ಕನ್ನಡ ಸುದ್ದಿ  /  Nation And-world  /  Intel Report Says Pakistan Behind Pushing Khalistani Leader Amritpal Singh Back To India

Amritpal Singh: ಮತ್ತೋರ್ವ ಬ್ರಿಂದನ್‌ವಾಲೆಗೆ ಜನ್ಮ ನೀಡುತ್ತಿದೆ ಪಾಪಿಸ್ತಾನ: ಅಮೃತಪಾಲ್‌ ಸಿಂಗ್‌ಗೆ 'ನೆರೆ' ರಾಷ್ಟ್ರದ ನೆರವು!

ಖಲಿಸ್ತಾನ ಬೆಂಬಲಿಗ ಹಾಗೂ ತೀವ್ರಗಾಮಿ ಸಿಖ್ ಬೋಧಕ ಅಮೃತ್‌ಪಾಲ್‌ ಸಿಂಗ್‌ಗೆ ಪಾಕಿಸ್ತಾನದ ಬಾಹ್ಯ ಗುಪ್ತಚರ ಇಲಾಖೆ ಐಎಸ್‌ಐ ನೆರವು ನೀಡುತ್ತಿದೆ ಎಂಬ ಆಘಾತಕಾರಿ ಸಂಗತಿಯನ್ನು ಭಾರತೀಯ ಗುಪ್ತಚರ ಇಲಾಖೆ ಬಹಿರಂಗಪಡಿಸಿದೆ. ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದಲೇ, ಐಎಸ್‌ಐ ಅಮೃತ್‌ಪಾಲ್‌ ಸಿಂಗ್‌ಗೆ ನೆರವು ನೀಡುತ್ತಿದೆ ಎಂದು ವರದಿ ಹೇಳಿದೆ.

ಅಮೃತ್‌ಪಾಲ್‌ ಸಿಂಗ್‌ (ಸಂಗ್ರಹ ಚಿತ್ರ)
ಅಮೃತ್‌ಪಾಲ್‌ ಸಿಂಗ್‌ (ಸಂಗ್ರಹ ಚಿತ್ರ) (ANI)

ನವದೆಹಲಿ: ಖಲಿಸ್ತಾನ ಬೆಂಬಲಿಗ ಹಾಗೂ ತೀವ್ರಗಾಮಿ ಸಿಖ್ ಬೋಧಕ ಅಮೃತ್‌ಪಾಲ್‌ ಸಿಂಗ್‌, ಈಗ ಭಾರತದ ಭದ್ರತೆಗೆ ಸವಾಲಾಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ. 'ವಾರಿಸ್ ಪಂಜಾಬ್ ದೇ' ಸಂಘಟನೆಯ ಮುಖ್ಯಸ್ಥ ಅಮೃತ್‌ಪಾಲ್‌ ಸಿಂಗ್‌, ಈಗ ಭಾರತ ವಿರೋಧಿ ಹೇಳಿಕೆಗಳನ್ನು ನೀಡುವಲ್ಲಿ ಮತ್ತು ಖಲಿಸ್ತಾನ್‌ ಹೋರಾಟಕ್ಕೆ ಮರುಜೀವ ನೀಡುವಲ್ಲಿ ನಿರತನಾಗಿದ್ದಾನೆ.

ಅಮೃತ್‌ಪಾಲ್‌ ಸಿಂಗ್‌ ಹುಡುಕಾಟಕ್ಕೆ ಇದೀಗ ಪಂಜಾಬ್‌ ಪೊಲೀಸರು ಬಲೆ ಬೀಸಿದ್ದು, ಆತ ಸದ್ಯ ತಲೆಮರೆಸಿಕೊಂಡಿದ್ದಾನೆ. ಕೇಂದ್ರ ಗುಪ್ತಚರ ಇಲಾಖೆ ಕೂಡ ಅಮೃತ್‌ಪಾಲ್‌ ಸಿಂಗ್‌ ಇರುವಿಕೆಗೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ. ಈ ಮಧ್ಯೆ ಅಮೃತ್‌ಪಾಲ್‌ ಸಿಂಗ್‌ಗೆ ಪಾಕಿಸ್ತಾನದ ಬಾಹ್ಯ ಗುಪ್ತಚರ ಇಲಾಖೆ ಐಎಸ್‌ಐ ನೆರವು ನೀಡುತ್ತಿದೆ ಎಂಬ ಆಘಾತಕಾರಿ ಸಂಗತಿಯನ್ನು ಭಾರತೀಯ ಗುಪ್ತಚರ ಇಲಾಖೆ ಬಹಿರಂಗಪಡಿಸಿದೆ.

ಹೌದು, ದುಬೈನಲ್ಲಿ ಟ್ರಕ್‌ ಡ್ರೈವರ್‌ ಆಗಿ ಕೆಲಸ ಮಾಡುತ್ತಿದ್ದ ಅಮೃತ್‌ಪಾಲ್‌ ಸಿಂಗ್‌, ಭಾರತಕ್ಕೆ ಮರಳಿ ಬರುವಲ್ಲಿ ಐಎಸ್‌ಐ ಪಾತ್ರವಿದೆ ಎಂದು ಭಾರತದ ಗುಪ್ತಚರ ಇಲಾಖೆ ವರದಿಯೊಂದು ಹೇಳಿದೆ. ಖಲಿಸ್ತಾನ ಹೋರಾಟಕ್ಕೆ ಮರುಜೀವ ನೀಡುವ ಮೂಲಕ, ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದಲೇ, ಐಎಸ್‌ಐ ಅಮೃತ್‌ಪಾಲ್‌ ಸಿಂಗ್‌ಗೆ ಸಕಲ ನೆರವು ಒದಗಿಸುತ್ತಿದೆ ಎಂದು ಈ ವರದಿಯಲ್ಲಿ ಹೇಳಲಾಗಿದೆ.

ಭಾರತದ ಹೊರಗೆ ನೆಲೆಸಿರುವ ಖಲಿಸ್ತಾನ ಬೆಂಬಲಿಗರ ಸಹಾಯದಿಂದ, ಪಂಜಾಬ್ ಅನ್ನು ಮತ್ತೆ ಭಯೋತ್ಪಾದನೆಯ ಕರಾಳ ದಿನಗಳಿಗೆ ದೂಡುವುದು ಐಎಸ್‌ಐ ಹುನ್ನಾರವಾಗಿದೆ. ಇದಕ್ಕಾಗಿ ಅಮೃತ್‌ಪಾಲ್‌ ಸಿಂಗ್‌ಗೆ ಎಲ್ಲಾ ರೀತಿಯ ನೆರವು ನೀಡುತ್ತಿರುವ ಐಎಸ್‌ಐ, ಆತನನ್ನು ಮತ್ತೊರ್ವ ಜರ್ನೈಲ್ ಸಿಂಗ್‌ ಬ್ರಿಂದನ್‌ವಾಲೆಯನ್ನಾಗಿ ಬೆಳೆಸಲು ಮುಂದಾಗಿದೆ ಎಂದು ವರದಿಯು ಎಚ್ಚರಿಸಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪಂಜಾಬ್ ಮುಖ್ಯಮಂತ್ರಿ ಬಗವಂತ್ ಸಿಂಗ್ ಮಾನ್ ಅವರಿಗೆ ಬೆದರಿಕೆ ಹಾಕಿದ್ದ ಅಮೃತ್‌ಪಾಲ್‌ ಸಿಂಗ್‌, ಭಾರತದಿಂದ ಪ್ರತ್ಯೇಕತೆಯನ್ನು ಘೋಷಿಸುವ ಮತ್ತು ಖಲಿಸ್ತಾನವನ್ನು ರಚಿಸುವ ಬಗ್ಗೆ ಬಹಿರಂಗವಾಗಿ ಹೇಳಿಕೆಗಳನ್ನು ನೀಡಿದ್ದ.

ಅಷ್ಟೇ ಅಲ್ಲದೇ ಭಯೋತ್ಪಾದಕರಿಂದ ಹತ್ಯೆಗೀಡಾದ ಮಾಜಿ ಪ್ರಧಾನಿ ಇಂದಿರಾಗಾಂಧಿ ಮತ್ತು ಪಂಜಾಬ್ ಮುಖ್ಯಮಂತ್ರಿ ಬಿಯಾಂತ್ ಸಿಂಗ್‌ ಅವರ ಸ್ಥಿತಿಯೇ ಅಮಿತ್‌ ಶಾ ತ್ತು ಭಗವಂತ್‌ ಮಾನ್‌ ಅವರಿಗೆ ಬರಲಿದೆ ಎಂದೂ ಅಮೃತ್‌ಪಾಲ್‌ ಸಿಂಗ್‌ ಗುಟುರು ಹಾಕಿದ್ದ.

ಖಲಿಸ್ತಾನ ರಚನೆಯ ಅಂತಿಮ ಗುರಿಯನ್ನು ಸಾಧಿಸಲು ಸಿಖ್ ಯುವಕರು, ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರಗಳ ವಿರುದ್ಧ ಸಶಸ್ತ್ರ ದಂಗೆಯನ್ನು ಆರಂಭಿಸಬೇಕು ಎಂದು ಅಮೃತ್‌ಪಾಲ್‌ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾನೆ. ಮೋಗಾ ಜಿಲ್ಲೆಯಲ್ಲಿ ಇತ್ತೀಚಿಗೆ ನಡೆದ ಸಮಾರಂಭವೊಂದರಲ್ಲಿ ಸಿಖ್ ಅಲ್ಲದ ಸರ್ಕಾರಗಳಿಗೆ ಪಂಜಾಬ್‌ನ ಜನರನ್ನು ಆಳುವ ಹಕ್ಕು ಇಲ್ಲ ಮತ್ತು ಪಂಜಾಬ್‌ನ ಜನರನ್ನು ಸಿಖ್ಖರು ಮಾತ್ರ ಆಳಬೇಕು ಎಂದು ಅಮೃತ್‌ಪಾಲ್‌ ಸಿಂಗ್‌ ಹೇಳಿದ್ದ.

1984ರಲ್ಲಿ ನಡೆದ ಆಪರೇಷನ್ ಬ್ಲೂ ಸ್ಟಾರ್ ವೇಳೆ ಹತನಾದ ಖಲಿಸ್ತಾನ ಭಯೋತ್ಪಾದಕ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆಯನ್ನು ಆರಾಧಿಸುವ ಅಮೃತ್‌ಪಾಲ್‌ ಸಿಂಗ್‌, ಉಡುಗೆ ತೊಡುಗೆ, ನಡೆ-ನುಡಿಗಳಲ್ಲಿ ಆತನನ್ನೇ ನಕಲು ಮಾಡುತ್ತಾನೆ. ಶಸ್ತ್ರಸಜ್ಜಿತ ಅಂಗರಕ್ಷಕರು ಸದಾ ಅಮೃತ್‌ಪಾಲ್‌ ಸಿಂಗ್‌ನನ್ನು ಸುತ್ತುವರೆದಿರುತ್ತಾರೆ.

ಪ್ರಸ್ತುತ ಪರಾರಿಯಾಗಿರುವ ಅಮೃತ್‌ಪಾಲ್‌ ಸಿಂಗ್, ಭಾರತದಲ್ಲಿ ವಿಚಾರಣೆಗೆ ಒಳಗಾಗಿರುವ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆ ಪ್ರಕರಣಗಳಲ್ಲಿ ಬೇಕಾಗಿರುವ ಇಂಟರ್‌ನ್ಯಾಶನಲ್ ಸಿಖ್ ಯೂತ್ ಫೆಡರೇಶನ್ ಮುಖ್ಯಸ್ಥ ಲಖ್ಬೀರ್ ಸಿಂಗ್ ರೋಡ್ ಅವರೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂಬ ಆರೋಪವೂ ಇದೆ.

ಅಮೃತ್‌ಪಾಲ್‌ ಸಿಂಗ್‌ ದುಬೈನಲ್ಲಿದ್ದಾಗ ರೋಡ್‌ನ ಸಹೋದರ ಜಸ್ವಂತ್ ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದ.ಬಳಿಕ ಐಎಸ್‌ಐ ಆಜ್ಞೆಯ ಮೇರೆಗೆ ಪಂಜಾಬ್‌ಗೆ ಹಿಂದಿರುಗಿದ ಈತ, ಅಮೃತ್ ಸಂಚಾರ್‌ನ ಸಹಾಯ ಪಡೆದು ‘ಖಾಲ್ಸಾ ವಹೀರ್’ ಎಂಬ ಅಭಿಯಾನವನ್ನು ಪ್ರಾರಂಭಿಸಿದ. ಬಳಿಕ 'ವಾರಿಸ್ ಪಂಜಾಬ್ ದೇ' ಸಂಘಟನೆಯನ್ನು ಸ್ಥಾಪಿಸಿ, ಆ ಮೂಲಕ ಖಲಿಸ್ತಾನ ಚಳುವಳಿಗೆ ಮರುಜನ್ಮ ನೀಡಲು ಅಮೃತ್‌ಪಾಲ್‌ ಸಿಂಗ್‌ ಪ್ರಯತ್ನಿಸುತ್ತಿದ್ದಾನೆ ಎನ್ನಲಾಗಿದೆ.

ಒಟ್ಟಿನಲ್ಲಿ ಭಾರತದಲ್ಲಿ ಹಿಂಸಾಚಾರ ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಸದಾ ಕುಮ್ಮಕ್ಕು ನೀಡುವ ಪಾಕಿಸ್ತಾನದ ಬಾಹ್ಯ ಗುಪ್ತಚರ ಸಂಸ್ಥೆ ಐಎಸ್ಐ, ಈ ಬಾರಿ ಅಮೃತ್‌ಪಾಲ್‌ ಸಿಂಗ್‌ನನ್ನು ಗುರಾಣಿಯನ್ನಾಗಿ ಮಾಡಿಕೊಂಡು ಭಾರತವನ್ನು ತುಂಡರಿಸುವ ಕುತಂತ್ರ ನಡೆಸತ್ತಿರುವುದು ಸ್ಪಷ್ಟವಾಗಿದೆ.

IPL_Entry_Point

ವಿಭಾಗ