ಭಾರತೀಯ ನೌಕಾಪಡೆಗೆ ಐಎನ್ಎಸ್‌ವಿ ಕೌಂಡಿನ್ಯ, ತೆಂಗಿನ ನಾರು, ಮರದ ಹಲಗೆಗಳಿಂದ ತಯಾರಿಸಿದ ಪ್ರಾಚೀನ ಮಾದರಿ ನೌಕೆಗೆ ಮರುಜೀವ, 4 ಮುಖ್ಯ ಅಂಶಗಳು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಭಾರತೀಯ ನೌಕಾಪಡೆಗೆ ಐಎನ್ಎಸ್‌ವಿ ಕೌಂಡಿನ್ಯ, ತೆಂಗಿನ ನಾರು, ಮರದ ಹಲಗೆಗಳಿಂದ ತಯಾರಿಸಿದ ಪ್ರಾಚೀನ ಮಾದರಿ ನೌಕೆಗೆ ಮರುಜೀವ, 4 ಮುಖ್ಯ ಅಂಶಗಳು

ಭಾರತೀಯ ನೌಕಾಪಡೆಗೆ ಐಎನ್ಎಸ್‌ವಿ ಕೌಂಡಿನ್ಯ, ತೆಂಗಿನ ನಾರು, ಮರದ ಹಲಗೆಗಳಿಂದ ತಯಾರಿಸಿದ ಪ್ರಾಚೀನ ಮಾದರಿ ನೌಕೆಗೆ ಮರುಜೀವ, 4 ಮುಖ್ಯ ಅಂಶಗಳು

ಕಾರವಾರದ ಕದಂಬ ನೌಕಾನೆಲೆಯಲ್ಲಿ ಭಾರತೀಯ ನೌಕಾಪಡೆಗೆ ಐಎನ್ಎಸ್‌ವಿ ಕೌಂಡಿನ್ಯ ಎಂಬ ಪ್ರಾಚೀನ ಮಾದರಿಯ ನೌಕೆ ಸೇರ್ಪಡೆಯಾಗಿದೆ. ತೆಂಗಿನ ನಾರು, ಮರದ ಹಲಗೆಗಳಿಂದ ತಯಾರಿಸಿದ ಪ್ರಾಚೀನ ಮಾದರಿ ನೌಕೆಗೆ ಸಂಬಂಧಿಸಿದ 4 ಮುಖ್ಯ ಅಂಶಗಳು ಇಲ್ಲಿವೆ.

ತೆಂಗಿನ ನಾರು, ಮರದ ಹಲಗೆಗಳಿಂದ ತಯಾರಿಸಿದ ಪ್ರಾಚೀನ ಮಾದರಿ ನೌಕೆಗೆ ಮರುಜೀವ ನೀಡಲಾಗಿದ್ದು, ಅದನ್ನು ಐಎನ್ಎಸ್‌ವಿ ಕೌಂಡಿನ್ಯ ಹೆಸರಿನಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆ ಮಾಡಲಾಗಿದೆ.
ತೆಂಗಿನ ನಾರು, ಮರದ ಹಲಗೆಗಳಿಂದ ತಯಾರಿಸಿದ ಪ್ರಾಚೀನ ಮಾದರಿ ನೌಕೆಗೆ ಮರುಜೀವ ನೀಡಲಾಗಿದ್ದು, ಅದನ್ನು ಐಎನ್ಎಸ್‌ವಿ ಕೌಂಡಿನ್ಯ ಹೆಸರಿನಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆ ಮಾಡಲಾಗಿದೆ.

ಕಾರವಾರ: ಭಾರತದಲ್ಲಿ 5ನೇ ಶತಮಾನದಲ್ಲಿ ಬಳಕೆಯಲ್ಲಿದ್ದ ಪ್ರಾಚೀನ ಮಾದರಿಯ ತೆಂಗಿನ ನಾರು, ಮರದ ಹಲಗೆಗಳಿಂದ ತಯಾರಿಸಿದ ನೌಕೆಗೆ ಮರುಜೀವ ನೀಡಿ, ‘ಐಎನ್ಎಸ್‌ವಿ ಕೌಂಡಿನ್ಯ' ಎಂಬ ಹೆಸರಿನೊಂದಿಗೆ ಭಾರತೀಯ ನೌಕಾಪಡೆಗೆ ಸೇರ್ಪಡೆ ಮಾಡಲಾಗಿದೆ. ಕಾರವಾರದ ಕದಂಬ ನೌಕಾನೆಲೆಯಲ್ಲಿ ಬುಧವಾರ (ಮೇ 21) ಈ ಪ್ರಾಚೀನ ಕಾಲದ ಮಾದರಿಯ ಹಡಗು ನೌಕಾಪಡೆ ಸೇರ್ಪಡೆಯಾಯಿತು. ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರು ನೌಕೆ ಲೋಕಾರ್ಪಣೆಗೊಳಿಸಿದರು.

ಐಎನ್‌ಎಸ್‌ವಿ ಕೌಂಡಿನ್ಯ- 4 ಮುಖ್ಯ ಅಂಶಗಳು

ಐಎನ್‌ಎಸ್‌ವಿ ಕೌಂಡಿನ್ಯ ಹಡಗು ಸದ್ಯ ಕಾರಾವಾರದ ಕದಂಬ ನೌಕಾ ನೆಲೆಯಲ್ಲಿ ಇರಲಿದೆ. ಕೆಲ ದಿನಗಳ ಬಳಿಕ ಒಮಾನ್ ದೇಶಕ್ಕೆ ಪ್ರಯಾಣ ಬೆಳೆಸಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಭಾರತೀಯ ನೌಕಾಪಡೆಗೆ ಐಎನ್ಎಸ್‌ವಿ ಕೌಂಡಿನ್ಯ ಸೇರ್ಪಡೆ ಕಾರ್ಯಕ್ರಮದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ವೈಸ್ ಅಡ್ಮಿರಲ್ ರಾಜಾರಾಮ್ ಸ್ವಾಮಿನಾಥನ್, ನೌಕಾದಳದ ನಿವೃತ್ತ ಮುಖ್ಯಸ್ಥ ಕರಣವೀರ ಸಿಂಗ್, ಕರ್ನಾಟಕ ನೌಕಾ ಪ್ರದೇಶದ ಧ್ವಜಾಧಿಕಾರಿ ರಿಯರ್ ಅಡ್ಮಿರಲ್ ಕೆ.ಎಂ.ರಾಮಕೃಷ್ಣನ್ ಇದ್ದರು. ಐಎನ್‌ಎಸ್‌ವಿ ಕೌಂಡಿನ್ಯಕ್ಕೆ ಸಂಬಂಧಿಸಿದ 5 ಮುಖ್ಯ ಅಂಶಗಳಿವು

1) ‘ಐಎನ್ಎಸ್‌ವಿ ಕೌಂಡಿನ್ಯ' ಹೆಸರು ಯಾಕೆ?

ಹಿಂದೂ ಮಹಾಸಾಗರದ ಉದ್ದಗಲಕ್ಕೂ ಪ್ರಯಾಣ ಬೆಳೆಸಿದ ಪುರಾಣ ಪುರುಷ ಭಾರತೀಯ ನಾವಿಕ ಮತ್ತು ಸನ್ಯಾಸಿ ಕೌಂಡಿನ್ಯ ಅವರು ನೌಕಾಯಾನದಲ್ಲಿ ಹೆಸರು ಮಾಡಿದ್ದರು. ಹೀಗಾಗಿ ನೌಕೆಗೆ ಅವರ ಹೆಸರು ಇಡಲಾಗಿದೆ ಎಂದು ಈ ಹಡಗಿನ ತಯಾರಿಕೆಯ ಪರಿಕಲ್ಪನೆಯ ರೂವಾರಿ, ಪ್ರಧಾನ ಮಂತ್ರಿ ಅವರ ಆರ್ಥಿಕ ಸಲಹಾ ಮಂಡಳಿ ಸದಸ್ಯ ಸಂಜೀವ್ ಸನ್ಯಾಲ್ ತಿಳಿಸಿದರು.

2) 5ನೇ ಶತಮಾನದ ಹಡಗು, ಪರಿಕಲ್ಪನೆ ಹೇಗೆ

ಮಹಾರಾಷ್ಟ್ರದ ಅಜಂತಾ ಗುಹೆಯಲ್ಲಿನ ಪ್ರಾಚೀನ ನೌಕಾಯಾನದ ಚಿತ್ರಗಳು ನೌಕೆ ತಯಾರಿಕೆಗೆ ಸ್ಫೂರ್ತಿಯಾಗಿವೆ. 5ನೇ ಶತಮಾನದಲ್ಲಿ ವಾಣಿಜ್ಯ ಸರಕು ಸಾಗಣೆಗೆ ಬಳಕೆಯಾಗಿದ್ದ ಹಡಗು ಎಂಬ ವ್ಯಾಖ್ಯಾನಗಳು ಸಿಗುತ್ತವೆ. ಅವುಗಳನ್ನು ಆಧರಿಸಿ ಈ ಹಡಗು ನಿರ್ಮಾಣವಾಗಿದೆ.

3) ಐಎನ್‌ಎಸ್‌ವಿ ಕೌಂಡಿನ್ಯದ ನೋಟ, ಶೈಲಿ ಹೇಗಿದೆ

ನೌಕೆಯ ಹಾಯಿಗೆ ಕದಂಬರ ರಾಜಲಾಂಛನವಾಗಿದ್ದ ಗಂಡಭೇರುಂಡ ಚಿತ್ರ ಅಳವಡಿಸಲಾಗಿದೆ. ಮರದ ಹಲಗೆಗಳನ್ನು ತೆಂಗಿನ ನಾರುಗಳ ದಾರ ಬಳಸಿ ಹೊಲಿದು ರಚಿಸಿದ ನೌಕೆಯ ಮುಂಭಾಗದಲ್ಲಿ ಸಿಂಹದ ಪ್ರತಿಕೃತಿ ರಚಿಸಿದ್ದು ಗಮನಸೆಳೆಯುತ್ತಿದೆ. ಹರಪ್ಪ ಶೈಲಿಯ ಲಂಗರು ಹೊಂದಿದೆ.

4) ಐಎನ್‌ಎಸ್‌ವಿ ಕೌಂಡಿನ್ಯ ನಿರ್ಮಾಣ

ಗೋವಾದ ಹೋದಿ ಇನ್ನೋವೇಶನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ನೌಕೆಯನ್ನು ಎರಡು ವರ್ಷಗಳ ಅವಧಿಯಲ್ಲಿ ನಿರ್ಮಿಸಿದೆ. ಸಾಂಪ್ರದಾಯಿಕ ತೆಂಗಿನ ನಾರಿನ ಹೊಲಿಗೆ ತಂತ್ರಗಳನ್ನು ಬಳಸಿಕೊಂಡು ಬಾಬು ಶಂಕರನ್ ನೇತೃತ್ವದ 20ಕ್ಕೂ ಹೆಚ್ಚು ಕರಕುಶಲಕರ್ಮಿಗಳ ತಂಡ ಈ ಹಡಗನ್ನು ನಿರ್ಮಿಸಿದೆ.

ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.