ಗಾಜಾ ಯುದ್ಧದ ನಡುವೆ ತಾಂಡವವಾಡುತ್ತಿವೆ ಅಪೌಷ್ಟಿಕತೆ, ಮಾನವೀಯ ದುರಂತಗಳು; ಲೇಖಕ ಗಿರೀಶ್ ಲಿಂಗಣ್ಣ ಬರಹ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಗಾಜಾ ಯುದ್ಧದ ನಡುವೆ ತಾಂಡವವಾಡುತ್ತಿವೆ ಅಪೌಷ್ಟಿಕತೆ, ಮಾನವೀಯ ದುರಂತಗಳು; ಲೇಖಕ ಗಿರೀಶ್ ಲಿಂಗಣ್ಣ ಬರಹ

ಗಾಜಾ ಯುದ್ಧದ ನಡುವೆ ತಾಂಡವವಾಡುತ್ತಿವೆ ಅಪೌಷ್ಟಿಕತೆ, ಮಾನವೀಯ ದುರಂತಗಳು; ಲೇಖಕ ಗಿರೀಶ್ ಲಿಂಗಣ್ಣ ಬರಹ

Israel-Gaza war : ಇಸ್ಟ್ರೇಲ್ ಮತ್ತು ಗಾಜಾ ನಡುವಿನ ಕದನದ ತೀವ್ರತೆಯ ಹೆಚ್ಚಳದ ಕಾರಣದಿಂದ, ಮಾನವೀಯ ಸಹಾಯಗಳು ಗಾಜಾಗೆ ತಲುಪುವುದು ಅತ್ಯಂತ ವಿಳಂಬವಾಗಿದೆ. ಹಾಗಾಗಿ ಗಾಜಾದಲ್ಲಿ ಅಪೌಷ್ಟಿಕತೆ ತಾಂಡವವಾಡುತ್ತಿದೆ. (ಬರಹ: ಗಿರೀಶ್ ಲಿಂಗಣ್ಣ, ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಗಾಜಾ ಯುದ್ಧದ ನಡುವೆ ತಾಂಡವವಾಡುತ್ತಿವೆ ಅಪೌಷ್ಟಿಕತೆ, ಮಾನವೀಯ ದುರಂತಗಳು; ಲೇಖಕ ಗಿರೀಶ್ ಲಿಂಗಣ್ಣ ಬರಹ
ಗಾಜಾ ಯುದ್ಧದ ನಡುವೆ ತಾಂಡವವಾಡುತ್ತಿವೆ ಅಪೌಷ್ಟಿಕತೆ, ಮಾನವೀಯ ದುರಂತಗಳು; ಲೇಖಕ ಗಿರೀಶ್ ಲಿಂಗಣ್ಣ ಬರಹ

ಇಸ್ರೇಲ್ ತನ್ನ ಸೇನೆ ಪ್ಯಾಲೆಸ್ತೀನ್ ಪ್ರದೇಶ ಮತ್ತು ಈಜಿಪ್ಟಿನ ನಡುವೆ ಇದ್ದ ಪ್ರದೇಶದ (ಬಫರ್ ಜೋನ್) ಮೇಲೆ ಹಿಡಿತ ಸಾಧಿಸಿರುವುದಾಗಿ ಘೋಷಿಸಿದ ಬಳಿಕ, ಮೇ 30ರ ಗುರುವಾರದಂದು ರಾಫಾ ನಗರದ ಮೇಲೆ ತನ್ನ ಆಕ್ರಮಣವನ್ನು ಮುಂದುವರಿಸಿತು. ಆ ಮೂಲಕ ಸಂಪೂರ್ಣ ಗಾಜಾದ ಭೂ ಪ್ರದೇಶದ ಮೇಲೆ ತನ್ನ ಪಾರಮ್ಯ ಸಾಧಿಸಿತು. ಈ ಬಫರ್ ಪ್ರದೇಶವನ್ನು ತಾನು ವಶಪಡಿಸಿಕೊಂಡಿರುವ ಕಾರಣದಿಂದ, ಹಮಾಸ್ ಉಗ್ರರು ಗಾಜಾ ಪಟ್ಟಿಯೊಳಗೆ ಆಯುಧ ಒಯ್ಯುವ ಮಾರ್ಗಕ್ಕೆ ಈಗ ಅಡ್ಡಿಪಡಿಸಿದಂತಾಗಿದೆ ಎಂದು ಇಸ್ರೇಲ್ ಹೇಳಿದೆ.

ರಾಫಾದ ಮಧ್ಯಭಾಗದಲ್ಲಿ ಓರ್ವ ನಾಗರಿಕನ ಮೃತದೇಹವನ್ನು ರಕ್ಷಿಸಲು ಪ್ರಯತ್ನ ನಡೆಸುತ್ತಿದ್ದ 12 ಜನ ಪ್ಯಾಲೆಸ್ತೀನಿಯನ್ನರು ಇಸ್ರೇಲಿ ವಾಯುದಾಳಿಯೊಂದರಲ್ಲಿ ಸಾವಿಗೀಡಾಗಿದ್ದಾರೆ ಎಂದು ಗಾಜಾದ ವೈದ್ಯಕೀಯ ಮೂಲಗಳು ತಿಳಿಸಿವೆ. ಇನ್ನು ಕರಾವಳಿ ತೀರದ ಪ್ರದೇಶಗಳಲ್ಲಿ ಚಕಮಕಿಗಳು ಮುಂದುವರಿದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಜಾ ನಗರದ ಪಶ್ಚಿಮ ಭಾಗಕ್ಕೆ, ಅಪಾರ ಜನಸಂಖ್ಯೆ ಹೊಂದಿರುವ ಶತಿ ನಿರಾಶ್ರಿತ ಶಿಬಿರಕ್ಕೆ ಅಪ್ಪಳಿಸಿದ ವಾಯು ದಾಳಿಯಲ್ಲಿ ನತದೃಷ್ಟ ಪ್ಯಾಲೆಸ್ತೀನಿಯನ್ನರು ಸಾವಿಗೀಡಾಗಿದ್ದರು.

ಪ್ಯಾಲೆಸ್ತೀನಿಯನ್ ಟೆಲಿಕಮ್ಯುನಿಕೇಶನ್ ಸಂಸ್ಥೆಯಾದ ಜವ್ವಾಲ್ ಈ ಕುರಿತು ಹೇಳಿಕೆ ನೀಡಿದ್ದು, ಪ್ರಸ್ತುತ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ, ರಾಫಾದಾದ್ಯಂತ ಸಂವಹನ ಸೇವೆಗಳು ಸ್ಥಗಿತಗೊಂಡಿವೆ ಎಂದಿದೆ. ಮಂಗಳವಾರ, ಮೇ 28ರಂದು ಇಸ್ರೇಲಿನ ಅತ್ಯಂತ ಆತ್ಮೀಯ ಸ್ನೇಹಿತನಾಗಿರುವ ಅಮೆರಿಕಾ ರಾಫಾದಲ್ಲಿ ಇಸ್ರೇಲ್ ನಡೆಸುತ್ತಿರುವ ದಾಳಿಗಳನ್ನು ಪದೇ ಪದೇ ವಿರೋಧಿಸಿದೆ. ಆದರೆ ಅಂತಹ ಒಂದು ದಾಳಿ ನಡೆಯುತ್ತಿದೆ ಎಂದು ಒಪ್ಪಿಕೊಳ್ಳಲು ಅಮೆರಿಕಾ ನಿರಾಕರಿಸಿದೆ.

ರಾಫಾ ಮೇಲೆ ಇಸ್ರೇಲ್ ನಡೆಸಿರುವ ದಾಳಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ವಿಶ್ವಸಂಸ್ಥೆ ಮತ್ತು ಇತರ ಮಾನವೀಯ ಸಹಾಯದ ಸಂಸ್ಥೆಗಳು ಈ ದಾಳಿಯಿಂದ ನಾಗರಿಕರಿಗೆ ಯಾವ ರೀತಿಯಲ್ಲಿ ಅಪಾಯ ಉಂಟಾಗಬಹುದೆಂದು ಎಚ್ಚರಿಸಿದರೂ, ಇಸ್ರೇಲ್ ತನ್ನ ಆಕ್ರಮಣವನ್ನು ಮುಂದುವರಿಸುವುದಾಗಿ ಹೇಳಿಕೆ ನೀಡಿದೆ. ಕದನದ ತೀವ್ರತೆಯ ಹೆಚ್ಚಳದ ಕಾರಣದಿಂದ, ಮಾನವೀಯ ಸಹಾಯಗಳು ಗಾಜಾಗೆ ತಲುಪುವುದು ಅತ್ಯಂತ ವಿಳಂಬವಾಗಿದೆ. ಇದರಿಂದಾಗಿ ಗಾಜಾದಲ್ಲಿ ಅಪೌಷ್ಟಿಕತೆ ತಾಂಡವವಾಡುತ್ತಿದೆ. ವಿಶ್ವಸಂಸ್ಥೆ ಈಗಾಗಲೇ ಸಂಭಾವ್ಯ ಕ್ಷಾಮದ ಕುರಿತು ಎಚ್ಚರಿಕೆ ನೀಡಿದೆ.

ನಿಲುವು ಬಿಗಿಗೊಳಿಸಿದ ಹಮಾಸ್

ಹಮಾಸ್ ಮೂಲಗಳ ಪ್ರಕಾರ, ಅದು ಈಗಾಗಲೇ ಮಧ್ಯವರ್ತಿಗಳಿಗೆ ಇಸ್ರೇಲ್ ಆಕ್ರಮಣ ಮುಂದುವರಿದರೆ, ತಾನು ಯಾವುದೇ ನೇರ ಮಾತುಕತೆಗೆ ಮುಂದೆ ಬರುವುದಿಲ್ಲ ಎಂದಿದೆಯಾದರೂ, ಒಂದು ವೇಳೆ ಇಸ್ರೇಲ್ ಏನಾದರೂ ಗಾಜಾದಲ್ಲಿ ಯುದ್ಧ ನಿಲುಗಡೆಗೊಳಿಸಿದರೆ ಒತ್ತೆಯಾಳುಗಳು ಮತ್ತು ಸೆರೆಯಾಳುಗಳ ಹಸ್ತಾಂತರವೂ ಸೇರಿದಂತೆ 'ಪರಿಪೂರ್ಣ ಒಪ್ಪಂದ'ಕ್ಕೆ ತಾನು ಸಿದ್ಧವಿರುವುದಾಗಿ ತಿಳಿಸಿದೆ.

ಇಸ್ರೇಲ್ ಮತ್ತು ಗಾಜಾದಲ್ಲಿ ಅಧಿಕಾರ ಹೊಂದಿರುವ ಪ್ಯಾಲೆಸ್ತೀನಿಯನ್ ಸಂಘಟನೆ ಹಮಾಸ್ ಯುದ್ಧ ನಿಲುಗಡೆ ತಡವಾಗಲು ನೀನು ಕಾರಣ ಎಂದು ಪರಸ್ಪರರ ಮೇಲೆ ಆರೋಪಗಳನ್ನು ಹೊರಿಸುತ್ತಾ ಬಂದಿದ್ದವು. ಇದರಿಂದಾಗಿ ಮುಖ್ಯ ಮಧ್ಯಸ್ಥಿಕೆದಾರರಾದ ಕತಾರ್, ಈಜಿಪ್ಟ್, ಮತ್ತು ಅಮೆರಿಕಾಗಳು ಇಸ್ರೇಲ್ ಮತ್ತು ಹಮಾಸ್ ನಡುವೆ ಒಪ್ಪಂದ ಮೂಡಿಸಲು ನಡೆಸುವ ಮಾತುಕತೆಗಳನ್ನು ಮತ್ತೆ ಮತ್ತೆ ಮುಂದೂಡುತ್ತಾ ಬಂದಿವೆ. ವಿಶ್ವಸಂಸ್ಥೆಯ ಅತ್ಯುನ್ನತ ಜಾಗತಿಕ ನ್ಯಾಯಾಲಯವಾದ ಇಂಟರ್ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್ (ಐಸಿಜೆ) ಕದನ ವಿರಾಮ ಘೋಷಿಸುವಂತೆ ಆದೇಶಿಸಿದ ಬಳಿಕವೂ ಇಸ್ರೇಲ್ ದಕ್ಷಿಣ ಗಾಜಾದ ರಾಫಾ ಮೇಲೆ ಆಕ್ರಮಣ ಮುಂದುವರಿಸಿತ್ತು. ಈ ದಾಳಿಯ ನಡುವೆ, ಮೇ 30ರ ಗುರುವಾರದಂದು ಹಮಾಸ್ ತನ್ನ ಪ್ರತಿಕ್ರಿಯೆ ನೀಡಿತು.

ತಾನು ಪ್ರತಿಯೊಂದು ಮಧ್ಯಸ್ಥಿಕೆಯ ಪ್ರಯತ್ನದ ಸಂದರ್ಭದಲ್ಲಿ ಹೊಂದಾಣಿಕೆ ಪ್ರದರ್ಶಿಸಿದ್ದು, ಹಿಂದಿನ ಸುತ್ತಿನ ಮಾತುಕತೆಯಿಂದ ಮುಂದಿನ ಸುತ್ತಿನ ಮಾತುಕತೆಯ ವೇಳೆಗೆ ಧನಾತ್ಮಕ ನಡೆಯನ್ನು ಪ್ರದರ್ಶಿಸಿದ್ದಾಗಿ ಹೇಳಿದೆ. ಅದರಲ್ಲೂ ಇತ್ತೀಚಿನ ಮಧ್ಯಸ್ಥಿಕೆಯ ಸಂದರ್ಭದಲ್ಲಿ, ಇಸ್ರೇಲ್ ರಾಫಾ ಮೇಲೆ ದಾಳಿ ಆರಂಭಿಸಿದ ಬಳಿಕವೂ, ಮಧ್ಯಸ್ಥಿಕೆದಾರರು ಸಲಹೆ ಮಾಡಿದ ಒಪ್ಪಂದವೊಂದಕ್ಕೆ ತಾನು ಒಪ್ಪಿಗೆ ಸೂಚಿಸಿದ್ದಾಗಿ ಹಮಾಸ್ ಹೇಳಿದೆ.

ಆದರೆ ಈಗ ಇಸ್ರೇಲ್ ಪ್ರದರ್ಶಿಸುತ್ತಿರುವ ಆಕ್ರಮಣಶೀಲತೆ, ಮುತ್ತಿಗೆ, ಮತ್ತು ಪ್ಯಾಲೆಸ್ತೀನಿಯನ್ನರ ಹಸಿವು, ನರಳಾಟ ಮತ್ತು ಹತ್ಯಾಕಾಂಡದ ನಡುವೆ ಕದನ ವಿರಾಮದ ಮಾತುಕತೆಯನ್ನು ಮುಂದುವರಿಸಿ, ಈ ನೀತಿಯ ಭಾಗವಾಗಲು ಹಮಾಸ್ ಮತ್ತು ಇತರ ಪ್ಯಾಲೆಸ್ತೀನಿಯನ್ ಸಂಘಟನೆಗಳು ಸಿದ್ಧವಿಲ್ಲ ಎನ್ನಲಾಗಿದೆ. ಈ ಮುನ್ನ, ಒಂದು ವೇಳೆ ಇಸ್ರೇಲ್ ತನ್ನ ಆಕ್ರಮಣಶೀಲತೆ ಮತ್ತು ಗಾಜಾದ ಜನರ ವಿರುದ್ಧದ ಯುದ್ಧವನ್ನು ನಿಲ್ಲಿಸಿದರೆ, ಹಮಾಸ್ ಎಲ್ಲ ಒತ್ತೆಯಾಳುಗಳ ಹಸ್ತಾಂತರ ಸೇರಿದಂತೆ ಕದನ ವಿರಾಮ ಒಪ್ಪಂದಕ್ಕೆ ಸಿದ್ಧವಾಗಿತ್ತು ಎನ್ನಲಾಗಿದೆ.

ಆದರೆ ಹಿಂದಿನ ಮಾತುಕತೆಗಳ ಸಂದರ್ಭದಲ್ಲಿ ಮಹತ್ವದ ವಿಚಾರಗಳು ತಲೆದೋರಿದವು. ಸಂಪೂರ್ಣ ಕದನ ವಿರಾಮ, ಗಾಜಾ ಪಟ್ಟಿಯಲ್ಲಿ ಸ್ಥಳಾಂತರಗೊಂಡ ಕುಟುಂಬಗಳ ಪುನರಾಗಮನ, ಮತ್ತು ಗಾಜಾ ಪಟ್ಟಿಯಿಂದ ಇಸ್ರೇಲ್ ಸೇನೆಯ ಸಂಪೂರ್ಣ ಹಿಂತೆಗೆತದ ಷರತ್ತುಗಳು ಊರ್ಜಿತವಾದರೆ ಮಾತ್ರವೇ ತಾನು ಒಪ್ಪಂದಕ್ಕೆ ಸಹಿ ಹಾಕುವುದಾಗಿ ಹಮಾಸ್ ಹೇಳಿದೆ.

ಇಸ್ರೇಲ್ ಗಾಜಾ ಪಟ್ಟಿಯಿಂದ ಹಮಾಸ್ ಸಂಘಟನೆಯನ್ನು ಕಿತ್ತೊಗೆಯುವುದೇ ತನ್ನ ಗುರಿ ಎಂದು ಘೋಷಿಸಿದ್ದು, ಹಮಾಸ್ ಬೇಡಿಕೆಗಳನ್ನು ಒಪ್ಪಲು ಸಾಧ್ಯವಿಲ್ಲದವು ಎಂದಿದೆ. ರಾಫಾ ಮೇಲೆ ತಾನು ನಡೆಸಿದ ದಾಳಿಯ ಮೂಲ ಉದ್ದೇಶವೇ ಒತ್ತೆಯಾಳುಗಳ ರಕ್ಷಣೆ ಮತ್ತು ಹಮಾಸ್ ಉಗ್ರರನ್ನು ನಗರದಿಂದ ಹೊರಹಾಕುವುದು ಎಂದು ಇಸ್ರೇಲ್ ಹೇಳಿದೆ.

ಬಿಕ್ಕಟ್ಟಿನ ಹಿಂದಿನ ಕಥನ

ಅಕ್ಟೋಬರ್ 7, 2023ರಂದು ಹಮಾಸ್ ಉಗ್ರರು ಇಸ್ರೇಲ್‌ನ ದಕ್ಷಿಣ ಭಾಗದ ಮೇಲೆ ಆಕ್ರಮಣ ನಡೆಸಿದರು. ಈ ದಾಳಿಯಲ್ಲಿ 240 ಇಸ್ರೇಲಿ ನಾಗರಿಕರು ಒತ್ತೆಯಾಳುಗಳಾಗಿ ಸೆರೆಯಾದರೆ, ಕನಿಷ್ಠ 1,139 ನಾಗರಿಕರು ಸಾವಿಗೀಡಾಗಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಇಸ್ರೇಲ್ ತಕ್ಷಣವೇ ಗಾಜಾ ಮೇಲೆ ತನ್ನ ದಾಳಿಯನ್ನು ಆರಂಭಿಸಿತು. ಇಸ್ರೇಲ್‌ನ ಪ್ರತ್ಯಾಕ್ರಮಣದಲ್ಲಿ 36,000ಕ್ಕೂ ಹೆಚ್ಚು ಪ್ಯಾಲೆಸ್ತೀನಿಯನ್ನರು ಸಾವಿಗೀಡಾದರು. ಈ ಕದನದ ಪರಿಣಾಮವಾಗಿ, ಅಪಾರ ಸಂಖ್ಯೆಯ ನಾಗರಿಕರು ತಮ್ಮ ಮನೆಗಳಿಂದ ಹೊರದಬ್ಬಲ್ಪಟ್ಟು ನಿರಾಶ್ರಿತರಾಗಿದ್ದು, ಪ್ಯಾಲೆಸ್ತೀನಿ ಆಡಳಿತದ ಪ್ರದೇಶ ಅತ್ಯಂತ ಸಣ್ಣದಾಗಿದೆ ಎನ್ನುತ್ತವೆ ವರದಿಗಳು.

ಇಸ್ರೇಲ್ ಮತ್ತು ಹಮಾಸ್ ನಡುವೆ ನವೆಂಬರ್ 2023ರಲ್ಲಿ ನಡೆದ ಆರಂಭಿಕ ಹಂತದ ಮಾತುಕತೆಗಳ ಪರಿಣಾಮವಾಗಿ, ಇಸ್ರೇಲಿ ಸೆರೆಮನೆಗಳಲ್ಲಿದ್ದ ಅಂದಾಜು 100 ಪ್ಯಾಲೆಸ್ತೀನಿ ಸೆರೆಯಾಳುಗಳ ಬಿಡುಗಡೆಗೆ ಪ್ರತಿಯಾಗಿ, ಹಮಾಸ್ ಒಂದಷ್ಟು ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿತು. ಆದರೆ, ಅಂದಿನಿಂದ ಇಂದಿನವರೆಗೂ ಮಾತುಕತೆಗಳು ಬಹುತೇಕ ನಿಲುಗಡೆಗೆ ಬಂದಂತಾಗಿದೆ.

ಈಗಾಗಲೇ ಆಶಾ ಭಾವನೆಯನ್ನು ಕಳೆದುಕೊಂಡಂತೆ ತೋರುತ್ತಿರುವ ಪ್ಯಾಲೆಸ್ತೀನಿಯನ್ನರಿಗೆ ದೇರ್ ಅಲ್ ಬಾಲಾಹ್‌ನಿಂದ ಬರುತ್ತಿರುವ ಅಲ್ ಜಜೀರಾದ ಸುದ್ದಿಗಳೂ ನಿರಾಶಾದಾಯಕವಾಗೇ ಇವೆ. ಅಲ್ ಅಕ್ಸಾ ಆಸ್ಪತ್ರೆಯಿಂದ ಬರುತ್ತಿರುವ ವರದಿಗಳಂತೂ ಯಾತನಾದಾಯಕ ಚಿತ್ರಣಗಳೇ ಆಗಿವೆ. ಯುದ್ಧ ಆರಂಭಗೊಂಡ ಬಳಿಕ ಕನಿಷ್ಠ ಏಳರಿಂದ ಎಂಟು ಬಾರಿ ಸ್ಥಳಾಂತರಗೊಂಡಿರುವ ನಾಗರಿಕರಿಗೆ ಅವರ ಮಕ್ಕಳಿಗೆ ಮೂಲಭೂತ ಅವಶ್ಯಕತೆಗಳಾದ ಆಹಾರ, ಕುಡಿಯುವ ನೀರು ಒದಗಿಸುವುದು, ಆಗಾಗ ಘಟಿಸುವ ವಾಯು ದಾಳಿಯಿಂದ ಮಕ್ಕಳನ್ನು ರಕ್ಷಿಸಿಕೊಂಡು ತಾವೂ ಪಾರಾಗುವುದು ಬಹುದೊಡ್ಡ ಸವಾಲಾಗಿ ಮುಂದುವರಿದಿದೆ. ಕಳೆದ ಮೂರು ವಾರಗಳಿಂದ ಗಾಜಾ ಪಟ್ಟಿಗೆ ಅವಶ್ಯಕ ಔಷಧ ವಸ್ತುಗಳ ಪೂರೈಕೆಯೂ ನಡೆಯುತ್ತಿಲ್ಲ. ಇದರಿಂದಾಗಿ ಗಾಜಾದ ಆರೋಗ್ಯ ವ್ಯವಸ್ಥೆಯಂತೂ ಕುಸಿತದ ಅಂಚಿನಲ್ಲಿದೆ ಎನ್ನಲಾಗಿದೆ.

ಬರಹ: ಗಿರೀಶ್ ಲಿಂಗಣ್ಣ, ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

 

 

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.