ಜಾರ್ಖಂಡ್ ರೈಲು ಅಪಘಾತಕ್ಕಿದು ಕಾರಣ, ಹೌರಾ ಮುಂಬಯಿ ಮೇಲ್ ದುರಂತದಲ್ಲಿ ಗಮನ ಸೆಳೆದ 10 ಅಂಶಗಳು
Jharkhand Train Accident; ಜಾರ್ಖಂಡ್‌ನ ಸೆರೈಕೆಲಾ-ಖಾರ್ಸಾವಾನ್ ಜಿಲ್ಲೆಯ ಬಾರಾಬಾಂಬೊ ನಿಲ್ದಾಣದ ಬಳಿ ಹೌರಾ-ಮುಂಬೈ ಮೇಲ್ ರೈಲು ಮಂಗಳವಾರ ಅಪಘಾತಕ್ಕೀಡಾಗಿದೆ. ಜಾರ್ಖಂಡ್ ರೈಲು ಅಪಘಾತದಲ್ಲಿ ಹಳಿ ತಪ್ಪಿ ಬಿದ್ದಿದ್ದ ರೈಲಿಗೆ ಹೌರಾ ಮುಂಬಯಿ ಮೇಲ್ ಡಿಕ್ಕಿ ಹೊಡೆದ ಕಾರಣ 2 ಸಾವು ಸಂಭವಿಸಿದ್ದು. ಕನಿಷ್ಠ 20 ಜನರಿಗೆ ಗಾಯಗಳಾಗಿವೆ. 10 ಗಮನಸೆಳೆದ ಅಂಶಗಳಿವು.
ರಾಂಚಿ: ಹೌರಾ-ಮುಂಬೈ ಮೇಲ್ ರೈಲು ಮಂಗಳವಾರ ಜಾರ್ಖಂಡ್‌ನ ಸೆರೈಕೆಲಾ-ಖಾರ್ಸಾವಾನ್ ಜಿಲ್ಲೆಯ ಬಾರಾಬಾಂಬೊ ನಿಲ್ದಾಣದ ಬಳಿ ಹಳಿತಪ್ಪಿದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಪ್ರಯಾಣಿಕರು ಮೃತಪಟ್ಟಿದ್ದಾರೆ. ಕನಿಷ್ಠ 20 ಮಂದಿ ಗಾಯಗೊಂಡಿದ್ದಾರೆ. ಇದು ಜೂನ್ ತಿಂಗಳ ನಂತರ ಸಂಭವಿಸಿರುವ ಮೂರನೇ ರೈಲು ಅಪಘಾತ.
ಹೌರಾ-ಮುಂಬೈ ಪ್ಯಾಸೆಂಜರ್ ರೈಲಿನ 18 ಬೋಗಿಗಳು ಜಾರ್ಖಂಡ್‌ನ ಚರಧರ್‌ಪುರ ವಿಭಾಗದ ವ್ಯಾಪ್ತಿಯಲ್ಲಿ ಹಳಿತಪ್ಪಿದ ಪರಿಣಾಮ ಈ ಅಪಘಾತ ಸಂಭವಿಸಿದೆ. ಗೂಡ್ಸ್ ರೈಲು ಹಳಿತಪ್ಪಿತ್ತು. ಇದಕ್ಕೆ ಹೌರಾ-ಮುಂಬೈ ಮೇಲ್ ಡಿಕ್ಕಿ ಹೊಡೆದು ಈ ಘಟನೆ ನಡೆದಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡ ಎಲ್ಲ ಪ್ರಯಾಣಿಕರನ್ನು ಜಮ್ಶೆಡ್‌ಪುರದ ಟಾಟಾ ಮೇನ್ ಹಾಸ್ಪಿಟಲ್‌ಗೆ ರವಾನಿಸಲಾಗಿದೆ.
ಹಳಿತಪ್ಪಿದ ಗೂಡ್ಸ್ ರೈಲಿಗೆ ಹೌರಾ ಮುಂಬಯಿ ಮೇಲ್ ಡಿಕ್ಕಿ; ಗಮನಸೆಳೆದ 10 ಅಂಶಗಳು
1) ಹೌರಾ-ಮುಂಬೈ ಮೇಲ್ ಹಿಂದಿನಿಂದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ ಮತ್ತು ಅದರ ಸುಮಾರು ಒಂದು ಡಜನ್ ಬೋಗಿಗಳು ಹಳಿತಪ್ಪಿದವು. ಹೀಗಾಗಿ ಇಬ್ಬರು ಪ್ರಯಾಣಿಕರು ಮೃತಪಟ್ಟಿದ್ದಾರೆ. ಸುಮಾರು 15-20 ಪ್ರಯಾಣಿಕರು ಗಾಯಗೊಂಡಿದ್ದಾರೆ. 4-5 ಜನರಿಗೆ ಗಂಭೀರ ಗಾಯಗಳಾಗಿವೆ.
2) ಹೌರಾ-ಸಿಎಸ್‌ಎಂಟಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 12810) ಚಕ್ರಧರಪುರ ಬಳಿ ರಾಜ್‌ಖರ್ಸ್ವಾನ್ ವೆಸ್ಟ್ ಔಟರ್ ಮತ್ತು ಚಕ್ರಧರಪುರ ವಿಭಾಗದ ಬಾರಾಬಾಂಬೂ ನಡುವೆ ಮುಂಜಾನೆ 3:45 ರ ಸುಮಾರಿಗೆ ಹಳಿತಪ್ಪಿ ದುರಂತ ಸಂಭವಿಸಿದೆ.
3) ಅಪಘಾತಕ್ಕೀಡಾದ ಕೋಚ್ ಅನ್ನು ಗ್ಯಾಸ್ ಕಟ್ಟರ್‌ಗಳಿಂದ ಕತ್ತರಿಸಿದ ನಂತರ ಅವರ ದೇಹಗಳನ್ನು ಬೋಗಿಯ ಬಾತ್‌ರೂಮ್‌ನಿಂದ ಹೊರೆತೆಗೆಯಲಾಗಿದೆ. ಗಾಯಾಳುಗಳನ್ನು ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ದುರಂತ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಸೆರೈಕೆಲಾ-ಖಾರ್ಸಾವನ್ ಉಪ ಅಭಿವೃದ್ಧಿ ಆಯುಕ್ತ ಪ್ರಭಾತ್ ಕುಮಾರ್ ಬಡಿಯಾರ್ ಹೇಳಿದ್ದಾರೆ.
4) ದುರ್ಘಟನೆಗೆ ನಿಖರ ಕಾರಣಗಳನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ. ಪ್ರಾಥಮಿಕ ವರದಿಯ ಪ್ರಕಾರ, ಮುಂಬೈಗೆ ಹೋಗುವ ರೈಲು ಈಗಾಗಲೇ ಹಳಿತಪ್ಪಿದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ ಎಂದು ಸೆರೆಕೇಲಾ-ಖರ್ಸಾವನ್ ಪೊಲೀಸ್ ಅಧೀಕ್ಷಕ ಮುಖೇಶ್ ಲುನಾಯತ್ ಹೇಳಿದ್ದಾರೆ.
5) ಗಂಭೀರವಾಗಿ ಗಾಯಗೊಂಡ ಪ್ರಯಾಣಿಕರನ್ನು ಚಕ್ರಧರಪುರ ರೈಲ್ವೆ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಕೆಲವು ಪ್ರಯಾಣಿಕರನ್ನು ಜಮ್ಶೆಡ್‌ಪುರದ ಟಾಟಾ ಮೇನ್ ಹಾಸ್ಪಿಟಲ್‌ಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಗಿದೆ.
6) ದುರಂತಕ್ಕೀಡಾದ ರೈಲಿನ ಪ್ರಯಾಣಿಕರು ಹೆಚ್ಚಾಗಿ ಐದು ಬೋಗಿಗಳಲ್ಲಿ ಸಿಲುಕಿಕೊಂಡಿದ್ದರು. ಅಪಘಾತಕ್ಕೆ ನಿಖರ ಕಾರಣ ತಕ್ಷಣವೇ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
7) "ಪ್ರಾಥಮಿಕ ಮಾಹಿತಿಯ ಪ್ರಕಾರ, ಎದುರುಗಡೆಯಿಂದ ಬರುತ್ತಿದ್ದ ಗೂಡ್ಸ್ ರೈಲು ಹಳಿತಪ್ಪಿ ಎದುರಿನಿಂದ ಹಾದು ಹೋಗುತ್ತಿದ್ದ ಈ ಪ್ಯಾಸೆಂಜರ್ ರೈಲಿನ ಮೇಲೆ ಪರಿಣಾಮ ಬೀರಿದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಹಿಂದೂಸ್ತಾನ್ ಟೈಮ್ಸ್ ವರದಿಮಾಡಿದೆ.
8) ಅಪಘಾತದ ಕಾರಣ ಹಲವು ರೈಲುಗಳು ತಡವಾಗಿ ಸಂಚರಿಸಿದವು. ಖರಗ್‌ಪುರ-ಧನ್‌ಬಾದ್ ಎಕ್ಸ್‌ಪ್ರೆಸ್, ಹೌರಾ-ಬಾರ್ಬಿಲ್ ಎಕ್ಸ್‌ಪ್ರೆಸ್, ಅಸನ್ಸೋಲ್-ಟಾಟಾ ಎಕ್ಸ್‌ಪ್ರೆಸ್, ಇಸ್ಪತ್ ಎಕ್ಸ್‌ಪ್ರೆಸ್, ಖರಗ್‌ಪುರ-ಝಾರ್‌ಗ್ರಾಮ್-ಧನ್‌ಬಾದ್ ಎಕ್ಸ್‌ಪ್ರೆಸ್, ಹೌರಾ-ಬರ್ಬಿಲ್ ಜನಶತಾಬ್ದಿ ಎಕ್ಸ್‌ಪ್ರೆಸ್ ಮತ್ತು ಶಾಲಿಮಾರ್-ಎಲ್‌ಟಿಟಿ ಎಕ್ಸ್‌ಪ್ರೆಸ್ ರದ್ದಾದ ರೈಲುಗಳಲ್ಲಿ ಸೇರಿವೆ.
9) ಹೌರಾ-ಸಿಎಸ್‌ಎಂಟಿ ಡುರಾಂತೋ ಎಕ್ಸ್‌ಪ್ರೆಸ್, ಹೌರಾ-ಪುಣೆ ಎಕ್ಸ್‌ಪ್ರೆಸ್ ಮತ್ತು ಪುರಿ-ಋಷಿಕೇಶ್ ಎಕ್ಸ್‌ಪ್ರೆಸ್‌ಗಳು ಮಾರ್ಗ ಬದಲಾಯಿಸಿ ಸಂಚರಿಸುತ್ತಿವೆ.
10) ಅಪಘಾತಕ್ಕೀಡಾದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 80 ಪ್ರತಿಶತ ಪ್ರಯಾಣಿಕರನ್ನು ಬಸ್ ಮೂಲಕ ಚಕ್ರಧರ್‌ಪುರ ನಿಲ್ದಾಣಕ್ಕೆ ರವಾನಿಸಲಾಗಿದೆ. ಉಳಿದ ಪ್ರಯಾಣಿಕರನ್ನು ತೆರವುಗೊಳಿಸಲು ಒಂದು ರಕ್ಷಣಾ ರೈಲು ಕೂಡ ಸ್ಥಳಕ್ಕೆ ತಲುಪಿದೆ.
ರೈಲು ಅಪಘಾತದ ನೆನಪುಗಳು
ಉತ್ತರ ಪ್ರದೇಶದ ಗೊಂಡಾದಲ್ಲಿ ಜುಲೈ 18ರಂದು ಚಂಡೀಗಢ-ದಿಬ್ರುಗಢ ಎಕ್ಸ್‌ಪ್ರೆಸ್‌ನ ಕೋಚ್‌ಗಳು ಹಳಿ ತಪ್ಪಿದ ಕಾರಣ ಅಪಘಾತ ಸಂಭವಿಸಿತ್ತು. ಕಳೆದ ಜೂನ್‌ನಲ್ಲಿ ಪಶ್ಚಿಮ ಬಂಗಾಳದಲ್ಲಿ ನಿಂತಿದ್ದ ಕೋಲ್ಕತ್ತಾದ ಕಾಂಚನಜುಂಗಾ ಎಕ್ಸ್‌ಪ್ರೆಸ್ ಪ್ಯಾಸೆಂಜರ್ ರೈಲಿಗೆ ಸರಕು ರೈಲೊಂದು ಜಖಂಗೊಂಡಾಗ 15 ಜನರು ಸಾವನ್ನಪ್ಪಿದ್ದರಲ್ಲದೆ ಡಜನ್ಗಟ್ಟಲೆ ಜನ ಗಾಯಗೊಂಡರು.
ಒಂದು ವರ್ಷದ ಹಿಂದೆ, ಸಿಗ್ನಲಿಂಗ್ ದೋಷದ ಕಾರಣ ಒಡಿಶಾದಲ್ಲಿ ಸಂಭವಿಸಿದ ರೈಲು ಅಪಘಾತಕ್ಕೆ 288 ಜನ ಮೃತಪಟ್ಟಿದ್ದರು.
(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆ ಎಚ್‌ಟಿ ಕನ್ನಡ ಬೆಸ್ಟ್. ಕರ್ನಾಟಕದ ತಾಜಾ ವಿದ್ಯಮಾನ, ಅದೇ ರೀತಿ ರಾಜಕೀಯ ವಿಶ್ಲೇಷಣೆ, ದೇಶ ಮತ್ತು ಜಗತ್ತಿನ ವಿದ್ಯಮಾನಗಳ ವರದಿಗಳನ್ನು ಓದಲು kannada.hindustantimes.com/nation-and-world ಕ್ಕೆ ಭೇಟಿ ನೀಡಿ.)