Israel Iran War: ಇಸ್ರೇಲ್‌ ಮೇಲೆ ಕ್ಷಿಪಣಿ ದಾಳಿ, ಪ್ರತಿಕಾರ ತೀರಿಸಿಕೊಂಡ ಇರಾನ್‌, ಅಮೇರಿಕಾದ ಮೇಲೂ ದಾಳಿ ಎಚ್ಚರಿಕೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Israel Iran War: ಇಸ್ರೇಲ್‌ ಮೇಲೆ ಕ್ಷಿಪಣಿ ದಾಳಿ, ಪ್ರತಿಕಾರ ತೀರಿಸಿಕೊಂಡ ಇರಾನ್‌, ಅಮೇರಿಕಾದ ಮೇಲೂ ದಾಳಿ ಎಚ್ಚರಿಕೆ

Israel Iran War: ಇಸ್ರೇಲ್‌ ಮೇಲೆ ಕ್ಷಿಪಣಿ ದಾಳಿ, ಪ್ರತಿಕಾರ ತೀರಿಸಿಕೊಂಡ ಇರಾನ್‌, ಅಮೇರಿಕಾದ ಮೇಲೂ ದಾಳಿ ಎಚ್ಚರಿಕೆ

Iran War ಇಸ್ರೇಲ್‌ ದಾಳಿಯಿಂದ ಪ್ರತೀಕಾರಕ್ಕಾಗಿ ಕಾಯುತ್ತಿದ್ದ ಇರಾನ್‌ ಭಾನುವಾರ ಇಸ್ರೇಲ್‌ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಇದರಿಂದ ಯುದ್ದದ ಭೀತಿ ತೀವ್ರಗೊಂಡಿದೆ.

ಇಸ್ರೇಲ್‌ ಮೇಲೆ ಇರಾನ್‌ ನಡೆಸಿದ ಕ್ಷಿಪಣಿ ದಾಳಿ ನೋಟ
ಇಸ್ರೇಲ್‌ ಮೇಲೆ ಇರಾನ್‌ ನಡೆಸಿದ ಕ್ಷಿಪಣಿ ದಾಳಿ ನೋಟ

ಜೇರುಸಲೆಂ: ಎರಡು ವಾರದ ಹಿಂದೆ ಇಸ್ರೇಲ್‌ ನಡೆಸಿದ್ದ ತೀವ್ರ ದಾಳಿಯ ಪ್ರತೀಕಾರವಾಗಿ ಇರಾನ್‌ ಭಾನುವಾರ ಇಸ್ರೇಲ್‌ ಮೇಲೆ ಮರು ದಾಳಿ ಮಾಡಿದೆ. ಇಸ್ರೇಲ್‌ ಮೇಲೆ ಬ್ಯಾಲಿಸ್ಟಿಕ್‌ ಕ್ಷಿಪಣಿಗಳ ಹಾರಾಟ ಜೋರಾಗಿದೆ. ರಂಜಾನ್‌ ಹಬ್ಬದ ಸಡಗರ ಇನ್ನೇನು ಮುಗಿಯುವ ಹೊತ್ತಿಗೆ ಈ ದಾಳಿ ತೀವ್ರಗೊಂಡಿದೆ. ಇದರಿಂದ ಇಸ್ರೇಲ್‌ನಲ್ಲಿ ಆತಂಕದ ವಾತಾವರಣ ಮನೆ ಮಾಡಿದ್ದು. ಮತ್ತೆ ಯುದ್ದ ಭೀತಿ ಎದುರಾಗಿದೆ. ಸಿರಿಯಾದ ರಾಜಧಾನಿ ಡಮಾಸ್ಕಸ್​ನಲ್ಲಿರುವ ತನ್ನ ರಾಯಭಾರ ಕಚೇರಿ ಮೇಲೆ ಇಸ್ರೇಲ್ ಏಪ್ರಿಲ್‌ 1 ರಂದು ನಡೆಸಿದ್ದ ತೀವ್ರ ವೈಮಾನಿಕ ದಾಳಿಗೆ ಪ್ರತಿಯಾಗಿ ಮರು ದಾಳಿ ನಡೆಸಿರುವುದಾಗಿ ಇರಾನ್‌ ಹೇಳಿದೆ. ಅಲ್ಲದೇ ಅಮೆರಿಕದ ಮೇಲೂ ದಾಳಿ ಮಾಡಬೇಕಾಗುತ್ತದೆ ಎನ್ನುವ ಗಂಭೀರ ಎಚ್ಚರಿಕೆಯನ್ನು ನೀಡಿದೆ.

ಶನಿವಾರ ಮಧ್ಯರಾತ್ರಿಯಿಂದಲೇ ಇಸ್ರೇಲ್‌ ಮೇಲೆ ದಾಳಿಯ ಸೂಚನೆಗಳು ದೊರೆತಿದ್ದವು. ಇಸ್ರೇಲ್‌ನ ಜೆರುಸಲೇಂ ನಗರ ಸೇರದಂತೆ ಹಲವು ಕಡೆಗಳಲ್ಲಿ ಕ್ಷಿಪಣಿಗಳ ದಾಳಿ ರಾತ್ರಿಯಿಂದಲೇ ನಡೆದಿವೆ. ಆಗಸದಲ್ಲಿ ಚಿಮ್ಮಿ ಬರುತ್ತಿದ್ದ ಬ್ಯಾಲಿಸ್ಟಿಕ್‌ ಹಾಗೂ ಕ್ರೂಸ್‌ ಕ್ಷಿಪಣಿಗಳು ಬೀಳುತ್ತಲೇ ಇದ್ದವು. 300ಕ್ಕೂ ಕ್ಷಿಪಣಿಗಳು ಇಸ್ರೇಲ್‌ ಮೇಲೆ ಸಿಡಿಸಲಾಗಿದೆ ಎನ್ನಲಾಗುತ್ತಿದೆ.

ಇಸ್ರೇಲ್‌ನಲ್ಲಿ ಬೀಡುಬಿಟ್ಟಿರುವ ಸೇನಾ ಪಡೆಗಳ ಜತೆಗೆ ಅಮೆರಿಕದ ಸೇನಾ ಪಡೆಗಳು ಕ್ಷಿಪಣಿಗಳನ್ನು ಹೊಡೆದು ಉರುಳಿಸಲು ನೆರವಾದವು. ಆದರೂ ದಾಳಿಯಿಂದ ಇಸ್ರೇಲ್‌ನ ದಕ್ಷಿಣ ಭಾಗದಲ್ಲಿರುವ ಸೇನಾ ನೆಲೆಯಲ್ಲಿ ಹಾನಿಗಳಾಗಿರುವುದಾಗಿ ವರದಿಯಾಗಿದೆ. ದಾಳಿಯಿಂದ ಯಾವುದಾದರೂ ಸಾವು, ನೋವು ಸಂಭವಿಸಿದೆಯಾ ಎನ್ನುವ ಮಾಹಿತಿಯನ್ನು ಇಸ್ರೇಲ್‌ ಸರ್ಕಾರ ಪಡೆಯುತ್ತಿದೆ. ಈವರೆಗೂ ಸಾವು. ನೋವಿನ ವರದಿಯಾಗಿಲ್ಲ.

ಆದರೂ ಇಸ್ರೇಲ್‌ ಸೇನೆಯು ಕಟ್ಟೆಚ್ಚರದಲ್ಲಿ ಎಂತಹ ದಾಳಿಯನ್ನು ಹಿಮ್ಮೆಟ್ಟಿಸಲು ಸಿದ್ದವಿದೆ ಎಂದು ಹೇಳಿಕೊಂಡಿದೆ. ಈ ನಡುವೆ ಇರಾನ್ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಇಸ್ರೇಲ್‌ ಮೇಲೆ ಇಂತಹ ದಾಳಿ ಮುಂದುವರಿಯಲಿದೆ ಎಂದು ತಿಳಿಸಿದೆ. ಇರಾನ್‌ ಮೇಲೆ ದಾಳಿ ಮಾಡುವ ಇಲ್ಲವೇ ಬೆಂಬಲ ನೀಡುವ ಯಾವುದೇ ಸಂಸ್ಥೆ, ದೇಶದ ಮೇಲೂ ಮರುದಾಳಿಗ ಸಿದ್ದರಿದ್ದೇವೆ ಎಂದು ಪರೋಕ್ಷವಾಗಿ ಅಮೆರಿಕಕ್ಕೆ ಎಚ್ಚರಿಕೆಯನ್ನು ನೀಡಲಾಗಿದೆ.

ಡಮಾಸ್ಕಸ್‌ನ ಇರಾನ್ ರಾಯಭಾರ ಕಚೇರಿ ಮೇಲೆ ಏಪ್ರಿಲ್ 1 ರಂದು ಇಸ್ರೇಲ್‌ ತೀವ್ರ ವೈಮಾನಿಕ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಕಾರ ತೆಗೆದುಕೊಳ್ಳುವುದಾಗಿ ಇರಾನ್ ಹೇಳಿತ್ತು. ಡಮಾಸ್ಕಸ್‌ನ ದಾಳಿ ಹಲವಾರು ಇರಾನ್ ಅಧಿಕಾರಿಗಳು ಜೀವ ಕಳೆದುಕೊಂಡಿದ್ದಾರೆ. ಇದರಿಂದ ಭಾರೀ ಹಾನಿಯಾಗಿದೆ ಎಂದು ಇರಾನ್‌ ಹೇಳಿತ್ತು. ಈ ದಾಳಿಗೆ ಪ್ರತ್ಯುತ್ತರವಾಗಿಯೇ ಕ್ಷಿಪಣಿ ದಾಳಿಯನ್ನು ಇರಾನ್‌ ಕೈಗೊಂಡಿದೆ. ಇದಲ್ಲದೇ ಇಸ್ರೇಲ್‌ ಬೆಂಬಲಕ್ಕೆ ನಿಂತ ಅಮೆರಿಕದ ಮೇಲೂ ದಾಳಿಯ ಮುನ್ಸೂಚನೆ ನೀಡಲಾಗಿದೆ.

ಈ ನಡುವೆ ಇಸ್ರೇಲ್‌ ದೇಶದ ಮೇಲೆ ಇರಾನ್‌ ನಡೆಸುತ್ತಿರುವ ಕ್ಷಿಪಣಿ ದಾಳಿಗೆ ವಿರೋಧ ವ್ಯಕ್ತವಾಗಿದ್ದು, ಈ ಕುರಿತು ಚರ್ಚಿಸಲು ವಿಶ್ವ ಸಂಸ್ಥೆ ಭದ್ರತಾ ಮಂಡಳಿ ಸಭೆಯನ್ನೂ ಕರೆಯಲಾಗಿದೆ. ಅಲ್ಲಿ ಇರಾನ್‌ ವರ್ತನೆ ಖಂಡಿಸುವ ಸಾಧ್ಯತೆಯಿದೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.