Joe Biden Ukraine Visit: ರಷ್ಯಾ-ಉಕ್ರೇನ್ ಯುದ್ಧಕ್ಕೆ ವರ್ಷ, ಉಕ್ರೇನ್‌ಗೆ ಅಚ್ಚರಿಯ ಭೇಟಿ ನೀಡಿದ ಜೋ ಬೈಡೆನ್, ಮಹತ್ವದ ಘೋಷಣೆ
ರಷ್ಯಾವು ಉಕ್ರೇನ್ ಮೇಲೆ ಯುದ್ಧ ಆರಂಭಿಸಿ ಫೆಬ್ರವರಿ 24ಕ್ಕೆ ಭರ್ತಿ ಒಂದು ವರ್ಷವಾಗುತ್ತಿದ್ದು, ಇದೇ ಸಮಯದಲ್ಲಿ ಇಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಉಕ್ರೇನ್‌ನ ರಾಜಧಾನಿ ಕೀವ್‌ಗೆ ಹಠಾತ್ ಭೇಟಿ ನೀಡಿದ್ದಾರೆ.
ಕೀವ್: ರಷ್ಯಾವು ಉಕ್ರೇನ್ ಮೇಲೆ ಯುದ್ಧ ಆರಂಭಿಸಿ ಫೆಬ್ರವರಿ 24ಕ್ಕೆ ಭರ್ತಿ ಒಂದು ವರ್ಷವಾಗುತ್ತಿದ್ದು, ಇದೇ ಸಮಯದಲ್ಲಿ ಇಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಉಕ್ರೇನ್‌ನ ರಾಜಧಾನಿ ಕೀವ್‌ಗೆ ಹಠಾತ್ ಭೇಟಿ ನೀಡಿದ್ದಾರೆ. ಇಂದು ಕೀವ್‌ನಲ್ಲಿ ಜೋ ಬೈಡೆನ್ ಅವರು ಉಕ್ರೇನ್‌ನ ಅಧ್ಯಕ್ಷರಾದ ವೊಲೊಡಿಮಿರ್ ಝೆಲೆನ್ಸ್ಕಿ ಭೇಟಿಯಾಗಲಿದ್ದಾರೆ.
ರಷ್ಯಾವು ಉಕ್ರೇನ್ ಮೇಲೆ ಮಿಲಿಟರಿ ದಾಳಿ ನಡೆಸಿ ಒಂದು ವರ್ಷದೊಳಗೆ ನೀಡಿರುವ ಈ ಅನಿರೀಕ್ಷಿತ ಭೇಟಿಯು ಉಕ್ರೇನ್‌ಗೆ ಅಮೆರಿಕದ ಬೆಂಬಲದ ಸಂಕೇತ ಎಂದು ವ್ಯಾಖ್ಯಾನಿಸಲಾಗಿದೆ. "ಜೋ ಬೈಡೆನ್ ಅವರೇ, ಕೀವ್‌ಗೆ ಸುಸ್ವಾಗತ, ನಿಮ್ಮ ಭೇಟಿಯು ಉಕ್ರೇನಿಯರಿಗೆ ಅಗತ್ಯವಿರುವ ಬೆಂಬಲದ ಅತ್ಯಂತ ಪ್ರಮುಖ ಸಂಕೇತʼʼ ಎಂಬ ಝೆಲೆನ್ಸ್ಕಿ ಹೇಳಿಕೆಯನ್ನು ಸುದ್ದಿಸಂಸ್ಥೆ ಎಎಫ್‌ಪಿ ಉಲ್ಲೇಖಿಸಿದೆ.
ರಷ್ಯಾ-ಉಕ್ರೇನ್ ಯುದ್ಧದಲ್ಲಿ ಮಡಿದ ವೀರರ ನೆನಪಿನ ಗೋಡೆಗೆ ಹೂವಿನ ಹಾರವನ್ನು ಬೈಡೆನ್ ಹಾಕಿದರು. ಈ ಸಂದರ್ಭದಲ್ಲಿ ಸಮವಸ್ತ್ರಧಾರಿ ಉಕ್ರೇನಿಯನ್ ಮಿಲಿಟರಿ ಅಧಿಕಾರಿಗಳು ರಸ್ತೆಯಲ್ಲಿ ಸಾಲುಗಟ್ಟಿ ನಿಂತಿದ್ದರು.
ಈ ಸಂದರ್ಭದಲ್ಲಿ ಉಕ್ರೇನ್‌ಗೆ ಇನ್ನಷ್ಟು ಶಸ್ತ್ರಾಸ್ತ್ರ ನೀಡುವ ಭರವಸೆಯನ್ನು ಬೈಡೆನ್ ನೀಡಿದ್ದಾರೆ. ಉಕ್ರೇನ್‌ನ ಸಮಗ್ರತೆ ರಕ್ಷಿಸಲು ವಾಷ್ಟಿಂಗ್ಟನ್ ಸದಾ ಬೆಂಬಲ ನೀಡಲಿದೆ ಎಂದು ಬೈಡೆನ್ ಘೋಷಿಸಿದ್ದಾರೆ. "ಉಕ್ರೇನ್ ಜನರನ್ನು ವೈಮಾನಿಕ ಬಾಂಬ್ ದಾಳಿಯಿಂದ ರಕ್ಷಿಸಲು ಪಿರಂಗಿ ಮದ್ದುಗುಂಡುಗಳು, ಶಸ್ತ್ರಾಸ್ತ್ರ ನಿಗ್ರಹ ವ್ಯವಸ್ಥೆಗಳು, ವಾಯು ಕಣ್ಗಾವಲು ರಾಡರ್‌ಗಳು ಸೇರಿದಂತೆ ಪ್ರಮುಖ ನಿರ್ಣಾಯಕ ಸಾಧನಗಳನ್ನು ನೀಡುವುದಾಗಿ ನಾನು ಈ ಸಂದರ್ಭದಲ್ಲಿ ಘೋಷಿಸುತ್ತೇನೆʼʼ ಎಂದು ಬೈಡೆನ್ ಅವರು ಶ್ವೇತಭವನದ ಹೇಳಿಕೆಯನ್ನು ಟ್ವೀಟ್ ಮಾಡಿದ್ದಾರೆ.
"ಉಕ್ರೇನ್ ಮೇಲೆ ರಷ್ಯಾವು ಕ್ರೂರವಾಗಿ ಆಕ್ರಮಣ ಆರಂಭಿಸಿ ಒಂದು ವರ್ಷವಾಗುತ್ತ ಬರುತ್ತಿರುವ ಈ ಸಂದರ್ಭದಲ್ಲಿ ಅಧ್ಯಕ್ಷ ಝೆಲೆನ್ಸ್ಕಿಯನ್ನು ಭೇಟಿ ಮಾಡಲು, ಉಕ್ರೇನ್‌ನ ಪ್ರಜಾಪ್ರಭುತ್ವ, ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ನಮ್ಮ ಅಚಲ ಬದ್ಧತೆ ಪ್ರದರ್ಶಿಸಲು ಇಂದು ನಾನು ಕೀವ್‌ನಲ್ಲಿದ್ದೇನೆʼʼ ಎಂದು ಬೈಡೆನ್ ಸರಣಿ ಟ್ವೀಟ್ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಪುಟಿನ್ ಬಗ್ಗೆ ಟೀಕೆ ಮಾಡಲು ಅವರು ಮರೆಯಲಿಲ್ಲ. "ಸುಮಾರು ಒಂದು ವರ್ಷದ ಹಿಂದೆ ಪುಟಿನ್ ತನ್ನ ಆಕ್ರಮಣ ಆರಂಭಿಸಿದಾಗ ಉಕ್ರೇನ್ ದುರ್ಬಲವಾಗಿದೆ, ಪಶ್ಚಿಮವು ವಿಭಜನೆಯಾಗಿದೆ ಎಂದು ಅವರು ಭಾವಿಸಿದ್ದಾರೆ. ಆದರೆ, ಅವರ ಆ ಭಾವನೆ ತಪ್ಪಾಗಿತ್ತು"ʼ ಎಂದು ಟ್ವೀಟ್ ಮಾಡಿದ್ದಾರೆ.
"ಉಕ್ರೇನ್ ಅನ್ನು ರಕ್ಷಿಸಲು ಅಮೆರಿಕವು ಕಳೆದ ವರ್ಷದಿಂದ ಅಟ್ಲಾಟಿಕ್‌ನಿಂದ ಪೆಸಿಫಿಕ್‌ವರೆಗೆ ರಾಷ್ಟ್ರಗಳ ಒಕ್ಕೂಟವನ್ನು ನಿರ್ಮಿಸಿದೆ. ಈ ಬೆಂಬಲ ಮುಂದೆಯೂ ಉಳಿಯುತ್ತದೆʼʼ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಬೈಡೆನ್ ಆಗಮಿಸಿರುವುದನ್ನು ಉಕ್ರೇನ್ ಸಂಸದ ಲೆಸಿಯಾ ವಾಯಲೆಂಕೊ ಖಚಿತಗೊಳಿಸಿದ್ದಾರೆ. "ಕೀವ್‌ಗೆ ಅಮೆರಿಕ ಅಧ್ಯಕ್ಷರಿಗೆ ಸ್ವಾಗತ" ಎಂದು ಅವರು ಟ್ವೀಟ್ ಮಾಡಿದ್ದಾರೆ.