IT Return filing: ಐಟಿ ರಿಟರ್ನ್ಸ್ ಸಲ್ಲಿಸಲು ಫಾರ್ಮ್ 16ಕ್ಕೆ ಕಾಯ್ತಿದ್ದೀರಾ? ನೀವು ತಿಳಿದಿರಬೇಕಾದ ಕೆಲವು ಅಂಶಗಳಿವು
IT Return filing: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಸಮಯ ಇದು. ಅಗತ್ಯ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಂಡು ನಿಗದಿತ ಗಡುವಿನೊಳಗೆ ಐಟಿ ರಿಟರ್ನ್ಸ್ ಸಲ್ಲಿಸಬೇಕಾದ್ದು ಅವಶ್ಯ. ಇಲ್ಲದೇ ಹೋದರೆ ದಂಡ ಪಾವತಿ ಅನಿವಾರ್ಯ. ಈ ಹಿನ್ನೆಲೆಯಲ್ಲಿ ನೀವು ತಿಳಿದಿರಬೇಕಾದ ಕೆಲವು ಅಂಶಗಳು ಹೀಗಿವೆ.
ಕಳೆದ ಹಣಕಾಸು ವರ್ಷಕ್ಕೆ ಸಂಬಂಧಿಸಿದ ಆದಾಯ ತೆರಿಗೆ ರಿಟರ್ನ್ಸ್ (IT Return filing) ಸಲ್ಲಿಸುವ ಸಮಯ ಇದು. ವೇತನ ಪಡೆಯುವ ಬಹುತೇಕ ಉದ್ಯೋಗಿಗಳು ಫಾರ್ಮ್ 16ಗೆ ಕಾಯುವ ಸಂದರ್ಭವೂ ಹೌದು. ಕಳೆದ ಹಣಕಾಸು ವರ್ಷಕ್ಕೆ ಅಂದರೆ 2022-23 ಹಣಕಾಸು ವರ್ಷಕ್ಕೆ (ಮೌಲ್ಯಮಾಪನ ವರ್ಷ 2023-24) ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸಲು 2023ರ ಜುಲೈ 31 ಕೊನೇ ದಿನ. ಆದಾಯ ತೆರಿಗೆ ಇಲಾಖೆ ITR 1 ಮತ್ತು ITR 4 ರ ಆನ್‌ಲೈನ್ ಫೈಲಿಂಗ್ ಅನ್ನು ಸಕ್ರಿಯಗೊಳಿಸಿದೆ.
ಈ ಪೈಕಿ ITR-1 ಅನ್ನು ಸಲ್ಲಿಸುವವರು ಸಂಬಳ ಪಡೆಯುವ ವರ್ಗ ಮತ್ತು ಹಿರಿಯ ನಾಗರಿಕರು. ಐಟಿಆರ್-4 ಫಾರ್ಮ್ ಅನ್ನು ವ್ಯಕ್ತಿಗಳು, ಎಚ್‌ಯುಎಫ್‌ಗಳು ಮತ್ತು ಸಂಸ್ಥೆಗಳು (ಸೀಮಿತ ಹೊಣೆಗಾರಿಕೆ ಪಾಲುದಾರಿಕೆ ಸಂಸ್ಥೆಗಳನ್ನು ಹೊರತುಪಡಿಸಿ), 50 ಲಕ್ಷ ರೂಪಾಯಿವರೆಗೆ ಒಟ್ಟು ಆದಾಯ ಇರುವಂಥವರು ಬಳಸಬಹುದು.
ಫಾರ್ಮ್ 16 ಅನ್ನು ಸಾಮಾನ್ಯವಾಗಿ ಸಂಬಳ ಪಡೆಯುವ ವ್ಯಕ್ತಿಗಳು ತಮ್ಮ ITR ಅನ್ನು ಫೈಲ್ ಮಾಡಲು ಬಳಸುತ್ತಾರೆ. ಆದಾಗ್ಯೂ, ಯಾವಾಗಲೂ ಇದು ಅಗತ್ಯವಿರುವುದಿಲ್ಲ.
ಫಾರ್ಮ್ 16 ಎಂದರೇನು?
ಫಾರ್ಮ್ 16 ಎಂಬುದು ಉದ್ಯೋಗದಾತರಿಂದ ಮೂಲದಲ್ಲಿ ಕಡಿತಗೊಳಿಸಲಾದ ತೆರಿಗೆ ಪ್ರಮಾಣಪತ್ರ. ಸಂಬಳ ಪಡೆಯುವ ವ್ಯಕ್ತಿಗಳಿಗೆ ITR ಅನ್ನು ಸಲ್ಲಿಸುವಲ್ಲಿ ನಿರ್ಣಾಯಕ ಪಾತ್ರವನ್ನು ಇದು ವಹಿಸುತ್ತದೆ. ಇದು ಉದ್ಯೋಗಿಗೆ ಪಾವತಿಸಿದ ಸಂಬಳದ ವಿವರವಾದ ವಿವರಣೆಯನ್ನು ಒದಗಿಸುತ್ತದೆ. ಇದರಲ್ಲಿ ಉದ್ಯೋಗಿಯು ಕ್ಲೈಮ್ ಮಾಡಿದ ಕಡಿತ ಮತ್ತು ಅದರಿಂದ ಕಡಿತಗೊಳಿಸಲಾದ ತೆರಿಗೆಯ ವಿವರವೂ ಇರುತ್ತದೆ.
ಫಾರ್ಮ್ 16ರ ಪಾರ್ಟ್ ಎ ಮತ್ತು ಪಾರ್ಟ್ ಬಿ
ಪಾರ್ಟ್ ಎನಲ್ಲಿ ಉದ್ಯೋಗದಾತರಿಂದ TDS ಆಗಿ ಕಡಿತಗೊಳಿಸಿದ ಮತ್ತು ಠೇವಣಿ ಮಾಡಿದ ತೆರಿಗೆಗಳ ಸಾರಾಂಶವಿರುತ್ತದೆ.
ಪಾರ್ಟ್ ಬಿಯಲ್ಲಿ ಉದ್ಯೋಗಿಯ ಸಂಬಳ ಮತ್ತು ಆದಾಯದ ವಿವರಗಳಿರುತ್ತವೆ. ತನ್ನ ತೆರಿಗೆಯ ಆದಾಯದಲ್ಲಿ ವಿನಾಯಿತಿ ಪಡೆಯಲು ಉದ್ಯೋಗಿಯು ಕ್ಲೈಮ್ ಮಾಡಿದ ಕಡಿತಗಳನ್ನು ಪ್ರತಿಬಿಂಬಿಸುತ್ತದೆ.
ಫಾರ್ಮ್ 16 ಅನ್ನು ಯಾವಾಗ ನೀಡಲಾಗುತ್ತದೆ?
ಸಂಬಳ ಪಡೆಯುವ ಪ್ರತಿ ವ್ಯಕ್ತಿಯು ಸಾಮಾನ್ಯವಾಗಿ ಮೌಲ್ಯಮಾಪನ ವರ್ಷದ ಜೂನ್ 15 ರಂದು ಅಥವಾ ಮೊದಲು ತಮ್ಮ ಉದ್ಯೋಗದಾತರಿಂದ ಫಾರ್ಮ್ 16 ಅನ್ನು ಸ್ವೀಕರಿಸುತ್ತಾರೆ. ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 203, ಉದ್ಯೋಗದಾತರು ತಮ್ಮ ಉದ್ಯೋಗಿಗಳಿಗೆ ಫಾರ್ಮ್ 16 ಅನ್ನು ನೀಡುವುದನ್ನು ಕಡ್ಡಾಯಗೊಳಿಸಿದೆ. ಇದು ಆದಾಯದ ಮೇಲೆ ಅವರ ಒಟ್ಟು ಟಿಡಿಎಸ್ ಅನ್ನು ಪ್ರತಿಬಿಂಬಿಸುತ್ತದೆ.
ಐಟಿಆರ್ ಸಲ್ಲಿಸುವಾಗ ಫಾರ್ಮ್ 16 ರಲ್ಲಿ ಏನು ಗಮನಿಸಬೇಕು?
ನಿಮ್ಮ ITR ಅನ್ನು ಸಲ್ಲಿಸುವ ಮೊದಲು, ನಿಮ್ಮ ಸ್ಯಾಲರಿ ಸ್ಲಿಪ್‌ಗಳು, ವಾರ್ಷಿಕ ಮಾಹಿತಿ ಹೇಳಿಕೆ ಮತ್ತು ಫಾರ್ಮ್ 26AS ನೊಂದಿಗೆ ಫಾರ್ಮ್ 16 ರಲ್ಲಿ ಮಾಹಿತಿಯನ್ನು ಪರಿಶೀಲಿಸುವುದು ಅತ್ಯಗತ್ಯ. ವೇತನ ಪಡೆಯುವ ಉದ್ಯೋಗಿಗಳು ITR ಅನ್ನು ಸಲ್ಲಿಸುವಾಗ, ಫಾರ್ಮ್ 16 ರ ಕೆಳಗಿನ ಅಂಶಗಳಿಗೆ ಗಮನ ಕೊಡುವುದು ಮುಖ್ಯ:
ಪ್ಯಾನ್
ನಿಮ್ಮ ಫಾರ್ಮ್ 16 ಅನ್ನು ಪರಿಶೀಲಿಸುವಾಗ, ನಿಮ್ಮ ಪ್ಯಾನ್ ಫಾರ್ಮ್‌ನಲ್ಲಿ ನಮೂದಿಸಲಾದ ಒಂದಕ್ಕೆ ಹೊಂದಿಕೆಯಾಗುತ್ತದೆಯೇ ಎಂಬುದನ್ನು ಪರಿಶೀಲಿಸಬೇಕಾದ್ದು ಮೊದಲ ವಿಷಯ. PAN ತಪ್ಪಾಗಿದ್ದರೆ, ನಿಮ್ಮ ಸಂಬಳದಿಂದ ಕಡಿತಗೊಳಿಸಲಾದ ತೆರಿಗೆಯು ಫಾರ್ಮ್ 26AS ನಲ್ಲಿ ಪ್ರತಿಫಲಿಸುವುದಿಲ್ಲ ಮತ್ತು ನಿಮ್ಮ ITR ಅನ್ನು ಸಲ್ಲಿಸುವಾಗ ಅದಕ್ಕೆ ಕ್ರೆಡಿಟ್ ಪಡೆಯಲು ನಿಮಗೆ ಸಾಧ್ಯವಾಗುವುದಿಲ್ಲ ಎಂಬುದನ್ನು ನೆನಪಿಸಿದ್ದಾರೆ ಕ್ಲಿಯರ್‌ನ ಸಂಸ್ಥಾಪಕ, ಸಿಇಒ ಅರ್ಚಿತ್ ಗುಪ್ತಾ.
ವೈಯಕ್ತಿಕ ವಿವರ
ಪ್ಯಾನ್ ಹೊರತುಪಡಿಸಿ, ನಿಮ್ಮ ಹೆಸರು, ವಿಳಾಸ ಮತ್ತು ಉದ್ಯೋಗದಾತರ TAN (ತೆರಿಗೆ ಕಡಿತ ಮತ್ತು ಸಂಗ್ರಹ ಖಾತೆ ಸಂಖ್ಯೆ) ನಿಖರತೆಯನ್ನು ಪರಿಶೀಲಿಸಿ ಎಂದು ಸಲಹೆ ನೀಡಿದ್ದಾರೆ Tax2win ಸಂಸ್ಥೆಯ ಸಹ-ಸಂಸ್ಥಾಪಕ ಅಭಿಷೇಕ್ ಸೋನಿ.
ಫಾರ್ಮ್ 16ರ ಪಾರ್ಟ್ ಎ
ಫಾರ್ಮ್ 16 ರ ಪಾರ್ಟ್ ಎಯಲ್ಲಿನ ತೆರಿಗೆ ಕಡಿತದ ವಿವರಗಳನ್ನು ನಿಮ್ಮ ಫಾರ್ಮ್ 26AS ನಲ್ಲಿನ ಮಾಹಿತಿಯೊಂದಿಗೆ ಹೋಲಿಸುವುದು ಅಗತ್ಯ. ಇದು ಕಡಿತಗೊಳಿಸಿದ ಮತ್ತು ಪಾವತಿಸಿದ ತೆರಿಗೆಗಳು ಮತ್ತು ಎಐಎಸ್‌ನ ಏಕೀಕೃತ ಹೇಳಿಕೆ.
ಫಾರ್ಮ್ 16ರ ಪಾರ್ಟ್ ಬಿ
ಇದು ನಿಮ್ಮ ಉದ್ಯೋಗದಾತ ಪಾವತಿಸಿದ ಆದಾಯವನ್ನು ತೋರಿಸುತ್ತದೆ. ನೀವು ಕ್ಲೈಮ್ ಮಾಡುವ ಯಾವುದೇ ತೆರಿಗೆ-ಉಳಿತಾಯ ಕಡಿತಗಳು ಮತ್ತು ವಿನಾಯಿತಿಗಳು ಫಾರ್ಮ್ 16 ರಲ್ಲಿ ಸರಿಯಾಗಿ ಪ್ರತಿಫಲಿಸುತ್ತದೆ ಎಂದು ಖಚಿತಪಡಿಸಿಕೊಳ್ಳಿ.
ತೆರಿಗೆ ವಿನಾಯಿತಿಗಳನ್ನು ಕ್ರಾಸ್-ವೆರಿಫೈ ಮಾಡಿ
ಫಾರ್ಮ್ 16, ಫಾರ್ಮ್ 26AS, ಮತ್ತು ವಾರ್ಷಿಕ ಮಾಹಿತಿ ಹೇಳಿಕೆನಲ್ಲಿ ಪ್ರತಿಫಲಿಸುವ ತೆರಿಗೆಗಳೊಂದಿಗೆ ಹೋಲಿಸಿ, ನಿಮ್ಮ ಸಂಬಳದ ಆದಾಯದಿಂದ ಕಡಿತಗೊಳಿಸಲಾದ ನಿಜವಾದ ತೆರಿಗೆಯನ್ನು ಕ್ರಾಸ್-ಚೆಕ್ ಮಾಡುವುದು ಅತ್ಯಗತ್ಯ. ಯಾವುದೇ ವ್ಯತ್ಯಾಸ ಗುರುತಿಸಿದರೆ, ತಕ್ಷಣವೇ ಅವುಗಳನ್ನು ಉದ್ಯೋಗದಾತರ ಗಮನಕ್ಕೆ ತನ್ನಿ ಮತ್ತು ಫಾರ್ಮ್ 16 ರಲ್ಲಿ ಮಾಹಿತಿಯನ್ನು ಸರಿಪಡಿಸಲು ಅವರನ್ನು ವಿನಂತಿಸಿ. ನಿಖರ ವಿವರಗಳು ಫಾರ್ಮ್ 26AS ಮತ್ತು ಎಐಎಸ್‌ನೊಂದಿಗೆ ಹೊಂದಾಣಿಕೆಯಾಗುವುದನ್ನು ಖಚಿತಪಡಿಸಿಕೊಳ್ಳುವುದು ಅಗತ್ಯ.
ಉದ್ಯೋಗ ಬದಲಾವಣೆ ಮತ್ತು ಬಹು ಉದ್ಯೋಗದಾತರು
ನೀವು 2022-23 ರ ಆರ್ಥಿಕ ವರ್ಷದಲ್ಲಿ ಉದ್ಯೋಗಗಳನ್ನು ಬದಲಾಯಿಸಿದ್ದರೆ, ಎರಡೂ ಉದ್ಯೋಗದಾತರಿಂದ ಫಾರ್ಮ್ 16 ಅನ್ನು ಸಂಗ್ರಹಿಸುವುದು ಮುಖ್ಯ. ಇದು ನಿಜವಾದ ತೆರಿಗೆಯ ವೇತನವನ್ನು ನಿರ್ಧರಿಸಲು ಮತ್ತು ನಿಖರವಾದ ವರದಿಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಹಿಂದಿನ ಉದ್ಯೋಗದಾತರೊಂದಿಗೆ ಗಳಿಸಿದ ಆದಾಯದ ಬಗ್ಗೆ ನೀವು ಪ್ರಸ್ತುತ ಉದ್ಯೋಗದಾತರಿಗೆ ತಿಳಿಸದಿದ್ದರೆ ಉದ್ಯೋಗ ಬದಲಾವಣೆಯ ಕಾರಣ ಹೆಚ್ಚುವರಿ ತೆರಿಗೆಯನ್ನು ಪಾವತಿಸಬೇಕಾಗಬಹುದು ಎಂಬುದನ್ನು ನೆನಪಿನಲ್ಲಿಡಿ.
ಫಾರ್ಮ್ 16 ಪಡೆಯುವ ಮೊದಲು ಏನು ಮಾಡಬೇಕು?
ಫಾರ್ಮ್ 16 ಅನ್ನು ಸ್ವೀಕರಿಸುವ ಮೊದಲು, ಉದ್ಯೋಗಿಗಳು ಕ್ಯಾಪಿಟಲ್ ಗೇನ್ ಸ್ಟೇಟ್‌ಮೆಂಟ್ಸ್, ಸ್ಥಿರ ಠೇವಣಿಗಳ ಬಡ್ಡಿ ಆದಾಯ, ಬಾಡಿಗೆ ಆದಾಯ ಮತ್ತು ಕಡಿತಗಳನ್ನು ಕ್ಲೈಮ್ ಮಾಡಲು ಮಾಡಿದ ಯಾವುದೇ ಹೂಡಿಕೆಯ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ನಂತರ ಐಟಿಆರ್ ಸಲ್ಲಿಸಬೇಕು.