ಆಪರೇಷನ್ ಸಿಂದೂರ: ಭಾರತ ರಫೇಲ್ ಯುದ್ಧ ವಿಮಾನವನ್ನು ಕಳೆದುಕೊಂಡಿದೆಯೇ, ಪಾಕಿಸ್ತಾನದ ಹೇಳಿಕೆಗೆ ಭಾರತದ ಸೇನಾಧಿಕಾರಿಗಳು ಹೇಳಿದ್ದಿಷ್ಟು
ಆಪರೇಷನ್ ಸಿಂದೂರ: ಪಹಲ್ಗಾಮ್ ಉಗ್ರ ದಾಳಿಗೆ ಪ್ರತಿಯಾಗಿ ಭಯೋತ್ಪಾದನೆ ನಿಗ್ರಹಕ್ಕೆ ಶುರುಮಾಡಿರುವ ಆಪರೇಷನ್ ಸಿಂದೂರ ಕಾರ್ಯಾಚರಣೆಯ ಉದ್ದೇಶಗಳು ಒಂದೊಂದಾಗಿ ಈಡೇರುತ್ತಿವೆ ಎಂದು ಭಾರತದ ಸೇನಾಧಿಕಾರಿಗಳು ಹೇಳಿದರು. ಭಾರತ ರಫೇಲ್ ಯುದ್ಧ ವಿಮಾನವನ್ನು ಕಳೆದುಕೊಂಡಿದೆಯೇ, ಪಾಕಿಸ್ತಾನದ ಹೇಳಿಕೆ ಬಗ್ಗೆ ಅವರು ಹೇಳಿದ್ದು ಇಷ್ಟು.

ಆಪರೇಷನ್ ಸಿಂದೂರ: ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯನ್ನು ಭಾರತ ಮುಂದುವರಿಸಿದೆ. ಆಪರೇಷನ್ ಸಿಂದೂರ ಕಾರ್ಯಾಚರಣೆ ಮುಂದುವರಿಸಲಾಗಿದ್ದು, ಇದುವರೆ ಅದರ ಪರಿಣಾಮ ಮತ್ತು ಫಲಿತಾಂಶ ಗಮನಿಸಿದರೆ, ಒಂದಷ್ಟು ಉದ್ದೇಶಗಳು ಈಡೇರಿವೆ ಎಂದು ಬಾರತೀಯ ಸೇನಾಧಿಕಾರಿಗಳು ಭಾನುವಾರ (ಮೇ 11) ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಏರ್ ಮಾರ್ಷಲ್ ಎಕೆ ಭಾರ್ತಿ, ಲೆಫ್ಟಿನೆಂಟ್ ಕರ್ನಲ್ ರಾಜೀವ್ ಘಾಯ್, ಮೇಜರ್ ಜನರಲ್ ಎಸ್ ಎಸ್ ಶರ್ಮಾ, ವೈಸ್ ಅಡ್ಮಿರಲ್ ಎಎನ್ ಪ್ರಮೋದ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ಭಾರತ ರಫೇಲ್ ಯುದ್ಧ ವಿಮಾನವನ್ನು ಕಳೆದುಕೊಂಡಿದೆಯೇ?
ಭಾರತ ರಫೇಲ್ ಯುದ್ಧ ವಿಮಾನವನ್ನು ಕಳೆದುಕೊಂಡಿದೆಯೇ, ಪಾಕಿಸ್ತಾನದ ಹೇಳಿಕೆ ಕುರಿತಾಗಿ ಭಾರತದ ಸುದ್ದಿಗಾರರು ಪ್ರಶ್ನಿಸಿದಾಗ, ಯಾವುದೇ ಯುದ್ಧ ಸನ್ನಿವೇಶದಲ್ಲಿ ನಾಶ ನಷ್ಟು ಸಾಮಾನ್ಯ ಎಂದಷ್ಟೇ ಏರ್ ಮಾರ್ಷಲ್ ಎಕೆ ಭಾರ್ತಿ ಪ್ರತಿಕ್ರಿಯಿಸಿದರು. ಪಾಕಿಸ್ತಾನದ ಹೇಳಿಕೆಯನ್ನು ನಿರಾಕರಿಸುವುದಾಗಲೀ, ಅದನ್ನು ಪುರಸ್ಕರಿಸುವುದನ್ನಾಗಿ ಏರ್ ಮಾರ್ಷಲ್ ಎಕೆ ಭಾರ್ತಿ ಮಾಡಲಿಲ್ಲ.
"ನಾವು ಯುದ್ಧ ಸನ್ನಿವೇಶದಲ್ಲಿದ್ದೇವೆ. ನಾಶ ನಷ್ಟಗಳು ಅದರ ಒಂದು ಭಾಗವಾಗಿದೆ. ನಾವು ನಮ್ಮ ಉದ್ದೇಶವನ್ನು ಸಾಧಿಸಿದ್ದೇವಾ ಎಂಬುದು ಪ್ರಶ್ನೆಯಾದರೆ, ಅದಕ್ಕೆ ಉತ್ತರವು ಹೌದು ಎಂದು ಭಾರತೀಯ ಸೇನೆ ಭಾನುವಾರ ಸ್ಪಷ್ಟವಾಗಿ ಹೇಳಿದೆ. ಈ ಸಂದರ್ಭದಲ್ಲಿ ನಾವು ಇನ್ನೂ ಯುದ್ಧದಲ್ಲಿದ್ದೇವೆ. ಹಾಗಾಗಿ, ಎದುರಾಳಿಗೆ ಉಪಯೋಗವಾಗಬಲ್ಲ ಮಾಹಿತಿಯನ್ನು ಒದಗಿಸಲು ನಾವು ಬಯಸುವುದಿಲ್ಲ. ನಮ್ಮ ಎಲ್ಲ ಪೈಲಟ್‌ಗಳು ಸುರಕ್ಷಿತವಾಗಿದ್ದಾರೆ ಎಂದು ಸೇನೆ ಹೇಳಿಕೊಂಡಿದೆ.
ಪಾಕಿಸ್ತಾನದ 35 ರಿಂದ 40 ಯೋಧರು ಪ್ರತಿದಾಳಿಗೆ ಬಲಿ
ಭಾರತ- ಪಾಕಿಸ್ತಾನದ ಲೈನ್ ಆಫ್ ಕಂಟ್ರೋಲ್ ಭಾಗದಲ್ಲಿ ಪಾಕಿಸ್ತಾನ ನಡೆಸಿದ ದಾಳಿಗೆ ಪ್ರತಿದಾಳಿ ನಡೆಸಿದ ಸಂದರ್ಭದಲ್ಲಿ ಪಾಕಿಸ್ತಾನದ 35 ರಿಂದ 40 ಯೋಧರು ಮೃತಪಟ್ಟಿದ್ದಾರೆ. ಮೇ 7 ರಿಂದ ಮೇ 10 ನಡುವೆ ಪಾಕಿಸ್ತಾನ ತನ್ನ ಯೋಧರನ್ನು ಕಳೆದುಕೊಂಡಿದೆ ಎಂದು ಭಾರತದ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೊಂದೆಡೆ, ಪಾಕಿಸ್ತಾನ ನಡೆಸಿದ ದಾಳಿಗೆ, ಅದೇ ವೇಗದಲ್ಲಿ ಪ್ರತಿದಾಳಿ, ನಿಶ್ಚಿತ ಗುರಿಯ ನಾಶವನ್ನು ಭಾರತೀಯ ಸೇನೆ ಮಾಡಿದೆ ಎಂಬುದನ್ನು ಸೇನಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಭಾರತದ ಐವರು ಯೋಧರನ್ನು ನಾವು ಕಳೆದುಕೊಂಡಿದ್ದೇವೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
"ಸಶಸ್ತ್ರ ಪಡೆಗಳ ನನ್ನ ಐದು ಸಹೋದ್ಯೋಗಿಗಳನ್ನು ನಾವು ಕಳೆದುಕೊಂಡಿದ್ಧೇವೆ. ಈ ಕಾರ್ಯಾಚರಣೆ ವೇಳೆ ಅವರು ಹುತಾತ್ಮರಾದರು. ಅವರಿಗೆ ಗೌರವ ಸಲ್ಲಿಸುತ್ತೇನೆ. ಅವರ ಕುಟುಂಬದವರ ಜತೆಗೆ ನಾವಿದ್ದೇವೆ. ಈ ಜೀವಿತಾವಧಿಯಲ್ಲಿ ಮತ್ತು ಅದಕ್ಕೂ ಮೀರಿ ನಾವು ಅವರಿಗೆ ನಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸುತ್ತೇವೆ. ಅವರ ಜೀವನದಲ್ಲಿ ಈ ಕುಸಿತಗಳು ಯಾವಾಗಲೂ ಒಂದು ಕೃತಜ್ಞತೆಯ ಪದಗಳನ್ನು ನೆನಪಿನಲ್ಲಿಟ್ಟುಕೊಳ್ಳುತ್ತೇವೆ ಎಂದು ಭಾರತದ ಸೇನಾಧಿಕಾರಿಗಳು ಸ್ಪಷ್ಟಪಡಿಸಿದರು.