Jyotiraditya Scindia: ರಾಹುಲ್ ಗಾಂಧಿ ಅವರ 'ದೇಶದ್ರೋಹಿ ಸಿದ್ಧಾಂತ' ದೇಶಕ್ಕೆ ಮಾರಕ: ಸಿಂಧಿಯಾ ಗಂಭೀರ ಆರೋಪ!
ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ದೇಶದ ವಿರುದ್ಧ ಕೆಲಸ ಮಾಡುವ "ದೇಶದ್ರೋಹಿ" ಸಿದ್ಧಾಂತವನ್ನು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅನುಸರಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ನವದೆಹಲಿಯಲ್ಲಿ, ಸಿಂಧಿಯಾ ಅವರು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ನವದೆಹಲಿ: ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ದೇಶದ ವಿರುದ್ಧ ಕೆಲಸ ಮಾಡುವ "ದೇಶದ್ರೋಹಿ" ಸಿದ್ಧಾಂತವನ್ನು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅನುಸರಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಮಾನನಷ್ಟ ಮೊಕದ್ದಮೆಯಲ್ಲಿ ದೋಷಾರೋಪಣೆಗೆ ಒಳಗಾಗಿ ಸಂಸತ್ ಸದಸ್ಯತ್ವದಿಂದ ಅನರ್ಹಗೊಂಡಿರುವ ರಾಹುಲ್ ಗಾಂಧಿ, ಬಿಜೆಪಿ ಮತ್ತು ಕೇಂದ್ರ ಸರ್ಕಾರ ನ್ಯಾಯಾಂಗದ ಮೇಲೆ ಒತ್ತಡ ಹೇರುತ್ತಿದೆ ಎಂದು ಆರೋಪ ಮಾಡುತ್ತಿರುವುದು ಅತ್ಯಂತ ಖಂಡನೀಯ ಎಂದು ಜ್ಯೋತಿರಾದಿತ್ಯ ಸಿಂಧಿಯಾ ಹರಿಹಾಯ್ದಿದ್ದಾರೆ.
ಸಂಸತ್ ಸದಸ್ಯರು ತಮ್ಮ ಸದಸ್ಯತ್ವದಿಂದ ಅನರ್ಹಗೊಂಡಿರುವುದು ಇದೇ ಮೊದಲೇನಲ್ಲ. ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ, ಸಮಾಜವಾದಿ ಪಕ್ಷದ ಮುಖಂಡ ಆಜಂ ಖಾನ್ ಸೇರಿದಂತೆ ಇನ್ನೂ ಹಲವರು ತಮ್ಮ ಸದಸ್ಯತ್ವವನ್ನು ಕಳೆದುಕೊಂಡಿದ್ದರು. ಆದರೆ ರಾಹುಲ್ ಗಾಂಧಿ ಇದನ್ನು ವಿಶೇಷ ಘಟನೆ ಎಂದು ಬಿಂಬಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಜ್ಯೋತಿರಾದಿತ್ಯ ಸಿಂಧಿಯಾ ಕಿಡಕಾರಿದರು.
ರಾಹುಲ್ ಗಾಂಧಿ ಅವರಿಗೆ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ನ್ಯಾಯಾಲಯ ಎರಡು ವರ್ಷಗಳ ಜೈಲುಶಿಕ್ಷೆ ವಿಧಿಸಿದೆ. ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ನ್ಯಾಯಾಲಯದಿಂದ ಎರಡು ವರ್ಷ ಜೈಲು ಶಿಕ್ಷೆಗೆ ಒಳಪಟ್ಟ ವ್ಯಕ್ತಿಯನ್ನು, ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಲಾಗುತ್ತದೆ. ಸರ್ಕಾರ ಸುಪ್ರೀಂಕೋರ್ಟ್‌ನ ಆದೇಶದನ್ವಯ ಕ್ರಮ ಕೈಗೊಂಡಿದೆ. ಇದರಲ್ಲಿ ಸರ್ಕಾರದ ಹಸ್ತಕ್ಷೇಪದ ಪ್ರಶ್ನೆಯೇ ಇಲ್ಲ ಎಂದು ಜ್ಯೋತಿರಾದಿತ್ಯ ಸಿಂಧಿಯಾ ತೀವ್ರ ವಾಗ್ದಾಳಿ ನಡೆಸಿದರು.
"ಕಾಂಗ್ರೆಸ್ ಪಕ್ಷವು ಹಿಂದುಳಿದ ವರ್ಗಗಳನ್ನು ಅವಮಾನಿಸಿದೆ. ನಮ್ಮ ಸಶಸ್ತ್ರ ಪಡೆಗಳ ಶೌರ್ಯಕ್ಕೆ ಪುರಾವೆಗಳನ್ನು ಕೇಳಿದೆ. ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಚೀನಾಗೆ ಅನುಕೂಲವಾಗುವಂತಹ ಹೇಳಿಕೆಗಳನ್ನು ನೀಡಿದೆ. ಇದು ಆ ಪಕ್ಷದ ದೇಶದ್ರೋಹಿ ಸಿದ್ಧಾಂತಕ್ಕೆ ಸಾಕ್ಷಿ.." ಎಂದು ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ಪಕ್ಷವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
"ಕಾಂಗ್ರೆಸ್ ಪಕ್ಷಕ್ಕಷೆ ಯಾವುದೇ ಸಿದ್ಧಾಂತವಿಲ್ಲ, ದೇಶದ ವಿರುದ್ಧ ಕೆಲಸ ಮಾಡುವ ಸಿದ್ಧಾಂತವನ್ನು ಮಾತ್ರ ಅದು ಹೊಂದಿದೆ.ರಾಹುಲ್ ಗಾಂಧಿಯವರ ವೈಯಕ್ತಿಕ ಕಾನೂನು ಹೋರಾಟವನ್ನು ಪ್ರಜಾಪ್ರಭುತ್ವದ ಹೋರಾಟ ಎಂದು ಕಾಂಗ್ರೆಸ್ ಬಿಂಬಿಸುತ್ತಿದೆ.." ಎಂದು ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವರು ಗುಡುಗಿದರು.
ರಾಹುಲ್ ಗಾಂಧಿ ತಮ್ಮನ್ನು ತಾವು ಪ್ರಥಮ ದರ್ಜೆಯ ನಾಗರಿಕ ಎಂದು ಭಾವಿಸದಂತಿದೆ. ದೇಶದ ಕಾನೂನು ಎಲ್ಲರಿಗೂ ಸಮಾನವಾಗಿ ಅನ್ವಯವಾಗುತ್ತದೆ. ಆದರೆ ನಾನು ಕ್ಷಮೆ ಕೋರುವುದಿಲ್ಲ ಎಂದು ಹೇಳುವ ಮೂಲಕ, ತಮ್ಮೊಳಗಿರುವ ಅಹಂಕಾರವನ್ನು ರಾಹುಲ್ ಗಾಂಧಿ ಪ್ರದರ್ಶಿಸಿದ್ದಾರೆ. ದೇಶ ರಾಹುಲ್ ಗಾಂಧಿ ಅವರ ಆಟವನ್ನು ನೋಡುತ್ತಿದೆ ಎಂದು ಜ್ಯೋತಿರಾದಿತ್ಯ ಸಿಂಧಿಯಾ ಎಚ್ಚರಿಸಿದರು.
ಕಾಂಗ್ರೆಸ್ ಸದನದ ಕಲಾಪ ಸುಗಮವಾಗಿ ನಡೆಯಲು ಬಿಡುತ್ತಿಲ್ಲ. ಸದನಕ್ಕೆ ಕಪ್ಪುಪಟ್ಟಿ ಧರಿಸಿ ಬರುವ ಕಾಂಗ್ರೆಸ್ ಸದಸ್ಯರು, ವಿನಾಕಾರಣ ಗದ್ದಲ ಎಬ್ಬಿಸುವ ಮೂಲಕ ಕಲಾಪವನ್ನು ವ್ಯರ್ಥ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲದ ಕಾಂಗ್ರೆಸ್‌ಗೆ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಈ ದೇಶದ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದರು.
ಜ್ಯೋತಿರಾದಿತ್ಯ ಸಿಂಧಿಯಾ ಅವರು ದೀರ್ಘಕಾಲ ಕಾಂಗ್ರೆಸ್‌ನಲ್ಲಿದ್ದರು ಮತ್ತು ರಾಹುಲ್ ಗಾಂಧಿಯವರ ನಿಕಟವರ್ತಿ ಎಂದು ಪರಿಗಣಿಸಲ್ಪಟ್ಟಿದ್ದರು. ಆದರೆ 2020ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪ ಸೇರಿದ ಜ್ಯೋತಿರಾದಿತ್ಯ ಸಿಂಧಿಯಾ, ಪ್ರಧಾನಿ ಮೋದಿ ಅವರ ಸಚಿವ ಸಂಪುಟದಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವರಾದರು. ಸಿಂಧಿಯಾ ಅವರ ಪಕ್ಷಾಂತರ ಮಧ್ಯಪ್ರದೇಶದಲ್ಲಿ ಆಗಿನ ಮುಖ್ಯಮಂತ್ರಿ ಕಮಲ್‌ನಾಥ್ ಅವರ ಸರ್ಕಾರ ಪತನಕ್ಕೆ ಕಾರಣವಾಗಿತ್ತು.
ವಿಭಾಗ