012ರ ಸೆಪ್ಟಂಬರ್ ತಿಂಗಳಿನಲ್ಲಿ ಟೈಮ್ಸ್ ಪತ್ರಿಕೆ ಭಾರತದ ‘ವಿಫಲ ನಾಯಕ‘ ಎಂದು ಬಣ್ಣಿಸಿತು.
ಆರ್ಥಿಕ ವಿಷಯಗಳಲ್ಲಿ ಕಠಿಣ ನಿಲುವು ತಾಳುವ ಮನಮೋಹನ್ ಸಿಂಗ್ ರಾಜಕೀಯ ವಿಷಯಗಳಲ್ಲಿ ದುರ್ಬಲರಾದದ್ದು ಏಕೆ? ಸೋನಿಯಾ ಅವರ ಋಣದ ಭಾರ ಇವರನ್ನು ನಿಷ್ಕ್ರಿಯಗೊಳಿಸಿತೆ? ಇದಕ್ಕೆ ಕಾಲವೇ ಉತ್ತರಿಸಬೇಕು.
ಆದರೆ, ಮನಮೋಹನ್ ಸಿಂಗರ ಬಗ್ಗೆ ನಮ್ಮ ಅಸಮಾಧಾನಗಳು, ಸಿಟ್ಟುಗಳು ಏನೇ ಇರಲಿ. ಭಾರತದ ಇತಿಹಾಸದಲ್ಲಿ ಪ್ರಧಾನಿಯಂತಹ ಅತ್ಯುನ್ನತ ಹುದ್ದೆಗೆ ಏರಿ, ತಮ್ಮ ಕೈ ಮತ್ತು ಬಾಯಿಯನ್ನು ಶುದ್ಧವಾಗಿಟ್ಟುಕೊಂಡು, ತಮ್ಮ ಕುಟುಂಬದ ಸದಸ್ಯರನ್ನು ಅಧಿಕಾರದಿಂದ ದೂರವಿಟ್ಟ ಪ್ರಧಾನಿಗಳಲ್ಲಿ ಇವರು ಎರಡನೇಯವರು.(ಮೊದಲನೆಯವರು ಲಾಲ್ ಬಹುದ್ದೂರ್ ಶಾಸ್ತ್ರಿ).
ಮನಮೋಹನ್ ಸಿಂಗರ ಸರಳತೆ ಎಂತಹದ್ದು ಎಂಬುದನ್ನು ಖುಷ್ವಂತ್ ಸಿಂಗ್ ತಮ್ಮ ಒಂದು ಅಂಕಣದಲ್ಲಿ ದಾಖಲಿಸಿದ್ದಾರೆ. 1999 ರಲ್ಲಿ ತಮ್ಮಿಂದ ಎರಡು ಲಕ್ಷ ರೂಪಾಯಿಗಳನ್ನು ಮನಮೋಹನ್ ಸಿಂಗರು ಸಾಲ ಪಡೆದಿದ್ದರು. ಅಸ್ಸಾಂನಿಂದ ರಾಜ್ಯ ಸಭೆಗೆ ಸ್ಪರ್ಧಿಸಿದ್ದ ವೇಳೆಯಲ್ಲಿ ವಿಮಾನಯಾನ ಮತ್ತು ಟ್ಯಾಕ್ಸಿ ವೆಚ್ಚಕ್ಕಾಗಿ ಹಣ ಪಡೆದು ನಂತರ ವಾಪಸ್ ನೀಡಿದ್ದನ್ನು ನೆನಪಿಸಿಕೊಂಡಿದ್ದಾರೆ.
ಡಾ. ಮನಮೊಹನ ಸಿಂಗ್ ಅವರ ದೌರ್ಬಲ್ಯಗಳ ನಡುವೆ ಅವರ ಬಗ್ಗೆ ಗೌರವ ಉಂಟಾಗುವುದು ಈ ಕಾರಣಕ್ಕಾಗಿ. ಓರ್ವ ಶಾಸಕ ತನ್ನ ಒಂದು ಅವಧಿಯಲ್ಲಿ ಐದು ತಲೆಮಾರಿಗೆ ಆಗುವಷ್ಟು ಆಸ್ತಿ ಸಂಪಾದಿಸಲು ದರೋಡೆಗೆ ಇಳಿದಿರುವ ಸಂದರ್ಭದಲ್ಲಿ ಕೇಂದ್ರ ಸಚಿವಾರಾಗಿದ್ದು, ದೇಶದ ವಿವಿಧ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ, ಸಿಂಗ್ ಅವರು ಬದುಕುತ್ತಿರುವ ಸರಳ ಬದುಕಿನಿಂದಾಗಿ ಅವರ ದುರಂತ ನಾಯಕನ ಇಮೇಜಿನ ನಡುವೆಯೂ ಗೌರವ ಮೂಡುತ್ತದೆ.
2010 ರಲ್ಲಿ, ನ್ಯೂಸ್‌ವೀಕ್ ನಿಯತಕಾಲಿಕವು ಅವರನ್ನು ಇತರ ರಾಷ್ಟ್ರಗಳ ಮುಖ್ಯಸ್ಥರು ಗೌರವಿಸುವ ವಿಶ್ವ ನಾಯಕ ಎಂದು ಗುರುತಿಸಿತು. ಅಮೆರಿಕದ ಹೆನ್ರಿ ಕಿಸ್ಸಿಂಜರ್ ಸಿಂಗ್ ಅವರನ್ನು ‘ದೃಷ್ಟಿ, ನಿರಂತರತೆ ಮತ್ತು ಸಮಗ್ರತೆ ಹೊಂದಿರುವ ರಾಜಕೀಯನೀತಿ ತಜ್ಞ‘ ಎಂದು ಬಣ್ಣಿಸಿದರು ಮತ್ತು ಅವರ ‘ನಾಯಕತ್ವಕ್ಕಾಗಿ, ಭಾರತದಲ್ಲಿ ನಡೆಯುತ್ತಿರುವ ಆರ್ಥಿಕ ಪರಿವರ್ತನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ‘ ಎಂದು ಪ್ರಶಂಸಿಸಿದರು. 2010ರ ಫೋರ್ಬ್ಸ್ ವಿಶ್ವದ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಮನಮೋಹನ್ ಸಿಂಗ್ 18 ನೇ ಸ್ಥಾನದಲ್ಲಿದ್ದರು. ಫೋರ್ಬ್ಸ್ ನಿಯತಕಾಲಿಕವು ಸಿಂಗ್ ಅವರನ್ನು ‘ನೆಹರೂ ನಂತರ ಭಾರತದ ಅತ್ಯುತ್ತಮ ಪ್ರಧಾನಮಂತ್ರಿ ಎಂದು ಸಾರ್ವತ್ರಿಕವಾಗಿ ಪ್ರಶಂಸಿಸಲಾಗಿದೆ‘ ಎಂದು ವಿವರಿಸಿದೆ. ಆಸ್ಟ್ರೇಲಿಯನ್ ಪತ್ರಕರ್ತ ಗ್ರೆಗ್ ಶೆರಿಡನ್ ಸಿಂಗ್ ‘ಏಷ್ಯನ್ ಇತಿಹಾಸದಲ್ಲಿ ಶ್ರೇಷ್ಠ ರಾಜನೀತಿಜ್ಞರಲ್ಲಿ ಒಬ್ಬರು‘ ಎಂದು ಹೊಗಳಿದರು. 2006ರಲ್ಲಿ ಮನಮೋಹನ್ ಸಿಂಗ್ ಅವರ ಗೌರವಾರ್ಥ ಉಜ್ಬೇಕಿಸ್ತಾನ್‌ನಲ್ಲಿ ಅಂಚೆಚೀಟಿ ಬಿಡುಗಡೆಯಾಯಿತು.
ಇತ್ತೀಚಿನ ವರ್ಷಗಳಲ್ಲಿ, ರಾಜಕೀಯ ವಿರೋಧಿಗಳು ಸಿಂಗ್ ಅವರನ್ನು ಹೊಗಳಿದ್ದಾರೆ. 2018 ರಲ್ಲಿ ಅರವಿಂದ್ ಕೇಜ್ರಿವಾಲ್ ಅವರು ‘ಡಾ. ಮನಮೋಹನ್ ಸಿಂಗ್ ಅವರಂತಹ ವಿದ್ಯಾವಂತ ಪ್ರಧಾನಿಯನ್ನು ಜನರು ಕಳೆದುಕೊಳ್ಳುತ್ತಿದ್ದಾರೆ‘ ಎಂದು ಹೇಳಿದರು.
2022 ರಲ್ಲಿ, ನಿತಿನ್ ಗಡ್ಕರಿ ‘ಹೊಸ ದಿಕ್ಕನ್ನು ನೀಡಿದ ಉದಾರೀಕರಣಕ್ಕಾಗಿ ದೇಶವು ಮನಮೋಹನ್ ಸಿಂಗ್ ಅವರಿಗೆ ಋಣಿಯಾಗಿದೆ‘ ಎಂದು ಹೇಳಿದ್ದರು. ತಮ್ಮ ತೊಂಬತ್ತೆರಡನೇ ವಯಸ್ಸಿನಲ್ಲಿಯೂ ಲವಲವಿಕೆಯಿಂದ ಇರುವ ಈ ಹಿರಿಯ ಜೀವ ದೆಹಲಿಯಲ್ಲಿ ವಾಸವಾಗಿದ್ದುಕೊಂಡು ತಮ್ಮ ಬಳಿ ಸಲಹೆ ಕೇಳಿಕೊಂಡು ಬಂದವರಿಗೆ ಪಕ್ಷ ಭೇದ ಮಾಡದೆ ಸಲಹೆ ನೀಡುವ ಉದಾರತೆಯನ್ನು ಇಂದಿಗೂ ಜೀವಂತವಿರಿಸಿಕೊಂಡಿದ್ದಾರೆ. ಸೌಜನ್ಯ ಮತ್ತು ಸಾಹಾರ್ದತೆಯನ್ನು ತಮ್ಮ ಉಸಿರಿನಂತೆ ಕಾಪಾಡಿಕೊಂಡು ಬಂದ ಮನಮೋಹನ್ ಸಿಂಗ್ ಭಾರತದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದ ಪಾರು ಮಾಡಿದ ಅರ್ಥಶಾಸ್ತ್ರಜ್ಞ ಎಂಬುದನ್ನು ನಾವುಗಳು ಮರೆಯುವಂತಿಲ್ಲ.
(ಇದೀಗ ತಾನೆ ನಿಧನ ಹೊಂದಿದ ಹಾಗೂ ನನ್ನ ಮೇಲೆ ಪ್ರಭಾವ ಬೀರಿದ್ದ ಡಾ.ಮನಮೋಹನ ಸಿಂಗ್ ಅವರ ಬಗ್ಗೆ ಶನಿವಾರ ಬಿಡುಗಡೆಯಾಗುವ ‘ಎದೆಯ ಕದ ತಟ್ಟಿದವರು’ ಕೃತಿಯಲ್ಲಿ ಬರೆದ ಒಂದು ಅಧ್ಯಾಯ)
ಬರಹ: ಎನ್.ಜಗದೀಶ್ ಕೊಪ್ಪ, ಮಂಡ್ಯ