Jammu Kashmir News: ಬಾರಮುಲ್ಲಾದಲ್ಲಿ ಲಷ್ಕರ್ ಉಗ್ರನ ಹತ್ಯೆ, 24 ಗಂಟೆಗಳಲ್ಲಿ ಮೂವರು ಉಗ್ರರ ಎನ್‌ಕೌಂಟರ್
Jammu Kashmir News: ಕಳೆದ ಐದು ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಐದು ಉಗ್ರರನ್ನು ಹೊಡೆದು ಉರುಳಿಸಲಾಗಿದೆ. ಕಳೆದ 48 ಗಂಟೆಗಳಲ್ಲಿ ಮೂವರು ಉಗ್ರರನ್ನು ಎನ್‌ಕೌಂಟರ್ ಮಾಡಲಾಗಿದೆ.
ಜಮ್ಮು ಮತ್ತು ಕಾಶ್ಮೀರ: ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಕರ್ಹಾಮಾ ಗ್ರಾಮದಲ್ಲಿ ಶನಿವಾರ ನಡೆದ ಎನ್‌ಕೌಂಟರ್‌ನಲ್ಲಿ ಕುಲ್ಗಾಮ್‌ನ ಲಷ್ಕರ್-ಎ-ತೊಯ್ಬಾ ಉಗ್ರನೊಬ್ಬನನ್ನು ಹತ್ಯೆ ಮಾಡಲಾಗಿದೆ. ಬಾರಾಮುಲ್ಲಾದ ಕುಂಜರ್ ಪ್ರದೇಶದ ಕರ್ಹಾಮಾದಲ್ಲಿಉಗ್ರರು ಇರುವ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸ್, ಸೇನೆ (2ನೇ ಆರ್‌ಆರ್) ಮತ್ತು ಸಿಆರ್‌ಪಿಎಫ್ (176 ಬಿಎನ್) ಜಂಟಿ ಕಾರ್ಯಾಚರಣೆ ನಡೆಸಿ ಉಗ್ರರ ಶೋಧ ನಡೆಸಲಾಯಿತು.
“ಶೋಧ ಕಾರ್ಯಾಚರಣೆಯ ಸಮಯದಲ್ಲಿ, ಪೊಲೀಸ್, ಮಿಲಿಟರಿ ತಂಡವು ಶಂಕಿತ ಸ್ಥಳದ ಕಡೆಗೆ ಆಗಮಿಸುತ್ತಿದ್ದಂತೆ ಅಡಗಿಕೊಂಡಿದ್ದ ಭಯೋತ್ಪಾದಕ ಯದ್ವಾತದ್ವಾ ಗುಂಡು ಹಾರಿಸಲು ಆರಂಭಿಸಿದನು. ಪ್ರತಿದಾಳಿಯಾಗಿ ಜಂಟಿ ಕಾರ್ಯಾಚರಣೆ ಪಡೆಯು ಎನ್‌ಕೌಂಟರ್ ನಡೆಸಿದೆ. ಈ ಸಮಯದಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಎಲ್‌ಇಟಿಯೊಂದಿಗೆ ಸಂಬಂಧ ಹೊಂದಿದ್ದ ಸ್ಥಳೀಯ ಉಗ್ರನನ್ನು ಕೊಲ್ಲಲಾಯಿತು" ಎಂದು ಕಾರ್ಯಾಚರಣೆ ಮುಗಿದ ನಂತರ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
“ಎನ್‌ಕೌಂಟರ್ ನಡೆದ ಸ್ಥಳದಿಂದ ಎಕೆ-47 ರೈಫಲ್ ಸೇರಿದಂತೆ ಸಾಮಗ್ರಿಗಳು, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಹತ್ಯೆಗೀಡಾದ ಭಯೋತ್ಪಾದಕನು ಶ್ರೀನಗರ ಗುಲ್ಮಾರ್ಗ್ ರಸ್ತೆಯಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಯೋಜಿಸಿದ್ದನು. ಉಗ್ರನನ್ನು ಯರಹೋಲ್ ಬಾಬಾಪೊರ ಕುಲ್ಗಾಮ್‌ನ ಅಬಿದ್ ವಾನಿ ಎಂದು ಗುರುತಿಸಲಾಗಿದೆ" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜಿ20 ಸಭೆಯ ಭದ್ರತೆಯ ದೃಷ್ಟಿಯಿಂದ ಕಳೆದ 48 ಗಂಟೆಗಳಲ್ಲಿ ಮೂವರು ಉಗ್ರಗಾಮಿಗಳನ್ನು ಹತ್ಯೆ ಮಾಡಲಾಗಿದೆ. ಈ ಪ್ರದೇಶದಲ್ಲಿ ಉಗ್ರಗಾಮಿಗಳ ಉಪಸ್ಥಿತಿಯ ಬಗ್ಗೆ ನಿರ್ದಿಷ್ಟ ಮಾಹಿತಿಯ ಮೇರೆಗೆ ಈ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ" ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಬಾರಾಮುಲ್ಲಾ ಅಮೋದ್ ನಾಗ್‌ಪೋರ್ ಮಾಹಿತಿ ನೀಡಿದ್ದಾರೆ.
ಗುರುವಾರ ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಕ್ರೀರಿ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ದಕ್ಷಿಣ ಕಾಶ್ಮೀರದ ಇಬ್ಬರು ಉಗ್ರರು ಹತರಾಗಿದ್ದಾರೆ. ಹತ್ಯೆಯಾದ ಇಬ್ಬರೂ ಉಗ್ರರು ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಗೆ ಸೇರಿದ ಸ್ಥಳೀಯರು. ಅವರು ಮಾರ್ಚ್ ತಿಂಗಳಲ್ಲಿ ಉಗ್ರಗಾಮಿ ಸಂಘಟನೆಗಳಿಗೆ ಸೇರಿದ್ದರು.
ಬುಧವಾರ ಮಚಿಲ್ ಸೆಕ್ಟರ್‌ನ ಗಡಿ ಜಿಲ್ಲೆಯ ಕುಪ್ವಾರದ ಗಡಿ ನಿಯಂತ್ರಣ ರೇಖೆ ಬಳಿ ಇಬ್ಬರು ನುಸುಳುಕೋರರನ್ನು ಹೊಡೆದುರುಳಿಸಲಾಗಿದೆ. ಮೇ 22 ರಿಂದ 24 ರ ನಡುವೆ ನಿಗದಿಯಾಗಿರುವ ಜಿ 20 ಸಭೆಗಳಿಗೆ ಮುಂಚಿತವಾಗಿ ಕಾಶ್ಮೀರದಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದೆ.