IndiGo flight tail strike: ಲ್ಯಾಂಡಿಂಗ್ ಸಮಯದಲ್ಲಿ ನೆಲ ಸವರಿದ ಇಂಡಿಗೋ ವಿಮಾನದ ಹಿಂಬದಿ, ಏನಿದು ಟೇಲ್ ಸ್ಟ್ರೈಕ್? ಅಪಾಯಕಾರಿಯೇ?
ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ವಿಮಾನದ ಹಿಂಭಾಗಕ್ಕೆ ಹಾನಿಯಾಗಿದೆ.
ಕೋಲ್ಕತ್ತಾ: ಲ್ಯಾಂಡಿಂಗ್ ಸಮಯದಲ್ಲಿ ವಿಮಾನದ ಹಿಂಬದಿಯು ನೆಲವನ್ನು ಸವರುತ್ತ ಸಾಗಿದರೆ ಹೇಗಿರುತ್ತದೆ? ವಿಮಾನದ ರನ್‌ವೇ ಮತ್ತು ವಿಮಾನದ ಮೇಲ್ಮೈನಲ್ಲಿ ಘರ್ಷಣೆ ಉಂಟಾಗಿ ಬೆಂಕಿ ಹೊತ್ತಿಕೊಳ್ಳಬಹುದು, ಇಡೀ ವಿಮಾನವೇ ಹೊತ್ತಿ ಉರಿಯಬಹುದು.
ಇಂತಹದ್ದೇ ಒಂದು ಘಟನೆ ಜನವರಿ 2ರಂದು ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ನಡೆದಿದ್ದು, ಅದೃಷ್ಟವಶಾತ್ ವಿಮಾನದ ಹಿಂಬದಿ ನೆಲ ಸವರಿದರೂ ಯಾವುದೇ ಅಪಾಯವಾಗದೆ ಸುರಕ್ಷಿತವಾಗಿ ವಿಮಾನ ಲ್ಯಾಂಡ್ ಆಗಿದೆ.
ಈ ಕುರಿತು ಇಂಡಿಗೋ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. "2023ರ ಜನವರಿ 2ರಂದು A321, VT-ILR ಕಾರ್ಯಾಚರಣೆಯಲ್ಲಿದ್ದ 6E 114 ವಿಮಾನವು ಲ್ಯಾಂಡಿಂಗ್ ಸಮಯದಲ್ಲಿ ಟೇಲ್ ಸ್ಟೈಕ್ ಆಗಿದೆ. ಕೋಲ್ಕತ್ತಾ ವಿಮಾನದಲ್ಲಿ ಈ ಘಟನೆ ನಡೆದಿದ್ದು, ವಿಮಾನದ ಹಾರಾಟವನ್ನು ಮುಂದಿನ ಆದೇಶದವರೆಗೆ ನಿಲ್ಲಿಸಲಾಗಿದೆ. ಇದರ ರಿಪೇರಿ ಮತ್ತು ಮೌಲ್ಯಮಾಪನ ಹಾಗೂ ಹೆಚ್ಚಿನ ತನಿಖೆಗೆ ಆದೇಶಿಸಲಾಗಿದೆʼʼ ಎಂದು ಇಂಡಿಗೋ ಪ್ರಕಟಣೆಯಲ್ಲಿ ತಿಳಿಸಿದೆ.
ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ವಿಮಾನದ ಹಿಂಭಾಗಕ್ಕೆ ಹಾನಿಯಾಗಿದೆ. ದುರಸ್ತಿಗಾಗಿ ವಿಮಾನವನ್ನು ಕೋಲ್ಕತ್ತಾದಲ್ಲಿಯೇ ಲ್ಯಾಂಡಿಂಗ್ ಮಾಡಲಾಗಿದೆ. ಈ ಕುರಿತು ತನಿಖೆ ನಡೆಸಲಾಗುತ್ತದೆ ಎಂದು ಇಂಡಿಗೋ ತಿಳಿಸಿದೆ.
ಟೇಕಾಫ್ ಅಥವಾ ಲ್ಯಾಂಡಿಂಗ್ ಸಮಯದಲ್ಲಿ ವಿಮಾನದ ಬಾಲ ಅಥವಾ ಹಿಂಭಾಗ ಅಥವಾ ಎಂಪೆನೇಜ್ ನೆಲಕ್ಕೆ ಅಥವಾ ಯಾವುದೇ ವಸ್ತುವಿಗೆ ಸವರಿದರೆ, ಡಿಕ್ಕಿ ಹೊಡೆದರೆ ಅದನ್ನು ಟೇಲ್ ಸ್ಟ್ರೈಕ್ ಎಂದು ಕರೆಯಲಾಗುತ್ತದೆ.
"ಢಾಕಾ, ಬಾಂಗ್ಲಾದೇಶ ಮತ್ತು ಕೋಲ್ಕತ್ತಾ ಯಾನ ನಡೆಸುತ್ತಿದ್ದ ವಿಮಾನದಲ್ಲಿ ವಿಪರೀತವೆನಿಸುವ ಟೇಲ್ ಸ್ಟ್ರೈಕ್ ಆಗಿದೆ. ವಿಮಾನ ಲ್ಯಾಂಡಿಂಗ್ ಆದ ಬಳಿಕ ಈ ಟೇಲ್ ಸ್ಟ್ರೈಕ್ ಗೋಚರವಾಗಿದೆʼʼ ಎಂದು ಜೆಎಸಿಡಿಇಸಿ ಫ್ಲೈಟ್ ಸೇಫ್ಟಿ ಟ್ವೀಟ್ ಮಾಡಿದೆ.
ಇದಕ್ಕೂ ಮೊದಲು ಬೇರೊಂದು ಇಂಡಿಗೋ ವಿಮಾನದಲ್ಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೇಕಾಫ್ ಆದ ಕೆಲವೇ ಸಮಯದಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು. ತಾಂತ್ರಿಕ ದೋಷ ಕಂಡುಬಂದ ಬಳಿಕ ಮತ್ತೆ ಈ ವಿಮಾನವನ್ನು ದೆಹಲಿ ಅಂತಾರಾಷ್ಟ್ರೀಯ ವಿಮಾನದಲ್ಲಿ ಲ್ಯಾಂಡ್ ಮಾಡಲಾಯಿತು.
ಟೇಲ್ ಸ್ಟ್ರೈಕ್ ಹೇಗೆ ಉಂಟಾಗುತ್ತದೆ?
ವಿಮಾನವೊಂದು ಟೇಕಾಫ್ ಅಥವಾ ಲ್ಯಾಂಡಿಂಗ್ ಸಮಯದಲ್ಲಿ ನೆಲ ಅಥವಾ ಯಾವುದಾದರೂ ಸ್ಥಿರ ವಸ್ತುವನ್ನು ತಾಗಿದಾಗ ಟೇಲ್ ಸ್ಟ್ರೈಕ್ ಉಂಟಾಗುತ್ತದೆ. ಆದರೆ, ಹೆಚ್ಚಿನ ಟೇಲ್ ಸ್ಟ್ರೈಕ್ ಘಟನೆಗಳು ಟೇಕಾಫ್ ಆದಾಗ ಸಂಭವಿಸುತ್ತವೆ. ಕೆಲವೊಮ್ಮೆ ಲ್ಯಾಂಡಿಂಗ್ ಸಮಯದಲ್ಲಿಯೂ ಉಂಟಾಗುತ್ತದೆ. ನೆಲ ಬಿಟ್ಟು ಆಕಾಶಕ್ಕೆ ಹಾರುವ ಸಮಯದಲ್ಲಿ ಕೆಲವೊಮ್ಮೆ ವಿಮಾನದ ಬಾಲ ಅಥವಾ ಹಿಂಬದಿ ನೆಲ ಅಥವಾ ಯಾವುದಾದರೂ ಸ್ಥಿರ ವಸ್ತುವಿಗೆ ತಾಗುವುದುಂಟು. ಟೇಲ್ ಸ್ಟ್ರೈಕ್‌ನಿಂದ ವಿಮಾನದ ಮೇಲೆ ಅತೀವ ಒತ್ತಡವುಂಟಾಗಬಹುದು.
ಅಪಾಯ ಏನು?
ಲ್ಯಾಂಡಿಂಗ್ ಸಮಯದಲ್ಲಿ ಅಥವಾ ಟೇಕಾಫ್ ಸಮಯದಲ್ಲಿ ಉಂಟಾಗುವ ಸಣ್ಣ ಪ್ರಮಾಣದ ಸವರುವಿಕೆ ಅಪಾಯಕಾರಿಯಲ್ಲ. ಆದರೆ, ಇದು ವಿಮಾನದ ಫ್ರೇಮ್‌ಗಳನ್ನು ದುರ್ಬಲಗೊಳಿಸಬಹುದು. ಒಮ್ಮೆ ಏರ್ ಸ್ಟ್ರೈಕ್ ಆದ ವಿಮಾನವನ್ನು ಕಡೆಗಣಿಸಿದರೆ ಮುಂದೊಂದು ದಿನ ಆ ವಿಮಾನದ ಯಾವುದಾದರೂ ಭಾಗಗಳು, ಫ್ರೇಮ್‌ಗಳು ಕಳಚಿ ಬೀಳಬಹುದು.