Taiwan Earthquake: ತೈವಾನ್‌ನಲ್ಲಿ ಮತ್ತೆ ಭೂಕಂಪ, ಹಲವು ಕಟ್ಟಡಗಳು ಕುಸಿತ, ಚಿಪ್‌ ತಯಾರಿಕೆಗೆ ಕೊಂಚ ಹೊಡೆತ-international news earthquake again in taiwan with 6 3 magnitude no casualties reported tsmc chip company alert kub ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Taiwan Earthquake: ತೈವಾನ್‌ನಲ್ಲಿ ಮತ್ತೆ ಭೂಕಂಪ, ಹಲವು ಕಟ್ಟಡಗಳು ಕುಸಿತ, ಚಿಪ್‌ ತಯಾರಿಕೆಗೆ ಕೊಂಚ ಹೊಡೆತ

Taiwan Earthquake: ತೈವಾನ್‌ನಲ್ಲಿ ಮತ್ತೆ ಭೂಕಂಪ, ಹಲವು ಕಟ್ಟಡಗಳು ಕುಸಿತ, ಚಿಪ್‌ ತಯಾರಿಕೆಗೆ ಕೊಂಚ ಹೊಡೆತ

ಭೂಕಂಪನದಿಂದ ಭಯಗೊಂಡಿರುವ ತೈವಾನ್‌ ನಲ್ಲಿ( Taiwan Earthquake) ಮತ್ತೆ ಭೂಮಿ ಕಂಪಿಸಿದೆ. ಯಾವುದೇ ಜೀವ ಹಾನಿಯಾಗದೇ ಇದ್ದರೂ ಕಟ್ಟಡಗಳು ಬಿರುಕು ಬಿಟ್ಟಿವೆ.

ತೈವಾನ್‌ನಲ್ಲಿ ಭೂಕಂಪದಿಂದ ಬಿರುಕು ಬಿಟ್ಟಿರುವ ಸುರಂದ ಮಾರ್ಗ
ತೈವಾನ್‌ನಲ್ಲಿ ಭೂಕಂಪದಿಂದ ಬಿರುಕು ಬಿಟ್ಟಿರುವ ಸುರಂದ ಮಾರ್ಗ

ತೇಪೇ: ತೈವಾನ್‌ನಲ್ಲಿ ಭೂಕಂಪ ನಿಲ್ಲುತ್ತಲೇ ಇಲ್ಲ. ಕೆಲ ದಿನಗಳ ಹಿಂದೆಯಷ್ಟೇ ಭಾರೀ ಭೂಕಂಪವಾಗಿತ್ತು. ಮಂಗಳವಾರ ಬೆಳಗಿನ ಜಾವವೂ ತೈವಾನ್‌ನ ಪೂರ್ವ ಭಾಗದ ಹ್ಯೂಲಿನ್‌ನಲ್ಲಿ ಭೂಕಂಪನವಾದ ವರದಿಯಾಗಿದೆ. ಹನ್ನೆರಡಕ್ಕೂ ಹೆಚ್ಚು ಬಾರಿ ಭೂಕಂಪನವಾಗಿದೆ. ಕೆಲವು ಕಡೆಗಳಲ್ಲಿ ಕಟ್ಟಡಗಳು, ಸುರಂಗ ಮಾರ್ಗದ ದ್ವಾರ ಕುಸಿತ ಕಂಡಿದ್ದರೆ, ಇನ್ನಷ್ಟು ಕಡೆಗಳಲ್ಲಿ ಬಿರುಕು ಬಿಟ್ಟಿವೆ. ಈವರೆಗೂ ಭೂಕಂಪನದಿಂದ ಅಲ್ಲಲ್ಲಿ ಸಣ್ಣಪುಟ್ಟ ಅನಾಹುತವಾದ ವರದಿಯಾಗಿದೆ. ಯಾವುದೇ ಜೀವ ಹಾನಿಯಾಗಿಲ್ಲ ಎಂದು ತೈವಾನ್‌ ನ ಸರ್ಕಾರ ಅಧಿಕೃತವಾಗಿಯೇ ತಿಳಿಸಿದೆ. ಆದರೆ ವಿಶ್ವದ ಪ್ರಮುಖ ಚಿಪ್‌ ತಯಾರಿಕೆ ಘಟಕಗಳಲ್ಲಿ ಭಯದ ವಾತಾವರಣ ಇರುವುದರಿಂದ ಉತ್ಪಾದನೆ ಮೇಲೆ ಕೊಂಚ ಹೊಡೆತ ಬಿದ್ದಿದೆ.

ತೈವಾನ್‌ನ ಗ್ರಾಮಾಂತರ ಪ್ರದೇಶವೇ ಹೆಚ್ಚಿರುವ ಹ್ಯೂಲಿನ್‌ ಸೇರಿದಂತೆ ಹಲವು ಭಾಗದಲ್ಲಿ ಭೂಕಂಪನ ಉಂಟಾಗಿದ್ದು, ಭೂಕಂಪನದ ತೀವ್ರತೆ ರಿಕ್ಟರ್‌ ಮಾಪಕದಲ್ಲಿ 6.3 ರಷ್ಟಿತ್ತು. ಏಕಾಏಕಿ ಭೂಕಂಪದಿಂದ ಭಯಗೊಂಡ ಜನ ಮನೆಯಿಂದ ಹೊರ ಬಂದದ್ದು ಕಂಡು ಬಂದಿತು. ಕೆಲ ಕಟ್ಟಡಗಳು ಅಲ್ಲಲ್ಲಿ ಕುಸಿತ ಕಂಡಿದ್ದು. ಬಿರುಕು ಬಿಟ್ಟಿವೆ. ತೈವಾನ್‌ನ ರಾಜಧಾನಿ ತೈಪೇಯಲ್ಲಿ ಕಂಪಿಸಿದ ಅನುಭವವಾಗಿದೆ. ಕೆಲವು ಪ್ರದೇಶದಲ್ಲಿ ಮುಗಿಲೆತ್ತರದ ಕಟ್ಟಡಗಳೂ ಅಲುಗಾಡಿದ ಅನುಭವವಾಗಿದ್ದನ್ನು ಸ್ಥಳೀಯರು ವಿವರಿಸಿದ್ಧಾರೆ. ರಾತ್ರಿಯಿಂದಲೇ ಕೆಲವು ಭಾಗಗಳಲ್ಲೀ ಈ ಅನುಭವವಾಗಿದ್ದರಿಂದ ಜನ ರಾತ್ರಿಯಿಡೀ ಮಲಗದೇ ಹೊರಗಡೆಯೇ ಇರಬೇಕಾಯಿತು.

ಏಪ್ರಿಲ್‌ 3ರಂದು ಭೂಕಂಪನವಾದಾಗ 14 ಮಂದಿ ಮೃತಪಟ್ಟಿದ್ದರು. ಇದಾದ ನಂತರದಿಂದ ಅಲ್ಲಲ್ಲಿ ಭೂಮಿ ಕಂಪಿಸಿದ ಅನುಭವ ವಾಗುತ್ತಿದೆ. ಈಗ ಮತ್ತೆ ಕೊಂಚ ಹೆಚ್ಚಿದೆ. ಸಹಜವಾಗಿಯೇ ಜನರಲ್ಲಿ ಭಯದ ವಾತಾವರಣವಿದೆ. ಭಾರೀ ಮಳೆಯ ಮುನ್ಸೂಚನೆಯನ್ನು ಈಗಾಗಲೇ ನೀಡಲಾಗಿದೆ ಎಂದು ಭೂಕಂಪನ ಮಾಪನ ಕೇಂದ್ರದ ನಿರ್ದೇಶಕ ವು ಚಿನ್‌ ಫು ಮಾಹಿತಿ ನೀಡಿದ್ದಾರೆ.

ತೈವಾನ್‌ನ ಕೆಲವು ಭಾಗಗಳಲ್ಲಿ ಈ ಹಿಂದೆ ಆದ ಭೂಕಂಪದಿಂದ ರಸ್ತೆಗಳು ಹಾಳಾಗಿ ಸಂಚಾರ ಬಂದ್‌ ಮಾಡಲಾಗಿದೆ. ಕೆಲವು ಕಡೆಗಳಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತವೂ ಉಂಟಾಗಿತ್ತು. ಶಾಲೆಗಳನ್ನೂ ಕೆಲ ದಿನ ಬಂದ್‌ ಮಾಡಲಾಗಿತ್ತು.

ಈ ನಡುವೆ ವಿಶ್ವದಲ್ಲಿಯೇ ಅತಿ ಹೆಚ್ಚು ಚಿಪ್‌ ಉತ್ಪಾದಿಸಿ ರಫ್ತು ಮಾಡುವ ತೈವಾನ್‌ ಸೆಮಿಕಂಡಕ್ಟರ್‌ ಮ್ಯಾನುಫ್ಯಾಕ್ಚರಿಂಗ್‌ ಕಂಪೆನಿ( TSMC) ಯ ಘಟಕಗಳು ಪಶ್ಚಿಮದ ಕಡಲ ತೀರದಲ್ಲಿವೆ. ಈಗಾಗಲೇ ಕಡಿಮೆ ಸಂಖ್ಯೆಯಲ್ಲಿರುವ ಘಟಕಗಳ ಸಿಬ್ಬಂದಿಯನ್ನು ಕಟ್ಟಡಗಳಿಂದ ತೆರವುಗೊಳಿಸಲಾಗಿದೆ. ಆದರೆ ಘಟಕಗಳು ಯಥಾರೀತಿಯಾಗಿ ಕಾರ್ಯನಿರ್ವಹಿಸುತ್ತಿವೆ. ಉತ್ಪಾದನೆಯಲ್ಲಿ ಸಣ್ಣ ಪುಟ್ಟ ವ್ಯತ್ಯಯ ಆಗುವುದನ್ನು ಬಿಟ್ಟರೆ ಬೇರೆನೂ ತೊಂದರೆ ಕಂಡು ಬಂದಿಲ್ಲ. ಭೂಕಂಪಕ್ಕೆ ಸಂಬಂಧಿಸಿ ಕಂಪೆನಿಯೂ ಮುನ್ನೆಚ್ಚರಿಕೆ ವಹಿಸಿದೆ ಎಂದು ತಿಳಿಸಲಾಗಿದೆ.

ತೈವಾನ್‌ ಭೂಕಂಪನ ಪೀಡಿತ ಪ್ರದೇಶವೇ. 2016ರಲ್ಲಿ ದಕ್ಷಿಣ ತೈವಾನ್‌ ಭಾಗದಲ್ಲಿ ಉಂಟಾಗಿದ್ದ ಭೂಕಂಪನದಿಂದ 100 ಮಂದಿ, 1999ರಲ್ಲಿ 2,000 ಮಂದಿ ಪ್ರಾಣ ಕಳೆದುಕೊಂಡಿದ್ದರು.

ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(To read more like this please logon to kannada.hindustantimes.com)

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.