Jaya Parvati Vruta: ಆಷಾಢ ತ್ರಯೋದಶಿಯ ವಿಜಯ ವ್ರತ, ಏನಿದರ ವಿಶೇಷತೆ?
ಇಂದು ಆಷಾಢ ತ್ರಯೋದಶಿ. ಇದು ತಾಯಿ ಪಾರ್ವತಿಗೆ ವಿಶೇಷವಾದ ದಿನ. ಈ ದಿನ ಮಾಡುವ ಉಪವಾಸ ವ್ರತ ಅದೃಷ್ಟಕ್ಕೆ ಮತ್ತು ಸಂತಾನ ಪ್ರಾಪ್ತಿಗೆ ನೆರವಾಗುತ್ತದೆ. ತಾಯಿ ಪಾರ್ವತಿಯನ್ನು ಸಂತುಷ್ಟಗೊಳಿಸಲು ಈ ದಿನ ಅತ್ಯಂತ ಪ್ರಶಸ್ತವಾದುದು ಎನ್ನುತ್ತಾರೆ ಪ್ರಾಜ್ಞರು.
ಬದುಕಿನಲ್ಲಿ ಒಂದಿಲ್ಲೊಂದು ಸಂಕಷ್ಟ ಎಲ್ಲರಿಗೂ ಇರುವಂಥದ್ದೇ. ಆದರೂ, ಇವುಗಳಿಂದ ನಿವಾರಣೆ ಕೋರಿ, ಸಂಕಷ್ಟ ಪರಿಹಾರ ಕೋರಿ ದೇವರ ಮೊರೆ ಹೋಗುವಂಥದ್ದು ಆಸ್ತಿಕರು ಪಾಲಿಸಿಕೊಂಡು ಬಂದಿರುವ ರೂಢಿ. ಆಷಾಢ ಬಂತೆಂದರೆ ದೇವರ ಸ್ಮರಣೆ ಹೆಚ್ಚು. ಫಲವೂ ಅಂತೆಯೇ ಇರುತ್ತದೆ.
ಆಷಾಢ ಮಾಸದ ಶುಲ್ಕ ಪಕ್ಷದ ತ್ರಯೋದಶಿ ಇಂದು. ಇದು ತಾಯಿ ಪಾರ್ವತಿಗೆ ಮೀಸಲಾಗಿರುವ ವಿಶೇಷ ದಿನ. ಈ ದಿನ ಜಯ ಪಾರ್ವತಿ ವ್ರತ ಆಚರಣೆಗೆ ವಿಶೇಷ ಪ್ರಾಶಸ್ತ್ಯವಿದೆ. ಈ ದಿನ ಆಸ್ತಿಕ ಜನ ಫಲಪ್ರಾಪ್ತಿಗಾಗಿ ಉಪವಾಸವನ್ನು ಆಚರಿಸುತ್ತಾರೆ. ಈ ವ್ರತಾಚರಣೆಗೆ ವಿಜಯ ವ್ರತ ಎಂದೂ ಕರೆಯುತ್ತಾರೆ. ಅದೃಷ್ಟದ ವರವನ್ನು ನೀಡುವ ಈ ಉಪವಾಸವು ಸತತ ಐದು ದಿನಗಳ ಕಾಲ ಮುಂದುವರಿಯುತ್ತದೆ.
ಇದು ಮಹಿಳೆಯರು ಆಚರಿಸುವ ಹಬ್ಬ. ಅನೇಕ ಫಲಗಳ ಅಪೇಕ್ಷೆಯೊಂದಿಗೆ ಅದನ್ನು ಈಡೇರಿಸುವಂತೆ ಪರಮೇಶ್ವರ ಸಹಿತನಾದ ತಾಯಿ ಪಾರ್ವತಿಯನ್ನು ಬೇಡಿಕೊಳ್ಳುವ ಹಬ್ಬ ಇದು. ಉತ್ತರ ಭಾರತದಲ್ಲಿ ಈ ಹಬ್ಬವನ್ನು ಹೆಚ್ಚಾಗಿ ಆಚರಿಸುತ್ತಾರೆ. ದಕ್ಷಿಣದಲ್ಲೂ ಕೆಲವರು ಈ ಉಪವಾಸ ಆಚರಣೆ ಮಾಡುತ್ತಾರೆ.
ಈ ಉಪವಾಸವು ಗಂಗೌರ್, ಹರತಾಳಿಕ, ಮಂಗಳ ಗೌರಿ ಮತ್ತು ಸೌಭಾಗ್ಯ ಸುಂದರಿ ಉಪವಾಸಗಳನ್ನು ಹೋಲುತ್ತದೆ. ಈ ಉಪವಾಸದಲ್ಲಿ ಮಹಿಳೆಯರು ಪಾರ್ವತಿ ದೇವಿ ಮತ್ತು ಭೋಲೆನಾಥ ದೇವರನ್ನು ಪೂಜಿಸುತ್ತಾರೆ. ಹುಡುಗಿಯರು ಸೂಕ್ತ ವರನನ್ನು ಪಡೆಯಲು ಈ ವ್ರತವನ್ನು ಆಚರಿಸುತ್ತಾರೆ. ಈ ವ್ರತವನ್ನು ಆಚರಿಸುವುದರಿಂದ ಸಂತಾನ ಸುಖ ಪ್ರಾಪ್ತಿಯಾಗುತ್ತದೆ.
ವ್ರತದ ದಿವಸ ಬ್ರಹ್ಮ ಮುಹೂರ್ತದಲ್ಲಿ ಮುಂಜಾನೆ ಎದ್ದು ಶುಭ್ರವಾದ ಬಟ್ಟೆಯನ್ನು ಧರಿಸಿ. ಮನೆಯ ಪೂಜಾ ಸ್ಥಳವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದ ನಂತರ, ಭಗವಾನ್ ಭೋಲೆನಾಥ ಮತ್ತು ತಾಯಿ ಪಾರ್ವತಿಯ ವಿಗ್ರಹವನ್ನು ಸ್ಥಾಪಿಸಬೇಕು. ಶಿವ ಮತ್ತು ಪಾರ್ವತಿ ದೇವಿಗೆ ಅರಶಿಣ, ಕುಂಕುಮ, ಶ್ರೀಗಂಧ ಮತ್ತು ಹೂವುಗಳನ್ನು ಅರ್ಪಿಸಬೇಕು. ತೆಂಗಿನಕಾಯಿ ಮತ್ತು ದಾಳಿಂಬೆಯನ್ನು ಅರ್ಪಿಸಬೇಕು. ಓಂ ನಮಃ ಶಿವಾಯ ಮಂತ್ರವನ್ನು ಪಠಿಸುವಾಗ ಭಗವಾನ್ ಶಿವ ಮತ್ತು ಮಾ ಪಾರ್ವತಿಯನ್ನು ಸ್ಮರಿಸುವುದು ಇಲ್ಲಿ ವಾಡಿಕೆ.
ಉಪವಾಸದ ಕೊನೆಯಲ್ಲಿ ಬ್ರಾಹ್ಮಣನಿಗೆ ಅನ್ನದಾನ ಮಾಡಬೇಕು. ಅದೇ ರೀತಿ ವಸ್ತ್ರದಾನ ಕೂಡ ಮಾಡಬೇಕು. ಈ ಉಪವಾಸದ ಸಮಯದಲ್ಲಿ ಉಪ್ಪು ಅಥವಾ ಉಪ್ಪು ಬೆರೆಸಿದ ಆಹಾರವನ್ನು ಸೇವಿಸಬಾರದು. ಈ ಉಪವಾಸದ ಸಮಯದಲ್ಲಿ ಧಾನ್ಯಗಳು ಮತ್ತು ತರಕಾರಿಗಳನ್ನು ಸಹ ಸೇವಿಸಬಾರದು. ಉಪವಾಸದ ಸಮಯದಲ್ಲಿ ಹಣ್ಣುಗಳು, ಮೊಸರು, ಹಾಲು, ರಸ, ಹಾಲಿನಿಂದ ಮಾಡಿದ ಸಿಹಿತಿಂಡಿಗಳನ್ನು ಮಾತ್ರವೇ ಸೇವಿಸಬಹುದು.
ವಿವಾಹಿತ ಮಹಿಳೆಯರು ತಮ್ಮ ಇಚ್ಛೆಯಂತೆ 5 ರಿಂದ 20 ವರ್ಷಗಳವರೆಗೆ ಈ ಉಪವಾಸವನ್ನು ಆಚರಿಸುತ್ತಾರೆ. ಉಪವಾಸ ಮುಗಿಯುವ ಮುನ್ನ ಒಂದು ರಾತ್ರಿ ಭಜನೆ, ಕೀರ್ತನೆಗಳನ್ನು ರಾತ್ರಿಯಿಡೀ ಮಾಡಲಾಗುತ್ತದೆ. ಉಪವಾಸದ ಕೊನೆಯ ದಿನದಂದು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಉಪ್ಪು, ಹಿಟ್ಟಿನಿಂದ ಮಾಡಿದ ರೊಟ್ಟಿ, ಪೂರಿ ಮತ್ತು ತರಕಾರಿಗಳನ್ನು ತಿನ್ನುವ ಮೂಲಕ ಉಪವಾಸವನ್ನು ಮುರಿಯಲಾಗುತ್ತದೆ.
ಗುಜರಾತಿನಲ್ಲಿ ಈ ಉಪವಾಸವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇನ್ನು ಉಳಿದಂತೆ ಗುಜರಾತಿಗಳು ದೇಶದ ವಿವಿಧೆಡೆ ನೆಲೆಸಿರುವ ಕಾರಣ ಅಲ್ಲೆಲ್ಲ ಅವರು ಈ ಆಚರಣೆಯನ್ನು ಮುಂದುವರಿಸಿದ್ದಾರೆ.
ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಂಪೂರ್ಣ ನಿಜ ಮತ್ತು ನಿಖರ ಎಂದು ನಾವು ಹೇಳಿಕೊಳ್ಳುವುದಿಲ್ಲ. ಇವುಗಳನ್ನು ಅನುಷ್ಠಾನಕ್ಕೆ ತರುವ ಮುನ್ನ ಸಂಬಂಧಪಟ್ಟ ಕ್ಷೇತ್ರದ ತಜ್ಞರ ಅಂದರೆ ಪುರೋಹಿತರ, ಪ್ರಾಜ್ಞರ ಸಲಹೆಯನ್ನು ಖಚಿತವಾಗಿ ಪಡೆದುಕೊಳ್ಳಿ. ಫಲ ಹೆಚ್ಚಿರುತ್ತದೆ.
ವಿಭಾಗ