ಇಸ್ರೋ 100ನೇ ಉಪಗ್ರಹ ಉಡಾವಣೆ; ಜನವರಿ 29ಕ್ಕೆ ಶ್ರೀಹರಿಕೋಟಾದಿಂದ ಜಿಎಸ್‌ಎಲ್‌ವಿ-ಎಫ್15 ಎನ್‌ವಿಎಸ್ 02 ಮೂಲಕ ಹೊಸ ಮೈಲಿಗಲ್ಲು
ISRO 100th Launch: ಇಸ್ರೋ 100ನೇ ಉಪಗ್ರಹ ಉಡಾವಣೆಗೆ ದಿನಗಣನೆ ಶುರುವಾಗಿದೆ. ಭಾರತದ ಬಾಹ್ಯಾಕಾಶ ಕ್ಷೇತ್ರದ ಮಹತ್ವದ ವಿದ್ಯಮಾನ ಇದಾಗಿದ್ದು, ಜನವರಿ 29ಕ್ಕೆ ಶ್ರೀಹರಿಕೋಟಾದಿಂದ ಜಿಎಸ್‌ಎಲ್‌ವಿ-ಎಫ್15 ಎನ್‌ವಿಎಸ್ 02 ಮೂಲಕ ಹೊಸ ಮೈಲಿಗಲ್ಲು ಸ್ಥಾಪನೆಯಾಗಲಿದೆ.

ISRO 100th Launch: ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಹೊಸ ಮೈಲಿಗಲ್ಲು ಸ್ಥಾಪಿಸಲು ದಿನಗಣನೆ ಶುರುಮಾಡಿದೆ. ಹೌದು, ಇಸ್ರೋ 100ನೇ ಉಪಗ್ರಹ ಉಡಾವಣೆಗೆ ದಿನಗಣನೆ ನಡೆಯುತ್ತಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಸ್ಪೇಸ್ ಸೆಂಟರ್‌ನಿಂದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ 100ನೇ ಉಪಗ್ರಹ ಉಡಾವಣೆಯ ಮೈಲಿಗಲ್ಲು ಸ್ಥಾಪಿಸಲಿದೆ. ಜನವರಿ 29 ರಂದು ಉಪಗ್ರಹ ಉಡಾವಣೆ ನಡೆಯಲಿದೆ ಎಂದು ಇಸ್ರೋ ಶುಕ್ರವಾರ (ಜನವರಿ 24) ತಿಳಿಸಿದೆ.
ಇಸ್ರೋ 100ನೇ ಉಪಗ್ರಹ ಉಡಾವಣೆ
ಇಸ್ರೋ ತನ್ನ 100 ನೇ ಉಡಾವಣೆಯಲ್ಲಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜನವರಿ 29 ರಂದು ಬೆಳಿಗ್ಗೆ 06.23 ಕ್ಕೆ ಶ್ರೀಹರಿಕೋಟಾದಿಂದ 2,250 ಕೆಜಿ ನ್ಯಾವಿಗೇಷನ್ ಉಪಗ್ರಹವನ್ನು ಜಿಎಸ್‌ಎಲ್‌ವಿ-ಎಫ್15 ಮೂಲಕ ಕಳುಹಿಸಲು ಸಜ್ಜಾಗಿದೆ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ಇದು ಜಿಎಸ್‌ಎಲ್‌ವಿ ಉಡಾವಣಾ ವಾಹನದ 17ನೇ ಹಾರಾಟವಾಗಲಿದ್ದು, ಕ್ರಯೋಜೆನಿಕ ಎಂಜಿನ್ ಬಳಸುತ್ತಿರುವ 11ನೇ ವಾಹನ ಇದಾಗಿದ್ದು, 19 ನಿಮಿಷಗಳಲ್ಲಿ ಉಪಗ್ರಹವನ್ನು ಕಕ್ಷೆಯಲ್ಲಿ ಕೂರಿಸಲಿದೆ. ಭಾರತದ ಬಾಹ್ಯಾಕಾಶ ಕ್ಷೇತ್ರದ ಮಟ್ಟಿಗೆ ಇದು ಮಹತ್ವದ ಮೈಲಿಗಲ್ಲು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋಕ್ಕೂ ಇದು ಪ್ರತಿಷ್ಠೆಯ ವಿಚಾರ.
ಜ 29ಕ್ಕೆ ಜಿಎಸ್‌ಎಲ್‌ವಿ-ಎಫ್15 ಎನ್‌ವಿಎಸ್ 02 ಉಡಾವಣೆ
ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಜನವರಿ 29ಕ್ಕೆ ಜಿಎಸ್‌ಎಲ್‌ವಿ-ಎಫ್15 ಉಡಾವಣಾ ವಾಹನದ ಮೂಲಕ ಎನ್‌ವಿಎಸ್ 02 ಮಿಷನ್ ಅನ್ನು ಕಕ್ಷೆಗೆ ಸೇರಿಸಲಿದೆ. ಇದಕ್ಕೆ ಬೇಕಾದ ಸಿದ್ದತೆಗಳು ನಡೆಯುತ್ತಿದ್ದು, ಅಂತಿಕ ಹಂತದ ತಯಾರಿ ನಡೆದಿದೆ ಎಂದು ಇಸ್ರೋ ಮೂಲಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ. ಈ ಸಂದರ್ಭಕ್ಕೆ ಅನುಗುಣವಾಗಿ ನೆನಪಿಸಿಕೊಳ್ಳುವುದಾದರೆ, ಎರಡನೇ ತಲೆಮಾರಿನ ಮೊದಲ ಉಪಗ್ರಹವಾದ NVS-01 ಅನ್ನು ಜಿಎಸ್‌ಎಲ್‌ವಿ ಎಫ್ 12 ಉಡಾವಣಾ ವಾಹನದ ಮೂಲಕ 2023ರ ಮೇ 29 ರಂದು ಕಕ್ಷೆಗೆ ಸೇರಿಸಲಾಗಿತ್ತು.
ಜಿಎಸ್‌ಎಲ್‌ವಿ-ಎಫ್15 ವಿಶೇಷ
ಸ್ಥಳೀಯ ಕ್ರಯೋಜೆನಿಕ್ ಹಂತದ ಜಿಎಸ್ಎಲ್ವಿ-ಎಫ್ 15 ಎನ್ವಿಎಸ್ -02 ಉಪಗ್ರಹವನ್ನು ಜಿಯೋಸಿಂಕ್ರೊನಸ್ ವರ್ಗಾವಣೆ ಕಕ್ಷೆಗೆ ಸೇರಿಸಲಿದೆ. ಉಪಗ್ರಹ ಉಡಾವಣೆಯು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಉಡಾವಣಾ ಕೇಂದ್ರದಿಂದ ನಡೆಯಲಿದೆ ಎಂದು ಇಸ್ರೋ ಹೇಳಿಕೆಯಲ್ಲಿ ತಿಳಿಸಿದೆ. ಜಿಎಸ್ಎಲ್ವಿ-ಎಫ್ 15 ಉಡಾವಣಾ ವಾಹಕವು ಭಾರತದ ಜಿಯೋಸಿಂಕ್ರೊನಸ್ ಉಪಗ್ರಹ ಉಡಾವಣಾ ವಾಹನಗಳ ಪೈಕಿ 17 ನೇಯದ್ದು. ಸ್ವದೇಶಿ ಕ್ರಯೋ ಸ್ಟೇಜ್ ಹೊಂದಿರುವ 11 ನೇ ಉಡಾವಣಾ ವಾಹಕವಾಗಿದೆ. ಇದು ಸ್ಥಳೀಯ ಕ್ರಯೋಜೆನಿಕ್ ಹಂತದೊಂದಿಗೆ ಜಿಎಸ್‌ಎಲ್‌ವಿ ನಡೆಸುತ್ತಿರುವ 8 ನೇ ಕಾರ್ಯಾಚರಣೆಯ ಹಾರಾಟ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ ಇಸ್ರೋ ಹೇಳಿದೆ.
ಎನ್‌ವಿಎಸ್ 02 ಉಪಗ್ರಹ ವಿಶೇಷ
ನಕ್ಷತ್ರಪುಂಜಗಳ ನ್ಯಾವಿಗೇಷನ್ ಮಾಡುವುದಕ್ಕಾಗಿ, ಭಾರತದ ಸ್ವತಂತ್ರ ಪ್ರಾದೇಶಿಕ ನ್ಯಾವಿಗೇಷನ್ ಉಪಗ್ರಹ ವ್ಯವಸ್ಥೆಯ ಭಾಗ ಇದು. ಭಾರತದ ಬಳಕೆದಾರರಿಗೆ ನಿಖರವಾದ ಸ್ಥಾನ, ವೇಗ ಮತ್ತು ಸಮಯದ ಸೇವೆಯನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಭಾರತೀಯ ಭೂಪ್ರದೇಶ ಮೀರಿ ಸುಮಾರು 1,500 ಕಿ.ಮೀ ವಿಸ್ತಾರವಾದ ಪ್ರದೇಶವು ಅದರ ಪ್ರಾಥಮಿಕ ಸೇವಾ ಪ್ರದೇಶವಾಗಿದೆ.
ಎನ್‌ವಿಎಸ್ -02 ಎಂಬುದು ಎನ್‌ವಿಎಸ್ ಸರಣಿಯ ಎರಡನೇ ಉಪಗ್ರಹ. ಇದನ್ನು ಸಿ ಬ್ಯಾಂಡ್‌ನ ಪೇಲೋಡ್‌ಗೆ ಹೊರತಾಗಿ ಎಲ್1, ಎಲ್5 ಮತ್ತು ಎಸ್ ಬ್ಯಾಂಡ್ ಪೇಲೋಡ್‌ಗಳ ಜತೆಗೆ ಹೊಂದಿಕೊಳ್ಳುವಂತೆ ಸಿದ್ಧಪಡಿಸಲಾಗಿದೆ. ಎನ್‌ವಿಎಸ್ -01 ಉಪಗ್ರಹವನ್ನು ಸಿ ಬ್ಯಾಂಡ್‌ಗೆ ಹೊಂದಿಕೆಯಾಗುವಂತೆ ರಚಿಸಲಾಗಿತ್ತು. ಈ ಉಪಗ್ರಹವು ಐಆರ್‌ಎನ್‌ಎಸ್‌ಎಸ್ -1 ಇ ಜಾಗವನ್ನು ತುಂಬಲಿದೆ. ನಿಖರವಾದ ಸಮಯದ ಅಂದಾಜಿಗಾಗಿ ಎನ್‌ವಿಎಸ್-02 ಸ್ಥಳೀಯ ಮತ್ತು ಸಂಗ್ರಹಿಸಲಾದ ಪರಮಾಣು ಗಡಿಯಾರಗಳ ಸಂಯೋಜನೆಯನ್ನು ಬಳಸುತ್ತದೆ. ಎನ್‌ವಿಎಸ್ -02 ಉಪಗ್ರಹವನ್ನು ಯು ಆರ್ ಉಪಗ್ರಹ ಕೇಂದ್ರದಲ್ಲಿ ಇತರ ಉಪಗ್ರಹ ಆಧಾರಿತ ಕಾರ್ಯ ಕೇಂದ್ರಗಳ ಬೆಂಬಲದೊಂದಿಗೆ ವಿನ್ಯಾಸಗೊಳಿಸಲಾಗಿದೆ, ಅಭಿವೃದ್ಧಿಪಡಿಸಲಾಗಿದೆ ಮತ್ತು ಸಂಯೋಜಿಸಲಾಗಿದೆ ಎಂದು ಇಸ್ರೋ ಹೇಳಿದೆ.
