Kambala Jallikattu: ಕಂಬಳ, ಜಲ್ಲಿಕಟ್ಟು, ಎತ್ತಿನಬಂಡಿ ಓಟದ ಸ್ಪರ್ಧೆ ನಡೆಸಲು ಸುಪ್ರೀಂಕೋರ್ಟ್ ಸಮ್ಮತಿ
Supreme Court of India: ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಕಾರಣ ಪ್ರಾಣಿಗಳು ಅನುಭವಿಸುತ್ತಿದ್ದ ಹಿಂಸೆಯ ಪ್ರಮಾಣವೂ ಕಡಿಮೆಯಾಗಲಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ದೆಹಲಿ: ಕಂಬಳ ನಡೆಸಲು ಕರ್ನಾಟಕ ಸರ್ಕಾರ ಜಾರಿ ಮಾಡಿದ್ದ ಕಾನೂನನ್ನು ಸುಪ್ರೀಂಕೋರ್ಟ್ (Supreme Court) ಎತ್ತಿಹಿಡಿದಿದೆ. ಇದೇ ವೇಳೆ ಜಲ್ಲಿಕಟ್ಟು (Jallikattu) ನಡೆಸಲೆಂದು ತಮಿಳುನಾಡು ಸರ್ಕಾರ ಮಾಡಿಕೊಂಡಿದ್ದ ತಿದ್ದುಪಡಿ ಹಾಗೂ ಎತ್ತಿನಗಾಡಿ ಸ್ಪರ್ಧೆಗಾಗಿ ಮಹಾರಾಷ್ಟ್ರ ಸರ್ಕಾರ ಜಾರಿ ಮಾಡಿದ್ದ ಕಾನೂನುಗಳನ್ನೂ ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಸಂವಿಧಾನದ ಆಶಯಗಳನ್ನು ಈ ತಿದ್ದುಪಡಿಗಳು ಅಥವಾ ಕಾನೂನುಗಳು ಉಲ್ಲಂಘಿಸುವುದಿಲ್ಲ. ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಕಾರಣ ಪ್ರಾಣಿಗಳು ಅನುಭವಿಸುತ್ತಿದ್ದ ಹಿಂಸೆಯ ಪ್ರಮಾಣವೂ ಕಡಿಮೆಯಾಗಲಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ಕಾನೂನಿನಲ್ಲಿ ಅಡಕವಾಗಿರುವ ಎಲ್ಲ ಅಂಶಗಳನ್ನೂ ಸಂಪೂರ್ಣವಾಗಿ ಜಾರಿಗೊಳಿಸಬೇಕು ಎಂದು ಸುಪ್ರೀಂಕೋರ್ಟ್ ಜಿಲ್ಲಾಡಳಿತಗಳಿಗೆ ತಾಕೀತು ಮಾಡಿದೆ. 'ಜಲ್ಲಿಕಟ್ಟು ತಮಿಳುನಾಡಿನ ಸಾಂಸ್ಕೃತಿಕ ಪರಂಪರೆಯ ಭಾಗವಲ್ಲ' ಎನ್ನುವ 2014 ನಿರ್ಣಯವನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿತು. 'ಈ ಅಭಿಪ್ರಾಯ ತಪ್ಪುಗ್ರಹಿಕೆಯಿಂದ ಕೂಡಿದೆ' ಎಂದು ಅವರು ಹೇಳಿದರು.
'ಶಾಸಕಾಂಗದ ದೃಷ್ಟಿಕೋನವನ್ನು ಗೌರವಿಸುತ್ತೇವೆ. ಜಲ್ಲಿಕಟ್ಟು ತಮಿಳುನಾಡಿನ ಸಾಂಸ್ಕೃತಿಕ ಪರಂಪರೆಯ ಭಾಗ ಎಂದು ಅಲ್ಲಿನ ಶಾಸಕಾಂಗ ಅಭಿಪ್ರಾಯಪಟ್ಟಿದೆ. ಕಾನೂನಿನ ಮುನ್ನುಡಿಯಲ್ಲಿಯೂ ಈ ಅಂಶ ಉಲ್ಲೇಖವಾಗಿದೆ. ಅದನ್ನು ನಾವು ಒಪ್ಪುತ್ತೇವೆ' ಎಂದು ಸುಪ್ರೀಂಕೋರ್ಟ್ ಹೇಳಿದೆ. ಈ ತೀರ್ಪಿನ ಬಗ್ಗೆ 'ಬಾರ್ ಅಂಡ್ ಬೆಂಚ್' ಜಾಲತಾಣ ವಿಸ್ತೃತ ವರದಿ ಪ್ರಕಟಿಸಿದೆ.
'ಕಳೆದ ಶತಮಾನದಿಂದಲೂ ತಮಿಳುನಾಡಿನಲ್ಲಿ ಜಲ್ಲಿಕಟ್ಟು ನಡೆಯುತ್ತಿದೆ. ಇದು ಸಾಹಸ ಪ್ರಧಾನ ಕ್ರೀಡೆ. ಒಂದು ನಿರ್ದಿಷ್ಟ ಪ್ರದೇಶದಲ್ಲಿ ಗೂಳಿಯನ್ನು ಮುಕ್ತವಾಗಿ ಓಡಾಡಲು ಬಿಡಲಾಗುತ್ತದೆ. ಇದು ತಮಿಳುನಾಡು ಸಂಸ್ಕೃತಿಯ ಭಾಗವೇ ಎನ್ನುವ ಬಗ್ಗೆ ಸಾಮಾಜಿಕ ವಿಶ್ಲೇಷಣೆ ನಡೆಯಬೇಕು. ಅದು ನ್ಯಾಯಾಂಗದ ವ್ಯಾಪ್ತಿಗೆ ಬರುವುದಿಲ್ಲ. ಸಾಂಸ್ಕೃತಿಕ ಪರಂಪರೆಯ ರಕ್ಷಣೆಗೆ ಈ ಕ್ರೀಡೆ ಅಗತ್ಯವೇ ಎನ್ನುವ ಬಗ್ಗೆ ಶಾಸನ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಬೇಕು' ನ್ಯಾಯಮೂರ್ತಿ ಅನಿರುದ್ಧ ಬೋಸ್ ಹೇಳಿದರು.