ಗಿರೀಶ್‌ ಲಿಂಗಣ್ಣ ಲೇಖನ: ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಕಾಲೂರಿದ ಚೀನಾದ ಚಾಂಗ್ ಇ-6
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಗಿರೀಶ್‌ ಲಿಂಗಣ್ಣ ಲೇಖನ: ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಕಾಲೂರಿದ ಚೀನಾದ ಚಾಂಗ್ ಇ-6

ಗಿರೀಶ್‌ ಲಿಂಗಣ್ಣ ಲೇಖನ: ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಕಾಲೂರಿದ ಚೀನಾದ ಚಾಂಗ್ ಇ-6

ಚಂದ್ರನ ಅಂಗಳನಕ್ಕೆ ಕಾಲಿಡಲು ಹಲವು ದೇಶಗಳು ಪ್ರಯತ್ನಿಸುತ್ತಲೇ ಇವೆ. ಚೀನಾ ಕೂಡ ಈ ನಿಟ್ಟಿನಲ್ಲಿ ಯಶಸ್ವಿ ಹೆಜ್ಜೆ ಇಟ್ಟಿದೆ.ಚೀನಾದ ಚಾಂಗ್ ಇ-6 ( Chang e 6) ಮಂಗಳನ ಅಂಗಳದಲ್ಲಿ ಕಾಲೂರಿದೆ. ಲೇಖಕ ಗಿರೀಶ್‌ ಲಿಂಗಣ್ಣ ಅವರ ವಿಶ್ಲೇಷಣೆ ಇಲ್ಲಿದೆ.

ಚೀನಾದ ಚಾಂಗ್ ಇ-6 ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಕಾಲೂರಿದೆ.
ಚೀನಾದ ಚಾಂಗ್ ಇ-6 ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಕಾಲೂರಿದೆ.

ಚೀನಾ ನಿರ್ಮಾಣದ ಚಾಂಗ್ಇ-6 ಚಂದ್ರ ಅನ್ವೇಷಣಾ ಯೋಜನೆಯ ಲ್ಯಾಂಡರ್ ಚಂದ್ರನ ದೂರದ ಬದಿಯಲ್ಲಿ ಜೂನ್ 2, ಭಾನುವಾರದಂದು ಬೀಜಿಂಗ್ ಸಮಯ ಬೆಳಗ್ಗೆ 6:23ಕ್ಕೆ (ಭಾರತೀಯ ಕಾಲಮಾನ ಬೆಳಗ್ಗೆ 3:53) ಯಶಸ್ವಿಯಾಗಿ ಇಳಿದಿದೆ. ಚೀನಾದ ಬಾಹ್ಯಾಕಾಶ ಸಂಸ್ಥೆಯಾದ ಚೈನಾ ನ್ಯಾಷನಲ್ ಸ್ಪೇಸ್ ಅಡ್ಮಿನಿಸ್ಟ್ರೇಶನ್ (CNSA) ಯೋಜನೆ ಯಶಸ್ವಿಯಾಗಿದೆ ಎಂದು ಘೋಷಿಸಿದೆ. ಚಾಂಗ್ ಇ-6 ಯೋಜನೆಯ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವವಾದ ಐಟ್ಕೆನ್ ಬೇಸಿನ್ ಪ್ರದೇಶದಲ್ಲಿ ಸುಗಮವಾಗಿ ಕಾಲೂರಿದೆ.

ಚಾಂಗ್ಇ 6 ಯೋಜನೆಗೆ ಚೀನೀಯರ ನಂಬಿಕೆಯಂತೆ ಚಂದ್ರ ದೇವಿಯಾದ ಚಾಂಗ್'ಇ ಹೆಸರನ್ನೇ ಇಡಲಾಗಿದೆ. ಚಾಂಗ್'ಇ-6 ಮೇ 3ರಂದು ಹೈನಾನ್ ಪ್ರದೇಶದ ವೆನ್‌ಚಾಂಗ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಳಿಸಲಾಗಿದೆ.

ಉಡಾವಣೆಗೊಂಡ ನಾಲ್ಕು ದಿನಗಳ ಬಳಿಕ, 8.35 ಟನ್ ತೂಕದ ಚಾಂಗ್'ಇ-6 ಬಾಹ್ಯಾಕಾಶ ನೌಕೆ ಚಂದ್ರನ ಕಕ್ಷೆಯನ್ನು ಪ್ರವೇಶಿಸಿತು. ಪ್ರಸ್ತುತ ಬಾಹ್ಯಾಕಾಶ ನೌಕೆ ಒಂದು ಲ್ಯಾಂಡರ್, ಅಸೆಂಡರ್, ಆರ್ಬಿಟರ್, ಮತ್ತು ಭೂಮಿಗೆ ಮರಳುವ ಕ್ಯಾಪ್ಸೂಲ್‌ಗಳನ್ನು ಹೊಂದಿದ್ದು, ಚಂದ್ರನ ಸುತ್ತಲೂ ಪರಿಭ್ರಮಣೆ ನಡೆಸುತ್ತಾ, ಚಂದ್ರನ ಅಂಗಳದಲ್ಲಿ ಇಳಿಯಲು ಸೂಕ್ತವಾದ ತಾಣವನ್ನು ಶೋಧಿಸುತ್ತಿತ್ತು. ಮೇ 30ರಂದು ಲ್ಯಾಂಡರ್ ಮತ್ತು ಅಸೆಂಡರ್ ಆರ್ಬಿಟರ್ ಮತ್ತು ರಿಟರ್ನ್ ಕ್ಯಾಪ್ಸೂಲ್‌ನಿಂದ ಬೇರ್ಪಟ್ಟಿತು.

ಭಾನುವಾರ ಬೆಳಗಿನ ಜಾವ 6:09ಕ್ಕೆ ಲ್ಯಾಂಡರ್ 7,500 ನ್ಯೂಟನ್ ಥ್ರಸ್ಟ್ ಸಾಮರ್ಥ್ಯದ ಇಂಜಿನ್ನನ್ನು ಚಾಲ್ತಿಗೊಳಿಸಿ, ಚಂದ್ರನ ಮೇಲ್ಮೈಯ 15 ಕಿಲೋಮೀಟರ್ (9 ಮೈಲಿ) ಎತ್ತರದಿಂದ ಲ್ಯಾಂಡರ್ ಕೆಳಗಿಳಿಯುವ ವೇಗವನ್ನು ಕಡಿತಗೊಳಿಸಿತು.

ಚಂದ್ರನ ಅಂಗಳಕ್ಕೆ ಇಳಿಯುವ ಸಂದರ್ಭದಲ್ಲಿ, ಲ್ಯಾಂಡರ್‌ನಲ್ಲಿ ಅಳವಡಿಸಿರುವ ಕ್ಯಾಮರಾಗಳು ಚಂದ್ರನ ಮೇಲ್ಮೈಯ ಛಾಯಾಚಿತ್ರಗಳನ್ನು ತೆಗೆದು, ಕಂಪ್ಯೂಟರ್‌ಗೆ ರವಾನಿಸುತ್ತಿದ್ದವು. ಇದು ಅಪಾಯಕಾರಿಯಾಗಿ ಪರಿಣಮಿಸಬಹುದಾದ ದೊಡ್ಡ ಕಲ್ಲುಗಳು, ಕುಳಿಗಳನ್ನು ಗುರುತಿಸಿ, ಅವುಗಳನ್ನು ತಪ್ಪಿಸಿಕೊಂಡು ಚಲಿಸಲು ಅನುಕೂಲ ಕಲ್ಪಿಸುತ್ತಿತ್ತು.

ಚಂದ್ರನ ಮೇಲ್ಮೈಯಿಂದ ಅಂದಾಜು 100 ಮೀಟರ್‌ಗಳಷ್ಟು (328 ಅಡಿ) ಎತ್ತರದಲ್ಲಿ, ಲ್ಯಾಂಡರ್ ತನ್ನ ಇಳಿಯುವಿಕೆಯನ್ನು ಸ್ತಬ್ಧಗೊಳಿಸಿ, ಅಲ್ಲೇ ತೇಲಾಡುತ್ತಾ ಸಣ್ಣಪುಟ್ಟ ಅಡೆತಡೆಗಳನ್ನು ಹುಡುಕಾಡುತ್ತಾ, ಚಂದ್ರನನ್ನು ಸ್ಪರ್ಶಿಸಲು ಸೂಕ್ತವಾದ ತಾಣವನ್ನು ಹುಡುಕತೊಡಗಿತು. ಇಳಿಯುವ ಸ್ಥಳ ಖಾತರಿಯಾದ ನಂತರ ಲ್ಯಾಂಡರ್ ನಿಧಾನವಾಗಿ, ಒಂದೇ ವೇಗದಲ್ಲಿ ಕೆಳಗಿಳಿಯತೊಡಗಿತು.

ಲ್ಯಾಂಡರ್ ಚಂದ್ರನ ಮೇಲ್ಮೈಯಿಂದ ಕೆಲವೇ ಮೀಟರ್‌ಗಳಷ್ಟು ಮೇಲಿದ್ದಾಗ, ಲ್ಯಾಂಡರ್ ತನ್ನ ಇಂಜಿನನ್ನು ಸ್ಥಗಿತಗೊಳಿಸಿ, ಸುಗಮವಾಗಿ ಚಂದ್ರನ ಮೇಲ್ಮೈಯಲ್ಲಿ ಇಳಿಯಿತು. ಈ ಮೂಲಕ ಚಂದ್ರನ ದೂರ ಪ್ರದೇಶದಲ್ಲಿ ಎರಡು ಬಾರಿ ಸಾಫ್ಟ್ ಲ್ಯಾಂಡಿಂಗ್ ನಡೆಸಿದ ಏಕೈಕ ದೇಶ ಎಂಬ ಸಾಧನೆಗೆ ಚೀನಾ ಪಾತ್ರವಾಯಿತು.

ಚಂದ್ರನ ದೂರದ ಬದಿ ಮತ್ತು ಭೂಮಿಯ ನಡುವೆ ಸಂವಹನದಲ್ಲಿ ವಿಳಂಬವಾಗುವ ಕಾರಣದಿಂದ, ಬಹುತೇಕ ಲ್ಯಾಂಡಿಂಗ್ ಪ್ರಕ್ರಿಯೆಯನ್ನು ಸ್ವಯಂಚಾಲಿತಗೊಳಿಸಲಾಗಿರುತ್ತದೆ. ಆದರೆ ಚೀನಾದ ಇಂಜಿನಿಯರ್‌ಗಳು ಇಂದಿಗೂ ತಮ್ಮ ಕೆಕಿಯಾವೋ-2 ರಿಲೇ ಉಪಗ್ರಹದ ಮೂಲಕ ಬಾಹ್ಯಾಕಾಶ ನೌಕೆಗೆ ಸೂಚನೆಗಳನ್ನು ನೀಡುತ್ತಿದ್ದಾರೆ. ಕೆಕಿಯಾವೊ-2 ಉಪಗ್ರಹವನ್ನು ಈ ವರ್ಷದ ಮಾರ್ಚ್ ತಿಂಗಳಲ್ಲಿ ಉಡಾಯಿಸಲಾಗಿದ್ದು, ಈಗ ಚಂದ್ರನ ಸುತ್ತಲಿನ ಕಕ್ಷೆಯಲ್ಲಿ ಚಲಿಸುತ್ತಿದೆ.

ಅನ್ವೇಷಣೆಗೆ ಒಳಪಟ್ಟಿರದ ಚಂದ್ರನ ಪ್ರದೇಶ: ಚಂದ್ರನ ದೂರದ ಪ್ರದೇಶ ಯಾವಾಗಲೂ ಭೂಮಿಯ ವಿರುದ್ಧ ದಿಕ್ಕಿಗೆ ಮುಖ ಮಾಡಿಕೊಂಡಿರುತ್ತದೆ. ಆದ್ದರಿಂದ ಇದನ್ನು 'ಡಾರ್ಕ್ ಸೈಡ್' ಎಂದೂ ಕರೆಯಲಾಗುತ್ತದೆ. ಇದರ ಬಹುತೇಕ ಭಾಗ ಇಂದಿಗೂ ಅನ್ವೇಷಿಸಲ್ಪಟ್ಟಿಲ್ಲ. ಇದರ ವಿಶಿಷ್ಟ ಭೌಗೋಳಿಕ ಲಕ್ಷಣಗಳು ಮತ್ತು ಭೂಮಿಯ ವಿದ್ಯುತ್ಕಾಂತೀಯ ಪರಿಣಾಮಗಳಿಂದ ದೂರವಿರುವುದು ಚಂದ್ರನ ದೂರದ ಪ್ರದೇಶವನ್ನು ವೈಜ್ಞಾನಿಕ ಸಂಶೋಧನೆಗಳಿಗೆ ಸೂಕ್ತ ತಾಣವಾಗಿಸಿದೆ.

ಚಂದ್ರನ ಈ ದೂರದ ಪ್ರದೇಶ ಭೂಮಿಗೆ ನೇರವಾಗಿ ಕಾಣದಿರುವ ಕಾರಣದಿಂದ, ಅಲ್ಲಿಗೆ ಕಳುಹಿಸುವ ಬಾಹ್ಯಾಕಾಶ ಯೋಜನೆಗಳಿಗೆ ಸಂವಹನದ ವಿಚಾರದಲ್ಲಿ ಮಹತ್ವದ ಸವಾಲುಗಳು ಎದುರಾಗುತ್ತವೆ. ಸಾಮಾನ್ಯವಾಗಿ ಇಂತಹ ಸಮಸ್ಯೆಗಳನ್ನು ನಿವಾರಿಸಲು ರಿಲೇ ಉಪಗ್ರಹಗಳನ್ನು ಬಳಸಲಾಗುತ್ತದೆ. ರಿಲೇ ಉಪಗ್ರಹಗಳು ಬಾಹ್ಯಾಕಾಶ ನೌಕೆಯಿಂದ ಮಾಹಿತಿಗಳನ್ನು ಭೂಮಿಗೆ ರವಾನಿಸುತ್ತವೆ.

ಚಂದ್ರನ ಗೋಚರಿಕೆಯ ವಿದ್ಯಮಾನ (ವಿಸಿಬಲ್ ಮೂನ್ ಫಿನಾಮಿನನ್): ಭೂಮಿಯಿಂದ ವೀಕ್ಷಿಸುವಾಗ ನಮಗೆ ಚಂದ್ರನ ಕೇವಲ ಒಂದು ಪಾರ್ಶ್ವ ಮಾತ್ರವೇ ಕಾಣುತ್ತದೆ. ಹೀಗಾಗಲು 'ಟೈಡಲ್ ಲಾಕಿಂಗ್' ಎಂದು ಕರೆಯುವ ಒಂದು ಪ್ರಕ್ರಿಯೆ ಕಾರಣವಾಗಿದೆ. ಭೂಮಿ ಮತ್ತು ಚಂದ್ರನಂತಹ ಎರಡು ಆಕಾಶಕಾಯಗಳ ನಡುವಿನ ಗುರುತ್ವಾಕರ್ಷಣಾ ಬಲ ಇದಕ್ಕೆ ಕಾರಣವಾಗಿದ್ದು, ಎರಡೂ ಆಕಾಶಕಾಯಗಳು ಪರಿಭ್ರಮಣೆ ನಡೆಸುವಾಗ, ಸಣ್ಣ ಆಕಾಶಕಾಯದ ಒಂದು ಬದಿ (ಚಂದ್ರ) ಸದಾ ದೊಡ್ಡ ಆಕಾಶಕಾಯದೆಡೆಗೆ (ಭೂಮಿ) ಮುಖ ಮಾಡಿರುತ್ತದೆ.

ಭೂಮಿ ಮತ್ತು ಚಂದ್ರನ ವಿಚಾರಕ್ಕೆ ಬಂದರೆ, ಅವುಗಳ ನಡುವಿನ ಗುರುತ್ವಾಕರ್ಷಣಾ ಬಲ, ಭೂಮಿಯ ಸುತ್ತ ಮತ್ತು ತನ್ನ ಕಕ್ಷೆಯಲ್ಲಿ ಚಂದ್ರನ ಪರಿಭ್ರಮಣೆ ನಿಯಮಿತವಾಗಿ, ನಿರಂತರವಾಗಿ ನಡೆಯುವಂತೆ ಮಾಡಿದೆ. ಅಂದರೆ, ಚಂದ್ರ ಭೂಮಿಯ ಸುತ್ತ ಪರಿಭ್ರಮಣೆ ನಡೆಸಲು ತೆಗೆದುಕೊಳ್ಳುವಷ್ಟೇ ಸಮಯವನ್ನು ತನ್ನ ಕಕ್ಷೆಯಲ್ಲಿ ಪರಿಭ್ರಮಣೆ ನಡೆಸಲೂ ತೆಗೆದುಕೊಳ್ಳುತ್ತದೆ. ಇದರ ಪರಿಣಾಮವಾಗಿ, ನಾವು ಯಾವಾಗಲೂ 'ನಿಯರ್ ಸೈಡ್' (ಹತ್ತಿರದ ಬದಿ) ಎಂದು ಕರೆಯಲಾಗುವ ಚಂದ್ರನ ಒಂದೇ ಪಾರ್ಶ್ವವನ್ನು ವೀಕ್ಷಿಸುತ್ತೇವೆ.

ನಮಗೆ ಭೂಮಿಯಿಂದ ವೀಕ್ಷಿಸಲು ಸಾಧ್ಯವಾಗದ ಚಂದ್ರನ ಇನ್ನೊಂದು ಬದಿಯನ್ನು 'ಫಾರ್ ಸೈಡ್' ಅಥವಾ 'ಡಾರ್ಕ್ ಸೈಡ್' ಎಂದು ಕರೆಯಲಾಗುತ್ತದೆ. ಆದರೆ, ಅದರ ಹೆಸರು ಸೂಚಿಸುವಂತೆ ಚಂದ್ರನ ಈ ಬದಿ ಯಾವಾಗಲೂ ಕತ್ತಲಿನಿಂದಲೇ ಕೂಡಿರುವುದಿಲ್ಲ. ಭೂಮಿಗೆ ಕಾಣಿಸುವ ಚಂದ್ರನ ಬದಿಯಂತೆಯೇ ಈ ಬದಿಯೂ ಸಹ ಹಗಲು ರಾತ್ರಿಗಳನ್ನು ಅನುಭವಿಸುತ್ತದೆ. ಈ ಟೈಡಲ್ ಲಾಕಿಂಗ್ ಪ್ರಕ್ರಿಯೆಯ ಕಾರಣದಿಂದಲೇ ಚಂದ್ರನ ದೂರದ ಪ್ರದೇಶ ಭೂಮಿಯಿಂದ ನಮ್ಮ ದೃಷ್ಟಿಗೆ ಕಾಣಿಸಿಕೊಳ್ಳುವುದಿಲ್ಲ.

ಭೂಮಿಗೆ ಮರಳುವ ಕ್ಯಾಪ್ಸುಲ್ (ಅರ್ತ್ ರಿಟರ್ನ್ ಕ್ಯಾಪ್ಸುಲ್): ಚಂದ್ರನ ಮೇಲೆ ಇಳಿದಿರುವ ಲ್ಯಾಂಡರ್ ಒಂದು ರೊಬಾಟಿಕ್ ಚಮಚದಂತಹ ರಚನೆಯನ್ನು ಬಳಸಿಕೊಂಡು ಚಂದ್ರನ ಮೇಲ್ಮೈಯ ಕಲ್ಲು ಮತ್ತು ಧೂಳಿನ ಮಾದರಿಗಳನ್ನು ಸಂಗ್ರಹಿಸಲಿದೆ. ಇದು ಅಂದಾಜು 2 ಮೀಟರ್‌ಗಳಷ್ಟು ಆಳವಾಗಿ ಕೊರೆಯುವ ಸಾಮರ್ಥ್ಯ ಹೊಂದಿದ್ದು, ಚಂದ್ರನ ಮೇಲ್ಮೈ ಒಳಗಿನ ಮಾದರಿಗಳನ್ನು ತಲುಪಬಲ್ಲದು. ಇದು ಎರಡು ದಿನಗಳ ಕಾಲ (48 ಗಂಟೆ) ಕಾರ್ಯಾಚರಿಸಿ, ಚಂದ್ರನ ಮಾದರಿಗಳನ್ನು ಸಂಗ್ರಹಿಸಲಿದೆ.

ಚಂದ್ರನ ಮಾದರಿಗಳನ್ನು ಕಲೆಹಾಕಿದ ಬಳಿಕ, ಲ್ಯಾಂಡರ್ ಅವುಗಳನ್ನು ಅಸೆಂಡರ್ ಮಾಡ್ಯುಲ್‌ಗೆ ವರ್ಗಾಯಿಸಲಿದೆ. ಈ ಅಸೆಂಡರ್ ಸ್ವಯಂಚಾಲಿತವಾಗಿ ಚಂದ್ರನ ಮೇಲ್ಮೈಯಿಂದ ಉಡಾವಣೆಗೊಳ್ಳಲಿದೆ. ಇದು 6 ನಿಮಿಷಗಳ ಕಾಲ ಹಾರಾಟ ನಡೆಸಿ, ಕಕ್ಷೆಯಲ್ಲಿರುವ ಆರ್ಬಿಟಿಂಗ್ ಮಾಡ್ಯುಲ್ ಅನ್ನು ತಲುಪಲಿದೆ. ಚಂದ್ರನಿಂದ ಸಂಗ್ರಹಿಸಿದ ಮಾದರಿಗಳನ್ನು ಭೂಮಿಗೆ ಮರಳುವ ಕ್ಯಾಪ್ಸುಲ್‌ಗೆ ವರ್ಗಾಯಿಸಿ, ಅದು ಸುರಕ್ಷಿತವಾಗಿ ಭೂಮಿಗೆ ಮರು ಪ್ರವೇಶಿಸುವಂತೆ ಮಾಡಲಾಗುತ್ತದೆ.

ಎಲ್ಲವೂ ಅಂದುಕೊಂಡ ರೀತಿಯಲ್ಲೇ ನೆರವೇರಿದರೆ, ರಿಟರ್ನ್ ಕ್ಯಾಪ್ಸುಲ್ ಇನ್ನರ್ ಮಂಗೋಲಿಯಾದ ಸಿಜ್ವಾಂಗ್ ಬ್ಯಾನರ್ ಪ್ರದೇಶದಲ್ಲಿ ಜೂನ್ 25ರಂದು ಸುರಕ್ಷಿತವಾಗಿ ಭೂಸ್ಪರ್ಶ ನಡೆಸಲಿದೆ.

-ಗಿರೀಶ್ ಲಿಂಗಣ್ಣ

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.