Arunachal Pradesh: ಚೀನಾ ಈ ರೀತಿ ಮಾಡೋದು ಇದು ಮೊದಲಲ್ಲ, ಎಂದೆಂದಿಗೂ ಅರುಣಾಚಲ ನಮ್ಮದು, ಭಾರತದ ತೀಕ್ಷ್ಣ ಪ್ರತಿಕ್ರಿಯೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Arunachal Pradesh: ಚೀನಾ ಈ ರೀತಿ ಮಾಡೋದು ಇದು ಮೊದಲಲ್ಲ, ಎಂದೆಂದಿಗೂ ಅರುಣಾಚಲ ನಮ್ಮದು, ಭಾರತದ ತೀಕ್ಷ್ಣ ಪ್ರತಿಕ್ರಿಯೆ

Arunachal Pradesh: ಚೀನಾ ಈ ರೀತಿ ಮಾಡೋದು ಇದು ಮೊದಲಲ್ಲ, ಎಂದೆಂದಿಗೂ ಅರುಣಾಚಲ ನಮ್ಮದು, ಭಾರತದ ತೀಕ್ಷ್ಣ ಪ್ರತಿಕ್ರಿಯೆ

India reaction after China renames places in Arunachal: ಚೀನಾ ಈ ರೀತಿಯ ಪ್ರಯತ್ನಗಳನ್ನು ಮಾಡುವುದು ಇದೇ ಮೊದಲಲ್ಲ. ಚೀನಾದ ಈ ನಡೆಯನ್ನು ನಾವು ಸಾರಾಸಗಟಾಗಿ ತಿರಸ್ಕರಿಸುತ್ತೇವೆ. ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಭಾರತ ಪ್ರತಿಕ್ರಿಯೆ ನೀಡಿದೆ.

ವಿದೇಶಾಂಗ ವ್ಯವಹಾರ ಸಚಿವ ಎಸ್‌ ಜೈಶಂಕರ್‌  (HT PHOTO)
ವಿದೇಶಾಂಗ ವ್ಯವಹಾರ ಸಚಿವ ಎಸ್‌ ಜೈಶಂಕರ್‌ (HT PHOTO)

ನವದೆಹಲಿ: ಭಾರತದ ಗಡಿ ಪ್ರದೇಶದಲ್ಲಿ ಮೂಗು ತೂರಿಸುವ ಚೀನಾದ ನಿಲುವು ಮುಂದುವರೆದಿದೆ. ಅರುಣಾಚಲ ಪ್ರದೇಶದ 11 ಸ್ಥಳಗಳಿಗೆ ಮರುನಾಮಕರಣ ಮಾಡಿರುವ ಚೀನಾ, ಅದು ದಕ್ಷಿಣ ಟಿಬೆಟ್ ಎಂದಿದೆ. ಚೀನಾದ ಈ ಉದ್ಧಟತನದ ವರ್ತನೆಗೆ ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. "ಅರುಣಾಚಲ ಪ್ರದೇಶ ಎಂದೆಂದೂ ಭಾರತದ ಅವಿಭಾಜ್ಯ ಅಂಗ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.

"ಇಂತಹ ವರದಿಗಳನ್ನು ನೋಡಿದ್ದೇವೆ. ಚೀನಾ ಈ ರೀತಿಯ ಪ್ರಯತ್ನಗಳನ್ನು ಮಾಡುವುದು ಇದೇ ಮೊದಲಲ್ಲ. ಚೀನಾದ ಈ ನಡೆಯನ್ನು ನಾವು ಸಾರಾಸಗಟಾಗಿ ತಿರಸ್ಕರಿಸುತ್ತೇವೆ. ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗವಾಗಿದೆ. ಹೊಸ ನಾಮಕರಣ ಮಾಡುವುದು ವಾಸ್ತವವನ್ನು ಬದಲಾಯಿಸದು" ಎಂದು ಅರಿಂದಮ್ ಬಾಗ್ಚಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬದಲಾದ ಹೆಸರುಗಳಲ್ಲಿ ಪರ್ವತ ಶಿಖರಗಳು, ನದಿಗಳು ಮತ್ತು ವಸತಿ ಪ್ರದೇಶಗಳು ಸೇರಿವೆ. ಈ ರೀತಿ ಏಕಪಕ್ಷೀಯವಾಗಿ ಚೀನಾವು ಹಲವು ಬಾರಿ ಅರುಣಾಚಲ ಪ್ರದೇಶದ ಸ್ಥಳಗಳಿಗೆ ಏಕಪಕ್ಷೀಯವಾಗಿ ಮರುನಾಮಕರಣ ಮಾಡಿದೆ. ಈಗಿನದ್ದು ಸೇರಿದರೆ ಈ ರೀತಿ ಮರುನಾಮಕರಣ ಮಾಡುತ್ತಿರುವುದು ಮೂರನೇ ಬಾರಿ. ಈ ಹಿಂದೆ ಏಪ್ರಿಲ್ 2017 ರಲ್ಲಿ ಮತ್ತು ಡಿಸೆಂಬರ್ 2021 ರಲ್ಲಿ ಈ ರೀತಿ ಹೆಸರು ಬದಲಾಯಿಸಿತ್ತು.

ಈ ಹಿಂದೆ ಮರುನಾಮಕರಣ ಮಾಡಿರುವ ಚೀನಾದ ನಡೆಯನ್ನು ಭಾರತ ತಕ್ಷಣ ತಿರಸ್ಕರಿಸಿದೆ. ಈಶಾನ್ಯ ರಾಜ್ಯವು ಯಾವಾಗಲೂ ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವೆಂದು ಭಾರತ ಪುನರುಚ್ಚರಿಸಿದೆ.

ಸ್ಟೇಟ್ ಕೌನ್ಸಿಲ್ (ಚೀನಾ ಕ್ಯಾಬಿನೆಟ್) ಸಂಬಂಧಿತ ನಿಯಮಗಳ ಅನುಸಾರ ಭೌಗೋಳಿಕ ಹೆಸರುಗಳ ನಿರ್ವಹಣೆಯ ಕುರಿತಾಗಿ ನಮ್ಮ ಸಚಿವಾಲಯವು ಸಂಬಂಧಿತ ಇಲಾಖೆಗಳೊಂದಿಗೆ ದಕ್ಷಿಣ ಟಿಬೆಟ್‌ನಲ್ಲಿ ಕೆಲವು ಭೌಗೋಳಿಕ ಹೆಸರುಗಳನ್ನು ಪ್ರಮಾಣೀಕರಿಸಿದೆ" ಎಂದು ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯ ಭಾನುವಾರ ಕಿರು ಹೇಳಿಕೆಯಲ್ಲಿ ತಿಳಿಸಿತ್ತು.

ಇದರರ್ಥ ಟಿಬೆಟಿಯನ್‌ನಲ್ಲಿರುವ ಸ್ಥಳಗಳ ಹೆಸರುಗಳು ಈಗಿನಿಂದ ಪಿನ್‌ಯಿನ್‌ನಲ್ಲಿ (ಚೀನಾ ಮ್ಯಾಪ್‌ಗಳಲ್ಲಿ) ಲಭ್ಯವಿರುತ್ತವೆ. ಹೆಸರುಗಳ ಬದಲಾವಣೆಯು 11 ರಲ್ಲಿ ಪಟ್ಟಿ ಮಾಡಲಾದ ಅರುಣಾಚಲ ಪ್ರದೇಶದ ಸ್ಥಳಗಳ ಮೇಲೆ ಯಾವುದೇ ನೇರ ಪರಿಣಾಮ ಬೀರುವುದಿಲ್ಲ.

ನಮಗೆ ಹಕ್ಕಿದೆ ಎಂದ ಚೀನಾ

ಭಾರತವು ಬೀಜಿಂಗ್‌ನ ಈ ಹೆಸರು ಬದಲಾವಣೆ ಕ್ರಮವನ್ನು ತಿರಸ್ಕರಿಸಿದ ಬಳಿಕ ಚೀನಾ ಮಾರುತ್ತರ ನೀಡಿದೆ. ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಪ್ರಕಾರ "ಚೀನಾ ಮಂಗಳವಾರ ತನ್ನ ದಕ್ಷಿಣ ಟಿಬೆಟಿಯನ್ ಪ್ರದೇಶದ ಕೆಲವು ಸ್ಥಳಗಳ ಹೆಸರನ್ನು ಪ್ರಮಾಣೀಕರಿಸಿದೆ ಮತ್ತು ಹಾಗೆ ಮಾಡಲು ಸಾರ್ವಭೌಮ ಹಕ್ಕನ್ನು ಹೊಂದಿದೆ" ಎಂದಿದೆ.

2017 ರಲ್ಲಿ ಟಿಬೆಟಿಯನ್ ಧಾರ್ಮಿಕ ಗುರು ದಲೈ ಲಾಮಾ ಅರುಣಾಚಲ ಪ್ರದೇಶವನ್ನು ತೊರೆದ ಒಂದು ದಿನದ ಬಳಿಕ ಏಪ್ರಿಲ್ 13 ರಂದು ಹೆಸರು ಬದಲಾವಣೆ ಮಾಡಲಾಯಿತು. ಬೀಜಿಂಗ್‌ ಪ್ರಕಾರ ದಲೈ ಲಾಮಾ ವಿಭಜಿತವಾದಿ. ದಲೈ ಲಾಮಾರು ಟಿಬೆಟ್‌ ಅನ್ನು ಸ್ವತಂತ್ರ ದೇಶವಾಗಿ ರಚಿಸಲು ಬಯಸುತ್ತಾರೆ ಎಂದು ಚೀನಾ ಹೇಳುತ್ತಾ ಬಂದಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.