Yogi Adityanath in Mandya: ಮಂಡ್ಯದಲ್ಲಿ ಯೋಗಿ ಆದಿತ್ಯನಾಥ್ ಅಬ್ಬರದ ಪ್ರಚಾರ; ಧರ್ಮದ ಆಧಾರದ ಮೇಲೆ ಮೀಸಲಾತಿಗೆ ಜಾಗವಿಲ್ಲ ಎಂದ ಯುಪಿ ಸಿಎಂ
ಕನ್ನಡ ಸುದ್ದಿ  /  ಕರ್ನಾಟಕ  /  Yogi Adityanath In Mandya: ಮಂಡ್ಯದಲ್ಲಿ ಯೋಗಿ ಆದಿತ್ಯನಾಥ್ ಅಬ್ಬರದ ಪ್ರಚಾರ; ಧರ್ಮದ ಆಧಾರದ ಮೇಲೆ ಮೀಸಲಾತಿಗೆ ಜಾಗವಿಲ್ಲ ಎಂದ ಯುಪಿ ಸಿಎಂ

Yogi Adityanath in Mandya: ಮಂಡ್ಯದಲ್ಲಿ ಯೋಗಿ ಆದಿತ್ಯನಾಥ್ ಅಬ್ಬರದ ಪ್ರಚಾರ; ಧರ್ಮದ ಆಧಾರದ ಮೇಲೆ ಮೀಸಲಾತಿಗೆ ಜಾಗವಿಲ್ಲ ಎಂದ ಯುಪಿ ಸಿಎಂ

ಉತ್ತರ ಪ್ರದೇಶ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಯೋಗಿ ಆದಿತ್ಯನಾಥ್ ಅವರು ಇಂದು ( ಏ 26) ಮಂಡ್ಯಕ್ಕೆ (UP CM Yogi Adityanath in Mandya) ಆಗಮಿಸಿ, ಭರ್ಜರಿ ಪ್ರಚಾರ ನಡೆಸಿದ್ದಾರೆ.

ಮಂಡ್ಯದಲ್ಲಿ ಯೋಗಿ ಆದಿತ್ಯನಾಥ್
ಮಂಡ್ಯದಲ್ಲಿ ಯೋಗಿ ಆದಿತ್ಯನಾಥ್

ಮಂಡ್ಯ: ವಿಧಾನಸಭೆ ಚುನಾವಣೆ (Karnataka Assembly Elections) ಹಿನ್ನೆಲೆ ರಾಜ್ಯದಲ್ಲಿ ಪ್ರಚಾರದ ಅಬ್ಬರ ಜೋರಾದ್ದು, ಚುನಾವಣಾ ಕಣ ರಂಗೇರಿದೆ. ಬಿಜೆಪಿ ಪಕ್ಷದ ಸ್ಟಾರ್​ ಪ್ರಚಾರಕರು ರಾಜ್ಯಕ್ಕೆ ಆಗಮಿಸಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಯೋಗಿ ಆದಿತ್ಯನಾಥ್ ಅವರು ಇಂದು ( ಏ 26) ಮಂಡ್ಯಕ್ಕೆ (UP CM Yogi Adityanath in Mandya) ಆಗಮಿಸಿದ್ದಾರೆ.

ಮಂಡ್ಯಕ್ಕೆ ಆಗಮಿಸಿದ ಯೋಗಿ ಆದಿತ್ಯನಾಥ್ ಅವರಿಗೆ ಸಂಸದ ಪ್ರತಾಪ್​ ಸಿಂಹ,​ ಹಾಗೂ ಸಚಿವ ಅಶ್ವತ್ಥ್ ನಾರಾಯಣ ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ಬರಮಾಡಿಕೊಂಡರು. ಬಳಿಕ ಸಂಜಯ್​ ವೃತ್ತದಿಂದ ಮಹಾವೀರ ಥಿಯೇಟರ್​ವರೆಗೆ ಸಿಎಂ ಯೋಗಿ ಆದಿತ್ಯನಾಥ್ ಭರ್ಜರಿ ರೋಡ್​ ಶೋ ನಡೆಸಿದರು. ರೋಡ್​ ಶೋನಲ್ಲಿ ಸಂಸದೆ ಸುಮಲತಾ ಅಂಬರೀಶ್​ ಕೂಡ ಭಾಗಿಯಾಗಿದ್ದರು.

ರೋಡ್​ ಶೋ ಬಳಿಕ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಯೋಗಿ, ಈ ದೇಶದಲ್ಲಿ ಧರ್ಮದ ಆಧಾರದ ಮೇಲೆ ಮೀಸಲಾತಿಗೆ ಜಾಗವಿಲ್ಲ. ಧರ್ಮದ ಆಧಾರದ ಮೇಲೆ ಮೀಸಲಾತಿ ಭಾರತದ ಸಂವಿಧಾನಕ್ಕೆ ವಿರುದ್ಧವಾಗಿದೆ ಅದಕ್ಕಾಗಿಯೇ ಕರ್ನಾಟಕ ಸರ್ಕಾರವು ತಮ್ಮ ಹೊಸ ಮೀಸಲಾತಿ ನೀತಿಯನ್ನು ಘೋಷಿಸಿತು ಎಂದು ಹೇಳಿದರು.

ಬಿಜೆಪಿಗೆ ತುಷ್ಟೀಕರಣ ರಾಜಕಾರಣ ಮಾಡಲು ತಿಳಿದಿಲ್ಲ ಆದರೆ ಅಧಿಕಾರದ ಬಗ್ಗೆ ಸ್ಪಷ್ಟವಾಗಿ ತಿಳಿದಿದೆ. ಕರ್ನಾಟಕದಲ್ಲಿ ಪಿಎಫ್​ಐನಂತಹ (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ನಿಷೇಧಿತ ಸಂಘಟನೆಗಳನ್ನು ಬೆಂಬಲಿಸುತ್ತಿರುವ ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುವುದರಲ್ಲಿ ಪರಿಣತವಾಗಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತದೆ ಆದರೆ ವಾಸ್ತವವೆಂದರೆ ಅವರು ಘೋಷಿಸುತ್ತಿದ್ದ 5 ವರ್ಷಗಳ ಯೋಜನೆಗಳು ಯೋಜನೆಯ ಅವಧಿ ಮುಗಿದ ನಂತರವೇ ನಿಜವಾಗುತ್ತಿತ್ತು ಮತ್ತು ಶೀಘ್ರದಲ್ಲೇ ಅದು ಕುಸಿಯುತ್ತಿತ್ತು. ಆದರೆ ಪ್ರಧಾನಿ ಮೋದಿ ಅವರು ಯೋಜನೆಯ ಅಡಿಪಾಯವನ್ನು ಹಾಕಿ, ಅದರ ಉದ್ಘಾಟನೆಯನ್ನೂ ನೆರವೇರಿಸುತ್ತಾರೆ ಎಂದು ಹೇಳಿದರು.

ಉತ್ತರ ಪ್ರದೇಶದಲ್ಲಿ ಕಳೆದ ಆರು ವರ್ಷಗಳಲ್ಲಿ ಯಾವುದೇ ದಂಗೆ, ಗಲಭೆಗಳು ನಡೆದಿಲ್ಲ. ಅದಕ್ಕೆ ಕೇಂದ್ರ ಮತ್ತು ರಾಜ್ಯದಲ್ಲಿರುವ ಡಬಲ್ ಎಂಜಿನ್ ಸರ್ಕಾರವೇ ಕಾರಣ. ಕರ್ನಾಟಕದಲ್ಲಿಯೂ ಈ ಬಾರಿ ಬಿಜೆಪಿಯನ್ನು ಅಧಿಕಾರಕ್ಕೆ ತಂದು ಡಬಲ್ ಎಂಜಿನ್ ಸರ್ಕಾರದ ಪ್ರಯೋಜನವನ್ನು ಪಡೆದುಕೊಳ್ಳಿ ಎಂದರು.

ಕರ್ನಾಟಕದಲ್ಲಿ ವಿಧಾನಸಭೆ ಚುನಾಚಣೆಗೆ ಮೇ 10ಕ್ಕೆ ಮತದಾನ ನಡೆಯಲಿದ್ದು, ಮೇ 13ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

ಮೀಸಲಾತಿ ರದ್ದು ವಿಚಾರ

ಮಾರ್ಚ್​ 24 ರಂದು ಸಚಿವ ಸಂಪುಟ ಸಭೆ ನಡೆಸಿದ್ದ ರಾಜ್ಯ ಸರ್ಕಾರ, ಒಬಿಸಿ ಮೀಸಲಾತಿ ಪಟ್ಟಿಯಲ್ಲಿ ಮುಸ್ಲಿಮರಿಗೆ ನೀಡಲಾಗಿದ್ದ ಶೇ. 4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಲು ಹಾಗೂ ಈ ಮೀಸಲಾತಿಯನ್ನು ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಕ್ಕೆ ತಲಾ ಶೇ. 2ರಷ್ಟು ಹಂಚಿಕೆ ಮಾಡಲು ನಿರ್ಧರಿಸಿತ್ತು. 2ಬಿಯಲ್ಲಿದ್ದ ಮುಸ್ಲಿಂ ಸಮುದಾಯವನ್ನು ಶೇ.10ರಷ್ಟು ಮೀಸಲಾತಿ ಇರುವ ಆರ್ಥಿಕವಾಗಿ ಹಿಂದುಳಿದ ವರ್ಗ(EWS) ಕೋಟಾಕ್ಕೆ ಸ್ಥಳಾಂತರಿಸುತ್ತಿರುವುದಾಗಿ ಘೋಷಣೆ ಮಾಡಿತ್ತು. ರಾಜ್ಯ ಸರ್ಕಾರದ ಈ ನಿರ್ಧಾರದಿಂದಾಗಿ, 2ಸಿಯಲ್ಲಿರುವ ಒಕ್ಕಲಿಗರಿಗೆ ಶೇ. 4ರಿಂದ ಶೇ. 6ರಷ್ಟು ಹಾಗೂ 2ಡಿಯಲ್ಲಿರುವ ವೀರಶೈವ ಹಾಗೂ ಲಿಂಗಾಯತರಿಗೆ ಶೇ. 5ರಿಂದ ಶೇ. 7ರಷ್ಟು ಮೀಸಲಾತಿ ಹೆಚ್ಚಳವಾಗಲಿದೆ. ಮುಸ್ಲಿಂ ಸಮುದಾಯದ 2ಬಿ ಮೀಸಲಾತಿಯನ್ನು ರದ್ದುಗೊಳಿಸಿರುವುದರ ವಿರುದ್ಧ ಸುಪ್ರೀಂ ಕೋರ್ಟ್​ಗೆ ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯ ಮೇ 9ಕ್ಕೆ ಮುಂದೂಡಿದೆ.

Whats_app_banner