ಭಾರತದಲ್ಲಿ ಐಎಸ್‌ಐ ನೆಟ್‌ವರ್ಕ್ ಹೇಗೆ ಕೆಲಸ ಮಾಡುತ್ತೆ, ಪರ್ಮನೆಂಟ್ ಮತ್ತು ಟೆಂಪರರಿ ಅಸೆಟ್ ಎಂದರೇನು
ಪಹಲ್ಗಾಮ್ ದಾಳಿಯ ಬಳಿಕ ಉಗ್ರ ನಿಗ್ರಹ ಕಾರ್ಯಾಚರಣೆಯನ್ನು ಭಾರತೀಯ ಭದ್ರತಾ ಪಡೆಗಳು ತೀವ್ರಗೊಳಿಸಿದರೆ, ತನಿಖಾ ಸಂಸ್ಥೆಗಳು ಪೂರಕ ಚಟುವಟಿಕೆ ನಡೆಸುತ್ತಿರುವವರ ಮೇಲೆ ನಿಗಾವಹಿಸಿದೆ. ಭಾರತದಲ್ಲಿ ಐಎಸ್‌ಐ ನೆಟ್‌ವರ್ಕ್ ಹೇಗೆ ಕೆಲಸ ಮಾಡುತ್ತೆ, ಪರ್ಮನೆಂಟ್ ಮತ್ತು ಟೆಂಪರರಿ ಅಸೆಟ್ ಎಂದರೇನು ಎಂಬಿತ್ಯಾದಿ ಕೆಲವು ಅಂಶಗಳು ಬಹಿರಂಗವಾಗಿದೆ. ಆ ವಿವರ ಇಲ್ಲಿದೆ.

ಭಾರತದಲ್ಲಿ ಐಎಸ್‌ಐ ನೆಟ್‌ವರ್ಕ್: ಹರಿಯಾಣದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅವರ ಪಾಕಿಸ್ತಾನ ಭೇಟಿ ಮತ್ತು ಅಲ್ಲಿನ ಐಎಸ್ಐ ಏಜೆಂಟರೊಂದಿಗೆ ಅವರ ಸಂಪರ್ಕದ ನಂತರ ಭಾರತದಲ್ಲಿ ಪಾಕಿಸ್ತಾನದ ಐಎಸ್‌ಐ ನೆಟ್‌ವರ್ಕ್ ಯಾವ ರೀತಿ ಕೆಲಸ ಮಾಡುತ್ತದೆ ಎಂಬುದನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿದೆ. ಕೇಂದ್ರೀಯ ತನಿಖಾ ಸಂಸ್ಥೆಗಳು ಗೂಢಚರ್ಯೆ ಕೇಸ್‌ಗಳ ತನಿಖೆ ನಡೆಸಿದ್ದು, ಹಲವು ಅಂಶಗಳು ಬಹಿರಂಗವಾಗಿದ್ದು, ಜನರಲ್ಲಿ ಇಂತಹ ಗೂಢಚಾರರ ಬಗ್ಗೆ ಜಾಗೃತಿ ಮೂಡಿಸುವುದಕ್ಕೆ ನೆರವಾಗುತ್ತಿವೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಭಾರತದ ವಿರುದ್ಧ ಪಿತೂರಿ ನಡೆಸುತ್ತಿರುವುದು ಇಂದು ನಿನ್ನೆಯ ವಿಚಾರವಲ್ಲ. ದಶಕಗಳಿಂದ ಐಎಸ್‌ಐ ನಡೆಸುತ್ತ ಬಂದಿರುವ ಗೂಡಚರ್ಯೆಯ ಒಂದು ಸಣ್ಣ ಭಾಗ ಮಾತ್ರವೇ ಆಗಿದೆ.
ಐಎಸ್‌ಐ ನೆಟ್‌ವರ್ಕ್‌ನಲ್ಲಿ ಪರ್ಮನೆಂಟ್ ಮತ್ತು ಟೆಂಪರರಿ ಅಸೆಟ್ ಎಂದರೇನು
ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಭಾರತದಲ್ಲಿ ಗೂಢಚರ್ಯೆಗೆ ಎರಡು ರೀತಿಯ ಅಸೆಟ್‌ಗಳನ್ನು ನಿರ್ವಹಿಸುತ್ತಿರುವುದು ಬಹಿರಂಗವಾಗಿದೆ. ಐಎಸ್ಐ ಬಹುತೇಕ ತನ್ನ ಬೇಹುಗಾರಿಕೆ ಜಾಲದಲ್ಲಿ ಎರಡು ರೀತಿಯ ಅಸೆಟ್‌ಗಳನ್ನು ನಿರ್ವಹಿಸುತ್ತಿರುವುದು ದೃಢವಾಗಿದೆ. ಈ ಪೈಕಿ ಶಾಶ್ವತ ಮತ್ತು ತಾತ್ಕಾಲಿಕ (ಪರ್ಮನೆಂಟ್ ಮತ್ತು ಟೆಂಪರರಿ ಅಸೆಟ್‌ಗಳು) ಸ್ವತ್ತುಗಳು. ಇವೆರಡೂ ಭಾರತದ ಭದ್ರತಾ ವ್ಯವಸ್ಥೆಗೆ ದೊಡ್ಡ ಬೆದರಿಕೆಯಾಗಿ ಕಂಡುಬಂದಿದೆ.
ಐಎಸ್‌ಐ ಪರ್ಮನೆಂಟ್ ಅಸೆಟ್ ಎಂದರೇನು
ಪಾಕಿಸ್ತಾನದ ಐಎಸ್‌ಐ ಭಾರತದಲ್ಲಿ ತನ್ನ ಗೂಢಚರ್ಯೆ ಕೆಲಸಕ್ಕೆ ಕೆಲವರನ್ನು ಖಾಯಂ ಆಗಿ ಬಳಸಿಕೊಳ್ಳುತ್ತದೆ. ಅಂಥವರನ್ನು ಪರ್ಮನೆಂಟ್ ಅಸೆಟ್ ಎಂದು ಕರೆಯಲಾಗುತ್ತದೆ. ಸರಳವಾಗಿ ಹೇಳಬೇಕು ಎಂದರೆ ಪಾಕಿಸ್ತಾನದಲ್ಲಿ ತರಬೇತಿ ಪಡೆದು ಬಂದವರನ್ನು ಪರ್ಮನೆಂಟ್ ಅಸೆಟ್ ಎಂದು ಪರಿಗಣಿಸಲಾಗುತ್ತದೆ. ಅಬ್ದುಲ್ ಲತೀಫ್ ಆಡಮ್ ಮೊಮಿನ್ ಪ್ರಕರಣವು ಅಂಥದ್ದೇ ಒಂದು ಐಎಸ್‌ಐ ಪರ್ಮನೆಂಟ್ ಅಸೆಟ್ ಕೇಸ್ ಆಗಿದ್ದು, 1999ರ ಐಸಿ 814 ವಿಮಾನ ಅಪಹರಣದ ಮೂಲಕ ಬಹಿರಂಗವಾಗಿತ್ತು.
ಪಾಕಿಸ್ತಾನದಲ್ಲಿ ತರಬೇತಿ ಪಡೆದ ಅಬ್ದುಲ್ ಲತೀರ್ಫ ಆಡಮ್ ಮೊಮಿನ್ (ಐಎಸ್ಐ ಪರ್ಮನೆಂಟ್ ಅಸೆಟ್) 1999 ರಲ್ಲಿ ಐಸಿ -814 ವಿಮಾನ ಅಪಹರಣದ ವ್ಯವಸ್ಥಾಪನಾ ಸಿದ್ಧತೆಯಲ್ಲಿ ಭಾಗಿಯಾಗಿದ್ದು ತನಿಖೆಯಲ್ಲಿಲ ಗಮನಸೆಳೆದಿತ್ತು. ನೇಪಾಳ, ಬಿಹಾರ ಹಾಗೂ ಪಶ್ಚಿಮ ಬಂಗಾಳದ ವಿಳಾಸಗಳಿರುವ ನಕಲಿ ಪಾಸ್‌ಪೋರ್ಟ್ ಮತ್ತು ಇತರೆ ದಾಖಲೆಗಳಿದ್ದವು. ವಸತಿ ಹಾಗೂ ಅಗತ್ಯ ಸಂಪನ್ಮೂಲ ಕ್ರೋಢೀಕರಣಕ್ಕೂ ವ್ಯವಸ್ಥೆ ಮಾಡಿಕೊಂಡಿದ್ದ. ಭಾರತದ ನೆಲದಲ್ಲಿನ ಭಯೋತ್ಪಾದನೆ ಇತಿಹಾಸದಲ್ಲಿ ಲತೀಫ್ ಪ್ರಕರಣ ಸ್ವಲ್ಪ ಸುದೀರ್ಘವಾದುದು. ಈತ ವಿಮಾನ ಅಪಹರಣ ಕಾರ್ಯಾಚರಣೆಯ ಲಾಜಿಸ್ಟಿಕ್ಸ್ ಹಿಂದಿನ ಪಿತೂರಿಗಾರ ಎಂದು ಪರಿಗಣಿಸಲ್ಪಟ್ಟಿದ್ದಾನೆ.
ಐಎಸ್‌ಐನ ಟೆಂಪರರಿ ಅಸೆಟ್ ಎಂದರೇನು
ಪಾಕಿಸ್ತಾನದಲ್ಲಿ ತರಬೇತಿ ಪಡೆಯದವರನ್ನು ಟೆಂಪರರಿ ಅಸೆಟ್ ಎಂದು ಕರೆಯಲಾಗುತ್ತದೆ. ಈ ಜನರು ಸಾಮಾಜಿಕ ಮಾಧ್ಯಮದಲ್ಲಿ ಹನಿಟ್ರ್ಯಾಪ್‌ಗೆ ಬಲಿಯಾಗಿ ಪಾಕ್ ಪರ ಗೂಢಚರ್ಯೆ ಕೆಲಸ ಮಾಡುತ್ತಾರೆ. ಅಂಥವರನ್ನು ಹಣದ ಆಮಿಷ, ನಿರುದ್ಯೋಗ ಅಥವಾ ಬ್ಲ್ಯಾಕ್‌ಮೇಲ್ ಮೂಲಕ ಐಎಸ್‌ಐ ಬಳಸಿಕೊಳ್ಳುತ್ತದೆ. ಇದರಲ್ಲಿ ಸಣ್ಣ ಹುದ್ದೆಗಳಲ್ಲಿ ಕೆಲಸ ಮಾಡುವ ಸಣ್ಣ ಉದ್ಯೋಗಿಗಳು ಅಥವಾ ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡುವ ಗುತ್ತಿಗೆ ನೌಕರರು ಇದ್ದಾರೆ. ರೈಲು ಚಲನೆ, ಘಟಕ ಸ್ಥಳ, ಐಡಿ ಕಾರ್ಡ್ ಫೋಟೋ ಅಥವಾ ಕಂಪ್ಯೂಟರ್ ಪ್ರವೇಶದಂತಹ ಸಣ್ಣ ಸಣ್ಣ ಮಾಹಿತಿಗಳನ್ನು ಅವರಿಂದ ಪಡೆಯಲಾಗುತ್ತದೆ.
ಟೆಂಪರರಿ ಅಸೆಟ್ ನೇಮಕ ಅಥವಾ ಆಯ್ಕೆ ಹೇಗೆ ನಡೆಯುತ್ತದೆ
ಟೆಂಪರರಿ ಅಸೆಟ್ ಆಯ್ಕೆ ಮಾಡುವಾಗ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ, ಸೋಷಿಯಲ್ ಮೀಡಿಯಾಗಳನ್ನೇ ಬಲೆಯನ್ನಾಗಿ ಬಳಸಿಕೊಳ್ಳುತ್ತದೆ. ಭಾರತೀಯ ಸೈನಿಕರು, ಸರ್ಕಾರಿ ನೌಕರರುನ್ನು ಮಹಿಳಾ ಪ್ರೊಫೈಲ್‌ಗಳ ಮೂಲಕ ಹನಿಟ್ರ್ಯಾಪ್ ಮಾಡಿ ಬಳಸಿಕೊಳ್ಳುತ್ತಿರುವುದು ಈಗಾಗಲೇ ಬಹಿರಂಗವಾಗಿರುವ ವಿಚಾರ. 2020ರಲ್ಲಿ ರಾಜಸ್ಥಾನದ ಯೋಧನೊಬ್ಬ ಐಎಸ್ಐನ ಮಹಿಳಾ ಏಜೆಂಟ್ ಜತೆಗೆ ಚಾಟ್ ಮಾಡಿ ಸಿಕ್ಕಿಬಿದ್ದ ಘಟನೆ ನಡೆದಿತ್ತು.
ಬಡ ಮತ್ತು ನಿರುದ್ಯೋಗಿ ಯುವಜನರನ್ನು ಹಣದ ಆಮಿಷ ಒಡ್ಡಿ ಸರ್ಕಾರಿ ಇಲಾಖೆಗಳಿಂದ ಮಾಹಿತಿ ಪಡೆದು ಕಳುಹಿಸಬೇಕು ಎಂಬ ಆಮಿಷ ಒಡ್ಡಲಾಗುತ್ತದೆ. 2016ರಲ್ಲಿ ಮಲ್ಟಿ ಟಾಸ್ಕ್ ರೀತಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ತಿಂಗಳಿಗೆ 15,000 ರೂಪಾಯಿಗೆ ಈ ಕೆಲಸ ಮಾಡಿ ಬಂಧಿತರಾಗಿದ್ದರು.
ಕೆಲವು ಸಂದರ್ಭಗಳಲ್ಲಿ, ಮಾಹಿತಿಯನ್ನು ಸಂಗ್ರಹಿಸಲು ಯುವಕರನ್ನು ಪ್ರಚೋದಿಸಲು ತೀವ್ರಗಾಮಿ ವಿಚಾರಗಳು ಅಥವಾ ಭಾರತ ವಿರೋಧಿ ಘೋಷಣೆಗಳನ್ನು ಬಳಸಲಾಗುತ್ತದೆ. ಈ ಮಾದರಿ ಕಾಶ್ಮೀರ ಮತ್ತು ಗಡಿ ಪ್ರದೇಶಗಳಲ್ಲಿ ಹೆಚ್ಚು ಸ್ಪಷ್ಟವಾಗಿದೆ. ಅನೇಕ ಬಾರಿ ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಚಿತ್ರಗಳು ಅಥವಾ ಚಾಟ್‌ಗಳು ಅಥವಾ ಕರೆಗಳ ಮೂಲಕ ಬ್ಲ್ಯಾಕ್‌ಮೇಲ್ ಮಾಡುವುದು ಕೂಡ ಗಮನಸೆಳೆದಿದೆ.