Brazil Plane crash: ಬ್ರೆಜಿಲ್‌ನಲ್ಲಿ ಭೀಕರ ವಿಮಾನ ದುರಂತ, 62 ಮಂದಿ ದುರ್ಮರಣ, ನೆಲಕ್ಕಪ್ಪಳಿಸಿದ ವಿಡಿಯೊ ವೈರಲ್
ಬ್ರೆಜಿಲ್‌ನ ಸಾವೊ ಪಾಲೊ ಹೊರವಲಯದಲ್ಲಿ 62 ಮಂದಿ ಪ್ರಯಾಣಿಕರಿದ್ದ ವಿಮಾನವೊಂದು ಪತನಗೊಂಡಿದ್ದು, ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪಿರುವ ಘಟನೆ ಶುಕ್ರವಾರ (ಆಗಸ್ಟ್ 9) ನಡೆದಿದೆ. ವಿಮಾನ ಅಪಘಾತದ ವಿಡಿಯೊ ವೈರಲ್ ಆಗಿದೆ. ಈ ವಿಮಾನವು ಹಲವು ಮನೆಗಳ ಮೇಲೂ ಅಪ್ಪಳಿಸಿದೆ ಎಂದು ವರದಿಗಳ ತಿಳಿಸುತ್ತಿವೆ.
ಬ್ರೆಜಿಲ್: ಇತ್ತೀಚಿನ ದಿನಗಳಲ್ಲಿ ವಿಮಾನಾಪಘಾತದ ಪ್ರಕರಣಗಳು ಹೆಚ್ಚುತ್ತಿವೆ. ಇದೀಗ ಬ್ರೆಜಿಲ್‌ನಲ್ಲಿ ಒಂದು ಭೀಕರ ಅಪಘಾತ ಸಂಭವಿಸಿದ್ದು ವಿಮಾನದಲ್ಲಿದ್ದ 62 ಮಂದಿ ಸಾವನ್ನಪ್ಪಿದ್ದಾರೆ ಎಂದು ಎಂದು ಬ್ರೆಜಿಲ್‌ನ ಸಿವಿಲ್ ಡಿಫೆನ್ಸ್ ವರದಿ ಮಾಡಿದೆ. ಸಿಎನ್‌ಎನ್ ವರದಿಯ ಪ್ರಕಾರ ಈ ವಿಮಾನವು ಹಲವು ಮನೆಗಳ ಮೇಲೆ ಅಪ್ಪಳಿಸಿದೆ. ವಿಮಾನದಲ್ಲಿದ್ದವರೆಲ್ಲೂ ಮರಣ ಹೊಂದಿದ್ದಾರೆ ಎನ್ನಲಾಗುತ್ತಿದೆ.
ವೊಯ್‌ಪಾಸ್ ವಿಮಾನವು ಕ್ಯಾಸ್ಕಾವೆಲ್‌ನಿಂದ ಹೊರಟು ಸಾವೊ ಪಾಲೊಗೆ ತೆರಳುತ್ತಿತ್ತು. ಇಲ್ಲಿನ ಸ್ಥಳೀಯ ಸಮಯ 1.30ರ ಹೊತ್ತಿಗೆ ವಿಮಾನ ಸಿಗ್ನಲ್ ಕಳೆದುಕೊಂಡಿತ್ತು ಎಂದು Flightradar24 ಡೇಟಾ ಹಾಗೂ CNN ವರದಿಯನ್ನು ಉಲ್ಲೇಖಿಸಿದೆ ಎಎನ್‌ಐ ಸುದ್ದಿಸಂಸ್ಥೆ.
ಫ್ಲೈಟ್ 2283ನಲ್ಲಿ 58 ಮಂದಿ ಪ್ರಯಾಣಿಕರು ಹಾಗೂ ನಾಲ್ಕು ಮಂದಿ ಸಿಬ್ಬಂದಿ ಇದ್ದು, ಒಟ್ಟು 62 ಮಂದಿಯೂ ಸಾವನ್ನಪ್ಪಿದ್ದಾರೆ.
ʼಅಪಘಾತ ಹೇಗೆ ಸಂಭವಿಸಿತು ಹಾಗೂ ವಿಮಾನದಲ್ಲಿದ್ದ ಪ್ರಸ್ತುತ ಜನರ ಪರಿಸ್ಥಿತಿಯ ಬಗ್ಗೆ ಇನ್ನೂ ಯಾವುದೇ ವಿಚಾರ ದೃಢೀಕೃತವಾಗಿಲ್ಲʼ ಎಂದು Flightradar24 ಡೇಟಾ ವರದಿ ತಿಳಿಸಿತ್ತು.
62 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಸಾವೊ ಪಾಲೊ ನಗರದ ಸಮೀಪ ವಿನ್ಹೆಡೊದಲ್ಲಿ ಪತನಗೊಂಡಿದೆ ಎಂದು ಬ್ರೆಜಿಲಿಯನ್ ಏರ್‌ಲೈನ್ಸ್ ದೃಢಪಡಿಸಿದೆ ಎಂದು ಅಲ್ ಜಜೀರಾ ವರದಿ ಮಾಡಿದೆ.
ಶುಕ್ರವಾರದ ಹೇಳಿಕೆಯಲ್ಲಿ ವಿಮಾನದಲ್ಲಿದ್ದವರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಏರ್‌ಲೈನ್ ಹೇಳಿತ್ತು. ಆದರೆ ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರು ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಖಚಿತ ಪಡಿಸಿದ್ದಾಗಿ ಅಲ್ ವರದಿ ತಿಳಿಸಿದೆ.
ʼತುಂಬಾ ದುಃಖದ ಸುದ್ದಿ. ಸಂತ್ರಸ್ತರ ಕುಟುಂಬಗಳು ಮತ್ತು ಸ್ನೇಹಿತರಿಗೆ ಸಂತಾಪʼ ಎಂದು ಬ್ರೆಜಿಲ್ ಅಧ್ಯಕ್ಷ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾಗಿ ತಿಳಿಸಿದೆ ಅಲ್ ಜಜೀರಾ.
ಈ ವಿಮಾನಾಪಘಾತದ ವಿಡಿಯೊ ವೈರಲ್ ಆಗಿದ್ದು, ವಿಮಾನವು ಆಕಾಶದಿಂದ ನೆಲಕ್ಕೆ ಅಪ್ಪಳಿಸುತ್ತಿರುವುದನ್ನು ಕಾಣಬಹುದಾಗಿದೆ.