Saad Rizvi: ಅಣುಬಾಂಬ್ ತೋರಿಸಿ ಬೆದರಿಕೆ ಹಾಕಿ ಹಣ ಪಡೆಯಿರಿ: ಪಾಕ್‌ನಲ್ಲೊಬ್ಬ 'ಹಿಂಸಾರ್ಥಿಕ ತಜ್ಞ'ನ ಜನನ..!
ಆರ್ಥಿಕ ನೆರವಿಗಾಗಿ ಇಡೀ ಜಗತ್ತಿನ ಮುಂದೆ ಅಂಗಲಾಚುವ ಬದಲು, ಪಾಕಿಸ್ತಾನ ಸರ್ಕಾರವು ಅನ್ಯ ದೇಶಗಳಿಗೆ ಪರಮಾಣು ಬಾಂಬ್ ತೋರಿಸಿ, ಬೆದರಿಕೆ ಹಾಕಿ ಹಣ ಕೀಳಬೇಕು ಎಂದು ಮೂಲಭೂತವಾದಿ ನಾಯಕ ಸಾದ್ ರಿಜ್ವಿ 'ಸಲಹೆ' ನೀಡಿದ್ದಾನೆ. ನಿಷೇಧಿತ ತೆಹ್ರೀಕ್- ಎ- ಲಬೈಕ್ ಪಾಕಿಸ್ತಾನ್ ಪಕ್ಷದ ಮುಖ್ಯಸ್ಥನಾಗಿರುವ ಸಾದ್ ರಿಜ್ವಿ, ಜಗತ್ತನ್ನು ಬೆದರಿಸಿ ಪಾಕ್ ಹಣ ಪಡೆಯಬೇಕು ಎಂದಿದ್ದಾನೆ.
ಇಸ್ಲಾಮಾಬಾದ್:ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಪಾಕಿಸ್ತಾನ, ಈ ಬಿಕ್ಕಟ್ಟಿನಿಂದ ಹೊರಬರಲು ಜಗತ್ತಿನ ಮುಂದೆ ಭಿಕ್ಷಾ ಪಾತ್ರೆಯನ್ನು ಹಿಡಿದು ನಿಂತಿದೆ. ದಯವಿಟ್ಟು ನಮಗೆ ಸಹಾಯ ಮಾಡಿ ಎಂದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಕಂಡ ಕಂಡವರಿಗೆಲ್ಲಾ ಬೇಡಿಕೊಳ್ಳುತ್ತಿದ್ದಾರೆ.
ಟ್ರೆಂಡಿಂಗ್ ಸುದ್ದಿ
ಪಾಕ್ ಪ್ರಧಾನಿ ವಿದೇಶ ಪ್ರವಾಸ ಕೈಗೊಳ್ಳುವುದೇ ವಿವಿಧ ರಾಷ್ಟ್ರಗಳಿಂದ ಆರ್ಥಿಕ ಸಹಾಯ ಪಡೆಯಲು ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬದುಕಲು ಇತರರ ಮುಂದೆ ತಲೆಬಾಗಲೇ ಬೇಕಾದ ಅನಿವಾರ್ಯತೆಯನ್ನು, ಪಾಕಿಸ್ತನ ತನಗಾಗಿ ಸೃಷ್ಟಿಸಿಕೊಂಡಿದೆ. ಆದರೆ 'ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ' ಎಂಬ ಗಾದೆ ಮಾತಿನಂತೆ, ಪಾಕಿಸ್ತಾನದಲ್ಲಿರುವ ಧಾರ್ಮಿಕ ಮತಾಂಧರ ಸೊಕ್ಕಿನ ಮಾತುಗಳಿಗೇನು ಬರವಿಲ್ಲ.
ಆರ್ಥಿಕ ನೆರವಿಗಾಗಿ ಇಡೀ ಜಗತ್ತಿನ ಮುಂದೆ ಅಂಗಲಾಚುವ ಬದಲು, ಪಾಕಿಸ್ತಾನ ಸರ್ಕಾರವು ಅನ್ಯ ದೇಶಗಳಿಗೆ ಪರಮಾಣು ಬಾಂಬ್ ತೋರಿಸಿ, ಬೆದರಿಕೆ ಹಾಕಿ ಹಣ ಕೀಳಬೇಕು ಎಂದು ಮೂಲಭೂತವಾದಿ ನಾಯಕ ಸಾದ್ ರಿಜ್ವಿ 'ಸಲಹೆ' ನೀಡಿದ್ದಾನೆ.
ನಿಷೇಧಿತ ತೆಹ್ರೀಕ್- ಎ- ಲಬೈಕ್ ಪಾಕಿಸ್ತಾನ್ ಪಕ್ಷದ ಮುಖ್ಯಸ್ಥನಾಗಿರುವ ಸಾದ್ ರಿಜ್ವಿ, ಜಗತ್ತನ್ನು ಬೆದರಿಸಿ ಹಣ ಪಡೆಯುವ ಮೂಲಕ ಪಾಕಿಸ್ತಾನವು ತನಗೆ ಎದುರಾಗಿರುವ ಆರ್ಥಿಕ ಸಂಕಷ್ಟದಿಂದ ಪಾರಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾನೆ.
ಆರ್ಥಿಕ ನೆರವು ಪಡೆಯಲು ನಾವ್ಯಾಕೆ ಇತರರ ಮುಂದೆ ಭಿಕ್ಷೆ ಬೇಡಬೇಕು? ನಮ್ಮ ಬಳಿ ಪರಮಾಣು ಬಾಂಬ್ ಇದೆ. ಅದನ್ನು ತೋರಿಸಿ ಬೆದರಿಕೆ ಹಾಕಿ, ಅನ್ಯ ದೇಶಗಳಿಂದ ಹಣ ಪಡೆಯಬೇಕು ಎಂದು ಸಾದ್ ರಿಜ್ವಿ 'ಹಿಂಸಾರ್ಥಿಕ ತಜ್ಞ'ನಾಗಿ ಮಾತನಾಡಿದ್ದಾನೆ. ನಾವು ಒಂದು ಕೈಯಲ್ಲಿ ಪರಮಾಣು ಬಾಂಬ್, ಮತ್ತೊಂದು ಕೈಯಲ್ಲಿ ಕುರಾನ್ ಹಿಡಿದು ಹೊರಟರೆ, ಇಡೀ ಜಗತ್ತು ನಮ್ಮನ್ನು ಕಂಡು ಭಯಗೊಂಡು ಹಣ ನೀಡುತ್ತದೆ ಎಂದು ಸಾದ್ ರಿಜ್ವಿ ಹೇಳಿದ್ದಾನೆ.
ಸ್ವೀಡನ್ ಮತ್ತು ನೆದರ್‌ಲ್ಯಾಂಡ್‌ಗಳಲ್ಲಿ ಕುರಾನ್ ಸುಡುವ ಘಟನೆಗಳು ನಡೆದಿದ್ದು, ಅಂತವರಿಗೆ ತಕ್ಕ ಪಾಠ ಕಲಿಸುವಲ್ಲಿ ನಮ್ಮ ಪಾಕಿಸ್ತಾನ ಸರ್ಕಾರ ವಿಫಲವಾಗಿದೆ. ಇಸ್ಲಾಂನ್ನು ರಕ್ಷಿಸಲು ಬೇಕಾದ ಧೈರ್ಯವಂತಿಕೆ ಪಾಕ್ ಸರ್ಕಾರದ ಬಳಿ ಇಲ್ಲ, ಅದು ತೂಂಬ ದುರ್ಬಲಾಗಿದೆ ಎಂದು ಸಾದ್ ರಿಜ್ವಿ ಗುಡುಗಿದ್ದಾನೆ.
"ಆರ್ಥಿಕ ಸಹಾಯ ಬೇಡಲು ಪ್ರಧಾನಿ ಶೆಹಬಾಜ್ ಷರೀಫ್, ಅವರ ಇಡೀ ಸಂಪುಟ ಮತ್ತು ಸೇನಾ ಸಿಬ್ಬಂದಿ ಜಗತ್ತಿನ ಹಲವು ದೇಶಗಳನ್ನು ಸುತ್ತುತ್ತಿದ್ದಾರೆ. ಪಾಕಿಸ್ತಾನದ ಆರ್ಥಿಕತೆ ಅಪಾಯದಲ್ಲಿದೆ ಎಂದಾದರೆ ನೀವು ಒಂದು ಕೈಯಲ್ಲಿ ಕುರಾನ್ ಮತ್ತೊಂದು ಕೈಯಲ್ಲಿ ಪರಮಾಣು ಬಾಂಬ್ ಹಿಡಿದುಕೊಂಡು ಹೊರಡಿ. ಕುರಾನ್ ಸುಟ್ಟು ಹಾಕಿದ ಸ್ವೀಡನ್‌ಗೆ ಹೋಗಿ ಬೆದರಿಕೆ ಹಾಕಿ. ಆಗ ಕೇವಲ ಸ್ವೀಡನ್ ಅಲ್ಲ, ಇಡೀ ಬ್ರಹ್ಮಾಂಡವೇ ನಿಮ್ಮ ಪಾದದಡಿ ಬೀಳದೆ ಹೋದರೆ, ನೀವು ನನ್ನ ಹೆಸರು ಬದಲಾಯಿಸಿ.." ಎಂದು ರಿಜ್ವಿ ಸವಾಲೆಸೆದಿದ್ದಾನೆ.
ಸಾದ್ ರಿಜ್ವಿಯ ಭಾಷಣದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾಕ್ ಸರ್ಕಾರವು ಬೇರೆ ದೇಶಗಳ ಜೊತೆ ಚರ್ಚೆ ನಡೆಸುವ ಬದಲು, ಅವುಗಳನ್ನು ಬೆದರಿಸುವ ಮೂಲಕ ಹಣ ಪಡೆಯಬೇಕು ಎಂಬಾತನ ಪ್ರತಿಪಾದನೆಗೆ ಪಾಕ್ ಜನರೂ ಕೂಡ ಗಹಗಹಿಸಿ ನಗುತ್ತಿದ್ದಾರೆ.
ಸ್ವೀಡನ್ ರಾಜಧಾನಿ ಸ್ಟಾಕ್‌ಹೋಮ್‌ನಲ್ಲಿ ಕಳೆದ ತಿಂಗಳು, ಹಾರ್ಡ್‌ಲೈನ್ ರಾಜಕೀಯ ಪಕ್ಷದ ನಾಯಕ ರಾಸ್ಮಸ್ ಪಲುದಾನ್ ಕುರಾನ್ ಪ್ರತಿಯನ್ನು ಸುಟ್ಟು ಹಾಕಿದ್ದರು. ನ್ಯಾಟೋಕ್ಕೆ ಸೇರ್ಪಡೆಯಾಗುವ ಟರ್ಕಿ ಮತ್ತು ಸ್ವೀಡನ್ ಪ್ರಯತ್ನವನ್ನು ರಾಸ್ಮಸ್ ವಿರೋಧಿಸಿದ್ದರು.
ಅದರಂತೆ ನೆದರ್‌ಲ್ಯಾಂಡ್ಸ್‌ನ ಇಸ್ಲಾಂ ವಿರೋಧಿ ಗುಂಪು ಪೆಗಿಡಾದ ನಾಯಕ ಎಡ್ವಿನ್ ವ್ಯಾಗೆನ್‌ಫೆಲ್ಡ್, ಡೆನ್ ಹಾಗ್‌ನಲ್ಲಿ ಕುರಾನ್ ಪ್ರತಿಯನ್ನು ಹರಿದು ಹಾಕಿ ಪ್ರತಿಭಟನೆ ನಡೆಸಿದ್ದರು.