ಬಾಂಗ್ಲಾದೇಶದಲ್ಲಿ ಇಸ್ಕಾನ್‌ನ ಚಿನ್ಮಯ ಕೃಷ್ಣ ಪ್ರಭು ದಾಸ್ ಬಂಧನ, ಈವರೆಗಿನ ಪ್ರಮುಖ 10 ವಿದ್ಯಮಾನಗಳಿವು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಬಾಂಗ್ಲಾದೇಶದಲ್ಲಿ ಇಸ್ಕಾನ್‌ನ ಚಿನ್ಮಯ ಕೃಷ್ಣ ಪ್ರಭು ದಾಸ್ ಬಂಧನ, ಈವರೆಗಿನ ಪ್ರಮುಖ 10 ವಿದ್ಯಮಾನಗಳಿವು

ಬಾಂಗ್ಲಾದೇಶದಲ್ಲಿ ಇಸ್ಕಾನ್‌ನ ಚಿನ್ಮಯ ಕೃಷ್ಣ ಪ್ರಭು ದಾಸ್ ಬಂಧನ, ಈವರೆಗಿನ ಪ್ರಮುಖ 10 ವಿದ್ಯಮಾನಗಳಿವು

ISKCON Bangladesh: ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಸರ್ಕಾರ ಪತನದ ಬಳಿಕ ಹಿಂದೂಗಳ ಮೇಲಿನ ದೌರ್ಜನ್ಯ ಹೆಚ್ಚಾಗಿದೆ. ಇದನ್ನು ಖಂಡಿಸಿ ಪ್ರತಿಭಟನೆ ಮಾಡುತ್ತ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದ ಇಸ್ಕಾನ್‌ನ ಚಿನ್ಮಯ ಕೃಷ್ಣ ಪ್ರಭು ದಾಸ್ ಬಂಧನವಾಗಿದೆ. ರಾಷ್ಟ್ರದ್ರೋಹದ ಆರೋಪ ಹೊರಿಸಿ ಅವರನ್ನು ಬಂಧಿಸಿದ್ದು, ಈವರೆಗಿನ ಪ್ರಮುಖ 10 ವಿದ್ಯಮಾನಗಳ ವಿವರ ಇಲ್ಲಿದೆ.

ರಾಷ್ಟ್ರದ್ರೋಹದ ಆರೋಪದ ಕಾರಣಕ್ಕೆ ಬಾಂಗ್ಲಾದೇಶದಲ್ಲಿ ಇಸ್ಕಾನ್‌ನ ಚಿನ್ಮಯ ಕೃಷ್ಣ ದಾಸ್‌ ಪ್ರಭು ಬಂಧನ, ಈವರೆಗಿನ ಪ್ರಮುಖ 10 ವಿದ್ಯಮಾನಗಳಿವು.
ರಾಷ್ಟ್ರದ್ರೋಹದ ಆರೋಪದ ಕಾರಣಕ್ಕೆ ಬಾಂಗ್ಲಾದೇಶದಲ್ಲಿ ಇಸ್ಕಾನ್‌ನ ಚಿನ್ಮಯ ಕೃಷ್ಣ ದಾಸ್‌ ಪ್ರಭು ಬಂಧನ, ಈವರೆಗಿನ ಪ್ರಮುಖ 10 ವಿದ್ಯಮಾನಗಳಿವು.

ISKCON Bangladesh: ಮುಸ್ಲಿಂ ಬಾಹುಳ್ಯದ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದವರ ರಕ್ಷಣೆಗಾಗಿ ಧ್ವನಿ ಎತ್ತಿರುವ ಹಿಂದೂ ಧಾರ್ಮಿಕ ನಾಯಕ ಚಿನ್ಮಯ ಕೃಷ್ಣ ಪ್ರಭು ದಾಸ್ ಅವರನ್ನು ಬಾಂಗ್ಲಾದೇಶ ಪೊಲೀಸರು ಸೋಮವಾರ (ನವೆಂಬರ್ 25) ಬಂಧಿಸಿದ್ದಾರೆ. ರಾಷ್ಟ್ರದ್ರೋಹದ ಕೇಸ್‌ ದಾಖಲಿಸಿದ್ದು, ಕೋರ್ಟ್‌ ಅವರಿಗೆ ಜಾಮೀನು ನಿರಾಕರಿಸಿದೆ. ಈ ವಿದ್ಯಮಾನ ಜಾಗತಿಕವಾಗಿ ಖಂಡನೆಗೊಳಗಾಗಿದೆ. ಕೃಷ್ಣ ಪ್ರಭು ದಾಸ್ ಎಂದೇ ಖ್ಯಾತರಾಗಿರುವ ಇಸ್ಕಾನ್‌ನ ಸಂತ ಚಿನ್ಮಯ ಕೃಷ್ಣ ದಾಸ್ ಬ್ರಹ್ಮಾಚಾರಿ ಅವರು, ಬಾಂಗ್ಲಾದೇಶದಲ್ಲಿ ಹಾಡುಹಗಲೇ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹಿಂದೂಗಳ ಹತ್ಯೆ ವಿರೋಧಿಸಿ ಪ್ರತಿಭಟನಾ ಮೆರವಣಿಗೆಗಳ ನೇತೃತ್ವವಹಿಸಿದ್ದರು. ಅಲ್ಲಿನ ಸರ್ಕಾರದ ಮೇಲೆ ಒತ್ತಡ ಹೇರಿ, ಹಿಂದೂಗಳಿಗೆ ರಕ್ಷಣೆ ಒದಗಿಸಬೇಕು ಎಂದು ಬಲವಾಗಿ ಆಗ್ರಹಿಸಿದ್ದರು. ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಅವರ ಸರ್ಕಾರ ಪತನವಾದ ಬಳಿಕ ಹಿಂದೂಗಳ ಮೇಲಿನ ದೌರ್ಜನ್ಯ, ಹಿಂಸಾಚಾರ ಮೇರೆಮೀರಿದೆ. ಇದೀಗ, ಇಸ್ಕಾನ್ ಅನ್ನು ಮೂಲಭೂತವಾದಿ ಸಂಘಟನೆಯಾಗಿದ್ದು, ಅದನ್ನು ನಿಷೇಧಿಸಬೇಕು ಎಂಬ ಆಗ್ರಹ ಬಾಂಗ್ಲಾದೇಶದಲ್ಲಿ ವ್ಯಕ್ತವಾಗಿದೆ.

ಬಾಂಗ್ಲಾದೇಶದಲ್ಲಿ ಇಸ್ಕಾನ್‌ನ ಚಿನ್ಮಯ ಪ್ರಭು ಬಂಧನ; ಇದುವರೆಗಿನ 10 ಮುಖ್ಯ ವಿದ್ಯಮಾನಗಳು

1) ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಸರ್ಕಾರ ಪತನದ ಬಳಿಕ ಸೇನಾ ಬೆಂಬಲ ಹೊಂದಿರುವ ಮುಹಮದ್ ಯೂನಸ್ ಸರ್ಕಾರ ಆಡಳಿತ ನಡೆಸುತ್ತಿದೆ. ಈ ಸರ್ಕಾರ 100 ದಿನಗಳ ಆಡಳಿತ ಪೂರೈಸಿದ್ದು, ಈ ಅವಧಿಯಲ್ಲಿ ಬಾಂಗ್ಲಾದೇಶದಲ್ಲಿರುವ ಹಿಂದೂಗಳ ಮೇಲೆ ದೌರ್ಜನ್ಯ ಮಿತಿ ಮೀರಿದೆ. ಇದನ್ನು ಖಂಡಿಸಿ, ಕಳೆದ ಎರಡು ವಾರಗಳಿಂದ ಪ್ರತಿಭಟನೆಗಳು ಹೆಚ್ಚಾಗಿದ್ದವು. ಪ್ರತಿಭಟನೆಯ ಮುಂಚೂಣಿಯಲ್ಲಿ ಇಸ್ಕಾನ್ ಸಂತ ಚಿನ್ಮಯ ಪ್ರಭು ಅಲಿಯಾಸ್ ಕೃಷ್ಣ ದಾಸ್ ಪ್ರಭು ಕಾಣಿಸಿಕೊಂಡಿದ್ದಾರೆ. ದ್ವೇಷ ಸಾಧಿಸುವಂತೆ ಪ್ರಚೋದನಕಾರಿ ಭಾಷಣ ಮಾಡುತ್ತಿದ್ದಾರೆ ಎಂಬ ಆರೋಪ ಹೊರಿಸಲಾಯಿತು. ಬಳಿಕ ಅವರ ವಿರುದ್ಧ ರಾಷ್ಟ್ರದ್ರೋಹದ ಆರೋಪ ಹೊರಿಸಲಾಯಿತು.

2) ಹೊಸದಾಗಿ ರೂಪುಗೊಂಡ ಹಿಂದೂ ಗುಂಪಿನ ವಕ್ತಾರ ಚಿನ್ಮಯ ಕೃಷ್ಣ ದಾಸ್ ಬ್ರಹ್ಮಚಾರಿ, ಅವರು ತಮ್ಮ ಒಡನಾಡಿಗಳು, ಹಿಂದೂಗಳ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಖಂಡಿಸಿ ಹಲವಾರು ಪ್ರತಿಭಟನಾ ರಾಲಿಗಳನ್ನು ನಡೆಸಿದರು. ಸೋಮವಾರ (ನವೆಂಬರ್ 25) ಅವರನ್ನು ಢಾಕಾದಲ್ಲಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಡಿಟೆಕ್ಟಿವ್ ಅಧಿಕಾರಿ ರೆಜಾಲ್ ಕರೀಮ್ ಮಲಿಕ್ ತಿಳಿಸಿದ್ದಾಗಿ ಎಎಫ್‌ಪಿ ವರದಿ ಮಾಡಿದೆ.

3) ಢಾಕಾ ಪೊಲೀಸ್ ವಕ್ತಾರ ತಲೇಬುರ್ ರೆಹಮಾನ್ ಅವರು ಸಂತ ಚಿನ್ಮಯ ಕೃಷ್ಣ ದಾಸ್ ಬ್ರಹ್ಮಚಾರಿ ಅವರ ಬಂಧನವನ್ನು ದೃಢಪಡಿಸಿದರೂ, ಆರೋಪಗಳು ಏನೆಂಬ ವಿವರ ನೀಡಿಲ್ಲ. ಆದಾಗ್ಯೂ, ಬಾಂಗ್ಲಾದೇಶದ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ಆರೋಪದ ಮೇಲೆ ಅಕ್ಟೋಬರ್‌ನಲ್ಲಿ ಚಿತ್ತಗಾಂಗ್ ನಗರದಲ್ಲಿ ಬೃಹತ್ ರ್ಯಾಲಿಯನ್ನು ಮುನ್ನಡೆಸಿದ ನಂತರ ಬ್ರಹ್ಮಚಾರಿ ವಿರುದ್ಧ ಪ್ರಕರಣವನ್ನು ದಾಖಲಿಸಲಾಯಿತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

4) ಬಾಂಗ್ಲಾದೇಶ್ ಸಮ್ಮಿಲಿತೋ ಸನಾತನಿ ಜಾಗರಣ್‌ ಜೋಟೆ ಗ್ರೂಪ್‌ನ ಸಂಚಾಲಕರಾಗಿದ್ದ ಸಂತ ಚಿನ್ಮಯ ಕೃಷ್ಣ ದಾಸ್ ಬ್ರಹ್ಮಾಚಾರಿ, ಢಾಕಾದಿಂದ ಚಿತ್ತಗಾಂಗ್‌ಗೆ ಪ್ರತಿಭಟನೆಯಲ್ಲಿ ಭಾಗವಹಿಸುವುದಕ್ಕೆ ಹೋಗುವಾಗ ಅವರನ್ನು ಹಜರತ್ ಶಹಜಲಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಎಎಫ್‌ಪಿ ವರದಿ ಮಾಡಿದೆ.

5) ಚಿನ್ಮಯ ಕೃಷ್ಣ ದಾಸ್ ಬ್ರಹ್ಮಾಚಾರಿ ಅವರನ್ನು ಮಂಗಳವಾರ (ನವೆಂಬರ್ 26) ಚಿತ್ತಗಾಂಗ್‌ನ ಆರನೇ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ದೇಶದ್ರೋಹದ ಆರೋಪದಡಿ ಜೈಲಿಗೆ ಕಳುಹಿಸಿತು ಎಂದು ಪಿಟಿಐ ವರದಿ ಮಾಡಿದೆ.

6) ಚಿತ್ತಗಾಂಗ್ ನ್ಯಾಯಾಲಯವು ಚಿನ್ಮಯ ಕೃಷ್ಣ ದಾಸ್ ಬ್ರಹ್ಮಾಚಾರಿ ಅವರಿಗೆ ಜಾಮೀನು ನಿರಾಕರಿಸಿದ್ದರಿಂದ ಅವರನ್ನು ಅಂದು ಮಧ್ಯಾಹ್ನ ಜೈಲಿಗೆ ಕಳುಹಿಸುವಾಗ ಬ್ರಹ್ಮಾಚಾರಿ ಬೆಂಬಲಿಗರು ಪ್ರತಿಭಟನೆ ಶುರುಮಾಡಿದರು. ಅವರ ಬಿಡುಗಡೆಗೆ ಆಗ್ರಹಿಸಿ ಘೋಷಣೆ ಕೂಗಿದರು ಎಂದು ದಿ ಡೈಲಿ ಸ್ಟಾರ್ ಪತ್ರಿಕೆ ವರದಿ ಮಾಡಿದೆ.

7) ಈ ಪ್ರತಿಭಟನೆ ಸಂದರ್ಭದಲ್ಲಿ ವಕೀಲರೊಬ್ಬರನ್ನು ಪ್ರತಿಭಟನಾಕಾರರು ಹೊರಗೆಳೆದು ಥಳಿಸಿದರು. ಅವರ ಮೇಲೆ ಹಲ್ಲೆ ನಡೆಸಿದ್ದರಿಂದ ಅವರು ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದು, ಅಲ್ಲಿ ಅವರು ಮೃತಪಟ್ಟಿರುವುದಾಗಿ ಡಾಕ್ಟರ್ ಹೇಳಿದರು ಎಂದು ಚಿತ್ತಗಾಂಗ್ ವಕೀಲರ ಸಂಘದ ಅಧ್ಯಕ್ಷ ನಜೀಮ್ ಉದ್ದೀನ್ ಚೌಧರಿ ಹೇಳಿದ್ದಾರೆ. ಅದೇ ರೀತಿ, ಎಂಟು ಗಾಯಾಳುಗಳನ್ನು ಆಸ್ಪತ್ರೆಗೆ ಕರೆತರಲಾಗಿದ್ದು, ಅವರ ಪೈಕಿ ಒಬ್ಬರು ಮೃತಪಟ್ಟಿದ್ದರು ಎಂದು ಚಿತ್ತಗಾಂಗ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ತುರ್ತು ವಿಭಾಗದ ಡ್ಯೂಟಿ ಡಾಕ್ಟರ್ ನಿವೇದಿತಾ ಘೋಷ್ ಅವರು ಹೇಳಿದ್ಧಾಗಿ ಬಾಂಗ್ಲಾ ಭಾಷೆಯ ಪತ್ರಿಕೆ ಪ್ರೋಥೋಮ್ ಅಲೋ ವರದಿ ಮಾಡಿದೆ.

8) ಢಾಕಾ ನಗರದ ಲಾಲ್ದಿಘಿ ಮೈದಾನದಲ್ಲಿ ಅಕ್ಟೋಬರ್ 25 ರಂದು ನಡೆದ ಪ್ರತಿಭಟನಾ ಸಭೆಯಲ್ಲಿ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್‌ಪಿ) ಮುಖಂಡರೊಬ್ಬರ ದೂರಿನ ಮೇರೆಗೆ ಚಿತ್ತಗಾಂಗ್‌ನ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಚಿನ್ಮಯ ಕೃಷ್ಣ ದಾಸ್ ಬ್ರಹ್ಮಾಚಾರಿ ಮತ್ತು ಇತರ 18 ಜನರ ವಿರುದ್ಧ ಅಕ್ಟೋಬರ್ 30 ರಂದು ಪ್ರಕರಣ ದಾಖಲಾಗಿದೆ.

9) ಬಾಂಗ್ಲಾದೇಶದಲ್ಲಿ ಹಿಂದೂಗಳು ಅಲ್ಪಸಂಖ್ಯಾತರು. 170 ಮಿಲಿಯನ್ ಜನಸಂಖ್ಯೆಯಲ್ಲಿ ಕೇವಲ ಶೇಕಡ 8 ಮಾತ್ರ ಹಿಂದೂಗಳ ಜನಸಂಖ್ಯೆ. ಆಗಸ್ಟ್ 5 ರಂದು ಶೇಖ್ ಹಸೀನಾ ಅವರ ಅವಾಮಿ ಲೀಗ್ ಸರ್ಕಾರದ ಪತನದ ನಂತರ 50ಕ್ಬೆಕೂ ಹೆಚ್ಚು ಜಿಲ್ಲೆಗಳಲ್ಲಿ 200 ಕ್ಕೂ ಹೆಚ್ಚು ದಾಳಿಗಳನ್ನು ಹಿಂದೂಗಳು ಎದುರಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

10) ಚಿನ್ಮಯ್ ಕೃಷ್ಣ ದಾಸ್ ಬ್ರಹ್ಮಾಚಾರಿ ಅವರನ್ನು ನಿರ್ದಿಷ್ಟ ಆರೋಪದ ಮೇಲೆ ಬಂಧಿಸಲಾಗಿದೆ. ಜನಾಂಗೀಯ ಸಾಮರಸ್ಯವನ್ನು ಎತ್ತಿಹಿಡಿಯಲು ಬಾಂಗ್ಲಾದೇಶ ಸರ್ಕಾರ ಆದ್ಯತೆ ನೀಡುತ್ತದೆ. ಚಿನ್ಮಯ್ ಕೃಷ್ಣ ದಾಸ್ ಅವರ ಬಂಧನದ ಕುರಿತು ಬೇರೆ ಬೇರೆ ರೀತಿಯಲ್ಲಿ ವ್ಯಾಖ್ಯಾನಗಳಾಗುತ್ತಿವೆ. ಇದು ಎರಡು ನೆರೆಯ ದೇಶಗಳ ನಡುವಿನ ಸ್ನೇಹ ಮತ್ತು ಬಾಂಧವ್ಯಕ್ಕೆ ಹೇಳಿ ಮಾಡಿಸಿದ ವಿಚಾರಗಳಲ್ಲ. ಅವುಗಳು ಬಾಂಗ್ಲಾ ಸರ್ಕಾರದ ನೋವು ಮತ್ತು ನಿರಾಶೆಗೆ ಕಾರಣವಾಗಿದೆ. ಆದಾಗ್ಯ, ದಾಸ್ ಅವರ ಬಂಧನವನ್ನು ಸರ್ಕಾರ ಸಮರ್ಥಿಸುತ್ತದೆ. ಭಾರತ ಸರ್ಕಾರ ಹಿಂದೂಗಳ ಮೇಲಿನದ ದೌರ್ಜನ್ಯವನ್ನು ಖಂಡಿಸಿರುವುದಲ್ಲದೆ, ದಾಸ್ ಬಂಧನಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು.

ಬಾಂಗ್ಲಾದೇಶದ ಇಸ್ಕಾನ್ ಸಂತ ಚಿನ್ಮಯ ಕೃಷ್ಣ ದಾಸ ಪ್ರಭು ಯಾರು?

ಚಿನ್ಮೋಯ್ ಕೃಷ್ಣ ದಾಸ್ ಬ್ರಹ್ಮಚಾರಿ ಎಂದೂ ಕರೆಯಲ್ಪಡುವ ಕೃಷ್ಣ ದಾಸ್ ಪ್ರಭು ಬಾಂಗ್ಲಾದೇಶದ ಹಿಂದೂ ನಾಯಕ ಮತ್ತು ಸಂತ. ಅವರು ಬಾಂಗ್ಲಾದೇಶ ಸಮ್ಮಿಲಿತೊ ಸನಾತನಿ ಜಾಗರಣ್ ಜೋಟೆ ಗುಂಪಿನ ಸದಸ್ಯರೂ ಆಗಿದ್ದಾರೆ. ಅವರು ಬಾಂಗ್ಲಾದೇಶದ ಇಸ್ಕಾನ್‌ನ ವಕ್ತಾರರೂ ಹೌದು. ಇಸ್ಕಾನ್‌ನ ಸದಸ್ಯರಾಗಿ, ಕೃಷ್ಣ ಪ್ರಭು ದಾಸ್ ಅವರು ಬಾಂಗ್ಲಾದೇಶದಲ್ಲಿ ಹಿಂದೂಗಳ ಹಕ್ಕುಗಳು ಮತ್ತು ಸುರಕ್ಷತೆಗಾಗಿ ಧ್ವನಿ ಎತ್ತುವ ಪ್ರತಿಪಾದಕಾರಾಗಿ ಗಮನಸೆಳೆದಿದ್ದಾರೆ. ಆಗಾಗ್ಗೆ ಉದ್ದೇಶಿತ ದ್ವೇಷದ ದಾಳಿಗಳು ಮತ್ತು ಧಾರ್ಮಿಕ ತಾರತಮ್ಯದ ವಿರುದ್ಧ ಮಾತನಾಡುತ್ತ ಬಂದಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.