Tik Tok Star Murder: ಖ್ಯಾತ ಟಿಕ್ ಟಾಕ್ ಸ್ಟಾರ್ ಓಂ ಫಹಾದ್ ಭೀಕರ ಹತ್ಯೆ, ಕಾರಣವೇನು
ಇರಾಕ್‌ನಲ್ಲಿ ಟಿಕ್ ಟಾಕ್ ಸ್ಟಾರ್ ಓಂ ಫಹಾದ್ ಅವರನ್ನು ಮನೆಯ ಆವರಣದಲ್ಲಿಯೇ ಭೀಕರವಾಗಿ ಹತ್ಯೆ ಮಾಡಲಾಗಿದೆ.

ದೆಹಲಿ: ಇರಾಕ್‌ನ ಖ್ಯಾತ ಟಿಕ್ ಟಾಕ್ ಸ್ಟಾರ್ ಓಂ ಫಹಾದ್ ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಅವರ ಮನೆಯ ಹೊರ ವಲಯದಲ್ಲಿಯೇ ಗುಂಡಿಕ್ಕಿ ಕೊಲ್ಲಲಾಗಿದ್ದು, ಇರಾಕ್ ಸರ್ಕಾರವು ಈ ತನಿಖೆಗೆ ಆದೇಶಿಸಿದೆ. ಈಗಾಗಲೇ ಇರಾಕ್‌ನಲ್ಲಿ ಆನ್‌ಲೈನ್ ಮೇಲಿನ ಬಳಕೆಯನ್ನು ನಿಯಂತ್ರಿಸಲಾಗಿದೆ. ಸಾಮಾಜಿಕ ಮಾಧ್ಯಮಗಳ ಬಳಕೆಗೆ ಇರಾಕ್ ಮಿತಿ ಹೇರಿದೆ. ಅಲ್ಲಿ ಸಾಮಾಜಿಕ ಮಾಧ್ಯಮಗಳ ಬಳಕೆ ಸ್ವಾತಂತ್ರ್ಯವಿಲ್ಲ. ಕೆಲ ದಿನಗಳ ಹಿಂದೆ ಇದೇ ರೀತಿ ಟಿಕ್ ಟಾಕ್ ಸ್ಟಾರ್ ನೂರ್ ಅಲ್ಸಾಫರ್ ಎನ್ನುವವರನ್ನು ಇದೇ ರೀತಿ ಇರಾಕ್‌ನಲ್ಲಿ ಕೊಲೆ ಮಾಡಲಾಗಿತ್ತು. ಕೆಲವೇ ದಿನಗಳ ಅಂತರದಲ್ಲಿ ಈ ರೀತಿ ಕೊಲೆಯಾಗುತ್ತಿರುವ ಎರಡನೇ ಟಿಕ್ ಟಾಕ್ ಸ್ಟಾರ್ ಓಂ ಫಹಾದ್.
ಕೊಲೆಯಾಗಿದ್ದು ಎಲ್ಲಿ
ಇರಾಕ್‌ನ ನಗರ ಬಾಗ್ದಾದ್ ಪ್ರದೇಶದ ಜೋಯೋನದಲ್ಲಿರುವ ಓಂ ಫಹಾದ್ ಅವರ ನಿವಾಸಕ್ಕೆ ನುಗ್ಗಿ ಕಪ್ಪು ವೇಷ ಧಾರಿ ಗುಂಡಿನ ಸುರಿಮಳೆ ಗೈದಿದ್ದಾನೆ.
ಮನೆಯ ಆವರಣದ ಎಸ್‌ಯುವಿ ವಾಹನದಲ್ಲಿ ಓಂ ಫಹಾದ್ ಕುಳಿತುಕೊಂಡಿದ್ದರು. ಈ ವೇಳೆ ಬೈಕ್‌ನಲ್ಲಿ ನುಗ್ಗಿದ ಆತ ಕಾರು ಬಾಗಿಲು ತೆಗೆದು ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ಗುಂಡಿನ ಮೊರೆತಕ್ಕೆ ಕುಸಿದು ಬಿದ್ದ ಓ ಫಹಾದ್ ಅಲ್ಲಿಯೇ ಮೃತಪಟ್ಟಿದ್ದಾಳೆ.
ಆತ ಕಪ್ಪು ಬಟ್ಟೆ ಜತೆಗೆ ಹೆಲ್ಮೆಟ್ ಕೂಡ ಧರಿಸಿದ್ದರಿಂದ ಯಾರು ಎನ್ನುವುದು ತಿಳಿದಿಲ್ಲ. ಗುಂಡಿನ ಶಬ್ದ ಕೇಳಿ ಕುಟುಂಬದವರು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜಕವಾಗಿಲ್ಲ. ಸಿಸಿ ಕ್ಯಾಮರಾದಲ್ಲಿ ಎಲ್ಲಾ ಚಿತ್ರಣ ಸೆರೆಯಾಗಿದೆ.
ಕಾರಣವೇನು
ಓಂ ಫಹಾದ್ ನಿಜವಾದ ಹೆಸರು ಗುಫ್ರಾನ್ ಸವದಿ. ಪೂರ್ವ ಬಾಗ್ದಾದ್ ಜೋಯೋನ ಜಿಲ್ಲೆಯಲ್ಲಿ ಆಕೆ ನೆಲೆಸಿದ್ದಳು. ಆಕೆ ಕೆಲ ವರ್ಷದಿಂದ ಟಿಕ್ ಟಾಕ್ ಸ್ಟಾರ್ ಆಗಿ ಭಾರೀ ಜನಪ್ರಿಯತೆ ಪಡೆದಿದ್ದಳು. ಆಕೆಗೆ 5 ಲಕ್ಷಕ್ಕೂ ಅಧಿಕ ಫಾಲೋವರ್‌ಗಳು ಇದ್ದರು.
ನೃತ್ಯ ಹಾಗೂ ಇರಾಕ್ ಸಂಗೀತದ ವಿಚಾರವಾಗಿ ಆಕೆಯ ಟಿಕ್ ಟಾಕ್‌ಗಳು ಇರುತ್ತಿದ್ದವು. ಇದರೊಟ್ಟಿಗೆ ಶಾಪಿಂಗ್, ಆಹಾರಗಳ ವಿಚಾರವಾಗಿಯೂ ಆಕೆ ಸಾಕಷ್ಟು ಟಿಕ್ ಟಾಕ್ ಮಾಡಿ ಗಮನ ಸೆಳೆಇದ್ದರು. ಕೆಲವು ವಿಡಿಯೋಗಳಂತೂ 10 ಲಕ್ಷಕ್ಕ ಅಧಿಕ ವೀಕ್ಷಕರನ್ನು ಗಳಿಸಿದ್ದು ವಿಶೇಷ.
ಇರಾಕ್‌ನಲ್ಲಿ ಮಿತಿ
ಆದರೆ ಟಿಕ್ ಟಾಕ್ ವಿಚಾರದಲ್ಲಿ ಆಕೆಗೆ ವಿರೋಧಿಗಳು ಇದ್ದರು. ಸಾಂಪ್ರದಾಯಿಕತೆಯನ್ನು ಇನ್ನೂ ಉಳಿಸಿಕೊಂಡಿರುವ ಇರಾಕ್ ನಲ್ಲಿ ಸಾಮಾಜಿಕ ಮಾಧ್ಯಮ ಬಳಕೆಗೆ ಮಿತಿಯಿದೆ. ಇದರ ನಡುವೆಯೂ ಫಹಾದ್ ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸುತ್ತಿದ್ದುದು ಕೆಲವರ ಕೆಂಗಣ್ಣಿಗೆ ಗುರಿಯಾಗಿತ್ತು. ಕಳೆದ ವರ್ಷ ಆಕೆಗೆ ಆರು ತಿಂಗಳು ಜೈಲು ಶಿಕ್ಷೆಯನ್ನು ವಿಧಿಸಲಾಗಿತ್ತು. ಸಾರ್ವಜನಿಕ ಮೌಲ್ಯವನ್ನು ವಿರೋಧಿಸುವ ರೀತಿಯಲ್ಲಿ ಟಿಕ್ ಟಾಕ್ ರೂಪಿಸುತ್ತಿದ್ದೀರಿ ಎನ್ನುವುದು ಅವರ ಮೇಲಿದ್ದ ಆರೋಪ. ಆದರೆ ಜಿನೀವಾ ಮೂಲದ ಮಾನವ ಹಕ್ಕು ಸಂಸ್ಥೆಯೊಂದು ಓಂ ಫಹಾದ್ ಪರವಾಗಿ ನಿಂತು, ಅವರು ಪ್ರಕಟಿಸುವ ಟಿಕ್ ಟಾಕ್‌ಗಳು ಮಾಹಿತಿ ಪೂರ್ಣವಾಗಿವೆ ಎಂದು ಹೇಳಿತ್ತು. ಇದು ವಿವಾದವನ್ನೂ ಸೃಷ್ಟಿಸಿತ್ತು.
ಇದರ ನಡುವೆಯೂ ಓಂ ಫಹಾದ್ ಅವರು ಟಿಕ್ ಟಾಕ್ ಪ್ರಕಟಿಸುವುದನ್ನು ಮುಂದುವರೆಸಿದ್ದರು. ಇದನ್ನು ವಿರೋಧಿಸಿಯೇ ಹತ್ಯೆಯಾಗಿರಬಹುದು ಎನ್ನಲಾಗುತ್ತಿದ್ದು, ಇದು ಸಾಕಷ್ಟು ಚರ್ಚೆದೂ ದಾರಿ ಮಾಡಿಕೊಟ್ಟಿದೆ.
ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
(This copy first appeared in Hindustan Times Kannada website. To read more like this please logon to kannada.hindustantimes.com)
