ಕನ್ನಡ ಸುದ್ದಿ  /  Nation And-world  /  India's Reliance To Develop New 5g Smartphone With Google

5G Smart Phones: ಕಡಿಮೆ ಬೆಲೆಗೆ ಸಿಗಲಿದೆ 5ಜಿ ಸ್ಮಾರ್ಟ್‌ಫೋನ್‌; ಗೂಗಲ್‌ನೊಂದಿಗೆ ಜಿಯೋ ಒಪ್ಪಂದ

ಗೂಗಲ್‌ನೊಂದಿಗೆ ಸೇರಿ ಅಭಿವೃದ್ಧಿಪಡಿಸುತ್ತಿರುವ ಈ ಫೋನ್, ಪ್ರತಿಯೊಬ್ಬರಿಗೂ ಕೈಗೆಟಕುವ ದರದಲ್ಲಿ ಲಭ್ಯವಾಗಲಿದೆ ಎಂದು ಅಂಬಾನಿ ಹೇಳಿದ್ದಾರೆ.

ಕೈಗೆಟಕುವ ಬೆಲೆಯಲ್ಲಿ ಸಿಗಲಿದೆ 5ಜಿ ಸ್ಮಾರ್ಟ್‌ಫೋನ್‌
ಕೈಗೆಟಕುವ ಬೆಲೆಯಲ್ಲಿ ಸಿಗಲಿದೆ 5ಜಿ ಸ್ಮಾರ್ಟ್‌ಫೋನ್‌

ಮುಂಬೈ: ಭಾರತದ ಟೆಲಿಕಾಂ ದೈತ್ಯ ರಿಲಯನ್ಸ್, ಇಂದು ಭಾರತೀಯರಿಗೆ ಮೇಲಿಂದ ಮೇಲೆ ಸಿಹಿ ಸುದ್ದಿ ಕೊಟ್ಟಿದೆ. ಇಂದು ನಡೆದ ಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ 5ಜಿ ಸೇವೆಗಳ ಬಗ್ಗೆ ಘೋಷಿಸಿದ ಮುಖ್ಯಸ್ಥ ಮುಖೇಶ್ ಅಂಬಾನಿ, 5ಜಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಕುರಿತಾಗಿಯೂ ಹೇಳಿದ್ದಾರೆ.

ವಿಶ್ವ ಅತಿದೊಡ್ಡ 5G ನೆಟ್‌ವರ್ಕ್ ಘೋಷಿಸುವುದಾಗಿ ರಿಲಯನ್ಸ್‌ ಜಿಯೋ ಇಂದು ಘೋಷಿಸಿದೆ. ಮುಂಬರುವ ದೀಪಾವಳಿ ವೇಳೆಗೆ ಮೊದಲ ಹಂತದ ವೇಗದ ಇಂಟರ್ನೆಟ್‌ ಲಭ್ಯವಾಗಲಿದ್ದು, ಮುಂದಿನ ವರ್ಷ ಡಿಸೆಂಬರ್‌ನಲ್ಲಿ ಭಾರತದಾದ್ಯಂತ ಈ ಸೇವೆಗಳು ಲಭ್ಯವಾಗಲಿದೆ. ಇದರೊಂದಿಗೆ ಶಿಘ್ರದಲೇ 5ಜಿ ಸ್ಮಾರ್ಟ್‌ ಫೋನ್‌ಗಳನ್ನು ಕೂಡಾ ರಿಲಯನ್ಸ್‌ ಜಿಯೋ ಬಿಡುಗಡೆ ಮಾಡಲಿದೆ. ದೇಶದಲ್ಲಿ 5ಜಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಗೂಗಲ್‌ನೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ರಿಲಯನ್ಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್‌ ಅಂಬಾನಿ ಹೇಳಿದ್ದಾರೆ.

ಗೂಗಲ್‌ನೊಂದಿಗೆ ಸೇರಿ ಅಭಿವೃದ್ಧಿಪಡಿಸುತ್ತಿರುವ ಈ ಫೋನ್, ಪ್ರತಿಯೊಬ್ಬರಿಗೂ ಕೈಗೆಟಕುವ ದರದಲ್ಲಿ ಲಭ್ಯವಾಗಲಿದೆ ಎಂದು ಅಂಬಾನಿ ಹೇಳಿದ್ದಾರೆ. ಇದರ ಬೆಲೆ ಎಷ್ಟಿರಲಿದೆ ಎಂಬ ನಿಖರ ಮಾಹಿತಿಯನ್ನು ಅವರು ನೀಡಿಲ್ಲ. ಭಾರತದಲ್ಲಿ ಸುಮಾರು 700 ಮಿಲಿಯನ್ ಜನರಲ್ಲಿ ಸ್ಮಾರ್ಟ್‌ಫೋನ್ ಇಲ್ಲ ಎಂದು ಅವರು ಹೇಳಿದ್ದಾರೆ. ಈಗ ಲಭ್ಯವಾಗುವ ಸ್ಮಾರ್ಟ್‌ಫೋನ್‌ಗಿಂತಲೂ 5ಜಿ ಸ್ಮಾರ್ಟ್‌ಫೋನ್‌ ಕೈಗೆಟಕುವ ಬೆಲೆಯಲ್ಲಿ ಇರಲಿದೆ ಎಂದು ಹೇಳಿದ್ದಾರೆ.

ಕಳೆದ ವರ್ಷ ಜಿಯೋಫೋನ್ ನೆಕ್ಸ್ಟ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ರಿಲಯನ್ಸ್ ಗೂಗಲ್‌ ಜತೆಗೆ ಒಪ್ಪಂದ ಮಾಡಿತ್ತು. ಇದಕ್ಕಾಗಿ ಜಿಯೋ ಕಂಪನಿಯಲ್ಲಿ ಗೂಗಲ್ 4.5 ಶತಕೋಟಿ ಡಾಲರ್ ಹೂಡಿಕೆ ಮಾಡಿತ್ತು. ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌ನ ಅತ್ಯಂತ ಸುಧಾರಿತ ಆವೃತ್ತಿಯನ್ನು ಗೂಗಲ್ ಮತ್ತು ಜಿಯೋ ಜಂಟಿಯಾಗಿ ಅಭಿವೃದ್ಧಿಪಡಿಸುತ್ತಿದೆ. ವಿಶೇಷವಾಗಿ ಇದನ್ನು ಭಾರತೀಯರಿಗಾಗಿ ವಿನ್ಯಾಸಗೊಳಿಸಲಾಗಿದ್ದು, ಇದು ವಿಶ್ವದ ಅತ್ಯಂತ ವೇಗದ ನೆಟ್‌ವರ್ಕ್ ಅನ್ನು ಹೊಂದಿರುತ್ತದೆ ಎಂದು ಅವರು ತಿಳಿಸಿದ್ದಾರೆ.

5G ಇಂಟರ್ನೆಟ್‌ ವೇಗವು 4G ಗಿಂತ ಸುಮಾರು 10 ಪಟ್ಟು ವೇಗವಾಗಿರುತ್ತದೆ ಎಂದು ಹೇಳಲಾಗಿದೆ. ಸ್ವಯಂಚಾಲಿತ ಕಾರುಗಳು ಮತ್ತು ಕೃತಕ ಬುದ್ಧಿಮತ್ತೆಯಂತಹ ಉದಯೋನ್ಮುಖ ತಂತ್ರಜ್ಞಾನಗಳಿಗೆ ಈ ನೆಟ್ವರ್ಕ್ ಅಗತ್ಯವಿದೆ. ಜಿಯೋ 5G ಸೇವೆಗಳು ಪ್ರತಿಯೊಬ್ಬರಿಗೂ ಕೈಗೆಟುಕುವ ದರದಲ್ಲಿ ಸಿಗಲಿದೆ. ಇದು ಪ್ರತಿಯೊಬ್ಬರನ್ನು ಪ್ರತಿ ಸ್ಥಳದೊಂದಿಗೆ ಅತ್ಯುನ್ನತ ಗುಣಮಟ್ಟದೊಂದಿಗೆ ಸಂಪರ್ಕಿಸುತ್ತದೆ ಎಂದು ಅಂಬಾನಿ ಹೇಳಿದ್ದಾರೆ.

ಈ ತಿಂಗಳ ಆರಂಭದಲ್ಲಿ ನಡೆದ ತರಾಂಗಾತರ ಹರಾಜು ಪ್ರಕ್ರಿಯೆಯಲ್ಲಿ, ಜಿಯೋ ಸಂಸ್ಥೆಯು ಭಾರತದ 5G ಸ್ಪೆಕ್ಟ್ರಮ್ ಹರಾಜನ್ನು ಗೆದ್ದುಕೊಂಡಿತ್ತು. ಬರೋಬ್ಬರಿ 11 ಶತಕೋಟಿ ಡಾಲರ್‌ ಮೌಲ್ಯದ ತರಂಗಾತರ ಹರಾಜನ್ನು ತನ್ನದಾಗಿಸಿಕೊಂಡಿತು.

5ಜಿ ಇಂಟರ್ನೆಟ್‌ ಹಾಗೂ ಸ್ಮಾರ್ಟ್‌ಫೋನ್‌ ಘೋಷಣೆ ಮಾತ್ರವಲ್ಲದೆ, ವೈಫೈ ಹಾಟ್‌ಸ್ಪಾಟ್‌ ಕೂಡಾ ಬಿಡುಗಡೆಗೊಳಿಸುವುದಾಗಿ ಜಿಯೋ ಘೋಷಿಸಿದೆ. ಜಿಯೋ ಅಧ್ಯಕ್ಷ ಆಕಾಶ್ ಅಂಬಾನಿ, ಜಿಯೋ ಏರ್‌ಫೈಬರ್ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ. ಜಿಯೋ ಏರ್‌ ಫೈಬರ್, ವೈಫೈ ನೀಡುವ ಹಾಟ್‌ಸ್ಪಾಟ್‌ ಆಗಿದೆ. ಇದು ಗ್ರಾಹಕರಿಗೆ ಮನೆ ಮತ್ತು ಕಚೇರಿಗಳಲ್ಲಿ ಫೈಬರ್ ತರಹದ ವೇಗವನ್ನು ಇಂಟರ್ನೆಟ್‌ ಪಡೆಯಲು ಅನುವು ಮಾಡಿಕೊಡಲಿದೆ. ಈಗಾಗಲೇ ಹಲವು ಟೆಲಿಕಾಂ ಕಂಪನಿಗಳ ವೈಫೈ ಹಾಟ್‌ಸ್ಪಾಟ್ ಮಾರುಕಟ್ಟೆಯಲ್ಲಿದೆ. ಜಿಯೋ 4ಜಿ ಹಾಟ್‌ಸ್ಪಾಟ್‌ ಕೂಡಾ ಇದೆ. ಈ ನಡುವೆ 5G ಹಾಟ್‌ಸ್ಪಾಟನ್ನು ಜಿಯೋ ಹೊರತರುತ್ತಿದೆ.

IPL_Entry_Point

ವಿಭಾಗ