ವೈಮಾನಿಕ ದಾಳಿ ಮರುದಿನವೇ ಗಾಜಾದಲ್ಲಿ ಇಸ್ರೇಲ್ ಗ್ರೌಂಡ್ ಆಪರೇಷನ್; ಹಮಾಸ್ ಉಗ್ರಗಾಮಿಗಳೇ ಟಾರ್ಗೆಟ್
Israel Ground Operation: ಇಸ್ರೇಲ್ ದೇಶದ ನಾಗರಿಕರನ್ನು ರಕ್ಷಿಸುವ ಸಲುವಾಗಿ ಗಾಜಾ ಪಟ್ಟಿಯಲ್ಲಿ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕಾರ್ಯಾಚರಣೆಯನ್ನು ಮುಂದುವರಿಸುತ್ತೇವೆ ಎಂದು ಇಸ್ರೇಲ್ ಸೇನೆ ತಿಳಿಸಿದೆ. ಅಲ್ಲದೇ ಇದೀಗ ಇಸ್ರೇಲ್ ಗಾಜಾದಲ್ಲಿ ಗ್ರೌಂಡ್ ಆಪರೇಷನ್ ಶುರುವಿಟ್ಟುಕೊಂಡಿದೆ.

ಇಸ್ರೇಲ್: ಇಸ್ರೇಲ್ ನಿನ್ನೆ (ಮಾರ್ಚ್ 18) ಗಾಜಾ ಪಟ್ಟಿಯ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ 400ಕ್ಕೂ ಹೆಚ್ಚು ಮಂದಿ ಪ್ಯಾಲೆಸ್ತೇನಿಯರು ಮೃತರಾಗಿದ್ದರು. ಇದೀಗ ಇಸ್ರೇಲ್ ಗಾಜಾದಲ್ಲಿ ಗ್ರೌಂಡ್ ಆಪರೇಷನ್ ಶುರುವಿಟ್ಟುಕೊಂಡಿದೆ.
‘ಭದ್ರತಾ ವಲಯವನ್ನು ವಿಸ್ತರಿಸಲು, ಉತ್ತರ ಮತ್ತು ದಕ್ಷಿಣ ಗಾಜಾ ನಡುವೆ ಭಾಗಶಃ ಬಫರ್ ರಚಿಸಲು ಇಸ್ರೇಲ್ ಸೇನಾ ಪಡೆಗಳು ಮಧ್ಯ ಮತ್ತು ದಕ್ಷಿಣ ಗಾಜಾ ಪಟ್ಟಿಯನ್ನು ಗುರಿಯಾಗಿಟ್ಟುಕೊಂಡು ಗ್ರೌಂಡ್ ಲೆವೆಲ್ ಆಪರೇಷನ್ ಶುರುವಿಟ್ಟುಕೊಂಡಿದೆ. ಇದರ ಭಾಗವಾಗಿ ಪಡೆಗಳು ತಮ್ಮ ನಿಯಂತ್ರಣವನ್ನು ನೆಟ್‌ಜಾರಿಮ್ ಕಾರಿಡಾರ್‌ನ ಮಧ್ಯಭಾಗಕ್ಕೆ ವಿಸ್ತರಿಸಿವೆ‘ ಎಂದು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಹೇಳಿಕೆಯಲ್ಲಿ ತಿಳಿಸಿವೆ.
ಏಕಕಾಲದಲ್ಲಿ ಗೋಲಾನಿ ಬ್ರಿಗೇಡ್ ಅನ್ನು ದಕ್ಷಿಣ ಕಮಾಂಡ್ ಪ್ರದೇಶದಲ್ಲಿ ಇರಿಸಲಾಗುವುದು ಮತ್ತು ಗಾಜಾ ಪಟ್ಟಿಯಲ್ಲಿ ಕಾರ್ಯಾಚರಣೆಗೆ ಸಿದ್ಧಗೊಳಿಸಲಾಯಿತು. ಇಸ್ರೇಲ್ ರಾಜ್ಯದ ನಾಗರಿಕರನ್ನು ರಕ್ಷಿಸುವ ಸಲುವಾಗಿ ಐಡಿಎಫ್ ಗಾಜಾ ಪಟ್ಟಿಯಲ್ಲಿ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕಾರ್ಯಾಚರಣೆಯನ್ನು ಮುಂದುವರಿಸುತ್ತದೆ" ಎಂದು ಇಸ್ರೇಲ್ ಸೇನೆ ಹೇಳಿದೆ.
ಬುಧವಾರ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಅವರು ಗಾಜಾ ನಿವಾಸಿಗಳಿಗೆ ‘ಕೊನೆಯ ಎಚ್ಚರಿಕೆ‘ ನೀಡಿದ್ದರು. ಅವರು ತಮ್ಮ ವೀಡಿಯೊ ಹೇಳಿಕೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಲಹೆಯನ್ನು ಪಾಲಿಸಬೇಕು ಮತ್ತು ಇಸ್ರೇಲಿ ಒತ್ತೆಯಾಳುಗಳನ್ನು ಮರಳಿ ಕಳುಹಿಸಬೇಕು ಮತ್ತು ಹಮಾಸ್ ಅನ್ನು ಅಧಿಕಾರದಿಂದ ತೆಗೆದುಹಾಕಬೇಕು ಎಂದು ಹೇಳಿದ್ದರು.
ಇಸ್ರೇಲ್ ಹಾಗೂ ಪ್ಯಾಲೆಸ್ತೇನ್ ನಡುವಿನ ಯುದ್ಧ ವಿರಾಮ ಘೋಷಣೆಯಾದಾಗಿನಿಂದ ಪ್ಯಾಲೆಸ್ತೇನ್ ಉಗ್ರಗಾಮಿಗಳು ಯಾವುದೇ ದಾಳಿ ನಡೆಸಿದ ಬಗ್ಗೆ ವರದಿಯಾಗಿಲ್ಲ. ಆದರೆ ಇಸ್ರೇಲ್ ಇದ್ದಕ್ಕಿದ್ದ ಹಾಗೆ ಗಾಜಾ ಪಟ್ಟಿಯ ಮೇಲೆ ದಾಳಿ ಆರಂಭಿಸಿತು. ಮಂಗಳವಾರ ಮುಂಜಾನೆ ಇಸ್ರೇಲ್ ನಡೆಸಿದ ದಾಳಿಯ ನಂತರ 183 ಮಕ್ಕಳು ಮತ್ತು 94 ಮಹಿಳೆಯರು ಸೇರಿದಂತೆ ಕನಿಷ್ಠ 436 ಜನರು ಸಾವನ್ನಪ್ಪಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ. ಇನ್ನೂ 678 ಜನರು ಈ ದಾಳಿಯಿಂದಾಗಿ ಗಾಯಗೊಂಡಿದ್ದಾರೆ.
ಹೊಸ ದಾಳಿಯ ಭಾಗವಾಗಿ, ಹಮಾಸ್ ಬೆಟಾಲಿಯನ್‌ನ ಕಮಾಂಡ್ ಸೆಂಟರ್ ಸೇರಿದಂತೆ ಬುಧವಾರ ಡಜನ್ಗಟ್ಟಲೆ ಉಗ್ರಗಾಮಿಗಳು ಮತ್ತು ಉಗ್ರಗಾಮಿ ತಾಣಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಸೇನೆ ಹೇಳಿಕೆಯಲ್ಲಿ ತಿಳಿಸಿದೆ.
ವಿಶ್ವಸಂಸ್ಥೆ ಸಿಬ್ಬಂದಿ ಸಾವು
ಇಸ್ರೇಲ್ ಗಾಜಾ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ವಿಶ್ವಸಂಸ್ಥೆಯ ಸಿಬ್ಬಂದಿಯೊಬ್ಬರು ಮೃತರಾಗಿರುವುದು ವರದಿಯಾಗಿದೆ. ಜೊತೆಗೆ ಐವರು ಸಿಬ್ಬಂದಿ ಗಾಯಗೊಂಡಿದ್ದಾಗಿ ವಿಶ್ವಸಂಸ್ಥೆ ಯೋಜನಾ ಸೇವೆಗಳ ಮುಖ್ಯಸ್ಥರು ತಿಳಿಸಿದ್ದಾರೆ.

ವಿಭಾಗ