Super Pig Invasion: ಹಂದಿಗಳ ಎದುರು ಅಸಹಾಯಕ ಸ್ಥಿತಿಗೆ ಇಳಿದ ಅಮೆರಿಕ, ಹಂದಿ ಕಂಟಕದ ಬಗ್ಗೆ ನೀವು ತಿಳಿಯಲೇಬೇಕಾದ 10 ಅಂಶಗಳಿವು
ವಿಶ್ವದ ದೊಡ್ಡಣ್ಣ ಅಮೆರಿಕ ಇದೀಗ ಹಂದಿ ಕಂಟಕವನ್ನು ಎದುರಿಸುತ್ತಿದೆ. ʼಸೂಪರ್ ಪಿಗ್ʼಗಳು ಅಮೆರಿಕ ದಕ್ಷಿಣ ಗಡಿಯಲ್ಲಿ ಹಾವಳಿ ನಡೆಸುತ್ತಿದ್ದು, ಇವುಗಳ ನಿರ್ಮೂಲನೆ ಅಸಾಧ್ಯ ಎನ್ನಲಾಗುತ್ತಿದೆ. ಕೆನಡಾ ಹಾಗೂ ಅಮೆರಿಕದಲ್ಲಿ ತೊಂದರೆ ನೀಡುತ್ತಿರುವ ಈ ಸೂಪರ್ ಪಿಗ್‌ಗಳ ಕುರಿತ ಒಂದು ಒಳನೋಟ ಇಲ್ಲಿದೆ.
ಪ್ರಾಣಿ ಹಾಗೂ ಮನುಷ್ಯರ ನಡುವಿನ ಸಂಘರ್ಷ ಇಂದು ನಿನ್ನೆಯದಲ್ಲ. ಪ್ರಪಂಚದಾದ್ಯಂತ ಹಲವಾರು ವರ್ಷಗಳಿಂದ ವನ್ಯಜೀವಿ ಹಾಗೂ ಮನುಷ್ಯರ ನಡುವೆ ಸಂಘರ್ಷಗಳು ನಡೆಯುತ್ತಲೇ ಇವೆ. ಇದೀಗ ಇದೊಂದು ಪ್ರಾಣಿ ಜಗತ್ತನ್ನು ತಲ್ಲಣಗೊಳಿಸುವ ಭಯ ಹುಟ್ಟಿಸಿದೆ. ಸದ್ಯ ಈ ಪ್ರಾಣಿ ವಿಶ್ವದ ದೊಡ್ಡಣ್ಣ ಎನ್ನಿಸಿಕೊಂಡ ಅಮೆರಿಕವನ್ನು ಭಯ ಪಡಿಸಿದೆ. ಅಲ್ಲದೆ ಇದರ ನಿರ್ಮೂಲನೆಯು ಅಸಾಧ್ಯ ಎನ್ನುವಂತೆ ತೋರುತ್ತಿದೆ. ಇದನ್ನು ಅಮೆರಿಕದಲ್ಲಿ ʼಸೂಪರ್ ಪಿಗ್ʼ ಎಂದು ಕರೆದಿದ್ದಾರೆ. ಈ ಸೂಪರ್ ಪಿಗ್ ಕುರಿತಂತೆ 10 ಅಂಶಗಳು ಇಲ್ಲಿವೆ.
1. ಸೂಪರ್ ಪಿಗ್ ಎಂದರೆ ಹಂದಿಗಳು. ಕೆನಡಾದಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಹಂದಿಗಳನ್ನು ಸಾಕಲಾಗಿತ್ತು. ಆದರೆ ಇವುಗಳನ್ನು ಮಾರಾಟ ಮಾಡಲು ಸಾಧ್ಯವಾಗದೇ, ಇದ್ದಾಗ ಅವುಗಳನ್ನು ಬೀದಿಗೆ ಬಿಡಲಾಗಿತ್ತು. ಆ ಹಂದಿಗಳು ಇದೀಗ ಅಪಾರ ಸಂಖ್ಯೆಯಲ್ಲಿ ಬೆಳೆದಿದ್ದು, ಇವು ಕೆನಡಾ ಗಡಿ ಭಾಗದಿಂದ ಅಮೆರಿಕ ಪ್ರವೇಶಿಸಿವೆ.
2. ಅಮೆರಿಕದ ಮಿನ್ನೆಸೋಟ, ಉತ್ತರ ಡಕೋಟ ಮತ್ತು ಮೊಂಟಾನಾ ಪ್ರದೇಶದಲ್ಲಿ ಈ ಸೂಪರ್ ಪಿಗ್‌ಗಳ ಹಾವಳಿ ಹೆಚ್ಚಿದ್ದು, ಇವುಗಳ ಆಕ್ರಮಣವನ್ನು ತಡೆಯಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
3. ಕೆನಡಾದಲ್ಲೂ ಆಲ್ಬರ್ಟಾ, ಸಾಸ್ಕಾಚೆವಾನ್ ಮತ್ತು ಮ್ಯಾನಿಟೋಬಾದಲ್ಲೂ ಅಲೆದಾಟ ನಡೆಸಿರುವ ಹಂದಿಗಳು ಹೊಸ ಅಪಾಯವನ್ನು ಉಂಟು ಮಾಡುತ್ತಿವೆ.
4. ಸಾಸ್ಕಾಚೆವಾನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಕೆನಡಾದ ಪ್ರಮುಖ ಅಧಿಕಾರಿಗಳಲ್ಲಿ ಒಬ್ಬರಾದ ರಯಾನ್ ಬ್ರೂಕ್ ಈ ಕಾಡು ಹಂದಿಗಳನ್ನು ವಿಶ್ವದ ಅತ್ಯಂತ ಆಕ್ರಮಣಕಾರಿ ಪ್ರಾಣಿ ಹಾಗೂ ಇವು ಪರಿಸರ ಚಕ್ರವನ್ನು ನಾಶ ಪಡಿಸುವ ಜೀವಿಗಳು ಎಂದು ಕರೆದಿದ್ದಾರೆ.
5. ಈ ಸೂಪರ್ ಪಿಗ್‌ಗಳು ಕ್ರಾಸ್‌ಬ್ರೀಡ್ ತಳಿಗಳಾಗಿವೆ. ಕಾಡು ಯುರೇಷಿಯನ್ ಹಂದಿಗಳ ಬದುಕುಳಿಯುವ ಕೌಶಲ (ಸರ್ವೈವಲ್ ಸ್ಕಿಲ್) ಹಾಗೂ ದೇಶಿಯ ಹಂದಿಗಳ ಮಾತ್ರ ಹಾಗೂ ಫಲವಂತಿಕೆಯ ಮಟ್ಟದ ಸಂಯೋಜನೆಯೊಂದಿಗಿರುವ ಈ ಸೂಪರ್ ಪಿಗ್‌ಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂಬುದು ತಜ್ಞರ ಅಭಿಪ್ರಾಯ.
6. ಸದ್ಯ ದಕ್ಷಿಣ ಅಮೆರಿಕದ ಗಡಿ ಭಾಗದಲ್ಲಿ ಹಾವಳಿ ನಡೆಸುತ್ತಿರುವ ಈ ಸೂಪರ್‌ಪಿಗ್‌ಗಳು ಉತ್ತರ ಭಾಗಕ್ಕೆ ಕಾಲಿಟ್ಟಿಲ್ಲ.
7. ಈ ಹಂದಿಗಳು ಶತಮಾನಗಳಿಂದಲೂ ಕೆನಡಾ ಭಾಗದಲ್ಲಿ ಇದ್ದರೂ ಕೂಡ ಈ ಸಮಸ್ಯೆಯ ಆರಂಭಕ್ಕೆ ಕಾರಣವಾಗಿದ್ದು 1980ರ ದಶಕದಲ್ಲಿ ಈ ಹಂದಿಗಳನ್ನು ಸಾಕಲು ಆರಂಭಿಸಿದಾಗ ಎಂದು ಬ್ರೂಕ್ ಅವರು ಹೇಳುತ್ತಾರೆ.
8. ಹಂದಿಗಳನ್ನು ಸಾಕಲು ಆರಂಭಿಸಿದಾಗ ಇವುಗಳಿಗೆ ಬಹು ಬೇಡಿಕೆ ಇತ್ತು. ಆದರೆ 2001ರ ಸುಮಾರಿಗೆ ಮಾರುಕಟ್ಟೆ ಕುಸಿಯಿತು. ಇದರಿಂದ ನಿರಾಶೆಗೊಂಡ ರೈತರು ಹಂದಿ ಸಾಕಣೆಗಾಗಿ ನಿರ್ಮಿಸಿದ್ದ ಬೇಲಿಗಳನ್ನು ತೆರವುಗೊಳಿಸಿ ಹಂದಿಗಳನ್ನು ಬಿಟ್ಟು ಬಿಟ್ಟಿದ್ದರು.
9. ಕೆನಡಾದಲ್ಲಿ ಸುಮಾರು 62,000 ದಷ್ಟು ಈ ಸೂಪರ್‌ಪಿಗ್‌ಗಳನ್ನು ಗುರುತಿಸಲಾಗಿದೆ. ಅಮರಿಕದಲ್ಲಿ 6 ಮಿಲಿಯನ್‌ನಷ್ಟು ಹಂದಿಗಳಿವೆ ಎನ್ನಲಾಗುತ್ತಿದೆ.
10. ಈ ಸೂಪರ್‌ಪಿಗ್‌ಗಳ ವಿಶೇಷವೆಂದರೆ ಇವು ಹಿಮದ ಅಡಿಯಲ್ಲೂ ಕೂಡ ಬದುಕಬಲ್ಲವು. ಅತ್ಯಂತ ಶೀತ ವಾತಾವರಣದಲ್ಲೂ ಇವುಗಳು ಯಾವುದೇ ತೊಂದರೆ ಇಲ್ಲದಂತೆ ಬದುಕುತ್ತವೆ ಎಂಬುದು ವಿಶೇಷ.
ಈಗಾಗಲೇ ಅಮೆರಿಕ ಗಡಿಭಾಗದಲ್ಲಿ ಬೀಡು ಬಿಟ್ಟಿರುವ ಈ ಸೂಪರ್ ಪಿಗ್‌ಗಳು 6 ಮಿಲಿಯನ್‌ಗಳು ಅಧಿಕವಿವೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಇವುಗಳಿಂದಾಗಿ ಪ್ರತಿವರ್ಷ ದೇಶಕ್ಕೆ 1.5 ಶತಕೋಟಿ ನಷ್ಟ ಉಂಟಾಗಲಿದೆ ಎಂದು ಸರ್ಕಾರ ಅಂದಾಜಿಸಿದೆ. ನ್ಯಾಷನಲ್ ಜಿಯೋಗ್ರಫಿ ವರದಿ ಪ್ರಕಾರ ಈ ಹಂದಿಗಳು ಇನ್ಫ್ಲುಯೆಂಜಾ ವೈರಸ್ ಅನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿವೆ. ಜಗತ್ತಿನಲ್ಲಿ ಚೀನಾದಲ್ಲೇ ಅತಿ ಹೆಚ್ಚು ಹಂದಿಗಳಿವೆ. ಅಂದರೆ 400 ಮಿಲಿಯನ್ ಹಂದಿಗಳು ಚೀನಾದಲ್ಲಿವೆ. ಇದು ವಿಶ್ವದ ಅರ್ಧದಷ್ಟು ಹಂದಿಗಳನ್ನು ಹೊಂದಿದೆ ಎನ್ನಲಾಗುತ್ತಿದೆ. 2018 ಹಾಗೂ 2019ರ ಸಾಲಿನಲ್ಲಿ ಹಂದಿ ಜ್ವರವು ಪ್ರಪಂಚದಾದ್ಯಂತ ಭಯ ಮೂಡಿಸಿರುವುದನ್ನು ಈ ವೇಳೆ ನೆನಪಿಸಿಕೊಳ್ಳಬಹುದು.
ಮಾಹಿತಿ: ವಿವಿಧ ಮೂಲಗಳು
ವಿಭಾಗ