'ಮಿಡಲ್ ಕ್ಲಾಸ್ ಜನರು ಹುಸಿ ಭ್ರಮೆಗಳಲ್ಲಿ ಜೀವಿಸಲು ಕೊಟ್ಟಿರುವ ಅಡಿಕ್ಟಿವ್ ಡ್ರಗ್‌ಗಳು': ವೈಎನ್ ಮಧು ಬರಹ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  'ಮಿಡಲ್ ಕ್ಲಾಸ್ ಜನರು ಹುಸಿ ಭ್ರಮೆಗಳಲ್ಲಿ ಜೀವಿಸಲು ಕೊಟ್ಟಿರುವ ಅಡಿಕ್ಟಿವ್ ಡ್ರಗ್‌ಗಳು': ವೈಎನ್ ಮಧು ಬರಹ

'ಮಿಡಲ್ ಕ್ಲಾಸ್ ಜನರು ಹುಸಿ ಭ್ರಮೆಗಳಲ್ಲಿ ಜೀವಿಸಲು ಕೊಟ್ಟಿರುವ ಅಡಿಕ್ಟಿವ್ ಡ್ರಗ್‌ಗಳು': ವೈಎನ್ ಮಧು ಬರಹ

ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರ '70 ಗಂಟೆ ದುಡಿಮೆ' ಹೇಳಿಕೆಯ ಬಗ್ಗೆ ಕನ್ನಡದ ಕಥೆಗಾರ, ಐಟಿ ಉದ್ಯೋಗಿ ವೈಎನ್‌ ಮಧು ಮಾಡಿರುವ ವಿಶ್ಲೇಷಣೆ ಇಲ್ಲಿದೆ. ಬಡ, ಮಧ್ಯಮ, ಶ್ರೀಮಂತ ವರ್ಗಗಳ ಮನಃಸ್ಥಿತಿಗಳನ್ನು ಈ ಬರಹದಲ್ಲಿ ತೆರೆದಿಟ್ಟಿದ್ದಾರೆ. "ಒಬ್ಬರು ಧರ್ಮದ ಹೆಂಡ, ಉಳಿದೋರು ಜಾತಿ ಹೆಂಡ ಕುಡಿಸುತ್ತಾ ನಮ್ಮನ್ನು ಒಂಥರ ಮತ್ತಿನಲ್ಲಿಟ್ಟಿದ್ದಾರೆ" ಎಂದಿದ್ದಾರೆ

ಮಣಿಪಾಲ್ ಗ್ಲೋಬಲ್ ಎಜುಕೇಶನ್ ಮುಖ್ಯಸ್ಥ ಮೋಹನ್ ದಾಸ್ ಪೈ (ಎಡಚಿತ್ರ), ಐಟಿ ಉದ್ಯೋಗಿ ಮತ್ತು ಲೇಖಕ ವೈ.ಎನ್.ಮಧು (ಮಧ್ಯದ ಚಿತ್ರ), ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ
ಮಣಿಪಾಲ್ ಗ್ಲೋಬಲ್ ಎಜುಕೇಶನ್ ಮುಖ್ಯಸ್ಥ ಮೋಹನ್ ದಾಸ್ ಪೈ (ಎಡಚಿತ್ರ), ಐಟಿ ಉದ್ಯೋಗಿ ಮತ್ತು ಲೇಖಕ ವೈ.ಎನ್.ಮಧು (ಮಧ್ಯದ ಚಿತ್ರ), ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ

ನಾರಾಯಣಮೂರ್ತಿಯವರ 70 ಗಂಟೆ ಕೆಲಸ ಹೇಳಿಕೆ ಹಿನ್ನೆಲೆಯಲ್ಲಿ ಅದರ ಸಂಪೂರ್ಣ ವಿಡಿಯೋ ನೋಡಿದೆ. ಸಂದರ್ಶನ ನಡೆಸಿದವರು ಮೋಹನ್ ದಾಸ್ ಪೈ. ಅದರ ಸಾರಾಂಶ ಇಷ್ಟು. ಪೈ ಪ್ರಕಾರ ಭಾರತ ಸ್ವಾತಂತ್ರ್ಯ ಪಡೆದಾಗ ಏಶಿಯಾದ ಶ್ರೀಮಂತ ದೇಶಗಳಲ್ಲಿ ಒಂದಾಗಿತ್ತು. ನೆಹರೂ ಸಮಾಜವಾದಕ್ಕೆ ಜೋತುಬಿದ್ದು 90 ರಷ್ಟರಲ್ಲಿ ನಿರ್ಗತಿಕ ದೇಶವನ್ನಾಗಿಸಿದರು. ಸಾಲ 30 ಬಿಲಿಯನ್ ನಿಂದ 80 ಬಿಲಿಯನ್ ಗೆ ಏರಿತ್ತು. ಮೂರ್ತಿ ಪ್ರಕಾರ ನೆಹರೂ ಆಯ್ಕೆ ಯುರೋಪ್‌ ಸೇರಿದಂಗೆ ಬೇರೆ ದೇಶಗಳ ಪ್ರಭಾವದಿಂದ ಕೂಡಿದ್ದು ಅದು ಅವರ ತಪ್ಪಲ್ಲವೆಂದೂ ಸಮಾಜವಾದ ಅಸಮರ್ಪಕ ಆಯ್ಕೆಯಾಗಿದ್ದರೂ ಆ ಅವಧಿಯಲ್ಲಿ ಐಐಟಿ, ಅಟೊಮಿಕ್ ಎನರ್ಜಿ ಮುಂತಾಗಿ ದೇಶ ಕಟ್ಟಿದರು ಎಂದು.

ಪೈ ಅಸಹನೆಯಿಂದಲೇ ನರೇಶನ್ ಕಟ್ಟಲು ಪ್ರಯತ್ನಿಸುತ್ತಿದ್ದುದು ಮತ್ತು ಮೂರ್ತಿ ಸಾಧ್ಯವಾದಷ್ಟೂ ಡಿಪ್ಲೊಮ್ಯಾಟಿಕ್ಕಾಗಿ ಉತ್ತರಿಸುತ್ತಿದ್ದರು. ಮೂರ್ತಿ ತೀರ ಇತ್ತೀಚೆಗಿನ ಉದಾಹರಣೆ ಕೊಡುತ್ತ ಒಂದು ಬೋರ್ಡ್ ಲೆವೆಲ್ ಮೀಟಿಂಗ್‌ನಲ್ಲಿ ಅಮೆರಿಕಾ ಹೆಸರು ಆರು ಸಲ ಚೈನಾ ಹೆಸರು ಅದೆಷ್ಟೊ ಸಲ ಬಂದಿತ್ತು ಆದರೆ ಭಾರತದ್ದು ಒಂದು ಸಲವೂ ಬರಲಿಲ್ಲ ಎಂದಾಗ ಅದನ್ನು ನಿರೀಕ್ಷಿಸಿರದ ಪೈ ಮುಖ ಇಂಗು ತಿಂದಂಗಾಗಿದ್ದನ್ನು ಗಮನಿಸಬಹುದು. ಇರಲಿ,

ಸಂದರ್ಶನ ನೋಡುತ್ತ ಅನೇಕ ಪ್ರಶ್ನೆಗಳು ಹುಟ್ಟಿ ಅಲ್ಲಿ ಇಲ್ಲಿ ವರದಿ ವಿವರಗಳನ್ನು ಓದಿ ಕೆಲವು ಸಂಗತಿಗಳನ್ನು ಹಂಚಿಕೊಳ್ಳಬೇಕೆನಿಸಿತು.

1) 90ರ ತನಕ ಭಾರತ ಅತ್ಯಂತ ಕಡುಬಡತನದಲ್ಲಿದ್ದು ಜಾಗತೀಕರಣ ನಮ್ಮನ್ನು ಪಾರುಮಾಡಿತೇ?

2) ಸಮಾಜವಾದ ನಾವೇ ಹೇರಿಕೊಂಡ ಹೊರಮೌಲ್ಯವೇ ಮತ್ತು ಅದು ಸೋತುಹೋಯಿತೇ?

3) ನಮ್ಮ ದೇಶ 1947ರಲ್ಲಿಯೇ ಜಾಗತೀಕರಣಕ್ಕೆ ತೆರೆದುಕೊಂಡಿದ್ದರೆ ಏನಾಗುತ್ತಿತ್ತು? ಅಥವಾ ಕನಿಷ್ಠ 1970ರಲ್ಲಿ?.

ನಾ ಕಂಡುಕೊಂಡ ಉತ್ತರಗಳು

  • ಎರಡನೇ ವಿಶ್ವಯುದ್ಧದ ಕಾಲದಲ್ಲೇ ಮುಕ್ತಮಾರುಕಟ್ಟೆಗೆ ತೆರೆದುಕೊಂಡಿದ್ದ ದೇಶಗಳು ಯಾವುವು ಎಂದು ಹುಡುಕಿದರೆ ಯಾವುವೂ ಇಲ್ಲ. ಯುರೋಪು, ಆಫ್ರಿಕಾ, ಏಶಿಯಾದ ಯಾವುದೂ ಸಹ. ಸ್ವಲ್ಪ ಮಟ್ಟಿಗೆ ಅಮೆರಿಕಾ ಹೊರತು. ಪೈ ಇವತ್ತಿನ ಜಾಗತಿಕ ಸ್ಥಿತಿಯನ್ನು ಅವತ್ತಿಗೆ ಹೋಲಿಸಿ ಅಳೆಯುವುದರಲ್ಲಿಯೇ ಎಡವಟ್ಟಿದೆ. ಸಹಜವಾಗಿ ಪ್ರಪಂಚದ ಬಹುಭಾಗ ಅನುಸರಿಸುತ್ತಿದ್ದ ಆರ್ಥಿಕ ನೀತಿಗಳನ್ನೇ ಭಾರತ ಆಯ್ಕೆ ಮಾಡಿಕೊಂಡಿದೆ. ಸುರಕ್ಷಿತ ಎಂದು. ಮೇಲಾಗಿ ಭಂಡ ಧೈರ್ಯ ಮಾಡಲು ನಮಗೆ ಆಡಳಿತ ಅನುಭವ ಸಹ ಇರಲಿಲ್ಲವಲ್ಲ.
  • ಒಂದು ವೇಳೆ ಧೈರ್ಯಮಾಡಿ ಮುಕ್ತಮಾರುಕಟ್ಟೆಗೆ ತೆರೆದುಕೊಂಡಿದ್ದರೆ ಏನಾಗುತ್ತಿತ್ತು? ನಿಜ ಎರಡನೇ ವಿಶ್ವಯುದ್ಧದ ನಂತರ ಜಪಾನ್ ಕೊರಿಯಾ ಚೈನಾ ದಿವಾಳಿಯಾಗಿದ್ದವು. ಭಾರತ ಯುದ್ಧದಿಂದಲ್ಲದಿದ್ದರೂ ಬ್ರಿಟೀಷರ ಆರ್ಥಿಕ ನೀತಿಗಳಿಂದ ಬರಡಾಗಿತ್ತು. ಮತ್ತು ಇತರೆ ದೇಶಗಳಿಂತ ಹೆಚ್ಚು ಜನಸಂಖ‌್ಯೆ, ಅಶಿಕ್ಷಿತರು, ಗ್ರಾಮೀಣ ಹಿನ್ನೆಲೆಯವರಿದ್ದು ಮುಕ್ತ ಮಾರುಕಟ್ಟೆ ಭಾರತದ ಮೇಲೆ ಯಾವ ಪರಿಣಾಮ ಬೀರುತ್ತಿತ್ತು ಎಂಬುದೇ ಊಹೆಗೆ ನಿಲುಕುವುದಿಲ್ಲ. ಬಹುಶಃ ಆಗಿನ ಸಣ್ಣ ಪ್ರಮಾಣದ ವ್ಯಾಪಾರಿಗಳು ಬಹುಸಂಖ್ಯಾತ ಅಪ್ರಜ್ಞಾವಂತ ಜನತೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿತ್ತೇನೋ. ಅರ್ಥಾತ್ ಮುಕ್ತ ಮಾರುಕಟ್ಟೆಯು ಮಾಲೀಕನಿಗೆ ಲಾಭ ಕೂಲಿಗೆ ನಷ್ಟ ಉಂಟುಮಾಡುವ ಸಂಭವವಿತ್ತು. ಜಪಾನ್ ಕೊರಿಯಾ ದೇಶಗಳು ಕೂಡಲೆ ಮುಕ್ತಮಾರುಕಟ್ಟೆಗೆ ತೆರೆದುಕೊಂಡು ಪ್ರಗತಿ ಹೊಂದಿರುವುದಕ್ಕೆ ಕಾರಣ ಆ ದೇಶಗಳು ಯುದ್ಧಕ್ಕಿಂತಲೂ ಮೊದಲಿನಿಂದಲೇ ತಮ್ಮದೇ ಸರಕಾರಗಳನ್ನು ಹೊಂದಿದ್ದು ಆಡಳಿತ ಅನುಭವ ಇದ್ದು ಕೈಗಾರಿಕಾ ತಳಪಾಯ ಸಹ ಕಟ್ಟಿಕೊಂಡಿದ್ದವು. ಭಾರತಕ್ಕೆ ಇದ್ಯಾವ ಅನುಕೂಲಗಳಿರಲಿಲ್ಲ. ನಾವು ಆಡಳಿತ ಅನುಭವ ಪಡೆಯಲು ಮತ್ತು ಕೈಗಾರಿಕಾ ತಳಪಾಯ ಕಟ್ಟಲು ಮತ್ತು ಜನರನ್ನು ಶಿಕ್ಷಿತರನ್ನಾಗಿ ಕೌಶಲ್ಯಭರಿತನ್ನಾರಿಗಸಲೇ ಎರಡು ಮೂರು ದಶಕಗಳನ್ನು ತೆಗೆದುಕೊಂಡಿರುವುದನ್ನು ಗಮನಿಸಬಹುದು.
  • 70ರಲ್ಲಿ ಚೈನಾ ಮುಕ್ತ ಮಾರುಕಟ್ಟೆಗೆ ತೆರೆದುಕೊಂಡು ಸಿಕ್ಕಾಪಟ್ಟೆ ವೇಗವಾಗಿ ಅಭಿವೃದ್ಧಿ ಹೊಂದಿರುವುದು ನಿಜ. ಇದಕ್ಕೆ ಅಲ್ಲಿನ ಕಟ್ಟುನಿಟ್ಟಾದ ಕಮ್ಯನಿಸ್ಟ್ ರೆಜಿಮ್ ಸಹಾಯ ಮಾಡಿದ್ದು ಅಷ್ಟರಲ್ಲಿ ನಮ್ಮಲ್ಲಿ ಅದಾಗಲೇ ಕಾಂಗ್ರೆಸ್ ಪ್ರಭಾವ ಕಡಿಮೆಯಾಗುತ್ತಾ ಬಂದು ದೇಶ ಅಸ್ಥಿರವಾಗುತ್ತಾ ಎಮರ್ಜೆನ್ಸಿಗೆ ಜಾರಿದೆ. ನಮ್ಮಲ್ಲೂ ಸ್ಥಿರ ಸರಕಾರಗಳಿದ್ದು ಆರ್ಥಿಕ ನೀತಿಗಳನ್ನು ಸಡಿಲಗೊಳಿಸಿದ್ದರೆ ಇನ್ನು ಸ್ವಲ್ಪ ವೇಗವಾಗಿ ದೇಶ ಬದಲಾಗುವ ಸಾಧ್ಯತೆಯಿದ್ದಿರಬಹುದು. ಇಂದಿರಾ ಗಾಂಧಿ ಈ ಅವಕಾಶವನ್ನು ಕೈಚೆಲ್ಲಿದ್ದಾರೆ ಅನಿಸುತ್ತದೆ.
  • ರಾಜೀವ್ ಗಾಂಧಿ ಕಾಲಕ್ಕೆ ಈ ಅರಿವು ಬಂದಿದೆ. ಆಗಿಂದಲೇ ನಮ್ಮ ಆಲೋಚನೆಗಳು ಬದಲಾಗಲಾರಂಭಿಸಿವೆ. ಕೆಲವೇ ವರ್ಷಗಳಲ್ಲಿ ಅಂದರೆ.. 91ರಷ್ಟತ್ತಿಗೆ ಫಲ ಕೊಟ್ಟಿದೆ.
  • ಈ ಸಮಯದಲ್ಲಿ ಅಂದರೆ 80ರಿಂದ 90ರ ಆಸುಪಾಸಿನಲ್ಲಿ ಜಗತ್ತಿನ ಅನೇಕ ದೇಶಗಳು ಸಮಾಜವಾದದಿಂದ ಮುಕ್ತಮಾರುಕಟ್ಟೆಗೆ ಹೊರಳಿವೆ. ಭಾರತ ಎಂದಿನಂತೆ ಇತರರ ಪಾಠಗಳಿಂದ ಕಲಿಯುವ ಕಾಯ್ದು ನೋಡುವ ತಂತ್ರ ಅಳವಡಿಸಿಕೊಂಡಿದೆ. ಚೈನಾ ಒಂದೇ ಬೇಗನೆ ತೆರೆದುಕೊಂಡು ಯಶಸ್ವಿಯಾಗಿರುವುದು. ಚಿಲಿ ಮತ್ತು ಅರ್ಜೆಂಟಿನಾ ದೇಶಗಳ ಸ್ಥಿತಿಗತಿ ಅಷ್ಟಕ್ಕಷ್ಟೇ. ಇವತ್ತಿಗೂ ಸಹ. ಪೆರು ಮತ್ತು ಆಫ್ರಿಕನ್ ದೇಶಗಳು ಮುಕ್ತ ಮಾರುಕಟ್ಟೆಯಿಂದ ಸಾಮಾಜಿಕ ಅಸಮೋತಲನ, ಅಸ್ಥಿರತೆ ಅರಾಜಕತೆ ಮುಂತಾಗಿ ಕೆಟ್ಟ ಪರಿಣಾಮಗಳನ್ನು ಅನುಭವಿಸಿವೆ.
  • ಮುಕ್ತ ಮಾರುಕಟ್ಟೆಯ ಲಾಭ ಪಡೆಯಬೇಕೆಂದರೆ ಬಹುಸಂಖ್ಯೆಯಲ್ಲಿ ದೇಶಗಳು ಭಾಗಿಯಾಗಬೇಕು. ಇಲ್ಲಾಂದರೆ ಜನರಿಲ್ಲದ ಕಡೆ ಅಂಗಡಿ ತೆರೆದುಕೊಂಡ ಹಾಗಾಗುತ್ತದೆ. 80ರ ವರೆಗೆ ಪ್ರಪಂಚ ಮುಕ್ತ ಮಾರುಕಟ್ಟೆಗೆ ರೆಡಿಯಾಗಿರದಿರುವುದೇ ಭಾರತ ತಡಮಾಡಲು ಕಾರಣ ಇದ್ದಿರಬಹುದು.

ಒಟ್ಟಾರೆ ನಮ್ಮೆದುರು ಚೈನಾವನ್ನೇ ಉದಾಹರಣೆ ಇಟ್ಟುಕೊಂಡು ಅಳೆದಾಗ ಭಾರತ ಒಂದೈದರಿಂದ ಹತ್ತು ವರ್ಷ ತಡ ಎನ್ನಬಹುದು. ಮತ್ತು ಅಲ್ಲಿನ ಇಲ್ಲಿನ ಇಂದಿನ ಸಾಮಾಜಿಕ ಸ್ಥಿತಿಗತಿಗಳನ್ನು ತೂಗಿದಾಗ ನಾವೇ ಉತ್ತಮ ಅನಿಸುತ್ತದೆ. ನಮ್ಮಲ್ಲಿ ಅವರಷ್ಟು ಬಾಂಬುಗಳು ಯುದ್ಧದ ಹಡಗುಗಳು ಎರೊಪ್ಲೇನುಗಳು ಒಲಿಂಪಿಕ್‌ ಮೆಡಲುಗಳು ಇರದಿರಬಹುದು, ಸಮಾಜ ಅವರಿಗಿಂತ ಸುಖ ನೆಮ್ಮದಿಗಳಿಂದ ಕೂಡಿದೆ. ಹಾಗಾಗಿ ಕಳೆದುಕೊಂಡದ್ದಕ್ಕಿಂತ ಗಳಿಸಿದ್ದೇ ಹೆಚ್ಚು ಅನ್ನಬಹುದು.

ನಾರಾಯಣಮೂರ್ತಿಯವರು 20 ವರ್ಷಗಳಿಂದ ಇದೇ ಉದಾಹರಣೆ ಕೊಡುತ್ತಿದ್ದಾರೆ

ಮೂರ್ತಿ ಇಪ್ಪತ್ತು ವರ್ಷಗಳಿಂದ ಪ್ರತಿ ಸಂದರ್ಶನದಲ್ಲಿ ಅದೇ ಅದೇ ಉದಾಹರಣೆ ಕೊಡುತ್ತಾ ಬಂದಿದ್ದಾರೆ. ನಮ್ ಕಾಲದಲ್ಲಿ ಒಂದು ಫೋನ್ ಒಂದು ಕಂಪ್ಯೂಟರ್ ತೆಗೆದುಕೊಳ್ಳಲು ವರುಷಗಟ್ಟಲೆ ಕಾಯಬೇಕಿತ್ತು, ಹಲವಾರು ಸಲ ದೆಹಲಿಗೆ ಅಲೆಯಬೇಕಿತ್ತು ಎಂದು. ಅದರ ಬಗ್ಗೆ ನನಗೆ ಬಹಳ ವಿಷಾದವಿದೆ. ವ್ಯವಸ್ಥೆ ಎಷ್ಟು ಹದಗೆಟ್ಟಿತ್ತು ಎಂದು ರಕ್ತ ಕುದಿಯುತ್ತದೆ. ಆದರೆ ಅವರು ತಮ್ಮ ಕಂಪನಿಯನ್ನು 81ರಲ್ಲಿ ಆರಂಭಿಸಿ ಆರಂಭಿಕ ಕಷ್ಟಗಳನ್ನು ಆ ದುರಿತ ಕಾಲದಲ್ಲೇ ಎದುರಿಸುವಂತಾಗಿರುವುದು ವಿಪರ್ಯಾಸ. ಮಿಡಲ್ ಕ್ಲಾಸ್ ಜನ ಬಾಲ್ಯದ ಬಡತನವನ್ನು ವೈಭವೀಕರಿಸಿದಂತೆ ಅವರು ಬಿಜಿನೆಸ್ ಮ್ಯಾನಾಗಿ ಆರಂಭಿಕ ದಿನಗಳ ಕಷ್ಟಗಳನ್ನು ವೈಭವೀಕರಿಸಿಕೊಳ್ತಿದಾರೆ ಎಂದೂ ಅನಿಸುತ್ತದೆ.

ನನಗೆ ಸಂದರ್ಶನದಿಂದ ಇನ್ನೊಂದು ಅಂಶ ಹೊಳೆಯಿತು. ಆ ಇಬ್ಬರ ಮನೋಭಾವದ ಬಗ್ಗೆ. ಪೈ ಹೆಚ್ಚೂ ಕಮ್ಮಿ ಕ್ರೋನಿ ಕ್ಯಾಪಿಟಲಿಸ್ಟ್. ಮೂರ್ತಿ ಕಂಪ್ಯಾಶನೇಟೇ ಆಗಿದ್ದರೂ ಸಹ ಸ್ವಲ್ಪ ಅದನ್ನು ಬಿಟ್ಟು ಹೊರಗೆ ಬರ್ತಿದಾರೆ ಅನಿಸುತ್ತದೆ. ಪೈಗೆ ದೇಶದಲ್ಲಿ ಬಹುಸಂಖ್ಯೆಯಲ್ಲಿ ಅನಕ್ಷರಸ್ಥರು ಅರ್ಧಂಬರ್ಧ ಕಲಿತವರು ಬಡವರಿದ್ದಾರೆ ಎಂಬ ಅರಿವೇ ಇಲ್ಲ. ಮೂರ್ತಿಗೆ ಇದೆ. ಅದನ್ನು ಸಂದರ್ಶನದಲ್ಲಿ ಲೆಕ್ಕ ಕೊಡ್ತಾರೆ ಸಹ. ಆದರೆ ಇಬ್ಬರಿಗೂ ಈ ವರ್ಗ ಒಂದು ರೀತಿ ಅನಾರ್ಕಲಿ ಬ್ರೆಡ್ಡಿನ ಸಿಹಿತುಣುಕಿನಂತೆ ಕಂಡಿರುವುದು ವಿಷಾದಕರ. ಇಬ್ಬರದೂ ಒಂದೇ ಪ್ಲಾನು. ‘ಲೋ ಟೆಕ್’ ಅಂದರೆ “ಫ್ಯಾಕ್ಟರಿ” ಟೈಪಿನ ಕಾರ್ಖಾನೆಗಳನ್ನು ಸ್ಥಾಪಿಸುವುದು. ಅಲ್ಲಿಗೆ ಈ ವರ್ಗವನ್ನು ಸ್ಥಳಾಂತರಿಸುವುದು. ಆ ವರ್ಗದ ಬಡತನವನ್ನು ಕಳೆಯಲು ಆ ಜನರ ಕೈಲಿ ಒಂದಷ್ಟು ದುಡ್ಡು ಇಡಲು ಕಾಳಜಿಯುತ ಮಾತು ಎಂದೇನೊ ಧ್ವನಿಸುತ್ತದೆ. ಇದರ ಹಿನ್ನೆಲೆಯಲ್ಲಿಯೇ ಎಪ್ಪತ್ತು ಗಂಟೆ ದುಡಿಮೆ ಎಂಬ ಬಿಂದುವನ್ನು ಪೋಣಿಸಿದಾಗ ನಿಮಗೆ ಚೈನಾ ಮಾದರಿಯ ಸಣ್ಣಕೌಶಲ್ಯದ ಬೊಂಬೆ-ಕಬ್ಬಿಣ-ಸಿಲಿಕಾನ್ ಮುಂತಾದ ಕಾರ್ಖಾನೆಗಳ ಉಪಾಯ ಎಂದು ಹೊಳೆಯುತ್ತದೆ. ಯಾವುದೇ ಒಬ್ಬ ಸ್ಥಿತಿವಂತ ಕೋಟ್ಯಾಧೀಶ ತನ್ನ ಎಸಿ ರೂಮಲ್ಲಿ ಕೂತು ಯೋಚಿಸಿದಾಗ ಹೊಳೆಯಬಹುದಾದ ‘ಜನೋಪಕಾರಿ’ ಆಲೋಚನೆ. ಅವರಿಗೆ ಖಂಡಿತ ತಾವೇನೊ ಒಳ್ಳೆಯದು ಮಾಡ್ತಿದೀವಿ ಎಂದೇ ಅನಿಸ್ತಿರುತ್ತದೆ. ಆದರೆ ಈ ಪ್ರಕ್ರಿಯೆಯಲ್ಲಿ ಬಡಜನರನ್ನು ಬಳಸಿಕೊಳ್ಳಬಹುದಾದ ಸಂಪನ್ಮೂಲವನ್ನಾಗಿ ನೋಡುತ್ತಿದ್ದೇವೆ ಎಂದು ಹೊಳೆಯುವುದಿಲ್ಲವಷ್ಟೇ.

ಆಯ್ತಪ ಹಾಗಾದರೆ ನಿಮ್ಮ ಪ್ರಕಾರ ಏನು ಮಾಡಬೇಕಿತ್ತು ಎಂಬ ಪ್ರಶ್ನೆ ಮೂಡುವುದು ಸಹಜ. ಖಂಡಿತ ಉಚಿತವಾಗಿ ಕೊಡುವ ದವಸ ಧಾನ್ಯಗಳಿಗಿಂತ ಉದ್ಯೋಗ ಒದಗಿಸುವುದೇ ಉತ್ತಮವಾದ ಮತ್ತು ದೂರದೃಷ್ಟಿಯ ಮಾರ್ಗ ಎಂದು ಒಪ್ಪುವೆ. ಆದರೆ ಅಂತಹ ಆಲೋಚನೆಗಳಲ್ಲಿ ದೇಶದ ಹೆಸರು ಹೇಳಿಕೊಂಡು ಎಪ್ಪತ್ತು ಗಂಟೆ ದುಡಿಸಿಕೊಳ್ಳುವ ದುರಾಲೋಚನೆ ಇರುವುದಿಲ್ಲ. ಕಾರ್ಮಿಕರ ಹಿತರಕ್ಷಣೆಯ ನೀತಿಗಳನ್ನು ಸಡಿಲಗೊಳಿಸಿ ದೊಡ್ಡ ಶೆಡ್ಡು ಕಟ್ಟಿಸಿ ಸುಪರ್ ವೈಸರುಗಳನ್ನಿಟ್ಟು ಅವರ ಕೈಲಿ ಚಾಟಿ ಕೊಟ್ಟು “ಬಿಳಿಯರು ಕರಿಯರ ಕುಂಡಿಗೆ ಬಾರಿಸಿ ಹೊಲ ಗೇಯಿಸುತ್ತಿದ್ದ” ಕಲ್ಪನೆಯಿರಲ್ಲ. ನೀವು ಇವತ್ತಿನ ಯಾವುದೇ ಗಾರ್ಮೆಂಟ್ಸಿಗೆ ಭೇಟಿ ಕೊಟ್ಟರೆ ಗೊತ್ತಾಗುತ್ತದೆ. ಹೇಗೆ ಗ್ರಾಮೀಣ ಭಾಗದ ಅಶಿಕ್ಷಿತ ಮಹಿಳೆಯರು ಬತ್ತಿದ ಎದೆ ಆಳಕ್ಕಿಳಿದ ಕಣ್ಣುಗಳನ್ನು ಇಟ್ಟುಕೊಂಡು ರಕ್ತ ಬಸಿಯುತ್ತಿರುವರೆಂದು. ಅಷ್ಟೆಲ್ಲ ಯಾಕೆ ಸಾವಿರಾರು ಕಿಲೋಮೀಟರ್ ರಸ್ತೆಗುಂಟ ನಡೆದು ಬರುವ ರೈಲುಗಳಲ್ಲಿ ನೆಲದ ಮೇಲೆ ಮಲಗುವ ಜನರನ್ನೂ ನೋಡಿರ್ತೀರ.

ಗಮನಿಸಿ ಚೈನಾದ ಜನ ಹೀಗೆ ಮಕ್ಕಳು ಮರಿ ಮರೆತು ಯಂತ್ರಗಳಂತೆ ದುಡಿದು ದುಡಿದು ಗಳಿಸಿದ್ದು ಸುಖ ಸಂತೋಷವನ್ನಲ್ಲ. ಆತ್ಮಹತ್ಯೆಗಳನ್ನು. ಸಾಂಕ್ರಾಮಿಕ ಖಾಯಿಲೆಗಳನ್ನು. ಉಸಿರುಗಟ್ಟಿಸುವ ನೀತಿಗಳನ್ನು. ತಾವು ಕಟ್ಟುತ್ತಿರುವ ತೆರಿಗೆ ಬಳಕೆಯಾಗುತ್ತಿರುವುದು ದೇಶ ತಮ್ಮ ಕಾಳಜಿ ವಹಿಸಲೆಂದಲ್ಲ, ಬದಲಾಗಿ ಇನ್ನಷ್ಟು ಮತ್ತಷ್ಟು ಬಾಂಬು ಯುದ್ಧವಿಮಾನ ಯುದ್ಧನೌಕೆಗಳನ್ನು ಪೇರಿಸಿಟ್ಟುಕೊಂಡು ಪವರ್ ಅನುಭವಿಸಲು.

ಆರ್ಥಿಕ ವ್ಯವಸ್ಥೆ ತಕ್ಕ ಮಟ್ಟಿಗೆ ಇದ್ದರೂ ಮೂಲಭೂತ ವ್ಯವಸ್ಥೆ ಇಲ್ಲ

ನಮ್ಮಲ್ಲಿರುವ ರಸ್ತೆ ಚರಂಡಿ ಡಕೋಟಾ ಬಸ್ಸು ರೈಲುಗಳ ದುರವಸ್ಥೆಗಳಿಗೆ ನಮ್ಮ ಆರ್ಥಿಕ ನೀತಿಗಳಿಗಿಂತ ಹೆಚ್ಚಾಗಿ ನಮ್ಮ ಮತ್ತು ನಮ್ಮ ಸಮಾಜದ ರಕ್ತದಲ್ಲೇ ಶೇಮ್ ಲೆಸ್ಸಾಗಿ ಮಿಳಿತಗೊಂಡಿರುವ ಭ್ರಷ್ಟಾಚಾರಿಕ ಮನೋಭಾವದಿಂದ ಎಂದು ನಾವು ಎಂದಿಗೆ ಅರಿಯುತ್ತೀವೇ ಕಾಣೆ. ನಮ್ಮಲ್ಲಿ ಇಂದು ಮುಕ್ತಮಾರುಕಟ್ಟೆಯಿದೆ. ಸಾಕಷ್ಟು ಸಂಬಳ ಬರುತ್ತದೆ. ಲಕ್ಷ ಲಕ್ಷ ಕೋಟಿ ತೆರಿಗೆ ಸಂಗ್ರಹವಾಗುತ್ತದೆ. ಆದರೆ ಅದೇ ಅದೇ ಗುಂಡಿ ಗುದ್ದರ ರಸ್ತೆಗಳು, ಮುಂಗಾರು ಹಿಂಗಾರಿಗೆ ಮುಳುಗುವ ನಗರಗಳು. ಕಾಣೆಯಾಗುತ್ತಿರುವ ಅರಣ್ಯ ಸಂಪತ್ತು. ಲೂಟಿ ಹೊಡೆಯುವ ವೈದ್ಯರು, ಕೈಯೊಡ್ಡುವ ಪೊಲಿಸು, ಅಧಿಕಾರಿ, ಲಾಯರು, ಜಡ್ಜು. ಆರ್ಥಿಕ ನೀತಿ ಸಡಿಲಗೊಳಿಸಿದ್ದರಿಂದ ಇದೇನಾದರೂ ಬದಲಾಗಿದೆಯೇ? ಇಂದ್ರಾಗಾಂಧಿ ಕಾಲಕ್ಕಿಂತ ಹೆಚ್ಚು ನೈತಿಕತೆ ಬಂದಿದೆಯೇ? ಜಾಸ್ತಿ ಹಣ ಒಳ ಬರುತ್ತಿರುವುದರಿಂದ ನಮಗೆ ಇವೆಲ್ಲ ಗೊತ್ತಾಗ್ತಿಲ್ಲವಷ್ಟೇ.

ಐದು ವರ್ಷಗಳ ಅಧಿಕಾರಕ್ಕೆ ಪ್ರತಿ ಶಾಸಕ ಅವರೇಜ್ ಐವತ್ತು ಕೋಟಿ ಇನ್ವೆಸ್ಟ್ ಮೆಂಟ್ ಮಾಡ್ತಾನೆ ಎಂದರೆ ಲೆಕ್ಕ ಹಾಕಿ ದೇಶಾದ್ಯಂತ ನಾಲ್ಕು ಸಾವಿರ ಎಂಎಲ್ ಎಗಳು ಎಂಟುನೂರು ಎಂಪಿಗಳು. ಐದು ಸಾವಿರ ಜನನಾಯಕರು ಐದು ವರ್ಷಕ್ಕೊಂದು ಸಲ ಎರಡು ಲಕ್ಷದ ಐವತ್ತು ಸಾವಿರ ಕೋಟಿ ಹೂಡಿಕೆ ಮಾಡ್ತಾರೆ. ಗೆದ್ದವರ ಲೆಕ್ಕ ಹೇಳ್ತಿದೀನಿ. ಸೋತವರು ಸೇರಿಸಿದರೆ ಆರೇಳು ಲಕ್ಷ ಕೋಟಿ. ಪ್ರತಿಯಾಗಿ ಐದು ವರ್ಷ ಅವರು ಎಷ್ಟು ಎತ್ತಬೇಕು? ಮಿನಿಮಮ್ ನಾಲ್ಕು ಪಟ್ಟು? ಅಂದರೆ ಹತ್ತು ಲಕ್ಷ ಕೋಟಿ ಕಳೆದುಕೊಂಡು ಹೋಗುತ್ತಾರೆ. ಮತ್ತು ಇದು ರಿಪೀಟ್ ಆಗ್ತಿರುತ್ತೆ.

ನಮ್ಮಲ್ಲಿ ಎಲ್ಲ ಇರೋರು ಒಂದೈದು ಪರ್ಸೆಂಟ್ ಮಾತ್ರ. ವಿಮಾನದಲ್ಲಿ ಅಥವಾ ಬೃಹತ್ ಕಾರುಗಳಲ್ಲಿ ಓಡಾಡ್ತಾರೆ. ತಮಗೆಂದೇ ಪ್ರೈವೇಟ್ ಲೇಔಟ್ ಇಟ್ಟುಕೊಂಡಿದ್ದಾರೆ. ಇವರ ಮನೆಗಳಲ್ಲಿ ಯಾರೂ ಬಗ್ಗಿ ದುಡಿಯಲ್ಲ. ಮಿಕ್ಕ 40% ಮಧ್ಯಮ ವರ್ಗ ರೇಸಿಗೆ ಬಿದ್ದು ದುಡಿತಾರೆ. ತಿಂಗಳ ಸಂಬಳಕ್ಕಾಗಿ ಸಲ್ಲದ ಮೋರಲ್ಸ್ ಗಳ ಭ್ರಮೆಯೇರಿಸಿಕೊಂಡು ಜೀವನ ತಳ್ತಿರ್ತಾರೆ. ಇವರಿಗೆ ತಾನೂ ಒಂದಿನ ಟಾಪ್ 5%ಗೆ ಜಂಪ್ ಮಾಡ್ತೀನಿ ಎಂಬ ಭ್ರಮೆ ಇರುತ್ತದೆ. ಮಿಕ್ಕ 50% ಜನ ಯಾವುದೇ ಭ್ರಮೆಗಳಿಲ್ಲದೆ ರಸ್ತೆ ಬದಿಯ ಕಬಾಬ್ ಕುಷ್ಕ ತಿಂದುಕೊಂಡು ಹಂದಿಗೂಡಿನಂತಹ ಕೋಣೆಗಳಲ್ಲಿ ಒಬ್ಬರ ಮೇಲೊಬ್ಬರು ಮಲಕ್ಕೊಂಡು ಅವತ್ತಿನದವತ್ತಿನ ನೆಮ್ಮದಿ ಕಂಡುಕೊಂಡು ಜೀವನ ತಳ್ತಾ ಇದಾರೆ. ನೆನಪಿರಲಿ ಇವರ ದೈಹಿಕ ಎಂಜಿನ್ ಆಯಿಲ್ ಐದತ್ತು ವರುಷಗಳಲ್ಲಿ ಖಾಲಿಯಾಗುತ್ತಿರುತ್ತದೆ. ಹಿಂಡಿದ ಕಬ್ಬಿನಂತಾಗಿ ಬರಿಗೈಲಿ ಹಳ್ಳಿಗಳಿಗೆ ಮರಳುತ್ತಿರುತ್ತಾರೆ.

ಹೌದು, ನಿಜ ನಮಗೆ ಎಲ್ಲ ಸುಖ ಇದೆ. ಬಟ್ಟೆಬರೆಗಳಿಗೆ ಅಮೆಜಾನ್, ಊಟಕ್ಕೆ ಜೊಮ್ಯಾಟೊ, ಕುಡಿಯಕ್ಕೆ ಬಾರ್ ಪಬ್, ಹಾರಾಡಲು ಎಕಾನಮಿ ವಿಮಾನಗಳು, ಬಡವರಿಂದ ಬೇರೆ ಅನಿಸಿಕೊಂಡು ಶ್ರೀಮಂತನಂತೆ ಬೀಗಲು ಸೆಪರೇಟ್ ರೈಲ್ ಕೋಚ್ ಗಳು, ನಿರ್ಭಂಧಿತ ಪ್ರವೇಶದ ಹೊಟೆಲುಗಳು, ಮಾಲ್ ಗಳು, ಥ್ರಿಲ್ ಆಗಲು ನ್ಯಾಶನಲ್ ಹೈವೇಗಳು- ಎಲ್ಲ ಇವೆ. ಇವೆಲ್ಲ ಮಿಡಲ್ ಕ್ಲಾಸ್ ಜನರು ಹುಸಿ ಭ್ರಮೆಗಳಲ್ಲಿ ಜೀವಿಸಲು ಕೊಟ್ಟಿರುವ ಅಡಿಕ್ಟಿವ್ ಡ್ರಗ್‌ಗಳು ಎಂಬುದನ್ನು ಮಾತ್ರ ಮರೆಯುತ್ತೇವೆ. ಒಬ್ಬರು ಧರ್ಮದ ಹೆಂಡ ಇನ್ನೊಬ್ಬರು ನಿಜದ ಹೆಂಡ ಉಳಿದೋರು ಜಾತಿ ಹೆಂಡ ಕುಡಿಸಿಕೊಂಡು ನಮ್ಮನ್ನೆಲ್ಲ ಒಂಥರ ಮತ್ತಿನಲ್ಲಿಟ್ಟಿದ್ದಾರೆ. ಪೆಯಿನ್ ಗೊತ್ತಾಗದೇ ಇರಲಿ ಅಂತ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.