Jalgaon Train Accident: ಬೆಂಕಿ ವದಂತಿ, ಪುಷ್ಪಕ್ ರೈಲಿನಿಂದ ಜಿಗಿದ ಪ್ರಯಾಣಿಕರು; ಕರ್ನಾಟಕ ಎಕ್ಸ್‌ಪ್ರೆಸ್‌ನಡಿಗೆ ಸಿಲುಕಿ ಹಲವು ಸಾವು
Jalgaon train accident: ಬೆಂಕಿ ವದಂತಿಗೆ ಹೆದರಿ ಚಲಿಸುತ್ತಿದ್ದ ರೈಲಿನಿಂದ ಜಿಗಿದ ಪ್ರಯಾಣಿಕರು ಎದುರು ದಿಕ್ಕಿನಿಂದ ಬರುತ್ತಿದ್ದ ಮತ್ತೊಂದು ರೈಲಿಗೆ ಸಿಲುಕಿ ಸಾವನ್ನಪ್ಪಿರುವ ದಾರುಣ ಘಟನೆ ಮಹಾರಾಷ್ಡ್ರದ ಜಲಗಾಂವ್ ಜಿಲ್ಲೆಯಲ್ಲಿ ಬುಧವಾರ(ಜ 23) ಸಂಭವಿಸಿದೆ.

Jalgaon train accident: ಬೆಂಕಿ ವದಂತಿಗೆ ಹೆದರಿ ಚಲಿಸುತ್ತಿದ್ದ ರೈಲಿನಿಂದ ಜಿಗಿದ ಪ್ರಯಾಣಿಕರು ಎದುರು ದಿಕ್ಕಿನಿಂದ ಬರುತ್ತಿದ್ದ ಮತ್ತೊಂದು ರೈಲಿಗೆ ಸಿಲುಕಿ ಸಾವನ್ನಪ್ಪಿರುವ ದಾರುಣ ಘಟನೆ ಮಹಾರಾಷ್ಡ್ರದ ಜಲಗಾಂವ್ ಜಿಲ್ಲೆಯಲ್ಲಿ ಬುಧವಾರ (ಜ 23) ಸಂಭವಿಸಿದೆ. ಲಖನೌ ನಗರದಿಂದ ಮುಂಬೈಗೆ ಬರುತ್ತಿದ್ದ ಲಖನೌ- ಮುಂಬೈ ಪುಷ್ಪಕ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ವದಂತಿಯಿಂದ ಪ್ರಯಾಣಿಕರು ಭಯಭೀತರಾಗಿದ್ದರು. ಚಲಿಸುತ್ತಿದ್ದ ಪುಷ್ಪಕ್ ಎಕ್ಸ್‌ಪ್ರೆಸ್ ರೈಲಿನಿಂದ ಸುಮಾರು 35-40 ಪ್ರಯಾಣಿಕರು ಹೊರಗೆ ಜಿಗಿದಿದ್ದಾರೆ. ಆ ಸಮಯದಲ್ಲಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕರ್ನಾಟಕ ಎಕ್ಸ್‌ಪ್ರೆಸ್ ಪ್ರಯಾಣಿಕರ ಮೇಲೆ ಹರಿಯಿತು. ದುರ್ಘಟನೆಯಲ್ಲಿ ಸ್ಥಳದಲ್ಲಿಯೇ 7 ರಿಂದ 8 ಪ್ರಯಾಣಿಕರು ಮೃತಪಟ್ಟಿದ್ದಾರೆ. ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಪಚೋರಾ ತಾಲ್ಲೂಕಿನ ಪಾರ್ಥಡೆ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಕರ್ನಾಟಕ ಎಕ್ಸ್‌ಪ್ರೆಸ್ ರೈಲು ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿತ್ತು.
ಬುಧವಾರ ಸಂಜೆ 4.19 ಗಂಟೆಗೆ ಈ ದುರ್ಘಟನೆ ನಡೆದಿದೆ. ಚಕ್ರದಲ್ಲಿ ಹೊಗೆ ನೋಡಿದ ಒಬ್ಬ ಪ್ರಯಾಣಿಕ ಭಯದಿಂದ ರೈಲಿನಿಂದ ಜಿಗಿದಿದ್ದಾನೆ. ಈತನ ಭಯ ನೋಡಿ ಇತರೆ ಕೆಲವು ಪ್ರಯಾಣಿಕರು ಜಿಗಿದ್ದಾರೆ.
ಘಟನೆಯ ವಿವರ
ಪುಷ್ಪಕ್ ಎಕ್ಸ್‌ಪ್ರೆಸ್ ರೈಲಿನ ಚಕ್ರಗಳಿಂದ ಹೊಗೆ ಕಾಣಿಸಿಕೊಂಡ ಬಳಿಕ ಬೆಂಕಿ ಆಕಸ್ಮಿಕವಾಗುವ ಸಾಧ್ಯತೆ ಇದೆ ಎಂಬ ಭಯದಿಂದ ಕೆಲವು ಪ್ರಯಾಣಿಕರು ಆತುರದಿಂದ ರೈಲಿನಿಂದ ಹಾರಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ಘಟನೆಯ ಮಾಹಿತಿ ನೀಡಿದ್ದಾರೆ. "ಅದೇ ಕ್ಷಣದಲ್ಲಿ, ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದ್ದ ಕರ್ನಾಟಕ ಎಕ್ಸ್‌ಪ್ರೆಸ್ ರೈಲು ಹಳಿಗಳ ಮೇಲೆ ಹಾರಿದ ಪ್ರಯಾಣಿಕರಿಗೆ ಡಿಕ್ಕಿ ಹೊಡೆದಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಪುಷ್ಪಕ್ ಎಕ್ಸ್‌ಪ್ರೆಸ್‌ನ ಕೆಲವು ಪ್ರಯಾಣಿಕರು ಕೆಳಗಿಳಿದರು. ಆ ಸಮಯದಲ್ಲಿ ಎದುರಿನಿಂದ ಬರುತ್ತಿದ್ದ ಕರ್ನಾಟಕ ಎಕ್ಸ್‌ಪ್ರೆಸ್ ಅವರಿಗೆ ಡಿಕ್ಕಿ ಹೊಡೆಯಿತು" ಎಂದು ಸೆಂಟ್ರಲ್ ರೈಲ್ವೆಯ ಮುಖ್ಯ ವಕ್ತಾರ ಸ್ವಪ್ನಿಲ್ ನೀಲಾ ಹೇಳಿದರು. ಪುಷ್ಪಕ್ ರೈಲು ಅಪಘಾತದ ಬಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳಿಗೆ ತಕ್ಷಣ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಆದೇಶಿಸಿದ್ದಾರೆ.
