ಕನ್ನಡ ಸುದ್ದಿ  /  Nation And-world  /  Jharkhand Gumla Dc Praised By Pm Modi For Promoted Ragi Crop Reducing Malnutrition Of Tribal People Millets Crop Rmy

Jharkhand Ragi: ಬುಡಕಟ್ಟು ಜನರ ಅಪೌಷ್ಟಿಕತೆ ನಿವಾರಣೆಗೆ ರಾಗಿ ಕ್ರಾಂತಿ; ಜಾರ್ಖಂಡ್‌ನ ಗುಮ್ಲಾ ಡಿಸಿ ಕಾರ್ಯಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ

ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯ ಡಿಸಿ ಕ್ಷಯ ರೋಗ ಮುಕ್ತ ಹಾಗೂ ರಾಗಿ ಕೃಷಿಯ ಮೂಲಕ ಅಪೌಷ್ಟಿಕತೆ ನಿವಾರಣೆಗೆ ಶ್ರಮಿಸುತ್ತಿದ್ದಾರೆ. ಇವರ ಈ ಸಾಧನೆಯನ್ನು ಗುರುತಿಸಿ ಪ್ರಧಾನ ಮಂತ್ರಿ ಎಕ್ಸೆಲೆನ್ಸ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಜಾರ್ಖಂಡ್ ನ ಗುಮ್ಲಾ ಜಿಲ್ಲಾಧಿಕಾರಿ ಸುಶಾಂತ್ ಗೌರವ್ ಅವರ ಸಾರ್ವಜನಿಕ ಆಡಳಿತದಲ್ಲಿ ಶ್ರೇಷ್ಠತೆಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಶಸ್ತಿ ನೀಡಿ ಗೌರವಿಸಿದರು.
ಜಾರ್ಖಂಡ್ ನ ಗುಮ್ಲಾ ಜಿಲ್ಲಾಧಿಕಾರಿ ಸುಶಾಂತ್ ಗೌರವ್ ಅವರ ಸಾರ್ವಜನಿಕ ಆಡಳಿತದಲ್ಲಿ ಶ್ರೇಷ್ಠತೆಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಶಸ್ತಿ ನೀಡಿ ಗೌರವಿಸಿದರು.

ಗುಮ್ಲಾ(ಜಾರ್ಖಂಡ್): ಅಧಿಕಾರಿಗಳು ಮನಸು ಮಾಡಿದರೆ ಅಸಾಧ್ಯವಾದುದನ್ನು ಸಾಧಿಸಿಬಹುದು ಎಂಬುದನ್ನು ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯ ಜಿಲ್ಲಾಧಿಕಾರಿ ಸಾಬೀತು ಮಾಡಿದ್ದಾರೆ. ಇವರ ಸಾಧನೆಯು ಪ್ರಧಾನಿ ಮೋದಿ ಅವರ ಮೆಚ್ಚುಗೆಗೆ ಪಾತ್ರವಾಗಿದ್ದು, ಇದೀಗ ಇಡೀ ದೇಶ ಕೊಂಡಾಡುತ್ತಿದೆ. ಬುಡಕಟ್ಟು ಜನರ ಪ್ರಾಬಲ್ಯ ಹಾಗೂ ನಕ್ಸಲ್ ಹಾವಳಿಯಿಂದ ಕಂಗೆಟ್ಟಿದ್ದ ಗುಮ್ಲಾ ಜಿಲ್ಲೆಯಲ್ಲಿ ತೀವ್ರ ಬಡತನವಿದೆ. ಜೊತೆಗೆ ಜನರಲ್ಲಿ ಹೆಚ್ಚಾಗಿ ರಕ್ತಹೀನತೆ, ಕ್ಷಯರೋಗ, ಅಪೌಷ್ಟಿಕತೆ ಸೇರಿದಂತೆ ಹಲವು ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದನ್ನು ಗಮನಿಸಿದ ಜಿಲ್ಲಾಧಿಕಾರಿ ಸುಶಾಂತ್ ಗೌರವ್ ಅವರು ‘ರಾಗಿ ಮಿಷನ್’ ಎಂಬ ಯೋಜನೆ ಮೂಲಕ ರಾಗಿ ಕ್ರಾಂತಿಯನ್ನೇ ಮಾಡಿದ್ದಾರೆ.

ಜಿಲ್ಲಾಧಿಕಾರಿಯ ಪರಿಶ್ರಮದಿಂದ ಜಿಲ್ಲೆಯಲ್ಲಿ ಇದೀಗ ಹೆಚ್ಚಿನ ಪ್ರಮಾಣದಲ್ಲಿ ರಾಗಿ ಬೆಳೆಯಲಾಗುತ್ತಿದೆ. ರಾಗಿಯಿಂದ ತಯಾರಿಸಿದ ಪೌಷ್ಟಿಕ ಆಹಾರ ಪದಾರ್ಥಗಳಿಂದ ಮಹಿಳೆಯರು ಹಾಗೂ ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ಕಡಿಮೆ ಮಾಡಲು ಸಹಾಯವಾಗಿದೆ. ಅತಿ ಕಡಿಮೆ ವೆಚ್ಚದಲ್ಲಿ ಇಲ್ಲಿನ ಜನರ ಆರೋಗ್ಯ ಸುಧಾರಿಸಲು ಗೌರವ್ ಅವರ ಈ ಯೋಜನೆ ಯಶಸ್ವಿಯಾಗಿದ್ದು, ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

ಇದೊಂದೇ ಯೋಜನೆಗೆ ಸೀಮಿತವಾಗದ ಡಿಸಿ ಸುಶಾಂತ್ ಅವರು, ರಕ್ತಹೀನತೆ ನಿವಾರಣೆ, ಟಿಬಿ (ಕ್ಷಯ ರೋಗ) ಮುಕ್ತ ಜಿಲ್ಲೆ, ಅಂಗವಿಕಲರ ಗುರುತಿಸುವಿಕೆ ಮತ್ತು ಅಂಗವಿಕಲರ ಕಲ್ಯಾಣ, ಗ್ರಂಥಾಲಯ ಕ್ರಾಂತಿ, ಕ್ರೀಡಾ ಬ್ಯಾಂಕ್, ಮೂಲಸೌಕರ್ಯ ಅಭಿವೃದ್ಧಿ, ಶಿಕ್ಷಣ ಕ್ಷೇತ್ರ, ಬಿದಿರಿನ ತರಬೇತಿ ಹಾಗೂ ಕುಶಲಕರ್ಮಿಗಳಿಗೆ ಉತ್ತೇಜನ ಸೇರಿದಂತೆ ಬಹು ಆಯಾಮದ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಗುಮ್ಲಾದಲ್ಲಿ ನಡೆದ ಯೋಜನೆಗಳ ಪೈಕಿ ರಾಗಿ ಮಿಷನ್‌ ಮಾತ್ರ ಹೊಸ ಉತ್ತುಂಗಕ್ಕೆ ಕೊಂಡೊಯ್ದಿದೆ.

ತಾನಾ ಭಗತ್ ಸಮುದಾಯ ಹೆಚ್ಚಿರುವ ಪ್ರದೇಶದ ಪಂಚಾಯತ್‌ಗಳಲ್ಲಿ ಕ್ರೀಡೆಗಳಿಗೆ ಉತ್ತೇಜನ, ಪಂಚಾಯತ್‌ಗಳ ಡಿಜಿಟಲೀಕರಣ, ವಿವಿಧೋದ್ದೇಶ ಕಾರ್ಯಗಳಲ್ಲಿ ಮಹಿಳಾ ಸ್ವಸಹಾಯ ಗುಂಪುಗಳನ್ನು ತೊಡಗಿಸಿಕೊಳ್ಳುವುದು, ಮೀನುಗಾರಿಕೆಗೆ ಹೊಸ ಆಯಾಮಗಳನ್ನು ನೀಡುವುದು, ಕೃಷಿ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವುದು ಸೇರಿದಂತೆ ಹಲವು ಉತ್ತೇಜನ ಕ್ರಮಗಳನ್ನು ಕೈಗೊಂಡಿದ್ದಾರೆ.

ಜಾರ್ಖಂಡ್ ನ ಗುಮ್ಲಾ ಜಿಲ್ಲಾಧಿಕಾರಿ ಸುಶಾಂತ್ ಗೌರವ್ ಅವರ ಈ ಸಾಧನೆಯನ್ನು ಗುರುತಿಸಿದ ಕೇಂದ್ರ ಸರ್ಕಾರ ಅವರಿಗೆ ಸಾರ್ವಜನಿಕ ಆಡಳಿತದಲ್ಲಿ ಶ್ರೇಷ್ಠತೆಗಾಗಿ ಪ್ರಧಾನ ಮಂತ್ರಿ ಪ್ರಶಸ್ತಿಯನ್ನು ಘೋಷಿಸಿದ್ದು, ಏಪ್ರಿಲ್ 21 (ಶುಕ್ರವಾರ) ರಂದು ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸುಶಾಂತ್ ಗೌರವ್ ಅವರಿಗೆ ಪ್ರಧಾನಮಂತ್ರಿ ಎಕ್ಸೆಲೆನ್ಸಿ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ದೇಶದ ಹಿರಿಯ ಆಡಳಿತ ಅಧಿಕಾರಿಗಳು ಹಾಗೂ ಹಲವು ರಾಜ್ಯಗಳ ಆಹ್ವಾನಿತ ಅಧಿಕಾರಿಗಳು ವಿಜ್ಞಾನ ಭವನದ ಸಭಾಂಗಣದಲ್ಲಿ ಉಪಸ್ಥಿತರಿದ್ದರು. ಕಳೆದ ವಾರವಷ್ಟೇ ಗುಮ್ಲಾ ಜಿಲ್ಲೆಯನ್ನು ಪ್ರಧಾನಮಂತ್ರಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು ಎಂದು ಕೇಂದ್ರ ಸಿಬ್ಬಂದಿ ಸಚಿವಾಲಯವು ಸಾರ್ವಜನಿಕವಾಗಿ ಘೋಷಣೆ ಮಾಡಿತ್ತು. ತಮ್ಮ ಜಿಲ್ಲೆಗೆ ಹಾಗೂ ಜಿಲ್ಲಾಧಿಕಾರಿಗೆ ಪ್ರಧಾನ ಮಂತ್ರಿ ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ ಗುಮ್ಲಾ ಜಿಲ್ಲಾಡಳಿತ ಹಾಗೂ ಅಲ್ಲಿನ ನಿವಾಸಿಗಳು ಸಂಭ್ರಮಿಸಿದ್ದಾರೆ. ಜಾರ್ಖಂಡ್‌ನ ಜಿಲ್ಲೆಯೊಂದು ಸಾರ್ವಜನಿಕ ಆಡಳಿತದಲ್ಲಿ ಶ್ರೇಷ್ಠತೆಗಾಗಿ ಪ್ರಧಾನ ಮಂತ್ರಿ ಪ್ರಶಸ್ತಿಗೆ ಆಯ್ಕೆಯಾಗಿರುವುದು ಇದೇ ಮೊದಲು ಎಂಬುದು ವಿಶೇಷವಾಗಿದೆ.

ಗುಮ್ಲಾದಿಂದ ನೂರಾರು ಜನರು ಈ ಪ್ರಶಸ್ತಿ ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷಿಸಿ ಖುಷಿಪಟ್ಟಿದ್ದಾರೆ. ಬುಡಕಟ್ಟು ಜನಸಂಖ್ಯೆಯ ಪ್ರಾಬಲ್ಯದ ಹಾಗೂ ಈ ಹಿಂದೆ ನಕ್ಸಲರಿಂದ ತತ್ತರಿಸಿದ್ದ ಗುಮ್ಲಾ ಜಿಲ್ಲೆಯಲ್ಲಿ ಹಿಂದೆಂದೂ ಕಾಣದಂತಹ ಅಭಿವೃದ್ಧಿಯಾಗುತ್ತಿದ್ದು, ಜನರಲ್ಲಿ ಹೊಸ ಚೈತನ್ಯ ಮೂಡಿದೆ. ಇನ್ನು ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿರುವ ಜಿಲ್ಲಾಧಿಕಾರಿ ಸುಶಾಂತ್ ಗೌರವ್, ಜಿಲ್ಲಾಡಳಿತ ತಂಡಗಳ ನಿರಂತರವಾಗಿ ಕಾರ್ಯನಿರ್ವಹಣೆ ಹಾಗೂ ಜನರ ಸಹಕಾರದಿಂದ ಬದಲಾವಣೆ ತರಲು ಸಾಧ್ಯವಾಗಿದೆ. ಈ ಪ್ರಶಸ್ತಿಯನ್ನು ಜಿಲ್ಲೆಯ ಜನರಿಗೆ ಅರ್ಪಿಸುತ್ತೇನೆ ಎಂದಿದ್ದಾರೆ.

ಜಿಲ್ಲೆಯ ಪದಾಧಿಕಾರಿಗಳಿಗೆ ಮೊಬೈಲ್ ಸಂದೇಶ ಮೂಲಕ ಅಭಿನಂದಿಸಿದ ಗೌರವ್, ಜಿಲ್ಲೆಯ ಎಲ್ಲ ಪದಾಧಿಕಾರಿಗಳು ಹಾಗೂ ನೌಕರರು ಒಂದಾಗಿ ಇಂತಹ ಮತ್ತಷ್ಟು ಯಶಸ್ಸು ಪುನರಾವರ್ತಿಸಲಿ ಎಂದು ಹಾರೈಸಿದ್ದಾರೆ.

IPL_Entry_Point

ವಿಭಾಗ