INS Mormugao launch: ಇಂದು ಐಎನ್‌ಎಸ್ ಮರ್ಮಗೋವಾ ನೌಕಾಪಡೆಗೆ ಸೇರ್ಪಡೆ, ಈ ಕ್ಷಿಪಣಿ ನಾಶಕ ಯುದ್ಧ ನೌಕೆಯ ಕುರಿತು ನಿಮಗೆಷ್ಟು ಗೊತ್ತು?
ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾದ ಪ್ರಾಬಲ್ಯ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಈ ಕ್ಷಿಪಣಿ ನಾಶಕ ನೌಕೆಯು ಭಾರತೀಯ ನೌಕಾಪಡೆಗೆ ಹೆಚ್ಚಿನ ಬಲ ತುಂಬಲಿದೆ.
ಭಾರತದ ನೌಕಾಪಡೆಗೆ ಇಂದು ಐತಿಹಾಸಿಕ ದಿನ. ಮುಂಬೈನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಿಡಿಎಸ್ ಮುಖ್ಯಸ್ಥ ಅನಿಲ್ ಚೌಹಾನ್, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್. ಹರಿ ಕುಮಾರ್ ಮತ್ತು ಇತರೆ ಗಣ್ಯರ ಸಮ್ಮುಖದಲ್ಲಿ ಐಎನ್‌ಎಸ್ ಮರ್ಮಗೋವಾ ಇಂದು ನೌಕಾಪಡೆಗೆ ಸೇರ್ಪಡೆಯಾಗಿದೆ. ಇದು ಸ್ವದೇಶಿ ನಿರ್ಮಿತ ಸ್ವಯಂ ಮಾರ್ಗದರ್ಶಿ ಕ್ಷಿಪಣಿ ನಾಶಕ ಹಡಗಾಗಿದೆ.
ನೌಕಾಪಡೆಯ ಪ್ರಕಾರ ಇದರಲ್ಲಿ ಅತ್ಯಾಧುನಿಕ ಸಂವೇದಕಗಳು, ಆಧುನಿಕ ರಾಡಾರ್ ವ್ಯವಸ್ಥೆ, ಹಡಗಿನಿಂದ ಆಕಾಶದಲ್ಲಿರುವ ಶತ್ರು ಯುದ್ಧ ವಿಮಾನಗಳು ಮತ್ತು ನೀರಿನಾಳದಲ್ಲಿ ಆಗಮಿಸುವ ಶತ್ರುಗಳ ಜಲಾಂತರ್ಗಾಮಿಗಳನ್ನು ಹೊಡೆದು ಉರುಳಿಸುವ ವ್ಯವಸ್ಥೆಗಳಿವೆ.
"ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾದ ಪ್ರಾಬಲ್ಯ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಈ ಕ್ಷಿಪಣಿ ನಾಶಕ ನೌಕೆಯು ಭಾರತೀಯ ನೌಕಾಪಡೆಗೆ ಹೆಚ್ಚಿನ ಬಲ ತುಂಬುವ ನಿರೀಕ್ಷೆಯಿದೆ. ಒಟ್ಟಾರೆ, ಸಾಗರದಲ್ಲಿ ಭಾರತೀಯ ಸೇನಾ ಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ನೌಕೆ ಪ್ರಮುಖ ಹೆಜ್ಜೆಯಗಿದೆʼʼ ಎಂದು ಸೇನಾ ಮೂಲಗಳು ತಿಳಿಸಿವೆ.
"ಸ್ವದೇಶಿಕರಣ ಮತ್ತು ಸ್ವಾವಲಂಬನೆಯ ದಿಟ್ಟ ಹೆಜ್ಜೆ ಇರಿಸುತ್ತಿದ್ದೇವೆ. ನಿರ್ಮಾಣವಾಗುತ್ತಿರುವ 44 ಹಡಗುಗಳು ಮತ್ತು ಜಲಾಂತರ್ಗಾಮಿ ನೌಕೆಗಳಲ್ಲಿ 42 ನೌಕೆಗಳನ್ನು ಭಾರತೀಯ ಹಡಗುಕಟ್ಟೆಗಳಲ್ಲಿ ನಿರ್ಮಿಸಲಾಗುತ್ತಿದೆʼʼ ಎಂದು ನೌಕಾಪಡೆ ತಿಳಿಸಿದೆ.
ಪಾಕಿಸ್ತಾನ ಮತ್ತು ಶ್ರೀಲಂಕಾ ಸೇರಿದಂತೆ ವಿವಿಧ ದೇಶಗಳ ಬಂದರುಗಳು ಮತ್ತು ಮೂಲಸೌಕರ್ಯ ಹೂಡಿಕೆಗಳಲ್ಲಿ ಚೀನಾವು ತನ್ನ ಪ್ರಭಾವ ಬೀರುತ್ತಿದ್ದು, ಹಿಂದೂ ಮಹಾಸಾಗರದ ಮೇಲೆ ತನ್ನ ಸಾಮರ್ಥ್ಯ ಹೆಚ್ಚಿಸಲು ಚೀನಾ ಪ್ರಯತ್ನಿಸುತ್ತಿದೆ. ಇಂತಹ ಸಮಯದಲ್ಲಿ ಭಾರತವು ಚೀನಾಕ್ಕೆ ತನ್ನ ಪ್ರಬಲ ವಿರೋಧವನ್ನು ವ್ಯಕ್ತಪಡಿಸುತ್ತಿದೆ.
ಈ ಕ್ಷಿಪಣಿ ನಾಶಕದ ಕುರಿತು ಐದು ಅಂಶಗಳು
- ಫೋರ್ಚ್‌ಗೀಸರ ಆಳ್ವಿಕೆಯಿಂದ ಗೋವಾವು ಮುಕ್ತಿ ಪಡೆದು 60 ವರ್ಷಗಳಾದ ದಿನಾಚರಣೆಯನ್ನು ಕಳೆದ ವರ್ಷ ಡಿಸೆಂಬರ್ 19ರಂದು ಗೋವಾವು ಆಚರಿಸಿತ್ತು. ಆ ಸಂದರ್ಭದಲ್ಲಿ ಈ ಹಡಗು ಮೊದಲ ಬಾರಿಗೆ ಕಡಲಿಗೆ ಇಳಿದಿತ್ತು. ಗೋವಾದ ಐತಿಹಾಸಿಕ ಬಂದರು ಮರ್ಮಗೋವಾದ ಹೆಸರನ್ನು ಇದಕ್ಕೆ ಇಡಲಾಗಿದೆ.
- ಐಎನ್‌ಎಸ್ ಮರ್ಮಗೋವಾವು ವಿಶಾಖಪಟ್ಟಣ ದರ್ಜೆಯ ನಾಲ್ಕು ಕ್ಷಿಪಣಿ ನಾಶಕಗಳಲ್ಲಿ ಎರಡನೆಯದ್ದಾಗಿದೆ. ಇದನ್ನು ಭಾರತೀಯ ನೌಕಾಪಡೆಯ ವಾರ್‌ಶಿಪ್ ಡಿಸೈನ್ ಬ್ಯೂರೋ ವಿನ್ಯಾಸ ಮಾಡಿದೆ. ಇದನ್ನು ಮಾಝಗಾಂವ್ ಡಾಕ್ ಶಿಪ್‌ಬಿಲ್ಡರ್ಸ್ ಲಿಮಿಟೆಡ್ ನಿರ್ಮಿಸಿದೆ.
- 163 ಮೀಟರ್ ಉದ್ದ ಮತ್ತು 17 ಮೀಟರ್ ಅಗಲದ ಭವ್ಯವಾದ ಹಡಗನ್ನು ಭಾರತದಲ್ಲಿ ನಿರ್ಮಿಸಲಾದ ಅತ್ಯಂತ ಶಕ್ತಿಶಾಲಿ ಯುದ್ಧನೌಕೆಗಳಲ್ಲಿ ಒಂದೆಂದು ಹೇಳಬಹುದು. INS ಮೊರ್ಮುಗಾವೊ ನಿರ್ಮಾಣದಲ್ಲಿ ಬಳಸಲಾದ ಶೇಕಡ 70 ರಷ್ಟು ಬಿಡಿಭಾಗಗಳು ಸ್ವದೇಶಿ ನಿರ್ಮಿತವಾಗಿವೆ.
- ಈ ಯುದ್ಧ ನೌಕೆಯು ನಾಲ್ಕು ಶಕ್ತಿಶಾಲಿ ಗ್ಯಾಸ್ ಟರ್ಬೈನ್‌ಗಳಿಂದ ಚಾಲಿತವಾಗಿವೆ. ಇದು 30 ನಾಟ್ಸ್‌ಗಿಂತಲೂ ಅತ್ಯಧಿಕ ವೇಗದಲ್ಲಿ ಸಾಗಬಹುದು.
- ಅಣುಶಕ್ತಿ, ಜೈವಿಕ ಮತ್ತು ರಾಸಾಯನಿಕ (ಎನ್‌ಬಿಸಿ) ಯುದ್ಧ ಸಂದರ್ಭಗಳಲ್ಲಿಯೂ ಯುದ್ಧ ನಡೆಸುವಂತಹ ಸಾಮರ್ಥ್ಯ ಈ ನೌಕೆಗಿದೆ ಎಂದು ನೌಕಾಪಡೆ ಮಾಹಿತಿ ನೀಡಿದೆ. ಈ ನೌಕೆಯಲ್ಲಿ ಯುದ್ಧಕ್ಕೆ ಬೇಕಾದ ಅತ್ಯಾಧುನಿಕ ಶಸ್ತ್ರಾಸ್ತ್ರ ವ್ಯವಸ್ಥೆಗಳು ಇವೆ.
ವಿಭಾಗ