ಜಾಗತಿಕ ಪ್ರತ್ಯೇಕತೆಯ ಮಧ್ಯೆ ಭದ್ರಗೊಂಡ ಉತ್ತರ ಕೊರಿಯಾ - ರಷ್ಯಾ ಸಂಬಂಧ: ಪುಟಿನ್ ಮತ್ತು ಕಿಮ್ ಬೆಸೆದ ಸ್ನೇಹಬಂಧ
ರಷ್ಯಾ ಅಥವಾ ಉತ್ತರ ಕೊರಿಯಾ ಮೇಲೆ ಇತರ ದೇಶಗಳು ದಾಳಿ ನಡೆಸಿದರೆ, ಪರಸ್ಪರರ ನೆರವಿಗೆ ಧಾವಿಸಲಾಗುತ್ತದೆ ಎಂದು ಪುಟಿನ್ ಘೋಷಿಸಿದ್ದಾರೆ. ಈ ಘೋಷಣೆ ಪಾಶ್ಚಾತ್ಯ ದೇಶಗಳಿಗೆ ಒಂದು ಎಚ್ಚರಿಕೆಯ ರೀತಿ ತೋರುತ್ತಿದೆ. (ಬರಹ: ಗಿರೀಶ್ ಲಿಂಗಣ್ಣ)

International news: 2023ರ ಸೆಪ್ಟೆಂಬರ್ ತಿಂಗಳಲ್ಲಿ, ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರು ರಷ್ಯಾಗೆ ಭೇಟಿ ನೀಡಿದ್ದರು. ರಷ್ಯಾದಲ್ಲಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಡನೆ ನಡೆದ ಮಾತುಕತೆಯ ಸಂದರ್ಭದಲ್ಲಿ, ಕಿಮ್ ಉತ್ತರ ಕೊರಿಯಾಗೆ ಭೇಟಿ ನೀಡುವಂತೆ ಪುಟಿನ್ ಅವರನ್ನು ಅಧಿಕೃತವಾಗಿ ಆಹ್ವಾನಿಸಿದ್ದರು. ಈ ಆಹ್ವಾನವನ್ನು ಪುರಸ್ಕರಿಸಿದ ಪುಟಿನ್, ಜೂನ್ 18-19ರಂದು ಉತ್ತರ ಕೊರಿಯಾಗೆ ಭೇಟಿ ನೀಡಿದ್ದಾರೆ. ಆ ಬಳಿಕ, ಜೂನ್ 19-20ರಂದು ಅವರು ವಿಯೆಟ್ನಾಂ ಕಮ್ಯುನಿಸ್ಟ್ ಪಾರ್ಟಿಯ ಮುಖ್ಯ ಕಾರ್ಯದರ್ಶಿ ನೂಯೆನ್ ಫು ತ್ರಾಂಗ್ ಅವರ ಆಹ್ವಾನದ ಮೇರೆಗೆ ವಿಯೆಟ್ನಾಂಗೆ ಸ್ಟೇಟ್ ವಿಸಿಟ್‌ಗೆ (ಅಧಿಕೃತ ಭೇಟಿ) ತೆರಳಲಿದ್ದಾರೆ.
ಪುಟಿನ್ ಅವರ ಉತ್ತರ ಕೊರಿಯಾ ಮತ್ತು ವಿಯೆಟ್ನಾಂ ಭೇಟಿಗಳು ತನ್ನ ಏಷ್ಯಾದ ಮಿತ್ರ ರಾಷ್ಟ್ರಗಳ ಜೊತೆಗಿನ ಸಂಬಂಧವನ್ನು ಇನ್ನಷ್ಟು ವೃದ್ಧಿಪಡಿಸುವ ರಷ್ಯಾದ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತಿವೆ. ಪುಟಿನ್ ಅವರು ಉತ್ತರ ಕೊರಿಯಾ ಮತ್ತು ವಿಯೆಟ್ನಾಂಗೆ ಭೇಟಿ ನೀಡಿರುವುದು ಅವೆರಡು ರಾಷ್ಟ್ರಗಳು ರಷ್ಯಾಗೆ ಕಾರ್ಯತಂತ್ರದ ದೃಷ್ಟಿಯಿಂದ ಎಷ್ಟು ಮುಖ್ಯ ಎಂಬುದನ್ನು ಜಗತ್ತಿಗೆ ತೋರಿಸಿದೆ. ಜೂನ್ 19ರಂದು, ರಷ್ಯಾ ಅಧ್ಯಕ್ಷ ಪುಟಿನ್ ಅವರು ಮುಂದಿನ ವರ್ಷಗಳಲ್ಲಿ ರಷ್ಯಾ ಮತ್ತು ವಿಯೆಟ್ನಾಂ ಸಂಬಂಧ ಹೇಗಿರಬೇಕು ಎಂಬುದಕ್ಕೆ ಒಂದು 'ಮೂಲಭೂತ ದಾಖಲೆಯನ್ನು' ಸಿದ್ಧಪಡಿಸಲಾಗಿದೆ ಎಂದು ಘೋಷಿಸಿದರು.
ಎರಡು ದೇಶಗಳ ನಡುವೆ ವಿಶೇಷ ಒಪ್ಪಂದ
ಅದೇ ದಿನದಂದು, ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರು ಮತ್ತು ವ್ಲಾಡಿಮಿರ್ ಪುಟಿನ್ ಅವರು ಒಂದು ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ರಷ್ಯನ್ ಮಾಧ್ಯಮಗಳು ವರದಿ ಮಾಡಿವೆ. ರಷ್ಯಾ ಮತ್ತು ಉತ್ತರ ಕೊರಿಯಾದ ಪ್ರತಿನಿಧಿಗಳ ಮಾತುಕತೆಗಳು ನಡೆದು, ಒಪ್ಪಂದ ಅಂತಿಮ ರೂಪ ಪಡೆದ ಬಳಿಕ, ಪುಟಿನ್ ಮತ್ತು ಕಿಮ್ ಜಾಂಗ್ ಉನ್ ಅವರು ಮುಖತಃ ಭೇಟಿಯಾದ ಸಂದರ್ಭದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಈ ನೂತನ ಒಪ್ಪಂದದ ಪ್ರಕಾರ, ರಷ್ಯಾ ಅಥವಾ ಉತ್ತರ ಕೊರಿಯಾ ಮೇಲೆ ಇತರ ದೇಶಗಳು ದಾಳಿ ನಡೆಸಿದರೆ, ಪರಸ್ಪರರ ನೆರವಿಗೆ ಧಾವಿಸಲಾಗುತ್ತದೆ ಎಂದು ಪುಟಿನ್ ಘೋಷಿಸಿದ್ದಾರೆ. ಈ ಘೋಷಣೆ ಪಾಶ್ಚಾತ್ಯ ದೇಶಗಳಿಗೆ ಒಂದು ಎಚ್ಚರಿಕೆಯ ರೀತಿ ತೋರುತ್ತಿದೆ.
ಉತ್ತರ ಕೊರಿಯಾದ ರಾಜಧಾನಿ ಪ್ಯೋಂಗ್‌ಯಾಂಗ್ ನಗರದಲ್ಲಿ ನಡೆದ ಸಭೆಯಲ್ಲಿ ಮಿಲಿಟರಿ ವಿಭಾಗದಲ್ಲೂ ಜೊತೆಯಾಗಿ ಕಾರ್ಯಾಚರಿಸುವ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಕಳೆದ 24 ವರ್ಷಗಳಲ್ಲಿ ಪುಟಿನ್ ಅವರು ಇದೇ ಮೊದಲ ಬಾರಿಗೆ ಪ್ಯೋಂಗ್‌ಯಾಂಗ್ ನಗರಕ್ಕೆ ಭೇಟಿ ನೀಡಿದ್ದಾರೆ.
ಭಾರೀ ಪ್ರಗತಿಯ ದಾಖಲೆ ಎಂದ ಪುಟಿನ್
ಉತ್ತರ ಕೊರಿಯಾ ರಾಜಧಾನಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವ್ಲಾಡಿಮಿರ್ ಪುಟಿನ್ ಅವರು ಈ ಒಪ್ಪಂದವನ್ನು 'ಭಾರೀ ಪ್ರಗತಿಯ ದಾಖಲೆ' ಎಂದು ಕರೆದಿದ್ದಾರೆ. ತಮ್ಮೆರಡು ದೇಶಗಳ ಪೈಕಿ, ಯಾವುದರ ಮೇಲಾದರೂ ಆಕ್ರಮಣ ನಡೆದರೆ, ಪರಸ್ಪರ ಸಹಕಾರ ನೀಡುವುದನ್ನೂ ಒಪ್ಪಂದ ಒಳಗೊಂಡಿದೆ ಎಂದು ಪುಟಿನ್ ಅವರು ಹೇಳಿದ್ದಾರೆ ಎನ್ನುತ್ತವೆ ವರದಿಗಳು.
ಇನ್ನು ಕಿಮ್ ಜಾಂಗ್ ಉನ್ ಅವರಂತೂ ಈ ಒಪ್ಪಂದವನ್ನು ರಷ್ಯಾ ಮತ್ತು ಉತ್ತರ ಕೊರಿಯಾ ನಡುವೆ 'ಇತಿಹಾಸದಲ್ಲೇ ಅತ್ಯಂತ ಬಲಿಷ್ಟ ಒಪ್ಪಂದ' ಎಂದು ಶ್ಲಾಘಿಸಿದ್ದು, ಇದು ರಷ್ಯಾ ಮತ್ತು ಉತ್ತರ ಕೊರಿಯಾಗಳಿಗೆ ರಾಜಕೀಯ, ಆರ್ಥಿಕತೆ, ಸಂಸ್ಕೃತಿ ಮತ್ತು ಮಿಲಿಟರಿ ಕ್ಷೇತ್ರಗಳಲ್ಲಿ ಪರಸ್ಪರ ಜೊತೆಯಾಗಿ ಕಾರ್ಯಾಚರಿಸಲು ನೆರವಾಗಲಿದೆ ಎಂದು ಹೇಳಿದ್ದಾರೆ.
ರಷ್ಯನ್ ಸರ್ಕಾರಿ ಮಾಧ್ಯಮದ ಪ್ರಕಾರ, ರಷ್ಯಾ ಮತ್ತು ಉತ್ತರ ಕೊರಿಯಾಗಳು ಆರೋಗ್ಯ, ವೈದ್ಯಕೀಯ ಶಿಕ್ಷಣ, ಮತ್ತು ವಿಜ್ಞಾನ ವಿಭಾಗಗಳಲ್ಲಿ ಜೊತೆಯಾಗಿ ಕಾರ್ಯಾಚರಿಸುವ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಮಾಹಿತಿಯನ್ನು ಕ್ರೆಮ್ಲಿನ್‌ನ ಜಾಲತಾಣ ಪುಷ್ಟೀಕರಿಸಿದೆ.
ಎರಡನೇ ಮಹಾಯುದ್ಧದ ಬಳಿಕ, ಉತ್ತರ ಕೊರಿಯಾ ಸ್ಥಾಪನೆಗೊಂಡ ಸಮಯದಿಂದಲೂ ರಷ್ಯಾ ಮತ್ತು ಉತ್ತರ ಕೊರಿಯಾಗಳು ಮಿತ್ರ ರಾಷ್ಟ್ರಗಳಾಗಿಯೇ ಸಾಗಿ ಬಂದಿವೆ. ಅದರಲ್ಲೂ ರಷ್ಯಾ 2022ರಲ್ಲಿ ಉಕ್ರೇನ್ ಮೇಲೆ ಆಕ್ರಮಣ ನಡೆಸಿದ ಬಳಿಕ, ರಷ್ಯಾ ಜಾಗತಿಕವಾಗಿ ಏಕಾಂಗಿಯಾಗಿತು. ಆ ಬಳಿಕ ರಷ್ಯಾ ಮತ್ತು ಉತ್ತರ ಕೊರಿಯಾ ನಡುವಿನ ಸ್ನೇಹ ಸಂಬಂಧ ಇನ್ನಷ್ಟು ಆಪ್ತವಾಯಿತು.
ಮಿಲಿಟರಿ ಸಹಕಾರ ಹೊಂದಲು ರಷ್ಯಾ ಮುಕ್ತ
ಜೂನ್ 19ರಂದು ಸಹಿ ಹಾಕಲಾದ ನೂತನ ಒಪ್ಪಂದದ ಪ್ರಕಾರ, ಉತ್ತರ ಕೊರಿಯಾದೊಡನೆ ಮಿಲಿಟರಿ ಸಹಕಾರ ಹೊಂದಲು ರಷ್ಯಾ ಮುಕ್ತವಾಗಿದೆ ಎಂದು ಪುಟಿನ್ ಹೇಳಿದ್ದಾರೆ. ಅವರು ಉತ್ತರ ಕೊರಿಯಾವನ್ನು ಅದರ ಅಧಿಕೃತ ಹೆಸರಾದ ಡಿಪಿಆರ್‌ಕೆ ಎಂದೇ ಸಂಬೋಧಿಸಿದ್ದಾರೆ. ಡಿಪಿಆರ್‌ಕೆ ಎನ್ನುವುದು 'ಡೆಮಾಕ್ರಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾ' ಎಂಬುದರ ಹೃಸ್ವರೂಪವಾಗಿದ್ದು, ಉತ್ತರ ಕೊರಿಯಾದ ಅಧಿಕೃತ ಹೆಸರಾಗಿದೆ.
ಕಿಮ್ ತನ್ನ ಮಾತಿನಲ್ಲಿ ಪುಟಿನ್ ಅವರನ್ನು 'ಕೊರಿಯನ್ ಜನತೆಯ ಅತ್ಯಂತ ಪ್ರೀತಿಪಾತ್ರ ಮಿತ್ರ' ಎಂದು ಕರೆದಿದ್ದಾರೆ. ಇನ್ನು ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದಂತೆ, ಉತ್ತರ ಕೊರಿಯಾ ರಷ್ಯನ್ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುತ್ತದೆ ಮತ್ತು ರಷ್ಯಾದ ಜೊತೆ ನಿಲ್ಲುತ್ತದೆ ಎಂದು ಕಿಮ್ ಹೇಳಿದ್ದಾರೆ. ಉಕ್ರೇನ್ ಯುದ್ಧದ ಪರಿಣಾಮವಾಗಿ, ರಷ್ಯಾ ವಿರುದ್ಧ ವಿಶ್ವಸಂಸ್ಥೆ ಈಗಾಗಲೇ ಸಾಕಷ್ಟು ನಿರ್ಬಂಧಗಳನ್ನು ವಿಧಿಸಿದೆ.
ಉತ್ತರ ಕೊರಿಯಾ ಸಹ ನಿಷೇಧಿತ ಆಯುಧ ಕಾರ್ಯಕ್ರಮ ರೂಪಿಸಿದ್ದಕ್ಕಾಗಿ ವಿಶ್ವಸಂಸ್ಥೆಯ ನಿರ್ಬಂಧಕ್ಕೊಳಗಾಗಿದ್ದು, ಅದು ತಮಗೆ ಬೆಂಬಲ ಸೂಚಿಸಿದ್ದಕ್ಕೆ ಪುಟಿನ್ ಕಿಮ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಉತ್ತರ ಕೊರಿಯಾದ 'ನಿರಂತರ ಮತ್ತು ಅಚಲ ಬೆಂಬಲ' ಮಾಸ್ಕೋಗೆ ಸದಾ ಮೌಲ್ಯಯುತವಾಗಿದೆ ಎಂದು ಪುಟಿನ್ ಹೇಳಿದ್ದಾರೆ.
"ರಷ್ಯಾ ಮತ್ತು ಉತ್ತರ ಕೊರಿಯಾ ಎರಡೂ ರಾಷ್ಟ್ರಗಳ ಮೇಲೂ ಅಗಾಧ ನಿರ್ಬಂಧಗಳನ್ನು ಹೇರಲಾಗಿದೆ. ನಾವು ಪಾಶ್ಚಾತ್ಯ ದೇಶಗಳ ಈ ಬ್ಲ್ಯಾಕ್‌ಮೇಲ್ ತಂತ್ರಕ್ಕೆ ಮಣಿಯುವುದಿಲ್ಲ" ಎಂದು ಪುಟಿನ್ ನೇರವಾಗಿಯೇ ಗುಡುಗಿದ್ದಾರೆ. ಅಮೆರಿಕಾ ಮತ್ತು ಅದರ ಮಿತ್ರ ರಾಷ್ಟ್ರಗಳ ಒತ್ತಡಕ್ಕೆ ಮಣಿದು, ಉತ್ತರ ಕೊರಿಯಾ ಮೇಲೆ ವಿಶ್ವಸಂಸ್ಥೆ ಅನವಶ್ಯಕ ನಿರ್ಬಂಧಗಳನ್ನು ಹೇರಿದೆ ಎಂದು ಪುಟಿನ್ ಆರೋಪಿಸಿದ್ದು, ನಿರ್ಬಂಧಗಳನ್ನು ಮರುಪರಿಶೀಲಿಸುವಂತೆ ಅವರು ವಿಶ್ವಸಂಸ್ಥೆಯನ್ನು ಆಗ್ರಹಿಸಿದ್ದಾರೆ.
ಪುಟಿನ್ ಜೂನ್ 19, ಬುಧವಾರದಂದು ಬೆಳಗ್ಗೆ ಪ್ಯೋಂಗ್‌ಯಾಂಗ್ ನಗರಕ್ಕೆ ಆಗಮಿಸಿದ್ದು, ಅವರಿಗೆ ಕಿಮ್ ಕೆಂಪುಹಾಸಿನ ಭವ್ಯ ಸ್ವಾಗತ ಕೋರಿದ್ದರು. ಪರಸ್ಪರರನ್ನು ಆಲಿಂಗಿಸುವ ಮೂಲಕ ಇಬ್ಬರು ನಾಯಕರು ತಮ್ಮ ದೇಶಗಳ ನಡುವಿನ ಬಾಂಧವ್ಯವನ್ನು ಜಗತ್ತಿಗೆ ಸಾರಿದರು. ಆ ಬಳಿಕ, ಕಿಮ್ II ಸಂಗ್ ಚೌಕದಲ್ಲಿ ಮಿಲಿಟರಿ ಬ್ಯಾಂಡ್ ಮತ್ತು ನೃತ್ಯದ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಭಾಗಿಯಾದರು. ಆ ಬಳಿಕ, ಪುಟಿನ್ ಮರಳಿ ಕಿಮ್ ಜಾಂಗ್ ಉನ್ ಅವರನ್ನು ಮಾಸ್ಕೋಗೆ ಆಹ್ವಾನಿಸಿದರು.
ಇದು ಒಂದು ವರ್ಷದ ಅವಧಿಯಲ್ಲಿ ಇಬ್ಬರು ನಾಯಕರ ನಡುವಿನ ಎರಡನೇ ಭೇಟಿಯಾಗಿದ್ದು, ಅವರಿಬ್ಬರೂ ಸುದೀರ್ಘ ಸಂಭಾಷಣೆ ನಡೆಸಿದರು. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ, ಕಿಮ್ ಜಾಂಗ್ ಉನ್ ತನ್ನ ಬುಲೆಟ್‌ಪ್ರೂಫ್ ರೈಲಿನಲ್ಲಿ ಪುಟಿನ್ ಅವರೊಡನೆ ಸಮಾಲೋಚನೆಯಲ್ಲಿ ಭಾಗಿಯಾಗಲು ರಷ್ಯಾಗೆ ತೆರಳಿದ್ದರು.
ಹಲವು ವರ್ಷಗಳ ಬಳಿಕ ನೆರವೇರಿರುವ ಪುಟಿನ್‌ರ ಉತ್ತರ ಕೊರಿಯಾ ಭೇಟಿ ಎರಡೂ ರಾಷ್ಟ್ರಗಳ ಸಂಬಂಧದಲ್ಲಿ ಭಾರೀ ಸುಧಾರಣೆ ತರುವ ನಿರೀಕ್ಷೆಗಳಿವೆ. ಎರಡೂ ರಾಷ್ಟ್ರಗಳು ಜಾಗತಿಕ ರಂಗದಲ್ಲಿ ಏಕಾಂಗಿಯಾಗಿರುವ ಸಂದರ್ಭದಲ್ಲಿ ಈ ಭೇಟಿ ಏರ್ಪಟ್ಟಿರುವುದು ಮಹತ್ವ ಪಡೆದುಕೊಂಡಿದೆ. ರಷ್ಯಾ ಮತ್ತು ಉತ್ತರ ಕೊರಿಯಾ ನಡುವೆ ವೃದ್ಧಿಸುತ್ತಿರುವ ಮಿಲಿಟರಿ ಸಂಬಂಧವನ್ನು ಅಮೆರಿಕಾ ಮತ್ತು ದಕ್ಷಿಣ ಕೊರಿಯಾಗಳು ಸೂಕ್ಷ್ಮವಾಗಿ ಗಮನಿಸುತ್ತಿವೆ.
ಉತ್ತರ ಕೊರಿಯಾದ ಪ್ರಮುಖ ರಾಜಕೀಯ ಮತ್ತು ಆರ್ಥಿಕ ಬೆಂಬಲಿಗ, ರಷ್ಯಾದ ಮುಖ್ಯ ಮಿತ್ರ ರಾಷ್ಟ್ರವಾದ ಚೀನಾ ಈ ಭೇಟಿಗೆ ಮೌನ ಪ್ರತಿಕ್ರಿಯೆ ನೀಡಿದೆ. ತಾಂತ್ರಿಕವಾಗಿ, ಉತ್ತರ ಮತ್ತು ದಕ್ಷಿಣ ಕೊರಿಯಾಗಳು 1950ರಿಂದ 1953ರ ನಡುವೆ ಪರಸ್ಪರ ಯುದ್ಧದಲ್ಲಿ ನಿರತವಾಗಿದ್ದವು. ಅವೆರಡರ ನಡುವಿನ ಗಡಿ ಜಗತ್ತಿನಲ್ಲೇ ಅತ್ಯಂತ ಕಠಿಣ ಕಾವಲು ಹೊಂದಿರುವ ಗಡಿಗಳಲ್ಲಿ ಒಂದಾಗಿದೆ.
ಕೊರಿಯನ್ ಪ್ರಸ್ತಭೂಮಿಯಲ್ಲಿ ಪ್ರಸ್ತುತ ಕಳೆದ ಹಲವು ವರ್ಷಗಳಲ್ಲೇ ಅತ್ಯಧಿಕ ಉದ್ವಿಗ್ನತೆ ತಲೆದೋರಿದೆ. ಕಿಮ್ ಜಾಂಗ್ ಉನ್ ಅವರ ಆಯುಧ ಪರೀಕ್ಷೆಗಳು, ಅಮೆರಿಕಾ - ದಕ್ಷಿಣ ಕೊರಿಯಾ ಮತ್ತು ಜಪಾನ್‌ಗಳ ಜಂಟಿ ಸಮರಾಭ್ಯಾಸಗಳು ಉದ್ವಿಗ್ನತೆಯನ್ನು ಹೆಚ್ಚು ಮಾಡುತ್ತಲೇ ಸಾಗಿವೆ.
ಉತ್ತರ ಮತ್ತು ದಕ್ಷಿಣ ಕೊರಿಯಾಗಳು ಪರಸ್ಪರ ಮಾನಸಿಕ ಯುದ್ಧದಲ್ಲಿ ಇನ್ನೂ ನಿರತವಾಗಿವೆ. ಉತ್ತರ ಕೊರಿಯಾ ಟನ್‌ಗಟ್ಟಲೆ ಕಸ, ತ್ಯಾಜ್ಯಗಳನ್ನು ಒಳಗೊಂಡ ಬಲೂನುಗಳನ್ನು ದಕ್ಷಿಣ ಕೊರಿಯಾದೆಡೆಗೆ ಹಾರಿಸಿದೆ. ಇದಕ್ಕೆ ಪ್ರತಿಯಾಗಿ, ದಕ್ಷಿಣ ಕೊರಿಯಾ ಸಹ ದೊಡ್ಡ ದೊಡ್ಡ ಧ್ವನಿವರ್ಧಕಗಳ ಮೂಲಕ ಉತ್ತರ ಕೊರಿಯಾ ವಿರೋಧಿ ಸಂದೇಶಗಳನ್ನು ಪ್ರಸಾರಗೊಳಿಸಿತ್ತು.
ದಕ್ಷಿಣ ಕೊರಿಯಾ ರಾಜಧಾನಿ ಸಿಯೋಲ್‌ನ ಎವ್‌ಹಾ ವಿಶ್ವವಿದ್ಯಾಲಯದ ಉಪನ್ಯಾಸಕರಾಗಿರುವ ಲೀಫ್ ಎರಿಕ್ ಈಸ್ಲೇ ಅವರು ಪುಟಿನ್ ಅವರ ಭೇಟಿ ಉತ್ತರ ಕೊರಿಯಾಗೆ ಧನ್ಯವಾದ ಸಲ್ಲಿಸುವ ಭೇಟಿಯಂತೆ ತೋರುತ್ತಿದೆ ಎಂದಿದ್ದಾರೆ. ನಿರಂಕುಶ ಪ್ರಭುತ್ವಕ್ಕೆ ಶಸ್ತ್ರಾಗಾರದಂತಿರುವ (ಅರ್ಸೆನಲ್ ಫಾರ್ ಅಟಾಕ್ರಸಿ) ಉತ್ತರ ಕೊರಿಯಾ, ಉಕ್ರೇನ್ ಮೇಲೆ ಪುಟಿನ್ ಅವರ ಅಕ್ರಮ ದಾಳಿಗೂ ಬೆಂಬಲವಾಗಿ ನಿಂತಿತ್ತು ಎಂದು ಅವರು ಆರೋಪಿಸಿದ್ದಾರೆ.
ಅರ್ಸೆನಲ್ ಫಾರ್ ಅಟಾಕ್ರಸಿ ಎಂದರೆ, ನಿರಂಕುಶ ಪ್ರಭುತ್ವಕ್ಕೆ ಮಿಲಿಟರಿ ಬೆಂಬಲ ಅಥವಾ ಆಯುಧಗಳನ್ನು ಒದಗಿಸುವುದಾಗಿದೆ. ಇಲ್ಲಿ ಈ ಪದ, ಉತ್ತರ ಕೊರಿಯಾ ಪುಟಿನ್‌ರ ಪ್ರಜಾಪ್ರಭುತ್ವ ವಿರೋಧಿ ದುರಾಕ್ರಮಣಕ್ಕೆ ಆಯುಧಗಳನ್ನು ಪೂರೈಸಿದೆ ಎನ್ನುವುದನ್ನು ಸೂಚಿಸುತ್ತದೆ.
ಸಿಯೋಲ್‌ನ ನ್ಯಾಷನಲ್ ಸೆಕ್ಯುರಿಟಿ ಸ್ಟ್ರಾಟಜಿಯ ಸಂಶೋಧಕರಾಗಿರುವ ಕಿಮ್ ಸಂಗ್ ಬೇ ಅವರು ಪುಟಿನ್‌ರ ಭೇಟಿ ಈಶಾನ್ಯ ಏಷ್ಯಾದ ಮೇಲೆ ಅಮೆರಿಕಾದ ಪ್ರಭಾವವನ್ನು ತಪ್ಪಿಸಿ, ಕಾರ್ಯತಂತ್ರದ ಮೇಲುಗೈ ಸಾಧಿಸುವ ಉದ್ದೇಶ ಹೊಂದಿದೆ ಎಂದಿದ್ದಾರೆ. ಪುಟಿನ್ ಅವರು ಉತ್ತರ ಕೊರಿಯಾದಿಂದ ಮುಂದುವರಿದು, ವಿಯೆಟ್ನಾಂಗೆ ಭೇಟಿ ನೀಡಿರುವುದು ಇದನ್ನು ಪುಷ್ಟೀಕರಿಸಿದೆ ಎಂದು ಅವರು ಹೇಳಿದ್ದಾರೆ. ಉತ್ತರ ಕೊರಿಯಾ ಪ್ರವಾಸ ಪೂರೈಸಿದ ಬಳಿಕ, ಪುಟಿನ್ ವಿಯೆಟ್ನಾಂ ರಾಜಧಾನಿ ಹನೋಯಿಗೆ ತೆರಳಲಿದ್ದಾರೆ.

ವಿಭಾಗ