ISRO SpaDEx PSLV-C60: ವರ್ಷದ ಕೊನೆಯಲ್ಲಿ ಇಸ್ರೋ ಮೈಲಿಗಲ್ಲು; ಎರಡು ಬಾಹ್ಯಾಕಾಶ ನೌಕೆಗಳ ಉಡಾವಣೆ ಯಶಸ್ವಿ
ISRO SpaDEx PSLV-C60 Launch: ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಉಪಗ್ರಹ ಉಡಾವಣೆ ಕೇಂದ್ರದಲ್ಲಿ ಇಸ್ರೋ 2 ಉಪಗ್ರಹಗಳನ್ನು ಉಡಾವಣೆಗೊಳಿಸಿದೆ.
ಶ್ರೀಹರಿಕೋಟ (ಆಂಧ್ರ ಪ್ರದೇಶ): 2024ರ ವರ್ಷದ ಕೊನೆಯಲ್ಲಿ ಇಸ್ರೋ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ‘ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್’ (ಸ್ಪೇಡೆಕ್ಸ್) ಯೋಜನೆ ಭಾಗವಾಗಿ ಇಸ್ರೋದ ಎರಡು ಉಪಗ್ರಹಗಳು ಉಡಾವಣೆಗೊಂಡಿವೆ. ಇಸ್ರೋ ಇಂದು (ಡಿಸೆಂಬರ್ 30, ಸೋಮವಾರ) ರಾತ್ರಿ 10 ಗಂಟೆಗೆ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿತು. ಸ್ಪೇಡೆಕ್ಸ್ ಯೋಜನೆ ಮೂಲಕ ಪೋಲಾರ್ ಸೆಟಲೈಟ್ ಲಾಂಚ್ ವೆಹಿಕಲ್ ಪಿಎಸ್ಎಲ್‌ವಿ ರಾಕೆಟ್ ಎಸ್‌ಡಿಎಕ್ಸ್ 01 ಮತ್ತು ಎಸ್‌ಡಿಎಕ್ಸ್ 02 ಎಂಬ ಹೆಸರುಗಳುಳ್ಳ 2 ಉಪಗ್ರಹಗಳನ್ನು ಕಕ್ಷೆಯೆಡೆಗೆ ಹೊತ್ತೊಯ್ದಿದೆ. ಆಂತರಿಕ್ಷದಲ್ಲಿ 2 ಬಾಹ್ಯಾಕಾಶ ನೌಕೆಗಳ ಡಾಕಿಂಗ್ ಹಾಗೂ ಅನ್‌ಡಾಕಿಂಗ್ ನಡೆಸುವ ಭಾರತದ ಸಾಮರ್ಥ್ಯ ಪ್ರದರ್ಶನಗೊಂಡಿದೆ. ಅಂದರೆ ಎರಡು ನೌಕೆಗಳನ್ನು ಜೋಡಿಸುವ ಹಾಗೂ ಬೇರ್ಪಡಿಸುವ ಪ್ರಯೋಗ ಇದಾಗಿದೆ.
2035ರ ವೇಳೆಗೆ ಇಸ್ರೋ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸುವ ಮುನ್ನುಡಿಯಾಗಿ 44.5 ಮೀಟರ್ ಎತ್ತರದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV) ಬಾಹ್ಯಾಕಾಶ ನೌಕೆ ಎ ಮತ್ತು ಬಿ ಅನ್ನು ಹೊತ್ತೊಯ್ದಿದೆ. ಪ್ರತಿಯೊಂದೂ 220 ಕೆಜಿ ತೂಕವನ್ನು ಹೊಂದಿದ್ದು, ಅದು ಬಾಹ್ಯಾಕಾಶ ಡಾಕಿಂಗ್, ಉಪಗ್ರಹ ಸೇವೆ ಮತ್ತು ಅಂತರಗ್ರಹ ಕಾರ್ಯಾಚರಣೆಗಳಿಗೆ ನೆರವಾಗಲಿದೆ. ರಾತ್ರಿ 9.58 ಗಂಟೆಗೆ ಇಸ್ರೋ ಎರಡು ಉಪಗ್ರಹಗಳ ಉಡಾವಣೆ ಮಾಡಬೇಕಿತ್ತು. ಆದರೆ, ಎರಡು ನಿಮಿಷಗಳ ಕಾಲ ತಡವಾಗಿ ಉಡಾವಣೆ ಮಾಡಲಾಯಿತು. ಈ ಅತ್ಯಾಧುನಿಕ ಸೇವೆಯನ್ನು ಹೊಂದಿದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಯಿತು. ಅಮೆರಿಕಾ, ರಷ್ಯಾ ಮತ್ತು ಚೀನಾ ಮಾತ್ರ ಇಲ್ಲಿಯವರೆಗೆ ಬಾಹ್ಯಾಕಾಶ ಡಾಕಿಂಗ್ ತಂತ್ರಜ್ಞಾನಗಳನ್ನು ಬಳಕೆ ಮಾಡಿಕೊಂಡಿದ್ವು.
ಭೂಮಿಯಿಂದ ಸುಮಾರು 476 ಕಿ.ಮಿ ದೂರದಲ್ಲಿರುವ ಕಕ್ಷೆಗೆ ಸೇರ್ಪಡೆಯಾದ ನಂತರ ಅವುಗಳು ಡಾಕಿಂಗ್ ಮಾಹಿತಿಯನ್ನು ನಿರಂತರವಾಗಿ ಪ್ರದರ್ಶನ ಮಾಡಲಿವೆ. ಗಗನನೌಕೆಗಳು ಸಂಧಿಸುವ ಈ ಪ್ರಯೋಗದ ಪ್ರಾತ್ಯಕ್ಷಿಕೆ ಹೊಸ ವರ್ಷದ ಜನವರಿಯಲ್ಲಿ ನಡೆಯಲಿದೆ. ಮೊದಲ ವಾರ ಡಾಕಿಂಗ್ ಮಾಹಿತಿ ರವಾನೆ ಶುರುವಾಗಲಿದೆ. ಈ ಮಿಷನ್‌ನ ಯಶಸ್ಸು ಚಂದ್ರಯಾನ-4, ತನ್ನದೇ ಆದ ಬಾಹ್ಯಾಕಾಶ ನಿಲ್ದಾಣ ಮತ್ತು ಚಂದ್ರನ ಮೇಲೆ ಭಾರತೀಯ ಪ್ರಯಾಣಿಕನನ್ನು ಇರಿಸುವ ಭಾರತದ ಕನಸುಗಳನ್ನು ಈಡೇರಿಸುತ್ತದೆ.