ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆಯ ಗಡುವು ವಿಸ್ತರಣೆ, ಆ ನಂತರವೂ ತಡವಾದರೆ ದಂಡ ಖಚಿತ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆಯ ಗಡುವು ವಿಸ್ತರಣೆ, ಆ ನಂತರವೂ ತಡವಾದರೆ ದಂಡ ಖಚಿತ

ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆಯ ಗಡುವು ವಿಸ್ತರಣೆ, ಆ ನಂತರವೂ ತಡವಾದರೆ ದಂಡ ಖಚಿತ

ಹಣಕಾಸು ವರ್ಷ 2024-25 (ಮೌಲ್ಯಮಾಪನ ವರ್ಷ 2025-26)ರ ಐಟಿ ರಿಟರ್ನ್ಸ್ ಸಲ್ಲಿಕೆಯ ಗಡುವು ಕೊಂಚ ವಿಸ್ತರಣೆಯಾಗಿದ್ದು ತೆರಿಗೆ ಪಾವತಿದಾರರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಆಡಿಟ್‌ ಮಾಡದ ಪ್ರಕರಣಗಳಲ್ಲಿ ಐಟಿಆರ್ ಸಲ್ಲಿಕೆಯ ಗಡುವು ವಿಸ್ತರಿಸಿದ್ದು, ಹೊಸ ಗಡುವನ್ನು ಪ್ರಕಟಿಸಿದೆ.

ಆದಾಯ ತೆರಿಗೆ ಭವನ (ಸಾಂಕೇತಿಕ ಚಿತ್ರ)
ಆದಾಯ ತೆರಿಗೆ ಭವನ (ಸಾಂಕೇತಿಕ ಚಿತ್ರ) (Reuters)

ನವದೆಹಲಿ: ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್‌) ಸಲ್ಲಿಕೆ ದಿನಾಂಕ ವಿಸ್ತರಣೆಯಾಗಿದೆ. ಹಣಕಾಸು ವರ್ಷ 2024-25 (ಮೌಲ್ಯಮಾಪನ ವರ್ಷ 2025-26)ರ ಐಟಿ ರಿಟರ್ನ್ಸ್ ಸಲ್ಲಿಕೆಯ ಗಡುವು ಕೊಂಚ ವಿಸ್ತರಣೆಯಾಗಿದ್ದು ತೆರಿಗೆ ಪಾವತಿದಾರರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಆಡಿಟ್‌ ಮಾಡದ ಪ್ರಕರಣಗಳಲ್ಲಿ ಐಟಿಆರ್ ಸಲ್ಲಿಕೆಯ ಗಡುವು ವಿಸ್ತರಿಸಿದ್ದು, ಹೊಸ ಗಡುವನ್ನು ಪ್ರಕಟಿಸಿದೆ. ಇದರಂತೆ, ಐಟಿಆರ್ ಅಥವಾ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ಗಡುವು ಜುಲೈ 31 ಇದ್ದದ್ದು, ಈಗ ಸೆಪ್ಟೆಂಬರ್ 15ಕ್ಕೆ ಮುಂದೂಡಲ್ಪಟ್ಟಿದೆ.

ಐಟಿಆರ್ ಸಲ್ಲಿಕೆ ಗಡುವು ದಾಟಿದರೆ ದಂಡ

ಕೇಂದ್ರೀಯ ನೇರ ತೆರಿಗೆ ಮಂಡಳಿಯ ಸುತ್ತೋಲೆ ಪ್ರಕಾರ, ಐಟಿಆರ್ ಸಲ್ಲಿಕೆಯ ಗಡುವು ಮೀರಿ ಸಲ್ಲಿಕೆ ಮಾಡುವವರು ದಂಡ ಪಾವತಿಸಬೇಕಾಗುತ್ತದೆ. ಒಂದೊಮ್ಮೆ ಆದಾಯ ಪ್ರಮಾಣವು 5 ಲಕ್ಷ ರೂಪಾಯಿ ಮೀರಿದ್ದರೆ ಅಂತಹ ಸನ್ನಿವೇಶದಲ್ಲಿ 5000 ರೂಪಾಯಿ ದಂಡ ಮತ್ತು ಕಡಿಮೆ ಆದಾಯದ ಗುಂಪುಗಳಿಗೆ ಸೆಕ್ಷನ್ 234 ಎಫ್ ಪ್ರಕಾರ 1000 ರೂಪಾಯಿ ದಂಡ ಪಾವತಿಸಬೇಕಾಗುತ್ತದೆ.

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ವಿಶೇಷವಾಗಿ ಪರಿಷ್ಕರಿಸಿದ ಐಟಿಆರ್‌ ಸಲ್ಲಿಕೆಗೆ 2025ರ ಡಿಸೆಂಬರ್ 31ರ ತನಕ ಕಾಲಾವಕಾಶವಿದೆ. ಅಪ್ಡೇಟ್ ಮಾಡಿದ ಐಟಿಆರ್-ಯು ಸಲ್ಲಿಕೆಗೆ 2030ರ ಮಾರ್ಚ್ 31ರ ತನಕ ಕಾಲಾವಕಾಶ ವಿದೆ.

ರಿಟರ್ನ್ ಫೈಲಿಂಗ್ ದಿನಾಂಕವನ್ನು ವಿಸ್ತರಿಸಲಾಗಿದ್ದರೂ, ಯಾವುದೇ ಸ್ವ-ಮೌಲ್ಯಮಾಪನ ತೆರಿಗೆಗಳನ್ನು ಪಾವತಿಸುವುದು ಜುಲೈ 31 ರೊಳಗೆ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ, ಸೆಕ್ಷನ್ 234 ಎ ಅಡಿಯಲ್ಲಿ ದಂಡದ ಬಡ್ಡಿಯನ್ನು ಸಂಗ್ರಹಿಸುವುದಕ್ಕೆ ಆದಾಯ ಇಲಾಖೆಗೆ ಅವಕಾಶವಿದೆ.

ಐಟಿಆರ್ ಸಲ್ಲಿಕೆ ಗಡುವು ವಿಸ್ತರಣೆಗೆ ಏನು ಕಾರಣ

ಐಟಿಆರ್‌ ಅರ್ಜಿ ಲಭ್ಯವಿಲ್ಲದಿರುವುದು ಹಾಗೂ ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಇ-ಫೈಲಿಂಗ್ ಸೌಲಭ್ಯದ ಲೋಪ ದೋಷಗಳ ಕಾರಣ ಐಟಿಆರ್ ಸಲ್ಲಿಕೆ ಗಡುವು ವಿಸ್ತರಣೆಯಾಗಿದೆ ಎಂದು ಹೇಳಲಾಗುತ್ತಿದೆ. ಇದಲ್ಲದೆ, ಫಾರ್ಮ್‌ 26ಎಎಸ್‌ ಮತ್ತು ವಾರ್ಷಿಕ ಆದಾಯ ಹೇಳಿಕೆ (ಎಐಎಸ್‌) ಲಭ್ಯವಾಗದೇ ಇರುವ ಕಾರಣ ತೆರಿಗೆ ಪಾವತಿದಾರರು ಸವಾಲುಗಳನ್ನು ಎದುರಿಸಿದ್ದಾರೆ. ಹೀಗಾಗಿ ಐಟಿಆರ್ ಸಲ್ಲಿಕೆ ಅವಧಿ ವಿಸ್ತರಿಸಲು ಆಗ್ರಹಿಸಿದ್ದರು. ಇದರಂತೆ ಸಿಬಿಡಿಟಿ ಐಟಿಆರ್ ಸಲ್ಲಿಕೆ ಗಡುವು ವಿಸ್ತರಣೆ ಮಾಡಿದೆ ಎಂದೂ ಹೇಳಲಾಗುತ್ತಿದೆ.

ಐಟಿಆರ್‌ ಸಲ್ಲಿಕೆಗೆ ಗಡುವು ವಿಸ್ತರಣೆಯು ಮರುಪಾವತಿ ಬಗ್ಗೆ ಸಕಾರಾತ್ಮಕ ನಿಲುವು ಹೊಂದಲು ಕಾರಣವಾಗುತ್ತದೆ. ಮರುಪಾವತಿ ಪಡೆಯುವ ತೆರಿಗೆದಾರರು ಸೆಕ್ಷನ್ 244 ಎ ಅಡಿಯಲ್ಲಿ ಶೇಕಡಾ 33 ರಷ್ಟು ಹೆಚ್ಚಿನ ಬಡ್ಡಿಯನ್ನು ಪಡೆಯಬಹುದು. ವಿಸ್ತರಣೆಯ ಹೊರತಾಗಿಯೂ ಏಪ್ರಿಲ್ 1 ರಿಂದ ಬಡ್ಡಿ ನೀಡಬೇಕಾಗುತ್ತದೆ ಎಂಬುದು ಇದಕ್ಕೆ ಕಾರಣ. ಈ ಬಡ್ಡಿಯು ತೆರಿಗೆಗೆ ಒಳಪಟ್ಟಿದೆ ಮತ್ತು ಇದನ್ನು ಐಟಿಆರ್‌ನಲ್ಲಿ ದಾಖಲಿಸಬೇಕಾಗುತ್ತದೆ ಮಾಡಬೇಕು.

ಆದಾಯ ತೆರಿಗೆ ರಿಟರ್ನ್ -1 ಮತ್ತು ಆದಾಯ ತೆರಿಗೆ ರಿಟರ್ನ್ -4 ಅನ್ನು ಸಲ್ಲಿಸಲು ಆದಾಯ ತೆರಿಗೆ ಇಲಾಖೆಯು ಹೊಸ ಎಕ್ಸೆಲ್ ಆಧಾರಿತ ಆಫ್‌ಲೈನ್ ಉಪಯುಕ್ತತೆಯನ್ನು ಪರಿಚಯಿಸಿತು. ಈ ಉಪಯುಕ್ತತೆಯ ಅಡಿಯಲ್ಲಿ, ತೆರಿಗೆದಾರರು ಜೆಎಸ್‌ಒಎನ್‌ ಫೈಲ್ ಅನ್ನು ರಚಿಸಿ, ಅದನ್ನು ಇ-ಫೈಲಿಂಗ್ ಪೋರ್ಟಲ್‌ಗೆ ಅಪ್‌ಲೋಡ್ ಮಾಡುವ ಮೂಲಕ ತಮ್ಮ ಆದಾಯವನ್ನು ಮೌಲ್ಯೀಕರಿಸಲು ಸಾಧ್ಯವಾಗುತ್ತದೆ.

ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.