ಕನ್ನಡ ಸುದ್ದಿ  /  Nation And-world  /  K Chandrashekar Rao All Set To Launch New National Party Ahead Of 2024 General Elections

KCR National Party: ರಾಷ್ಟ್ರೀಯ ಪಕ್ಷದ ಘೋಷಣೆ ಮಾಡಿದ ಕೆಸಿಆರ್‌: ರೋಚಕವಾಗಲಿದೆ 2024ರ ವಾರ್

ತೆಲಂಗಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌, ಹೊಸ ರಾಷ್ಟ್ರೀಯ ಪಕ್ಷ ಸ್ಥಾಪನೆ ಮಾಡುವ ಘೋಷಣೆ ಮಾಡಿದ್ದಾರೆ. ಈಗಾಗಲೇ ರಾಷ್ಟ್ರೀಯ ಪಕ್ಷದ ನೀತಿಗಳನ್ನು ರೂಪಿಸುವ ಕೆಲಸ ಕೂಡ ನಡೆಯುತ್ತಿದೆ ಎಂದು ಕೆಸಿಆರ್‌ ಸ್ಪಷ್ಟಪಡಿಸಿದ್ದಾರೆ. ಹೊಸ ರಾಷ್ಟ್ರೀಯ ಪಕ್ಷದ ನೀತಿ ಮತ್ತು ಸ್ವರೂಪವನ್ನು ನಿರ್ಧರಿಸಲು ಈಗಾಗಲೇ ಚರ್ಚೆಗಳು ನಡೆಯುತ್ತಿವೆ ಎಂದೂ ಕೆಸಿಆರ್‌ ಹೇಳಿದ್ದಾರೆ.

ಕೆಸಿಆರ್‌ (ಸಂಗ್ರಹ ಚಿತ್ರ)
ಕೆಸಿಆರ್‌ (ಸಂಗ್ರಹ ಚಿತ್ರ) (ANI)

ಹೈದರಾಬಾದ್:‌ 2024ರ ಲೋಕಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ವಿಪಕ್ಷಗಳು, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಮಣಿಸಲು ಸಾಧ್ಯವಾದ ಎಲ್ಲಾ ದಾಳಗಳನ್ನು ಉರುಳಿಸುತ್ತಿದೆ. ಪ್ರಧಾನಿ ಮೋದಿ ವಿರುದ್ಧ ಒಂದಾಗುವ ಬಯಕೆ ವ್ಯಕ್ತಪಡಿಸಿರುವ ವಿಪಕ್ಷಗಳು, ಈ ಕುರಿತು ಮಾತುಕತೆಯನ್ನೂ ಆರಂಭಿಸಿವೆ.

2024ರ ಲೋಕಸಭೆ ಚುನಾವಣೆಗೆ ವಿಪಕ್ಷಳ ಮಹಾ ಮೈತ್ರಿಕೂಟ ರಚಿಸುವ ಕಸರತ್ತು ಆರಂಭವಾಗಿದೆ. ಮೋದಿ ವಿರುದ್ಧ ತೊಡೆ ತಟ್ಟಿದವರಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಪ್ರಮುಖರು. ಈ ಇಬ್ಬರೂ ನಾಯಕರು ವಿಪಕ್ಷಗಳ ಮಹಾ ಮೈತ್ರಿಕೂಟ ರಚಿಸಲು ಇದೀಗ ಅಧಿಕೃತ ವಾಗಿ ಅಖಾಡಕ್ಕೆ ಇಳಿದಿದ್ದಾರೆ. ಬಿಜೆಪಿ ವಿರೋಧಿ ರಾಜಕೀಯ ಪಕ್ಷಗಳ ಕದ ತಟ್ಟುತ್ತಿದ್ದಾರೆ.

ಇದೀಗ ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ತೆಲಂಗಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌, ಹೊಸ ರಾಷ್ಟ್ರೀಯ ಪಕ್ಷ ಸ್ಥಾಪನೆ ಮಾಡುವ ಘೋಷಣೆ ಮಾಡಿದ್ದಾರೆ. ಈಗಾಗಲೇ ರಾಷ್ಟ್ರೀಯ ಪಕ್ಷದ ನೀತಿಗಳನ್ನು ರೂಪಿಸುವ ಕೆಲಸ ಕೂಡ ನಡೆಯುತ್ತಿದೆ ಎಂದು ಕೆಸಿಆರ್‌ ಸ್ಪಷ್ಟಪಡಿಸಿದ್ದಾರೆ.

ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್)‌ ತೆಲಂಗಾಣ ರಾಜ್ಯ ರಚನೆಗಾಗಿ ಹುಟ್ಟಿಕೊಂಡ ಚಳುವಳಿಯಾಗಿತ್ತು. ಇದೀಗ ನಾವು ನಮ್ಮ ಗುರಿಯನ್ನು ತಲುಪಿದ್ದೇವೆ. ಇದು ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಸಮಯವಾಗಿದ್ದು, ಈ ನಿಟ್ಟಿನಲ್ಲಿ ಶೀಘ್ರದಲ್ಲೇ ರಾಷ್ಟ್ರೀಯ ಪಕ್ಷ ಸ್ಥಾಪಿಸುವುದಾಗಿ ಕೆಸಿಆರ್‌ ಹೇಳಿದ್ದಾರೆ.

ತೆಲಂಗಾಣ ಚಳವಳಿ ಪ್ರಾರಂಭವಾದಾಗ ನಾವು ಬುದ್ಧಿಜೀವಿಗಳು, ಅರ್ಥಶಾಸ್ತ್ರಜ್ಞರು ಮತ್ತು ವಿವಿಧ ಕ್ಷೇತ್ರಗಳ ತಜ್ಞರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದೇವು. ಈಗಲೂ ಅದೇ ರೀತಿ ಚರ್ಚೆ ನಡೆಸಿ ರಾಷ್ಟ್ರೀಯ ಪಕ್ಷ ಸ್ಥಾಪನೆ ಮಾಡಲಾಗುವುದು. ಈಗಾಗಲೇ ಎಲ್ಲಾ ತಜ್ಞರೂ ಪರ್ಯಾಯ ರಾಷ್ಟ್ರೀಯ ಕಾರ್ಯಸೂಚಿಗೆ ಸಹಮತ ಸೂಚಿಸಿದ್ದಾರೆ ಎಂದು ಕೆಸಿಆರ್‌ ಮಾಹಿತಿ ನೀಡಿದ್ದಾರೆ.

ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಬೇಕಾದರೆ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲೇಬೇಕು. ನಾವು ಅದಕ್ಕೆ ಸಾಧ್ಯವಾದ ಎಲ್ಲಾ ಕಾರ್ಯತಂತ್ರ ಹೆಣೆಯುವ ಕೆಲಸ ಮಾಡುತ್ತಿದ್ದೇವೆ. ವಿಪಕ್ಷಗಳ ಮಹಾ ಮೈತ್ರಿಕೂಟ ರಚನೆ ಒಂದೆಡೆಯಾದರೆ, ಹೊಸ ರಾಷ್ಟ್ರೀಯ ಪಕ್ಷವೊಂದನ್ನು ಸ್ಥಾಪಿಸಿ ಆ ಮೂಲಕ ಮೋದಿ ವಿರುದ್ಧ ಸೆಣೆಸುವುದು ನಮ್ಮ ಉದ್ದೇಶ ಎಂದು ಕೆಸಿಆರ್‌ ಹೇಳಿದ್ದಾರೆ.

ಹೊಸ ರಾಷ್ಟ್ರೀಯ ಪಕ್ಷದ ನೀತಿ ಮತ್ತು ಸ್ವರೂಪವನ್ನು ನಿರ್ಧರಿಸಲು ಈಗಾಗಲೇ ಚರ್ಚೆಗಳು ನಡೆಯುತ್ತಿವೆ. ದೇಶದ ಸಾಮಾನ್ಯ ಜನರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಪಕ್ಷದ ನೀತಿಯನ್ನು ರಚನೆ ಮಾಡಲಾಗುವುದು. ದೇಶದ ಎಲ್ಲಾ ವರ್ಗದ ಜನರನ್ನು ಒಟ್ಟಿಗೆ ಕೊಂಡೊಯ್ಯುವ ಉದ್ದೇಶದೊಂದಿಗೆ ಹೊಸ ರಾಷ್ಟ್ರೀಯ ಪಕ್ಷ ರಚನೆಯಾಗಲಿದೆ ಎಂದು ಕೆಸಿಆರ್‌ ಸ್ಪಷ್ಟಪಡಿಸಿದ್ದಾರೆ.

ಆದರೆ ಈ ರಾಷ್ಟ್ರೀಯ ಪಕ್ಷವನ್ನು ಕೇವಲ ಕೆಸಿಆರ್‌ ಅವರಷ್ಟೇ ಮುನ್ನಡೆಸಲಿದ್ದಾರಾ ಅಥವಾ ಇತರ ವಿರೋಧ ಪಕ್ಷಗಳ ನಾಯಕರೂ ಇದರಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರಾ ಎಂಬುದು ಇನ್ನೂ ಸ್ಪಷ್ಟವಾಗಬೇಕಿದೆ. ಪ್ರಾದೇಶಿಕ ಮಟ್ಟದಲ್ಲಿ ಪುತ್ರ ಮತ್ತು ಸಚಿವ ಕೆಟಿಆರ್‌ಗೆ ಎಲ್ಲಾ ಜವಾಬ್ದಾರಿಗಳನ್ನು ವಹಿಸಿ, ತಾವು ರಾಷ್ಟ್ರೀಯ ಮಟ್ಟದ ರಾಜಕಾರಣ ಮಾಡುವುದು ಕೆಸಿಆರ್‌ ಅವರ ಬಯಕೆಯಾಗಿದೆ ಎಂದು ಹೇಳಲಾಗುತ್ತಿದೆ.

ಹೊಸ ರಾಷ್ಟ್ರೀಯ ಪಕ್ಷ ರಚನೆ ಅಷ್ಟು ಸುಲಭವಲ್ಲ ಎಂಬುದು ಕೆಸಿಆರ್‌ಗೂ ಗೊತ್ತಿದೆ. ಏಕೆಂದರೆ ತೆಲಂಗಾಣ ಆಚೆಗೆ ಟಿಆರ್‌ಎಸ್‌ ನೆಲೆ ಇಲ್ಲ. ಕೆಸಿಆರ್‌ ಕೂಡ ಮೈತ್ರಿಕೂಟದಲ್ಲಿ ಮಹತ್ವದ ಪಾತ್ರ ನಿರ್ವಹಿಸಬಲ್ಲರೇ ವಿನಃ ಏಕಾಂಗಿಯಾಗಿ ರಾಷ್ಟ್ರೀಯ ಮಟ್ಟದಲ್ಲಿ ಮಿಂಚುವುದು ಅವರ ಪಾಲಿಗೆ ಕಠಿಣ. ಆದಾಗ್ಯೂ ಕೆಸಿಆರ್‌ ರಚಿಸಲು ನಿರ್ಧರಿಸಿರುವ ಹೊಸ ರಾಷ್ಟ್ರೀಯ ಪಕ್ಷದ ಸ್ವರೂಪ ಮತ್ತು ನೀತಿ ನಿರೂಪಣೆಗಳು ಇದನ್ನು ನಿರ್ಧರಿಸಲಿವೆ ಎಂಬುದೂ ಸತ್ಯ.

ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್‌ ಮತ್ತು ಟ್ವಿಟರ್‌ ನಲ್ಲಿ ಫಾಲೋಮಾಡಿ.

ವಿಭಾಗ