Imran khan: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ 14 ವರ್ಷ, ಪತ್ನಿ ಬುಶ್ರಾ ಬೀಬಿಗೆ 7 ವರ್ಷ ಜೈಲು ಶಿಕ್ಷೆ
Imran Khan Jail News: ಅಲ್-ಖಾದಿರ್ ಯೂನಿವರ್ಸಿಟಿ ಪ್ರಾಜೆಕ್ಟ್ ಟ್ರಸ್ಟ್‌ನಲ್ಲಿ ಭ್ರಷ್ಟಾಚಾರ ನಡೆಸಿದ ಆರೋಪದಡಿ ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ಇಮ್ರಾನ್ ಖಾನ್‌ಗೆ 14 ವರ್ಷ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಮ್ರಾನ್ ಖಾನ್ ಪತ್ನಿ ಬುಶ್ರಾ ಬೀಬಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಅಲ್-ಖಾದಿರ್ ಯೂನಿವರ್ಸಿಟಿ ಪ್ರಾಜೆಕ್ಟ್ ಟ್ರಸ್ಟ್‌ನಲ್ಲಿ ಭ್ರಷ್ಟಾಚಾರ ನಡೆಸಿದ ಆರೋಪದಡಿ ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ಇಮ್ರಾನ್ ಖಾನ್‌ಗೆ 14 ವರ್ಷ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಮ್ರಾನ್ ಖಾನ್ ಪತ್ನಿ ಬುಶ್ರಾ ಬೀಬಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಇದರೊಂದಿಗೆ ಇಮ್ರಾನ್ ಖಾನ್‌ಗೆ 10 ಲಕ್ಷ ಪಾಕಿಸ್ತಾನಿ ರೂಪಾಯಿ ಮತ್ತು ಬುಶ್ರಾ ಬೀಬಿಗೆ 5 ಲಕ್ಷ ಪಾಕಿಸ್ತಾನಿ ರೂಪಾಯಿ ದಂಡವನ್ನೂ ವಿಧಿಸಲಾಗಿದೆ. ಎಲ್ಲಾದರೂ ದಂಡ ಪಾವತಿಸಲು ಸಾಧ್ಯವಾಗದೆ ಇದ್ದರೆ ಇಮ್ರಾನ್ ಖಾನ್ 6 ತಿಂಗಳು, ಬುಶ್ರಾ ಬೇಬಿ ಅವರು 3 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
2023ರ ಡಿಸೆಂಬರ್ ತಿಂಗಳಿನಲ್ಲಿ ಪಾಕಿಸ್ತಾನದ ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೋ (ಎನ್‌ಎಬಿ) ಇಮ್ರಾನ್ ಖಾನ್ (72), ಬೀಬಿ (50) ಮತ್ತು ಇತರ ಆರು ಜನರ ವಿರುದ್ಧ ದೂರು ದಾಖಲಿಸಿಕೊಂಡಿತ್ತು. ಪಾಕಿಸ್ತಾನದ ರಾಷ್ಟ್ರೀಯ ಖಜಾನೆಗೆ 190 ದಶಲಕ್ಷ ಡಾಲರ್ (50 ದಶಲಕ್ಷ ಪಾಕಿಸ್ತಾನಿ ರೂಪಾಯಿ) ನಷ್ಟವನ್ನು ಉಂಟುಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿಕೊಳ್ಳಲಾಗಿತ್ತು.
ಇಮ್ರಾನ್ ಖಾನ್ ಎದುರಿಸುತ್ತಿರುವ ಆರ್ಥಿಕ ಅಪರಾಧದ ವಿಚಾರಣೆ ನಡೆಸಿದ ರಾವಲ್ಪಿಂಡಿಯ ಗ್ಯಾರಿಸನ್ ನಗರದ ಜೈಲಿನಲ್ಲಿರುವ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯವು ತೀರ್ಪು ನೀಡಿದೆ. ಇಮ್ರಾನ್ ಖಾನ್ ಅವರು 2023ರ ಆಗಸ್ಟ್ ತಿಂಗಳಿನಿಂದ ಜೈಲಿನಲ್ಲಿದ್ದಾರೆ.
ಈ ಪ್ರಕರಣದ ತೀರ್ಪು ವಿವಿಧ ಕಾರಣಗಳಿಂದ ಮೂರು ಬಾರಿ ಮುಂದೂಡಲ್ಪಟ್ಟಿತ್ತು. ಇದೇ ಜನವರಿ 13ರಂದು ಕೂಡ ತೀರ್ಪು ಮುಂದೂಡಲಾಗಿತ್ತು. ಇಂದು ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದ ನ್ಯಾಯಾಧೀಶ ನಾಸಿರ್ ಜಾವೇದ್ ರಾಣಾ ಅವರು ತೀರ್ಪು ಪ್ರಕಟಿಸಿದ್ದಾರೆ. ಪ್ರಕರಣದ ಇತರರು ದೇಶದಿಂದ ಹೊರಗಿದ್ದರಿಂದ ಖಾನ್ ಮತ್ತು ಬೀಬಿ ವಿರುದ್ಧ ಮಾತ್ರ ಮೊಕದ್ದಮೆ ಹೂಡಲಾಗಿತ್ತು.
ಏನಿದು ಅಲ್-ಖಾದಿರ್ ಟ್ರಸ್ಟ್ ಪ್ರಕರಣ?
ಇಮ್ರಾನ್ ಖಾನ್ ಮತ್ತು ಬುಶ್ರಾ ಬೀಬಿ ಅವರು ಖಾನ್ ಅವರು ಪ್ರಧಾನ ಮಂತ್ರಿಯಾಗಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ನಡೆದ ಘಟನೆ ಇದಾಗಿದೆ. ಬ್ರಿಟನ್‌ನ ರಾಷ್ಟ್ರೀಯ ಅಪರಾಧ ಸಂಸ್ಥೆಯು ತನಿಖೆಯ ಬಳಿಕ ಬಹ್ರಿಯಾ ಟೌನ್ ಲಿಮಿಟೆಡ್ ಎಂಬ ರಿಯಲ್ ಎಸ್ಟೇಟ್ ಸಂಸ್ಥೆಯಿಂದ 50 ಬಿಲಿಯನ್ ರೂಪಾಯಿಗಳನ್ನು ಪಾಕಿಸ್ತಾನಕ್ಕೆ ಹಿಂತುರುಗಿಸಿತ್ತು. ಈ ಮೊತ್ತವನ್ನು ಇಮ್ರಾನ್ ಖಾನ್ ಮತ್ತು ಬುಶ್ರಾ ಬೇಬಿ ಹಾಗೂ ಇತರರು ದುರ್ಬಳಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ರಾಷ್ಟ್ರೀಯ ಖಜಾನೆಗೆ ಸೇರಬೇಕಿದ್ದ ಹಣವನ್ನು ವೈಯಕ್ತಿಕ ಲಾಭಕ್ಕೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಇದರಲ್ಲಿ ಜೆಲಮ್‌ನಲ್ಲಿ ಅಲ್-ಕೆನಾಲ್ ವಿಶ್ವವಿದ್ಯಾಲಯ ಸ್ಥಾಪನೆಯೂ ಸೇರಿದೆ. ಅಲ್-ಕೆನಾಲ್ ಟ್ರಸ್ಟ್‌ನ ಟ್ರಸ್ಟಿಯಾಗಿ ಬುಶ್ರಾ ಬೀಬಿ ಇದರ ಲಾಭ ಪಡೆದಿದ್ದಾರೆ. ವಿಶೇಷವಾಗಿ ವಿಶ್ವವಿದ್ಯಾಲಯಕ್ಕಾಗಿ 458 ಕೆನಾಲ್‌ಗಳ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಕರಾಚಿಯಲ್ಲಿರುವ ಬಹ್ರಿಯಾ ಟೌನ್ ಭೂಮಿಗೆ ಪಾವತಿಸಲು ಬಳಸುವ ಖಾಸಗಿ ಖಾತೆಗೆ ಇಮ್ರಾನ್ ಖಾನ್ ಅವರು ಹಣವನ್ನು ಅಕ್ರಮವಾಗಿ ವರ್ಗಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೋ ದೂರು ದಾಖಲಿಸಿಕೊಂಡಿತ್ತು.
