Afghanistan Crisis: ಕುಸಿದ ಭರವಸೆಗಳು: ತಾಲಿಬಾನಿನ ವೈಫಲ್ಯ ಮತ್ತು ಅಫ್ಘನ್ನರ ಸಂಕಷ್ಟಗಳು; ಗಿರೀಶ್ ಲಿಂಗಣ್ಣ ಬರಹ
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಬಂದ ಬಳಿಕ ಆ ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಹೆಚ್ಚಾಗುತ್ತಲೇ ಇದೆ. ಜನರು ಒಪ್ಪೊತ್ತಿನ ಊಟಕ್ಕೂ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರ ಜೊತೆಗೆ ಪ್ರವಾಹ ದೊಡ್ಡ ಪೆಟ್ಟು ನೀಡಿದೆ. ಈ ಬಗ್ಗೆ ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರಾದ ಗಿರೀಶ್ ಲಿಂಗಣ್ಣ ಅವರ ಬರಹ ಇಲ್ಲಿದೆ.
ಕಳೆದ ತಿಂಗಳು ಅಫ್ಘಾನಿಸ್ತಾನ (Afghanistan Flood) ಇನ್ನೊಂದು ಭೀಕರ ನೈಸರ್ಗಿಕ ವಿಕೋಪಕ್ಕೆ ತುತ್ತಾಯಿತು. ಅಫ್ಘಾನಿಸ್ತಾನದ ಉತ್ತರ ಭಾಗದ ಪ್ರದೇಶಗಳಾದ ಬಾದಾಖ್ಷಾನ್, ಬಾಘ್ಲಾನ್ ಹಾಗೂ ತಾಖರ್‌ಗಳಲ್ಲಿ ತಲೆದೋರಿದ ತೀವ್ರ ಪ್ರವಾಹದ ಕಾರಣದಿಂದ ನೂರಾರು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದು, ಸಾವಿರಾರು ಜನರು ತಮ್ಮ ಮನೆ ಮಠಗಳನ್ನು ಬಿಟ್ಟು, ಗುಳೆ ಹೋಗುವಂತಾಯಿತು. ಕಳೆದ ವರ್ಷಾಂತ್ಯದಲ್ಲಿ ಅಫ್ಘಾನಿಸ್ತಾನದ (Afghanistan Earthquake) ಪಶ್ಚಿಮ ಭಾಗಗಳಲ್ಲಿ ಸರಣಿ ಭೂಕಂಪಗಳು ಸಂಭವಿಸಿದ್ದವು. ಈ ನೈಸರ್ಗಿಕ ವಿಕೋಪದಲ್ಲಿ ಕನಿಷ್ಠ 2,000 ಜನರು ಸಾವಿಗೀಡಾಗಿದ್ದು, 1,50,000 ಜನರು ತುರ್ತು ಮಾನವೀಯ ಸಹಾಯದ ಅವಶ್ಯಕತೆಯಲ್ಲಿದ್ದಾರೆ. ಇದರ ಬೆನ್ನಲ್ಲೇ ಪ್ರವಾಹಗಳು ಸಂಭವಿಸಿವೆ.
ಅಫ್ಘಾನಿಸ್ತಾನ (Afghanistan Crisis) ಈಗ ಅಸಮರ್ಥ ಸರ್ಕಾರವನ್ನು ಹೊಂದಿದ್ದು, ಅದರ ಆರ್ಥಿಕತೆಯಂತೂ ಅಪಾರ ಹಿನ್ನಡೆ ಅನುಭವಿಸುತ್ತಿದೆ. ಇಂತಹ ಸಂದರ್ಭದಲ್ಲಿ ತಲೆದೋರಿರುವ ನೈಸರ್ಗಿಕ ವಿಕೋಪಗಳು ಅಫ್ಘಾನಿಸ್ತಾನಕ್ಕೆ ಭಾರೀ ಹೊಡೆತ ನೀಡಿವೆ. ಆಗಸ್ಟ್ 2021ರಲ್ಲಿ ತಾಲಿಬಾನ್ ಮರಳಿ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ ಬಳಿಕ, ಅಫ್ಘಾನಿಸ್ತಾನದ ಪರಿಸ್ಥಿತಿ ವ್ಯಾಪಕವಾಗಿ ಹದಗೆಡುತ್ತಾ ಸಾಗಿದೆ. ಮೂಲಭೂತ ಔಷಧಗಳ ಪೂರೈಕೆಯೂ ಅಲ್ಲಿ ಸಾಧ್ಯವಾಗುತ್ತಿಲ್ಲ. ಲಕ್ಷಾಂತರ ಜನರು ಆಹಾರದ ಅಲಭ್ಯತೆಯಿಂದ ನಲುಗಿ ಹೋಗಿದ್ದಾರೆ. ತಾಲಿಬಾನ್ ದಾಳಿಕೋರರಾಗಿ ಪ್ರಭಾವಶಾಲಿಗಳಾಗಿದ್ದರೂ, ಮರಳಿ ಅಫ್ಘಾನಿಸ್ತಾನದ ಆಡಳಿತ ವಹಿಸಿಕೊಂಡ ಬಳಿಕ ಪರಿಣಾಮಕಾರಿ ಸರ್ಕಾರ ನಿರ್ವಹಿಸಲು ವಿಫಲವಾಗಿದೆ.
ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ರಾಜತಾಂತ್ರಿಕ ಸಂಬಂಧ ಇಲ್ಲ
ಜಗತ್ತಿನ ಯಾವ ರಾಷ್ಟ್ರವೂ ತಾಲಿಬಾನ್ ಸರ್ಕಾರವನ್ನು ಅಫ್ಘಾನಿಸ್ತಾನದ ಅಧಿಕೃತ ಸರ್ಕಾರ ಎಂದು ಮಾನ್ಯ ಮಾಡಿಲ್ಲದ ಕಾರಣ, ಮಾನವೀಯ ಸಂಕಷ್ಟಗಳು ಇನ್ನಷ್ಟು ತೀವ್ರಗೊಂಡಿವೆ. ಅಂತಾರಾಷ್ಟ್ರೀಯ ಸಮುದಾಯ ಅಫ್ಘಾನಿಸ್ತಾನದ ಜೊತೆಗೆ ಈಗ ರಾಜತಾಂತ್ರಿಕ ಸಂಬಂಧ ಹೊಂದಿಲ್ಲದಿರುವುದು ಅಫ್ಘಾನಿಸ್ತಾನದ ಗಾಯದ ಮೇಲೆ ಇನ್ನೊಂದು ಬರೆ ಎಳೆದಂತಾಗಿದೆ. ಯಾವೊಂದು ರಾಷ್ಟ್ರವೂ ತಾಲಿಬಾನ್ ಸರ್ಕಾರವನ್ನು ಒಪ್ಪಿಕೊಂಡಿಲ್ಲದ್ದರಿಂದ, ಅಫ್ಘಾನಿಸ್ತಾನಕ್ಕೆ ಈಗ ಅತ್ಯವಶ್ಯಕವಾದ ಆರ್ಥಿಕ ಹೂಡಿಕೆಗಳು ಮತ್ತು ಅಂತಾರಾಷ್ಟ್ರೀಯ ನೆರವು ಲಭಿಸುತ್ತಿಲ್ಲ. ಅಫ್ಘಾನಿಸ್ತಾನದ ಜನರಿಗೆ ಇವು ಈಗ ಅತ್ಯಂತ ಅವಶ್ಯಕ ಬೇಡಿಕೆಗಳಾಗಿವೆ.
ಈಗಾಗಲೇ ಹಲವಾರು ರಾಷ್ಟ್ರಗಳು ಪರೋಕ್ಷವಾಗಿ ತಾಲಿಬಾನ್ ಜೊತೆ ಸಂವಹನ ನಡೆಸುತ್ತಿವೆಯಾದರೂ, ಅವು ಯಾವುವೂ ತಾಲಿಬಾನ್‌ಗೆ ಅಧಿಕೃತ ಮಾನ್ಯತೆ ನೀಡಿಲ್ಲ. 1990ರ ದಶಕದಲ್ಲಿ ಆಡಳಿತ ನಡೆಸಿದ ಬಳಿಕ, ತಾಲಿಬಾನ್ ಇಂದಿಗೂ ತನ್ನ ನಡವಳಿಕೆಯಲ್ಲಿ ಯಾವುದೇ ಬದಲಾವಣೆ ತೋರದಿರುವುದು ಅದರ ಕುರಿತ ಅಂತಾರಾಷ್ಟ್ರೀಯ ಧೋರಣೆಗೆ ಕಾರಣವಾಗಿದೆ.
2021ರಲ್ಲಿ ಮರಳಿ ಅಧಿಕಾರ ಸ್ಥಾಪಿಸುವ ಮುನ್ನ, ತಾಲಿಬಾನ್ ನೀಡಿದ್ದ ಹಲವಾರು ಭರವಸೆಗಳು ಈಗಾಗಲೇ ಹುಸಿಯಾಗಿವೆ. ಹೆಣ್ಣು ಮಕ್ಕಳಿಗೆ ಶಿಕ್ಷಣ ಈಗ ಗಗನ ಕುಸುಮವಾಗಿದ್ದು, ಅವರನ್ನು ಶಾಲೆಗೆ ಹೋಗುವುದರಿಂದ ನಿಷೇಧಿಸಲಾಗಿದೆ. ಅಲ್ ಖೈದಾದಂತಹ ಉಗ್ರಗಾಮಿ ಸಂಘಟನೆಗಳು ಯಾವುದೇ ನಿರ್ಬಂಧಗಳಿಲ್ಲದೆ ಸಂಚರಿಸುತ್ತಿವೆ. ಮಹಿಳೆಯರನ್ನು ಅವರ ಉದ್ಯೋಗಗಳಿಂದ ತೆಗೆದುಹಾಕಲಾಗಿದೆ.
ಅಫ್ಘಾನಿಸ್ತಾನದ ಪರಿಸ್ಥಿತಿಯನ್ನು ಇನ್ನಷ್ಟು ವಿಷಮಗೊಳಿಸುವಂತೆ, ತಾಲಿಬಾನ್ ನಾಯಕತ್ವದಲ್ಲಿರುವ ಆಂತರಿಕ ಭಿನ್ನಾಭಿಪ್ರಾಯಗಳ ಕಾರಣದಿಂದ ಅಂತಾರಾಷ್ಟ್ರೀಯ ಸಮುದಾಯ ತಾನು ಯಾರ ಜೊತೆ ಮಾತುಕತೆ ನಡೆಸಬೇಕು ಎಂಬ ಗೊಂದಲದಲ್ಲಿದೆ. ಈ ಸಮಸ್ಯೆಗಳು ತಾಲಿಬಾನ್‌ಗೆ ಅಧಿಕೃತ ಮಾನ್ಯತೆ ಪಡೆಯುವುದು ಕಷ್ಟಕರವಾಗಿಸಿವೆ.
ನೆರೆಯ ದೇಶಗಳು ವ್ಯವಹರಿಸುತ್ತಿದ್ದರೂ ನೆರವುಗಿಂತ ತನ್ನ ಹಿತಾಸಕ್ತಿ ಸಾಧನೆಗೆ ಸೀಮಿತ
ಯಾವುದಾದರೂ ರಾಷ್ಟ್ರ ತಾಲಿಬಾನ್ ಜೊತೆ ವ್ಯವಹರಿಸುತ್ತಿದೆ ಎಂದರೆ, ಅದು ಅಫ್ಘಾನಿಸ್ತಾನಕ್ಕೆ ನೆರವು ನೀಡುವುದಕ್ಕಿಂತಲೂ ತನ್ನ ಹಿತಾಸಕ್ತಿಗಳನ್ನು ಸಾಧಿಸುವುದಕ್ಕೆ ಸೀಮಿತವಾಗಿದೆ. ಉದಾಹರಣೆಗೆ, ಅಫ್ಘಾನಿಸ್ತಾನದ ಮಧ್ಯ ಏಷ್ಯಾದ ನೆರೆಹೊರೆಯ ರಾಷ್ಟ್ರಗಳು ತಮ್ಮ ಆರ್ಥಿಕ ಮತ್ತು ಭದ್ರತಾ ಕಾರಣಗಳಿಗಾಗಿ ಕಾಬೂಲ್ ಜೊತೆ ಕಾರ್ಯಾಚರಿಸುತ್ತಿವೆ. ಇತ್ತೀಚೆಗೆ ಕಜ಼ಕಿಸ್ತಾನ ತಾಲಿಬಾನ್ ಜೊತೆ 200 ಮಿಲಿಯನ್ ಡಾಲರ್ ಮೌಲ್ಯದ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದು, ಹಲವು ಹಿರಿಯ ತಾಲಿಬಾನ್ ನಾಯಕರ ಮೇಲಿದ್ದ ಪ್ರಯಾಣ ನಿರ್ಬಂಧಗಳನ್ನು ಹಿಂಪಡೆದಿದೆ. ಇದೇ ವೇಳೆ, ತುರ್ಕ್‌ಮೆನಿಸ್ತಾನ್ ಮತ್ತು ಉಜ್ಬೆಕಿಸ್ತಾನಗಳು ಗಡಿ ಭದ್ರತೆ ಮತ್ತು ಉಗ್ರ ನಿಗ್ರಹದ ಕಾರಣಗಳಿಗಾಗಿ ತಾಲಿಬಾನ್ ಜೊತೆಗೆ ವ್ಯವಹರಿಸುತ್ತಿವೆ.
ಆಶ್ಚರ್ಯಕರ ವಿಚಾರವೆಂದರೆ, ಈ ಪ್ರದೇಶದಲ್ಲಿ ತಾಲಿಬಾನ್ ಜೊತೆಗೆ ಇರಾನ್ ಅತ್ಯುತ್ತಮ ಸಂಬಂಧ ಹೊಂದಿದೆ. ಶಿಯಾ ಮುಸ್ಲಿಂ ಮತ್ತು ಸುನ್ನಿ ಮುಸ್ಲಿಂ ಮೂಲಭೂತವಾದಿಗಳ ನಡುವಿನ ಈ ಅಸಾಮಾನ್ಯವಾದ ಸಂಬಂಧಕ್ಕೆ ರಾಷ್ಟ್ರೀಯ ಹಿತಾಸಕ್ತಿಗಳು ಮತ್ತು ಭೌಗೋಳಿಕ ರಾಜಕಾರಣದ ಬೆಳವಣಿಗೆಗಳು ಮಾತ್ರವೇ ಕಾರಣವಾಗಿದೆ. ತಾಲಿಬಾನ್ ಜೊತೆಗೆ ಸಂಬಂಧ ಹೊಂದಲು ಇರಾನ್ ಮುಂದಿರುವ ಪ್ರಮುಖ ಕಾರಣವೆಂದರೆ, ಅಫ್ಘಾನಿಸ್ತಾನದಲ್ಲಿ ಹುಟ್ಟಿ, ಇರಾನ್‌ಗೆ ಹರಿಯುವ ಹೆಲ್ಮಾಂಡ್ ನದಿಯ ನೀರನ್ನು ಪಡೆಯುವುದು. ಇದು ಇರಾನ್ ಮತ್ತು ಅದರ ಸುನ್ನಿ ನೆರೆಹೊರೆಯವರ ಪ್ರಾದೇಶಿಕ ವ್ಯವಹಾರದ ಭಾಗವಾಗಿದೆ. ತನ್ನ ಸುತ್ತಲಿನ ಅರಬ್ ನೆರೆಹೊರೆಯ ಕಾರಣದಿಂದಾಗಿ, ತನ್ನ ರಕ್ಷಣಾ ಕ್ರಮದ ಅತ್ಯಂತ ಪರಿಣಾಮಕಾರಿ ಕ್ರಮವೆಂದರೆ ಸುನ್ನಿ ತಾಲಿಬಾನ್ ಜೊತೆಗೆ ವ್ಯವಹರಿಸುವುದು ಎಂದು ಇರಾನ್ ಹೇಳಿದೆ.
ಭೌಗೋಳಿಕ ರಾಜಕಾರಣದ ಇನ್ನೊಂದು ವೈಚಿತ್ರ್ಯ ಎಂಬಂತೆ, ಹಲವಾರು ವರ್ಷಗಳ ಸಹಕಾರ, ಸ್ನೇಹದ ಬಳಿಕ, ಈಗ ತಾಲಿಬಾನ್ ಮತ್ತು ಪಾಕಿಸ್ತಾನ ಪರಸ್ಪರ ವಿಷಮ ಸಂಬಂಧವನ್ನು ಹೊಂದಿವೆ. ಆಗಾಗ ಪಾಕಿಸ್ತಾನ ಮತ್ತು ತಾಲಿಬಾನ್ ನಡುವೆ ಗಡಿ ಚಕಮಕಿಗಳೂ ಏರ್ಪಡುತ್ತಿವೆ. ಈಗಾಗಲೇ ಇರಾನ್ ಮತ್ತು ಪಾಕಿಸ್ತಾನದ ನಡುವಿನ ಸಂಬಂಧವೂ ಉತ್ತಮವಾಗಿಲ್ಲದಿರುವುದರಿಂದ, ವಿಚಿತ್ರವಾದರೂ ಇರಾನ್ - ತಾಲಿಬಾನ್ ಸ್ನೇಹ ಅಸಂಭವವೇನಲ್ಲ.
ಇನ್ನು ಚೀನಾ ಮತ್ತು ರಷ್ಯಾದಂತಹ ದೇಶಗಳೂ ಭೌಗೋಳಿಕ ರಾಜಕಾರಣದ ಪರಿಣಾಮವಾಗಿ ತಾಲಿಬಾನ್ ಜೊತೆಗೆ ವ್ಯವಹರಿಸುತ್ತಿವೆ. ಮಾಸ್ಕೋ ಮತ್ತು ಬೀಜಿಂಗ್‌ಗಳಿಗೆ ಪಾಶ್ಚಾತ್ಯ ಶಕ್ತಿಗಳ ವಿರುದ್ಧ ತಾಲಿಬಾನ್ ಗೆಲುವು ಸಾಧಿಸಿರುವುದೇ ಕಾಬೂಲ್ ಜೊತೆ ಸ್ನೇಹ ಸಂಬಂಧ ಹೊಂದಲು ಸಕಾರಣವಾಗಿದೆ. ಅದರೊಡನೆ, ರಷ್ಯಾ ತಾಲಿಬಾನ್ ಅನ್ನು ದಾಯೆಷ್ ವಿರುದ್ಧದ ರಕ್ಷಣೆ ಎಂದು ತಪ್ಪಾಗಿ ಭಾವಿಸಿದೆ. ಇನ್ನೊಂದೆಡೆ ಚೀನಾ ತಾಲಿಬಾನ್ ನಿಯಂತ್ರಿತ ಅಫ್ಘಾನಿಸ್ತಾನ ತನಗೆ ಅವಶ್ಯಕ ಖನಿಜ ಸಂಪನ್ಮೂಲಗಳನ್ನು ಪಡೆಯಲು ಸಂಭಾವ್ಯ ತಾಣ ಎಂದು ನಂಬಿದೆ.
ದಾಯೆಷ್ ಎನ್ನುವುದು ತನ್ನ ವಿಪರೀತ ಹಿಂಸಾಚಾರಕ್ಕೆ ಮತ್ತು ಮೂಲಭೂತವಾದಿ ಧೋರಣೆಗೆ ಹೆಸರಾಗಿರುವ ಇಸ್ಲಾಮಿಕ್ ಸ್ಟೇಟ್‌ನ ಇನ್ನೊಂದು ಹೆಸರಾಗಿದೆ. ಇಸ್ಲಾಮಿಕ್ ಸ್ಟೇಟ್ ಸಂಘಟನೆ ಇರಾಕ್, ಸಿರಿಯಾ ಸೇರಿದಂತೆ ಮಧ್ಯ ಪೂರ್ವದ ವಿವಿಧ ಪ್ರದೇಶಗಳಲ್ಲಿ, ಅಫ್ಘಾನಿಸ್ತಾನ ಮತ್ತು ಇತರ ದೇಶಗಳಲ್ಲಿ ಬೇರೂರಿದ್ದು, ಅಲ್ಲಿ ತನ್ನ ಘಟಕಗಳನ್ನು ಸ್ಥಾಪಿಸಿ, ದಾಳಿಗಳನ್ನು ನಡೆಸಿದೆ.
ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿ ಮಾನ್ಯತೆ ಇಲ್ಲ
ತಾಲಿಬಾನ್ ಸಂಘಟನೆಯನ್ನು ಹಲವು ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳಿಂದಲೂ ಹೊರಗಿಡಲಾಗಿದೆ. ತಾಲಿಬಾನ್ ಆಡಳಿತಕ್ಕೆ ಮರಳುವ ಮೊದಲು ಅಫ್ಘಾನಿಸ್ತಾನ ಶಾಂಘಾಯ್ ಕೋಆಪರೇಶನ್ ಆರ್ಗನೈಸೇಶನ್, ಸೌತ್ ಏಷ್ಯನ್ ಅಸೋಸಿಯೇಷನ್ ಫಾರ್ ರೀಜನಲ್ ಕೋಆಪರೇಶನ್ ನಂತಹ ವಿವಿಧ ಸಂಘಟನೆಗಳ ಭಾಗವಾಗಿತ್ತು. ಆದರೆ ತಾಲಿಬಾನ್ ಆಡಳಿತ ಆರಂಭಗೊಂಡ ಬಳಿಕ, ಅಫ್ಘಾನಿಸ್ತಾನವನ್ನು ಈ ಸಂಘಟನೆಗಳಿಂದ ಹೊರಹಾಕಲಾಗಿದೆ. ವಿಶ್ವಸಂಸ್ಥೆ, ವಿಶ್ವ ಆರೋಗ್ಯ ಸಂಸ್ಥೆಯಂತಹ (ಡಬ್ಲ್ಯುಎಚ್ಒ) ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲೂ ಅಫ್ಘಾನಿಸ್ತಾನದ ಸ್ಥಿತಿ ಇದೇ ರೀತಿಯಾಗಿದೆ. ವಿಶ್ವಸಂಸ್ಥೆ ಇಂದಿಗೂ ಹಲವಾರು ತಾಲಿಬಾನ್ ನಾಯಕರ ಮೇಲೆ ಅಂತಾರಾಷ್ಟ್ರೀಯ ನಿರ್ಬಂಧಗಳನ್ನು ಮುಂದುವರಿಸಿದೆ.
ಅಂತಾರಾಷ್ಟ್ರೀಯ ಮಾನ್ಯತೆಗಾಗಿ ಅಫ್ಘಾನಿಸ್ತಾನದಲ್ಲಿ ಕೇವಲ ತಾಲಿಬಾನ್ ಮಾತ್ರವೇ ಪ್ರಯತ್ನ ನಡೆಸುತ್ತಿಲ್ಲ. ಬದಲಿಗೆ, ಪ್ರಮುಖ ತಾಲಿಬಾನ್ ವಿರೋಧಿ ಸಂಘಟನೆಗಳೂ ಸಹ ತಮಗೆ ಮಾನ್ಯತೆ ನೀಡುವಂತೆ ಅಂತಾರಾಷ್ಟ್ರೀಯ ಸಮುದಾಯವನ್ನು ಮನ ಒಲಿಸಲು ಹೆಣಗಾಡುತ್ತಿವೆ. ಈ ರೀತಿಯ ಅತಿದೊಡ್ಡ ಅಫ್ಘಾನಿಸ್ತಾನಿ ಸಂಘಟನೆ ಎಂದರೆ, ನ್ಯಾಷನಲ್ ರೆಸಿಸ್ಟೆನ್ಸ್ ಫೋರ್ಸ್ (ಎನ್ಆರ್‌ಎಫ್) ಆಗಿದ್ದು, ತಜಕಿಸ್ತಾನವನ್ನು ಹೊರತುಪಡಿಸಿ, ಯಾವುದೇ ದೇಶವೂ ಅದರೊಡನೆ ಅಧಿಕೃತವಾಗಿ ವ್ಯವಹರಿಸಿಲ್ಲ. ತಜಕಿಸ್ತಾನವೂ ಎನ್ಆರ್‌ಎಫ್ ಜೊತೆ ಅತ್ಯಂತ ಜಾಗರೂಕವಾಗಿ, ಮೌನವಾಗಿಯೇ ವ್ಯವಹರಿಸಿದೆ.
ಹಲವಾರು ದೇಶಗಳು ಈಗ ಪರೋಕ್ಷವಾಗಿ ತಾಲಿಬಾನ್ ಜೊತೆ ವ್ಯವಹಾರ ನಡೆಸುತ್ತಿದ್ದರೂ, ಯಾರೂ ಎನ್ಆರ್‌ಎಫ್ ಜೊತೆ ವ್ಯವಹರಿಸುತ್ತಿಲ್ಲ. ಒಂದು ವೇಳೆ ಅಮೆರಿಕಾದಂತಹ ದೇಶಗಳು ತಾಲಿಬಾನ್ ಜೊತೆಗೆ ಪರೋಕ್ಷವಾಗಿ ವ್ಯವಹರಿಸಲು ಸಾಧ್ಯವಿದ್ದರೆ, ಅವುಗಳು ತಾಲಿಬಾನ್ ವಿರೋಧಿ ಎನ್ಆರ್‌ಎಫ್ ಜೊತೆಗೂ ವ್ಯವಹರಿಸಬಹುದಾಗಿದೆ.
ಒಂದು ವೇಳೆ ತಾಲಿಬಾನ್ ಏನಾದರೂ ಅಫ್ಘಾನಿಸ್ತಾನದಲ್ಲಿ ಜವಾಬ್ದಾರಿಯುತವಾಗಿ ಆಡಳಿತ ನಡೆಸಿದರೆ, ಅಂತಾರಾಷ್ಟ್ರೀಯ ಸಮುದಾಯಕ್ಕೆ ತಾನು ನಂಬಿಕಾರ್ಹ ಎಂದು ಸಾಬೀತುಪಡಿಸಿದರೆ ಮಾತ್ರವೇ ಯಾವುದಾದರೂ ದೇಶಗಳು ಅದರೊಡನೆ ರಾಜತಾಂತ್ರಿಕ ಸಂಬಂಧ ಏರ್ಪಡಿಸಲು ಮುಂದಾಗಬಹುದು. ತಾಲಿಬಾನ್ ಸಂಘಟನೆ ಅಂತಾರಾಷ್ಟ್ರೀಯವಾಗಿ ಏಕಾಂಗಿಯಾಗಿ ಮುಂದುವರಿಯುವ ತನಕ, ಮೂಲಭೂತ ಸೌಕರ್ಯಗಳ ಕೊರತೆ, ಆರ್ಥಿಕ ಹೂಡಿಕೆ ಮತ್ತು ಮಾನವೀಯ ಸಹಾಯದ ಕೊರತೆಯಿಂದ ಅಫ್ಘಾನಿಸ್ತಾನದ ಜನರು ಸಂಕಷ್ಟ ಅನುಭವಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ.
ಅಫ್ಘನ್ನರ ಸಂಕಷ್ಟಗಳನ್ನು ಮುಕ್ತಾಯಗೊಳಿಸಲು ಸದ್ಯದ ಮಟ್ಟಿಗಿರುವ ಕ್ಷಿಪ್ರ ಉಪಾಯವೆಂದರೆ, ತಾಲಿಬಾನ್ ತಾನು ನೀಡಿರುವ ಭರವಸೆಗಳನ್ನು ಈಡೇರಿಸುವುದು, ಭಯೋತ್ಪಾದನೆಯನ್ನು ನಿಷೇಧಿಸುವುದು, ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವುದು, ಮತ್ತು ಎಲ್ಲ ಅಫ್ಘನ್ನರನ್ನು ಪ್ರತಿನಿಧಿಸುವಂತಹ ಸಮರ್ಥ ಸರ್ಕಾರವನ್ನು ಸ್ಥಾಪಿಸುವುದಾಗಿದೆ. ದುರದೃಷ್ಟವಶಾತ್, ತಾಲಿಬಾನ್ ತನ್ನ ವರ್ತನೆಯನ್ನು ಬದಲಾಯಿಸುವ ಕುರಿತು ಇಲ್ಲಿಯತನಕ ಯಾವುದೇ ಆಸಕ್ತಿಯನ್ನು ಪ್ರದರ್ಶಿಸಿಲ್ಲ. ಇದರಿಂದಾಗಿ ಅಫ್ಘನ್ನರ ಸಂಕಷ್ಟಗಳು ಎಂದಿನಂತೆ ಹಾಗೇ ಮುಂದುವರಿದಿವೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)