Kargil Vijay Diwas: ಏನಿದು ಕಾರ್ಗಿಲ್ ವಿಜಯ ದಿವಸ? ಆಪರೇಷನ್ ವಿಜಯ್ ಬಗ್ಗೆ ನಿಮಗೆಷ್ಟು ಗೊತ್ತು?
ಇಂದು (ಜುಲೈ 26) ಕಾರ್ಗಿಲ್ ವಿಜಯ ದಿವಸ (Kargil Vijay Diwas). 1999ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಕಾರ್ಗಿಲ್‌ನಲ್ಲಿ ನಡೆದ ಆಪರೇಷನ್ ವಿಜಯ್ ಯುದ್ಧದ ಗೆಲುವಿಗಾಗಿ ಕಾರ್ಗಿಲ್ ವಿಜಯ ದಿವಸವನ್ನು ಪ್ರತಿವರ್ಷ ಜುಲೈ 26ರಂದು ಆಚರಿಸಲಾಗುತ್ತದೆ. ಈ ಮೂಲಕ ಕಾರ್ಗಿಲ್ ಯುದ್ಧದಲ್ಲಿ ವೀರಮರಣವನ್ನು ಹೊಂದಿರುವ ಯೋಧರ ತ್ಯಾಗ, ಬಲಿದಾನಗಳನ್ನು ಸ್ಮರಿಸಲಾಗುತ್ತದೆ.
ಇಂದು (ಜುಲೈ 26) ಕಾರ್ಗಿಲ್ ವಿಜಯ ದಿವಸ (Kargil Vijay Diwas). 1999ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಕಾರ್ಗಿಲ್‌ನಲ್ಲಿ ನಡೆದ ಆಪರೇಷನ್ ವಿಜಯ್ ಯುದ್ಧದ ಗೆಲುವಿಗಾಗಿ ಕಾರ್ಗಿಲ್ ವಿಜಯ ದಿವಸವನ್ನು ಪ್ರತಿವರ್ಷ ಜುಲೈ 26ರಂದು ಆಚರಿಸಲಾಗುತ್ತದೆ. ಈ ಮೂಲಕ ಕಾರ್ಗಿಲ್ ಯುದ್ಧದಲ್ಲಿ ವೀರಮರಣವನ್ನು ಹೊಂದಿರುವ ಯೋಧರ ತ್ಯಾಗ, ಬಲಿದಾನಗಳನ್ನು ಸ್ಮರಿಸಲಾಗುತ್ತದೆ.
ಎಲ್ಲಿದೆ ಕಾರ್ಗಿಲ್?
ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಕಾರ್ಗಿಲ್ ಯುದ್ಧದ ಕೇಂದ್ರಬಿಂದುವಾದ ಕಾರ್ಗಿಲ್ ಜಮ್ಮು ಮತ್ತು ಕಾಶ್ಮೀರದಲ್ಲಿ ಇದೆ. ಶ್ರೀನಗರದಿಂದ 205 ಕಿ.ಮೀ. ದೂರ. ಗಡಿ ನಿಯಂತ್ರಣ ರೇಖೆಯ ಉತ್ತರ ಭಾಗಕ್ಕೆ ಮುಖ ಮಾಡಿಕೊಂಡಿದೆ. ಹಿಮಾಲಯದ ಉಳಿದ ಪ್ರಾಂತ್ಯ ಗಳಂತೆ ಕಾರ್ಗಿಲ್ ಕೂಡಾ ಅತಿ ಶೀತ ಪ್ರದೇಶ. ಕಾರ್ಗಿಲ್ ಪರ್ವತ ಶ್ರೇಣಿಯ ವ್ಯಾಪ್ತಿಯಲ್ಲಿ ದ್ರಾಸ್, ಬಟಾಲಿಕ್, ಟೈಗರ್‌ಹಿಲ್ಸ್ ಪರ್ವತಗಳು ಬರುತ್ತವೆ.
ಮರೆಯಲಾಗದ ಕಾರ್ಗಿಲ್ ಯುದ್ಧ
1999 ಮೇ ಕಾರ್ಗಿಲ್ ಭಾಗದಲ್ಲಿ ಪಾಕ್ ಪಡೆಗಳು ಒಳನುಸುಳಿವೆ ಎಂಬ ಸುದ್ದಿ ಭಾರತೀಯ ಸೇನೆಗೆ ಸಿಕ್ಕಿತ್ತು. ಪಾಕ್ ಸೈನಿಕರು ಕಾರ್ಗಿಲ್ ಭಾಗದಲ್ಲಿ ಗೋಚರವಾಗುತ್ತಿದ್ದಂತೆ ಭೂಸೇನೆ ಆಪರೇಷನ್ ವಿಜಯ್’ ಕಾರ್ಯಾಚರಣೆ ಶುರು ಮಾಡಿತ್ತು. 60 ದಿನಗಳಲ್ಲಿ ಸಂಪೂರ್ಣ ಕಾರ್ಗಿಲ್ ಶ್ರೇಣಿ ಭಾರತದ ಕೈವಶಕ್ಕೆ ಬಂದಿತ್ತು.
ಕಾರ್ಗಿಲ್ ವಿಜಯ ದಿವಸ
1999 ರ ಜುಲೈ 26ರಂದು ಕಾರ್ಗಿಲ್ ಯುದ್ಧ ಕೊನೆಗೊಂದಿತು. ಆ ದಿನವನ್ನೇ ಕಾರ್ಗಿಲ್ ವಿಜಯ ದಿವಸ ಎಂದು ಆಚರಿಸಲಾಗುತ್ತದೆ. ಕಾರ್ಗಿಲ್ ಯುದ್ಧದಲ್ಲಿ ಭಾರತದ ಸೇನೆಯ ಪ್ರಮುಖ ಅಧಿಕಾರಿಗಳು ಸೇರಿದಂತೆ 527 ಯೋಧರು ವೀರಮರಣ ಹೊಂದಿದ್ದಾರೆ. ಪಾಕಿಸ್ತಾನದ ಸೈನಿಕರು ಮತ್ತು ಉಗ್ರರು ಕಾರ್ಗಿಲ್ ಜಿಲ್ಲೆಯ ಎಲ್‌ಒಸಿ ಮೂಲಕ ಒಳ ಪ್ರವೇಶಿಸಿದ್ದರು. ಇದು ಭಾರತದ ಸೇನೆಗೆ ಗೊತ್ತಾಗಿ ತಕ್ಷಣ ಪ್ರತಿದಾಳಿ ಆರಂಭಿಸಿತು. ಪಾಕಿಸ್ತಾನದ ಈ ಯುದ್ಧ ಭಾರತಕ್ಕೆ ನಿರೀಕ್ಷಿತವಾಗಿರಲಿಲ್ಲ. ಆದರೂ, ಭಯಪಡದೆ ಆಪರೇಷನ್ ವಿಜಯ್ ಆರಂಭಿಸಿ ಗೆಲುವು ಪಡೆಯಿತು.
ಮುಷರಫ್ ಕಾರಣ
ಜ.ಪರ್ವೇಜ್ ಮುಷರ್ರಫ್ ಪಾಕ್‌ನ ಅತಿ ಪ್ರಬಲ ಸೇನಾ ದಂಡನಾಯಕನಾಗಿದ್ದ ವ್ಯಕ್ತಿ. ಕಾರ್ಗಿಲ್ ಯುದ್ಧದ ಹಿಂದಿನ ಮೆದುಳು ಆತ. ಅಂದು ಪ್ರಧಾನಿಯಾಗಿದ್ದ ನವಾಜ್ ಷರೀಫ್‌ಗೆ ಕಾರ್ಗಿಲ್‌ನಲ್ಲಿ ಪಾಕ್ ಸೈನಿಕರು ಹೊಕ್ಕಿದ್ದು ಗೊತ್ತೇ ಇರಲಿಲ್ಲ. ಅಷ್ಟು ಗುಪ್ತವಾಗಿ ಮುಷರ್ರಫ್ ಪ್ಲಾನ್ ಮಾಡಿದ್ದರು. ಇದಕ್ಕೆ ಬೆಂಬಲವಾಗಿದ್ದು ಲೆ.ಜ.ಮೊಹಮ್ಮದ್ ಅಜೀಜ್. ಲಾಹೋರ್ ಒಪ್ಪಂದಕ್ಕೆ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಪ್ರಧಾನಿ ನವಾಜ್ ಷರೀಫ್ 1999ರ ಫೆಬ್ರವರಿಯಲ್ಲಿ ಹಾಕುತ್ತಿದ್ದರೆ, ಇತ್ತ ಸದ್ದಿಲ್ಲದೇ ಕಾರ್ಗಿಲ್ ವಶಕ್ಕೆ ಪಾಕ್ ಸೇನೆ ಪ್ಲಾನ್ ಮಾಡಿತ್ತು. ಈ ಮೂಲಕ ಭಾರತದ ಬೆನ್ನಿಗೆ ಚೂರಿ ಇರಿದಿತ್ತು.
ಭಾರತದ ಹೋರಾಟ
ಕಾರ್ಗಿಲ್ ಮರುವಶಪಡಿಸಿಕೊಳ್ಳುವುದು ಅಷ್ಟು ಸುಲಭದ್ದಾಗಿರಲಿಲ್ಲ. ಕಾರಣ ಅತಿ ದುರ್ಗಮ ಪ್ರದೇಶ. ಮೈನಸ್‌ಗೂ ಕೆಳಗಿಳಿವ, ಪದೇ ಪದೇ ಬದಲಾಗುವ ವಾತಾವರಣ. ಆದರೆ ಭಾರತದ ಸೈನಿಕರು ಎದೆಗುಂದಲಿಲ್ಲ. ಸಮುದ್ರ ಮಟ್ಟದಿಂದ 18 ಸಾವಿರ ಅಡಿ ಎತ್ತರದ ಈ ಪ್ರದೇಶದಲ್ಲಿ ಕೆಚ್ಚೆದೆ ಪ್ರದರ್ಶಿಸಿದರು. ಸೇನೆಯ ಆರ್ಟಿಲರಿ ವಿಭಾಗ ಫಿರಂಗಿ ಬಳಸಿದರೆ, ವಿವಿಧ ರೀತಿಯ ಮದ್ದುಗುಂಡುಗಳು, ಪರಿಕರಗಳನ್ನು ಬಳಸಿಕೊಳ್ಳಲಾಯಿತು. ಇದಕ್ಕೆ ಬೆಂಗಾವಲಾಗಿ ವಾಯುಪಡೆ ನಿಂತಿತ್ತು. 5 ಸ್ವತಂತ್ರ್ಯ ಬ್ರಿಗೇಡ್ ಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವು. ಅವರೊಂದಿಗೆ 44 ಬೆಟಾಲಿಯನ್ ಅರೆಸೇನಾ ಪಡೆಗಳು ಭಾಗಿಯಾಗಿದ್ದವು. ಒಟ್ಟು 60 ವಾಯುಪಡೆ ವಿಮಾನಗಳು ಕಾರ್ಯಾಚರಣೆಯಲ್ಲಿದ್ದವು.
ಎರಡೂ ಕಡೆಗೂ ಅಪಾರ ಹಾನಿ
ಕಾರ್ಗಿಲ್ ಯುದ್ಧದಿಂದಾಗಿ ಎರಡೂ ಕಡೆಗಳಲ್ಲಿ ಅಪಾರ ಹಾನಿಯಾಗಿತ್ತು. ಭಾರತದ ಸುಮಾರು 500 ಮಂದಿ ಸೈನಿಕರು ಪ್ರಾಣ ತೆತ್ತಿದ್ದರೆ, ಪಾಕ್‌ನ ಸುಮಾರು 700 ಮಂದಿ ಮಡಿದಿದ್ದರು. ಪಾಕ್ ಭಾರತದ ಯುದ್ಧ ವಿಮಾನ, ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿತ್ತು. ಭಾರತ ಕೂಡ ದೊಡ್ಡ ಸಂಖ್ಯೆಯಲ್ಲಿ ಪಾಕ್ ಸೈನಿಕರನ್ನು ಸೆರೆಹಿಡಿದಿತ್ತು
ವಾಯುಪಡೆ ದಿಟ್ಟ ಉತ್ತರಕ್ಕೆ ಪಾಕ್ ತತ್ತರ
ಭೂಸೇನೆ ಪಾಕ್ ಸೈನಿಕರಿಗೆ ತಿರುಗೇಟು ನೀಡುತ್ತಿದ್ದರೆ, ಅತ್ತ ವಾಯುಪಡೆ ಪಾಕ್ ಸೈನಿಕರ ಜಂಘಾಬಲವನ್ನೇ ಉಡುಗಿಸಿತ್ತು. ಪಾಕ್ ಪಡೆಗಳ ಮೇಲೆ ಬಾಂಬ್ ಸುರಿಸಿತು. ಕಾರ್ಗಿಲ್ ಹೋರಾಟದಲ್ಲಿ ಟೈಗರ್ ಹಿಲ್ ಪ್ರಮುಖವಾಗಿದ್ದು, ಇದನ್ನು ಆಕ್ರಮಿಸಿದ್ದ ಪಾಕ್ ಪಡೆಗಳಿಗೆ ಭೂಸೇನೆ, ವಾಯುಪಡೆ ಅಪಾರ ಹಾನಿ ಎಸಗಿದವು. ಅಂತಾರಾಷ್ಟ್ರೀಯ ಒತ್ತಡವೂ ಪಾಕ್ ಮೇಲೆ ತೀವ್ರವಾಗಿದ್ದು ಕೊನೆಗೆ ಪಾಕ್ ಕಾರ್ಯಾಚರಣೆ ವೇಳೆ ತೀವ್ರ ಹಿನ್ನಡೆ ಅನುಭವಿಸಿತ್ತು.
ಕಾರ್ಗಿಲ್ ಯುದ್ಧ ತೀವ್ರಗೊಳ್ಳುತ್ತಿದ್ದಂತೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್ ಮೇಲೆ ತೀವ್ರ ಒತ್ತಡ ಬಿದ್ದಿತ್ತು. ಆಗಿನ ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ದೂರವಾಣಿ ಕರೆ ಮಾಡಿ ಸೇನೆ ಹಿಂದಕ್ಕೆ ಕರೆಸುವಂತೆ ಪಾಕ್‌ಗೆ ತಾಕೀತು ಮಾಡಿದ್ದರು. ಇದರೊಂದಿಗೆ ವಿವಿಧ ದೇಶಗಳು ಪಾಕ್‌ಗೆ ಒತ್ತಡ ಹೇರಿದ್ದವು. ರಷ್ಯಾ, ಇಸ್ರೇಲ್ ನೇರವಾಗಿ ಭಾರತದ ಪರ ನಿಂತಿದ್ದವು.
ಕಾರ್ಗಿಲ್ ಯುದ್ಧದಲ್ಲಿ ಬಲಿದಾನಗಳ ಮೂಲಕ ಸೇವೆ ಸಲ್ಲಿಸಿದ ನಾಲ್ವರಿಗೆ ಪರಮವೀರ ಚಕ್ರವನ್ನು ನೀಡಲಾಗಿದೆ. ಸಂಜಯ್ ಕುಮಾರ್, ಯೋಗೇಂದ್ರ ಸಿಂಗ್ ಯಾದವ್, ಕಾ.ಮನೋಜ್ ಕುಮಾರ್ ಪಾಂಡೆ, ಕ್ಯಾ.ವಿಕ್ರಂ ಬಾತ್ರಾ ಈ ಗೌರವ ಸಂದಿದೆ.
ವಿಭಾಗ