ಕನ್ನಡ ಸುದ್ದಿ  /  Nation And-world  /  Intransigence: India Notifies Pakistan Of Plans To Amend Indus Waters Treaty

Indus Water Treaty: ಸಿಂಧೂ ಜಲ ಒಪ್ಪಂದ, ಹಠಮಾರಿ ಪಾಕಿಸ್ತಾನಕ್ಕೆ ಭಾರತದಿಂದ ನೋಟಿಸ್‌, ನೆತ್ತರು ನೀರು ಜತೆಯಾಗಿ ಸಾಗದು!

Indus Water Treaty: ಭಾರತ ಮತ್ತು ಪಾಕಿಸ್ತಾನಗಳ ನಡುವೆ, ಹಿಮಾಲಯದಲ್ಲಿ ಹುಟ್ಟಿ ಭಾರತದ ಪ್ರದೇಶಗಳಲ್ಲಿ ಹರಿದು ಪಾಕಿಸ್ತಾನದ ಮೂಲಕ ಅರಬ್ಬಿ ಸಮುದ್ರ ಸೇರುವ ಸಿಂಧೂ ನದಿಗೆ ಸಂಬಂಧಪಟ್ಟ ಮಹತ್ವದ “ಸಿಂಧೂ ನದಿ ಒಪ್ಪಂದʼʼದ ಉಲ್ಲಂಘನೆಗೆ ಸಂಬಂಧಪಟ್ಟಂತೆ ಭಾರತವು ಪಾಕಿಸ್ತಾನಕ್ಕೆ ನೋಟಿಸ್‌ ಜಾರಿ ಮಾಡಿದೆ.

Indus Water Treaty: ಸಿಂಧೂ ಜಲ ಒಪ್ಪಂದ, ಹಠಮಾರಿ ಪಾಕಿಸ್ತಾನಕ್ಕೆ ಭಾರತದಿಂದ ನೋಟಿಸ್‌
Indus Water Treaty: ಸಿಂಧೂ ಜಲ ಒಪ್ಪಂದ, ಹಠಮಾರಿ ಪಾಕಿಸ್ತಾನಕ್ಕೆ ಭಾರತದಿಂದ ನೋಟಿಸ್‌

ನವದೆಹಲಿ: ಭಾರತ ಮತ್ತು ಪಾಕಿಸ್ತಾನಗಳ ನಡುವೆ, ಹಿಮಾಲಯದಲ್ಲಿ ಹುಟ್ಟಿ ಭಾರತದ ಪ್ರದೇಶಗಳಲ್ಲಿ ಹರಿದು ಪಾಕಿಸ್ತಾನದ ಮೂಲಕ ಅರಬ್ಬಿ ಸಮುದ್ರ ಸೇರುವ ಸಿಂಧೂ ನದಿಗೆ ಸಂಬಂಧಪಟ್ಟ ಮಹತ್ವದ “ಸಿಂಧೂ ನದಿ ಒಪ್ಪಂದʼʼದ ಉಲ್ಲಂಘನೆಗೆ ಸಂಬಂಧಪಟ್ಟಂತೆ ಭಾರತವು ಪಾಕಿಸ್ತಾನಕ್ಕೆ ನೋಟಿಸ್‌ ಜಾರಿ ಮಾಡಿದೆ. ಹಿಂದೊಮ್ಮೆ ನರೇಂದ್ರ ಮೋದಿಯವರು ಈ ಒಪ್ಪಂದವನ್ನು ಗಮನದಲ್ಲಿಟ್ಟುಕೊಂಡು ”ನೆತ್ತರು ಮತ್ತು ನೀರು ಜತೆಯಾಗಿ ಹರಿಯದುʼʼ ಎಂದಿದ್ದರು. ಇದೀಗ ಭಾರತವು ನಿಷ್ಠುರತೆ, ಮೊಂಡುತನ ಪ್ರದರ್ಶಿಸುವ ಪಾಕ್‌ಗೆ ನೋಟಿಸ್‌ ಜಾರಿ ಮಾಡಿದೆ.

ಸಿಂಧೂ ಮತ್ತು ಅದರ ಜಲಾನಯನದ ವ್ಯಾಪ್ತಿಗೆ ಸೇರಿದ ಝೇಲಂ, ಚೀನಾಬ್‌, ರಾವಿ, ಬಿಯಾಸ್‌, ಸಟ್ಲೇಜ್‌ ನದಿಗಳ ನೀರನ್ನು ಹಂಚಿಕೊಳ್ಳುವುದಕ್ಕೆ ಸಂಬಂಧಪಟ್ಟ ಒಪ್ಪಂದದ ಕುರಿತು ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನವು ನಿಷ್ಠುರತೆ ಪ್ರದರ್ಶಿಸುತ್ತಿದೆ. ಹೀಗಾಗಿ, ಇಂತಹ ನೋಟಿಸ್‌ ಜಾರಿ ಮಾಡುವುದು ಭಾರತಕ್ಕೆ ಅನಿವಾರ್ಯವಾಗಿತ್ತು ಎಂದು ಮೂಲಗಳು ತಿಳಿಸಿವೆ.

ಸಿಂಧೂ ಜಲ ಒಪ್ಪಂದದ ಉಲ್ಲಂಘನೆಯನ್ನು ಮೂರು ತಿಂಗಳೊಳಗೆ ಸರಿಪಡಿಸುವ ಸಲುವಾಗಿ ಎರಡು ದೇಶಗಳ ನಡುವಿನ ಸಂಧಾನಗಳಿಗೆ ಪ್ರವೇಶ ಪಡೆಯಲು ಪಾಕಿಸ್ತಾನಕ್ಕೆ ಈ ಮೂಲಕ ಅವಕಾಶ ನೀಡಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕಿಶನ್‌ ಗಂಗಾ ಮತ್ತು ರಾಟ್ಲ್‌ ಹೈಡ್ರೊ ಎಲೆಕ್ಟ್ರಿಕ್‌ ಪ್ರಾಜೆಕ್ಟ್‌ ಕುರಿತು ಚರ್ಚಿಸಲು ಮತ್ತು ವಿವಾದಗಳನ್ನು ಬಗೆಹರಿಸಲು ಭಾರತ ಪ್ರಯತ್ನಿಸುತ್ತಿತ್ತು. ಆದರೆ, ಭಾರತದ ಪ್ರಯತ್ನವನ್ನು ಪಾಕಿಸ್ತಾನ ನಿರಂತರವಾಗಿ ತಿರಸ್ಕರಿಸುತ್ತ ಬಂದಿತ್ತು. ಅದು ತಾನು ನಡೆದದ್ದೇ ಹಾದಿ ಎಂಬಂತೆ ಏಕಪಕ್ಷೀಯ ನಿರ್ಧಾರವನ್ನೂ ತೆಗೆದುಕೊಂಡಿತ್ತು. ಈ ಮೂಲಕ ಒಪ್ಪಂದದ ನಿಬಂಧನೆಗಳನ್ನು ಉಲ್ಲಂಘನೆ ಮಾಡಿತ್ತು.

ವಿಶ್ವಬ್ಯಾಂಕ್‌ನ ಮಧ್ಯಸ್ಥಿಕೆಯಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ಒಂಬತ್ತು ವರ್ಷಗಳ ಮಾತುಕತೆಗಳು ನಡೆದು 1960 ರ ಸೆಪ್ಟೆಂಬರ್‌ನಲ್ಲಿ ಸಿಂಧೂ ಜಲ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಇದು ಉಭಯ ದೇಶಗಳ ನಡುವೆ ದೀರ್ಘಕಾಲದ ಒಪ್ಪಂದವಾಗಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಭಯೋತ್ಪಾದನೆ, ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಪಟ್ಟ ಉದ್ವಿಗ್ನತೆಯಿಂದಾಗಿ ದ್ವಿಪಕ್ಷೀಯ ಸಂಬಂಧ ಹಳಸಿದ್ದು, ಪಾಕಿಸ್ತಾನ ಹಠಮಾರಿ ವರ್ತನೆ ಪ್ರದರ್ಶಿಸುತ್ತಿದೆ.

ಒಪ್ಪಂದದ ಪ್ರಕಾರ ಪಾಕಿಸ್ತಾನದ ಪಶ್ಚಿಮದಲ್ಲಿ ಹರಿಯುವ ಸಿಂಧೂ, ಝೇಲಂ ಮತ್ತು ಚಿನಾಬ್‌ಗಳ ಮೇಲೆ ಆ ದೇಶಕ್ಕೆ ಹೆಚ್ಚಿನ ಹಕ್ಕು ನೀಡಲಾಗಿದೆ. ಆದರೆ ಈ ನದಿಗಳ ಮೂಲ ಇರುವುದು ಭಾರತ ದೇಶದಲ್ಲಿ. ಹಾಗಾಗಿ ಇವುಗಳ ನೀರಿನ ಶೇ 20 ರಷ್ಟನ್ನು ಭಾರತ ಬಳಸಬಹುದು. ಈ ನದಿಗಳಿಂದ 13.32 ಲಕ್ಷ ಎಕರೆಗೆ ನೀರಾವರಿ, 18,600 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸಲು ಭಾರತಕ್ಕೆ ಅವಕಾಶವಿದೆ. ಆದರೆ ಈಗ 8 ಲಕ್ಷ ಎಕರೆ ಮಾತ್ರ ನೀರಾವರಿಗೆ ಒಳಪಡಿಸಿದ್ದು 3,034 ಮೆಗಾವಾಟ್‌ ವಿದ್ಯುತ್‌ ಮಾತ್ರ ಉತ್ಪಾದನೆ ಮಾಡಲಾಗುತ್ತಿದೆ.

"ಸಿಂಧೂ ನದಿ ಒಪ್ಪಂದವನ್ನು ಪಾಲಿಸುವಲ್ಲಿ ಮತ್ತು ಅನುಷ್ಠಾನಗೊಳಿಸುವಲ್ಲಿ ಭಾರತವು ಯಾವಾಗಲೂ ದೃಢವಾಗಿತ್ತು ಮತ್ತು ಜವಾಬ್ದಾರಿಯುತ ಪಾಲುದಾರ ದೇಶವಾಗಿತ್ತು. ಆದರೆ, ಒಪ್ಪಂದದ ಕುರಿತು ಪಾಕಿಸ್ತಾನದ ನಿಷ್ಠುರತೆಯಿಂದಾಗಿ ಭಾರತವು ಈ ತಿದ್ದುಪಡಿ ನೋಟಿಸ್‌ ಕಳುಹಿಸುವ ಅನಿವಾರ್ಯತೆ ಉಂಟಾಗಿದೆ" ಎಂದು ಮೂಲಗಳು ಮಾಹಿತಿ ನೀಡಿವೆ.

ಸೆಪ್ಟೆಂಬರ್ 19, 1960 ರಂದು ಕರಾಚಿಯಲ್ಲಿ ಆಗಿನ ಪಾಕಿಸ್ತಾನದ ಅಧ್ಯಕ್ಷ ಮೊಹಮ್ಮದ್ ಅಯೂಬ್ ಖಾನ್ ಮತ್ತು ಆಗಿನ ಭಾರತದ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ವಿಶ್ವಬ್ಯಾಂಕ್‌ನ ಡಬ್ಲ್ಯುಎಬಿ ಇಲಿಫ್ ಅವರು ಈ ಮಹತ್ವದ ಜಲ ಒಪ್ಪಂದಕ್ಕೆ ಸಹಿ ಹಾಕಿದ್ದರು. ಸಿಂಧೂ ನದಿ ಒಪ್ಪಂದವು ಜಗತ್ತಿನಲ್ಲಿಯೇ ಅತ್ಯಂತ ಯಶಸ್ವಿ ನದಿ ನೀರು ಹಂಚಿಕೆಯ ಒಪ್ಪಂದದ ಪ್ರಯತ್ನ ಎಂದು ಹೇಳಲಾಗಿದೆ.

ಸಿಂಧೂ ನದಿ ಒಪ್ಪಂದದ ಆರ್ಟಿಕಲ್ XII (3) ಪ್ರಕಾರ ಈ ನೋಟಿಸ್‌ ಜಾರಿ ಮಾಡಲಾಗಿದೆ. "ಈ ಒಪ್ಪಂದದ ನಿಬಂಧನೆಗಳನ್ನು ಕಾಲಕಾಲಕ್ಕೆ ಎರಡು ಸರಕಾರಗಳು ಅನುಮೋದನೆಯಿಂದ ಮಾರ್ಪಾಡು ಮಾಡಬಹುದುʼʼ ಎಂದು ಇದರಲ್ಲಿ ತಿಳಿಸಲಾಗಿದೆ.

ಈ ಒಪ್ಪಂದದ ಕುರಿತು ಪಾಕಿಸ್ತಾನವು ಈಗಾಗಲೇ ಹಲವು ಹೆಜ್ಜೆಗಳನ್ನು ಇಡಲು ಪ್ರಯತ್ನಿಸಿದೆ. ಭಾರತದ ಕಿಶನ್‌ಗಂಗಾ ಮತ್ತು ರಾಟ್ಲ್ ಜಲವಿದ್ಯುತ್ ಯೋಜನೆಗಳಿಗೆ ತಾಂತ್ರಿಕ ಆಕ್ಷೇಪಣೆಗಳನ್ನು ಪರಿಶೀಲಿಸಲು "ತಟಸ್ಥ ಪರಿಣಿತರನ್ನು" ನೇಮಿಸುವಂತೆ ವಿಶ್ವಬ್ಯಾಂಕ್‌ಗೆ ವಿನಂತಿಸಿತ್ತು. ಆದರೆ, 2016 ರಲ್ಲಿ ಪಾಕಿಸ್ತಾನವು ತಾನು ಮಾಡಿದ ವಿನಂತಿಯನ್ನು ಏಕಪಕ್ಷೀಯವಾಗಿ ಹಿಂತೆಗೆದುಕೊಂಡಿತ್ತು. ಆಕ್ಷೇಪಣೆಗಳ ಮೇಲೆ ತೀರ್ಪು ನೀಡಲು ಮಧ್ಯಸ್ಥಿಕೆ ನ್ಯಾಯಾಲಯ ಸ್ಥಾಪಿಸುವ ಕುರಿತು ಪ್ರಸ್ತಾಪ ಮಾಡಿತ್ತು.

ಪಾಕಿಸ್ತಾನದ ಏಕಪಕ್ಷೀಯ ಕ್ರಮವು ಸಿಂಧೂ ಜಲ ಒಪ್ಪಂದದ ಆರ್ಟಿಕಲ್ IX ರಲ್ಲಿ ಕಲ್ಪಿಸಲಾದ "ವಿವಾದ ಇತ್ಯರ್ಥದ ಶ್ರೇಣೀಕೃತ ಕಾರ್ಯವಿಧಾನವನ್ನು" ಉಲ್ಲಂಘಿಸಿದೆ ಎನ್ನುವುದು ಭಾರತದ ವಾದ. ನಂತರ ಭಾರತವು ಈ ವಿಷಯವನ್ನು ನ್ಯೂಟ್ರಲ್‌ ಎಕ್ಸ್‌ಪರ್ಟ್‌ (ತಟಸ್ಥ ತಜ್ಞ)ಗಳಿಗೆ ವಿಚಾರಣೆ ನಡೆಸಲು ವಿಶ್ವಬ್ಯಾಂಕ್‌ಗೆ ಪ್ರತ್ಯೇಕ ವಿನಂತಿ ಮಾಡಿತ್ತು.

'ನೀರು ಮತ್ತು ರಕ್ತ ಜತೆಯಾಗಿ ಹರಿಯದು,' ಎಂದು ಹೇಳುವ ಮೂಲಕ ಪಾಕಿಸ್ತಾನ ಜತೆಗಿನ 1960ರ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ಪುನರ್‌ ಪರಿಶೀಲನೆಗೆ ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದರು. ಇದೀಗ ಪಾಕಿಸ್ತಾನದ ನಿಷ್ಠುರತೆಗೆ ನೋಟಿಸ್‌ ಕಳುಹಿಸುವ ಮೂಲಕ ಭಾರತ ಎಚ್ಚರಿಕೆ ನೀಡಿದೆ.

IPL_Entry_Point